BhandaryVarthe Team

BhandaryVarthe Team
Bhandary Varthe Team

Wednesday 30 June 2021

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾರ್ಕಳ ತಾಲ್ಲೂಕು ಮಾಳ ಗ್ರಾಮದ ಚಿ॥ ಪ್ರಶಾಂತ್ ಮತ್ತು ಮಂಗಳೂರು ತಾಲ್ಲೂಕಿನ ಸೂರಿಂಜೆಯ ಚಿ॥ ಸೌ॥ಸುಪ್ರೀತಾ

ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಆನಂದ ಭಂಡಾರಿ ಮತ್ತು ಜಯಂತಿ ಭಂಡಾರಿಯವರ ಪುತ್ರ

ಚಿ||ಪ್ರಶಾಂತ್

ಮತ್ತು
ಮಂಗಳೂರು ತಾಲ್ಲೂಕಿನ
ಸುರತ್ಕಲ್ ಸೂರಿಂಜೆಯ ದಿವಂಗತ ವಾಮನ ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ಭಂಡಾರಿಯವರ ಪುತ್ರಿ

ಚಿ||ಸೌ||ಸುಪ್ರೀತಾ

ಇವರ ವಿವಾಹವು ದಿನಾಂಕ 28-06-2021 ರಂದು ಸೋಮವಾರ ವಧುವಿನ ಸ್ವಗೃಹ "ಅಮ್ಮ ನಿವಾಸ" ಸೂರಿಂಜೆ ಎಂಬಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ನಡೆಯಿತು.

 

 

ಕೋವಿಡ್ ನಿಯಮಗಳ ಕಾರಣ ಸರಳವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಆತ್ಮೀಯ ಬಂಧುಮಿತ್ರರು ಗಣ್ಯರು ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದರು
ನವದಂಪತಿಗಳಿಗೆ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಿ ಪ್ರೀತಿ ಅನ್ಯೋನ್ಯತೆಯಿಂದ ಬಾಳನ್ನು ಮುನ್ನಡೆಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ

ದಾಂಪತ್ಯ ಜೀವನದ ಸಪ್ತಪದಿ ತುಳಿದ ಕುಂದಾಪುರ ತಾಲ್ಲೂಕಿನ ಬೆಳ್ವೆ ಚಿ॥ ಪ್ರಣೀತ್ ಮತ್ತು ಕಡಬ ತಾಲ್ಲೂಕಿನ ಕೆದಿಲ ಚಿ॥ ಸೌ॥ ಶ್ರುತಿ

 ಕುಂದಾಪುರ ತಾಲೂಕು ಬೆಳ್ವೆ ದಿವಂಗತ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಉಷಾ ಎನ್. ಭಂಡಾರಿ ದಂಪತಿಯ ಪುತ್ರ

ಚಿ.ರಾ.ಪ್ರಣೀತ್

ಕಡಬ ತಾಲೂಕು ರಾಮಕುಂಜ ಗ್ರಾಮದ ಕೆದಿಲ ಶ್ರೀಮತಿ ಮತ್ತು ಶ್ರೀ ಕೃಷ್ಣ ಭಂಡಾರಿ ದಂಪತಿಯ ಪುತ್ರಿ

ಚಿ.ಸೌ. ಶ್ರುತಿ

ದಾಂಪತ್ಯ ಜೀವನದ ಸಪ್ತಪದಿಯನ್ನು ಜೂನ್ 28 ನೇ ಸೋಮವಾರದಂದು ರಾಮಕುಂಜ ಗ್ರಾಮದ ಕೆದಿಲ ಶ್ರೀ ಕೃಷ್ಣ ಭಂಡಾರಿಯವರ ನಿವಾಸದಲ್ಲಿ ಕೊರೋನಾ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಆತ್ಮೀಯ ಬಂಧು ಮಿತ್ರರ ಶುಭಾಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

 


ನವದಂಪತಿಯ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯ ಸಕಲೈಶ್ವರ್ಯದೊಂದಿಗೆ ನೂರಾರು ಕಾಲ ಸಂಸಾರ ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

Saturday 26 June 2021

ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿದ ಬೆಳ್ತಂಗಡಿ ತಾಲ್ಲೂಕು ಮಡಂತ್ಯಾರು ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಶಕುಂತಲಾ ಬಾಲಕೃಷ್ಣ ಭಂಡಾರಿ

 ಬೆಳ್ತಂಗಡಿ ತಾಲ್ಲೂಕು ಮಡಂತ್ಯಾರು ಗುಂಡಿ ಪಲ್ಕೆ ದಿವಂಗತ ಸುಂದರ ಭಂಡಾರಿ ಮತ್ತು ದಿವಂಗತ ನೀಲಮ್ಮ ಸುಂದರ ಭಂಡಾರಿ ದಂಪತಿಯ ಪುತ್ರ ಶ್ರೀ ಬಾಲಕೃಷ್ಣ ಭಂಡಾರಿ ಮಡಂತ್ಯಾರು ಕೋಡ್ಯೇಲು ಮತ್ತು ಮುಲ್ಕಿ ಚಿತ್ರಾಪು ದಿವಂಗತ ವಿಠಲ ಭಂಡಾರಿ ಮತ್ತು ಶ್ರೀಮತಿ ಭವಾನಿ ವಿ. ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಶಕುಂತಲಾ ಇವರು ತಮ್ಮ ದಾಂಪತ್ಯದ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಜೂನ್ ಇಪ್ಪತ್ತ ನಾಲ್ಕನೇ ಗುರುವಾರದಂದು ತಮ್ಮ ಸ್ವಗೃಹದಲ್ಲಿ ಆತ್ಮೀಯ ಬಂಧುಗಳ ಸಮ್ಮುಖದಲ್ಲಿ ಸಾಂಕೇತಿಕವಾಗಿ ಹಾಗೂ ವಿಶಿಷ್ಟವಾಗಿ ಬಂಧು ಮಿತ್ರರ ಗುರುಹಿರಿಯರ ಹಾಗೂ ಕುಟುಂಬಸ್ಥರ ಶುಭ ಹಾರೈಕೆಯೊಂದಿಗೆ ಆಚರಿಸಿದರು .

ಶ್ರೀ ಬಾಲಕೃಷ್ಣ ಭಂಡಾರಿ ಅವರು ಪ್ರಗತಿಪರ ಕೃಷಿಕರಾಗಿದ್ದ ಮಡಂತ್ಯಾರು ಹಾಲು ಉತ್ಪಾದಕರ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಕೃತಕ ಗರ್ಭಧಾರಣೆಯ ನಿರ್ವಾಹಕರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ .ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಬಾಲಕೃಷ್ಣ ಭಂಡಾರಿ ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾಗಿರುತ್ತಾರೆ ಮತ್ತು ಮಡಂತ್ಯಾರು ರೋಟರಿ ಕ್ಲಬ್ಬಿನ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ದಂಪತಿಗಳ ಮಕ್ಕಳಾದ ಮಂಗಳೂರಿನ ವಾಮಂಜೂರು ಸೇಂಟ್ ಮೇರಿಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ.ವ್ಯಾಸಂಗ ಮಾಡುತ್ತಿರುವ ಕಾರ್ತಿಕ್ ಬಿ ಭಂಡಾರಿ ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುತ್ತಿರುವ ಕೃತಿಕಾ ಬಿ. ಭಂಡಾರಿ .

 

ದಂಪತಿಗಳ ದಾಂಪತ್ಯ ಜೀವನವು ಇನ್ನಷ್ಟು ಸುಖ ಸಂತೋಷ ಸಕಲೈಶ್ವರ್ಯದಿಂದ ನೂರಾರು ಕಾಲ ನೆಮ್ಮದಿಯ ದಾಂಪತ್ಯ ಜೀವನವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಹಾರ್ದಿಕ ಶುಭ ಹಾರೈಕೆ.

Sunday 20 June 2021

ಮಗಳ ಮೊದಲ ಪ್ರೀತಿ ಅಪ್ಪ

 

ಮಗಳ ಮೊದಲ ಪ್ರೀತಿ "ಅಪ್ಪ"

ಸೌಮ್ಯತೆಯ ಸಾಗರ ಅಪ್ಪ,
ಆಗಾಧ ಪ್ರೀತಿಯ ಆಗರ ಅಪ್ಪ,
ಮುಗ್ಧತೆಯ ಸ್ವರೂಪ ನನ್ನಪ್ಪ...
ನನ್ನ ಲಾಲಿಸಿದ ಜನುಮದಾತ,
ನಿಷ್ಕಲ್ಮಶ ಪ್ರೀತಿ ತೋರಿದ ಪುಣ್ಯಾದಾತ,

ಮಗಳ ಮೊದಲ ಪ್ರೀತಿ ನೀವಪ್ಪ...
ಕಲೆಯ ಆರಾಧಿಸುವ ಕಲೆಗಾರ,
ಭಕ್ತಿಯಲಿ ಭಜಿಸುವ ಹಾಡುಗಾರ,
ಯಕ್ಷಲೋಕದ ಧ್ರುವತಾರೆ ನನ್ನಪ್ಪ...

ಸ್ವಾರ್ಥತೆಯ ತದ್ವಿರುದ್ಧ ನೀವು,
ಸಹೃದಯ, ಸಜ್ಜನಿಕೆಯ ಸರಳ ವ್ಯಕ್ತಿ ತಾವು,
ಮುದ್ದು ಮುಖದ ಮುಗ್ಧಜೀವಿ ನೀವಪ್ಪ..
ತಿದ್ದಿ ತೀಡಿ ಸಲಹಿದ ಗುರು
ನನ್ನ ಪ್ರೀತಿಯ ಮೊದಲ ದೇವರು,

ಸಕಲಕಲಾವಲ್ಲಭ ನನ್ನಪ್ಪ...
ಮಮತೆಯ ಕಡಲು ಅಪ್ಪ ,
ಉತ್ಸಾಹ ತುಂಬುವ ಚಿಲುಮೆ ಅಪ್ಪ,
ಅಪರೂಪದ ಮಾಣಿಕ್ಯ ನೀವಪ್ಪ...
ಅಕ್ಕರೆ ಮಾತಲಿ ಸಿಹಿ ನೀಡುವವರು,

ಎಲ್ಲ ವಿಧದಲ್ಲೂ ನನಗೆ ಜೊತೆಯಾದವರು,
ನಿಮ್ಮ ಪ್ರೀತಿ ಅಕ್ಕರೆಯ ಹೇಗೆ ಮರೆಯಲಿ ಅಪ್ಪ....
ಬಂಧು ಬಳಗ ಎಲ್ಲರಿಹರು,
ಅಪ್ಪ ಅನ್ನುವ ಆಸ್ತಿ ಬಿಟ್ಟು..
ಅಕ್ಕರೆ ಪ್ರೀತಿ ನೀಡುತಿಹರು,

ಅಪ್ಪ ನೆಂಬ ವ್ಯಕ್ತಿಯ ಬಿಟ್ಟು...
ನಿಮ್ಮ ಮುದ್ದು ಮಗಳ ಪ್ರಪಂಚ ನೀವಪ್ಪ...
ಮರೆಯಲಾಗದ ಕ್ಷಣಗಳ ನೀಡಿ,
ಈಗ ನೆನಪುಗಳಾಗಿ ಕಾಡಿ,
ಯಾಕೆ ಮರೆಯಾದಿರಿ ಅಪ್ಪ...?

✍️ಸುಪ್ರೀತ ಭಂಡಾರಿ, ಸೂರಿಂಜೆ

Sunday 13 June 2021

ಉಡುಪಿ ಕಾಡಬೆಟ್ಟು ಶ್ರೀಮತಿ ಗಿರಿಜಾ ಟೀಚರ್ ವಿಧಿವಶ

 ಕಾರ್ಕಳ ದಿವಂಗತ ಗೋಪಾಲ ಕಷ್ಣ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ಗಿರಿಜಾ ಟೀಚರ್ (85 ವರ್ಷ) ಜೂನ್ 12 ನೇ ಶನಿವಾರದಂದು ಮನೆಯಲ್ಲಿ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ಪಡುಬಿದ್ರೆ ,ಎರ್ಮಾಳು, ಉಚ್ಚಿಲ ಮತ್ತು ಮೂಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಭಢ್ತಿಗೊಂಡು ಮುಖ್ಯಶಿಕ್ಷಕರಾಗಿ ಒಟ್ಟು ಸುಮಾರು 42 ವರ್ಷಗಳ ಸೇವೆ ಸಲ್ಲಿಸಿದರೆ.ಇವರ ಕುಟುಂಬದಲ್ಲಿ ಹೆಚ್ಚಿನವರು ಶಿಕ್ಷಣ ಇಲಾಖೆ ಸೇವೆ ಸಲ್ಲಿಸಿದ್ದು ವಿಶೇಷವಾಗಿದೆ.

ಇವರ ಪುತ್ರ ರಘುವೀರ ಭಂಡಾರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಬಂಟ್ವಾಳ ತಾಲ್ಲೂಕಿನ ವಿಟ್ಲ ಸರಕಾರಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಯಾಗಿರುತ್ತಾರೆ ಹಾಗೂ ಪುತ್ರಿ ಸುಜಾತ ಕೆ. ಕೂಡಾ ಸರಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಗಂಗೊಳ್ಳಿಯಲ್ಲಿ ಮುಖ್ಯ ಶಿಕ್ಷಕಿಯಾಗಿ ಇತ್ತೀಚೆಗೆ ನಿವೃತ್ತಿಯಾಗಿರುತ್ತಾರೆ ಅಳಿಯ ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಗಿರಿಜಾ ಟೀಚರ್ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

Saturday 12 June 2021

ಸುರತ್ಕಲ್ ಕೃಷ್ಣಾಪುರ ಚೊಕ್ಕಬೆಟ್ಟು ಶ್ರೀಮತಿ ಕಮಲಾ ಟೀಚರ್ ವಿಧಿವಶ

 ಮಂಗಳೂರು ಪಂಪ್ ವೆಲ್ ದಂಬೆ ದಿವಂಗತ ಪರಮೇಶ್ವರ ಭಂಡಾರಿ ಮತ್ತು ದಿವಂಗತ ಸೋಮಕ್ಕ ದಂಪತಿಯ ಪುತ್ರಿ ಹಾಗೂ ಪಾಂಗಾಳ ದಿವಂಗತ ಜನಾರ್ದನ ಭಂಡಾರಿಯವರ ಧರ್ಮಪತ್ನಿಶ್ರೀಮತಿ ಕಮಲಾ ಟೀಚರ್ (86 ವರ್ಷ ) ಜೂನ್ 11 ನೇ ಶುಕ್ರವಾರ ಸಾಯಂಕಾಲ ಹೆಬ್ರಿಯ ಪುತ್ರನ ಮನೆಯಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು.

ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ ಸರಕಾರಿ ಶಾಲೆಯಲ್ಲಿ ಸರಿಸುಮಾರು ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು ವೃತ್ತಿಜೀವನ ಮತ್ತು ನಿವೃತ್ತಿಯ ಬಳಿಕ ಕೃಷ್ಣಾಪುರ ಚೊಕ್ಕಬೆಟ್ಟುವಿನಲ್ಲಿ ಸಾಂಸಾರಿಕ ಜೀವನ ನಡೆಸುತ್ತಿದ್ದರು ಪ್ರಸ್ತುತ ಕೆಲವು ವರ್ಷಗಳ ಹಿಂದೆ ತನ್ನ ಪುತ್ರ ಪ್ರಸಾದ್ ಭಂಡಾರಿ ಇವರೊಂದಿಗೆ ಹೆಬ್ರಿಯಲ್ಲಿ ವಾಸಿಸುತ್ತಿದ್ದರು .

ಸಮಾಜ ಬಂಧುಗಳ ಮನೆಯಲ್ಲಿ ಯಾವುದೇ ಶುಭ ಸಮಾರಂಭ ಆಗಲಿ ಅಥವಾ ದುಃಖದ ಕಾರ್ಯಕ್ರಮವೇ ನಡೆಯಲಿ ಮುಂದೆ ನಿಂತು ಅಚ್ಚುಕಟ್ಟಾಗಿ ನಡೆಸುತ್ತಿದ್ದರು ಕಮಲ ಟೀಚರ್.

ಮುಂಬೈಯ ಥಾಣೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಭಂಡಾರಿ ಮತ್ತು ಹೆಬ್ರಿಯಲ್ಲಿ ಉದ್ಯಮಿಯಾಗಿರುವ ಪ್ರಸಾದ್ ಭಂಡಾರಿ , ಶ್ರೀಮತಿ ಪ್ರಭಾ ಮತ್ತು ಶ್ರೀಮತಿ ಪ್ರೇಮಾ ಅಳಿಯಂದಿರು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ

ಇವರ ನಿಧನದ ದುಖವನ್ನು ಸಹಿಸುವ ಶಕ್ತಿಯನ್ನು ಮಕ್ಕಳು ಮತ್ತು ಕುಟುಂಬಸ್ಥರಿಗೆ ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಅಂತಿಮ ನಮನ.

-ಭಂಡಾರಿ ವಾರ್ತೆ

ಕೂದಲು ಸುಂದರಗೊಳಿಸುವ ಸಾಗರ ದ ತುಮರಿ ಕೃಷ್ಣ ಭಂಡಾರಿಯ ಮನಸ್ಸೂ ಸುಂದರ

 ತಾಯಿ ಮನಸ್ಸು, ಮಾನವೀಯ ಕಳಕಳಿ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಗುಣ, ಶಿಕ್ಷಣ ಪ್ರೇಮ ಎಲ್ಲವನ್ನು ಕಾಣಬಹುದಾದ ವ್ಯಕ್ತಿತ್ವದ ಹೆಸರೇ ತುಮರಿ ಕೃಷ್ಣ ಭಂಡಾರಿ. ತನ್ನಲ್ಲಿಗೆ ಬರುವವರ ಕೂದಲನ್ನು ಒಪ್ಪ ಓರಣವಾಗಿ ಕತ್ತರಿಸಿ ಸುಂದರಗೊಳಿಸುವ ಕಾರಣಕ್ಕೆ ಮಾತ್ರವಲ್ಲದೇ ತನ್ನ ಸುಂದರ ಮನಸ್ಸಿನಿಂದಲೂ ಎಲ್ಲರೊಳು ಒಂದಾಗಿದ್ದಾರೆ.

ಸಾಗರ ದ ತುಮರಿ ವೃತ್ತದಿಂದ ಬ್ಯಾಕೊಡು ರಸ್ತೆಯಲ್ಲಿ ಪಕ್ಕ ಹಳ್ಳಿಯಲ್ಲಿ ಇರುವಂಥ ಒಂದು ಕಟ್ಟಿಂಗ್‌ಶಾಪ್‌ ಇದೆ. ಆಡಂಬರವಿಲ್ಲದ, ಅಚ್ಚುಕಟ್ಟಾದ ಈ ಶಾಪ್‌ನಲ್ಲಿ ಎಂದಿಗೂ ನಗುಮೊಗದ ಸೇವೆ ನೀಡುವವರೇ ಈ ಕೃಷ್ಣ ಭಂಡಾರಿ. ಕಟ್ಟಿಂಗ್‌ ಜತೆಗೆ ಅವರ ಅರಳು ಹುರಿದಂತೆ ಆಡುವ ಮಾತುಗಳನ್ನು ಕೇಳಲೂ ಜನ ಬರುವುದು ಇಲ್ಲಿನ ವಿಶೇಷ.

ಕುಂದಾಪುರದ ಹಿರಿಯ ಭಂಡಾರಿ– ಅಕ್ಕಯ್ಯ ದಂಪತಿಯ ತುಮರಿಗೆ ಬಂದು ಬದುಕು ಕಟ್ಟಿಕೊಂಡವರು. ಈ ದಂಪತಿಗೆ 8 ಮಕ್ಕಳು. ಆ ಎಂಟು ಮಕ್ಕಳಲ್ಲಿ ಒಬ್ಬರಾಗಿರುವ ಕೃಷ್ಣ ಕಲಿತಿರುವುದು ಐದನೇ ಕ್ಲಾಸ್‌. ಆದರೆ ತನ್ನೂರಿನಲ್ಲಿ ಯಾರೂ ಶಿಕ್ಷಣದಿಂದ ಹೊರಗೆ ಉಳಿಯಬಾರದು ಎಂಬುದು ಅವರ ಕಾಳಜಿ. ಹಾಗಾಗಿಯೇ ತುಮರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ತುಮರಿಯಲ್ಲಿ ನಡೆಯುವ ಎಲ್ಲಾ ರೀತಿಯ ಕ್ರೀಡಾಕೂಟದಲ್ಲಿ ಸಂಘಟಕರ ಜತೆ ಭಂಡಾರಿ ಇರುತ್ತಾರೆ. ಶಾಲಾ ವಾರ್ಷಿಕ ಕ್ರೀಡಾಕೂಟ ಅಥವಾ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಶಟ್ಲ್‌ ಬ್ಯಾಡ್ಮಿಂಟನ್‌, ಯಕ್ಷಗಾನ, ನಾಟಕ ಹೀಗೇ ಯಾವುದೇ ಕಾರ್ಯಕ್ರಮ ನಡೆದರೆ ಅದರ ಸಂಘಟಕರಲ್ಲಿ ಒಬ್ಬರು ಈ ಕೃಷ್ಣ ಭಂಡಾರಿ.

ಹೀಗೆ ಎಲ್ಲದಕ್ಕೂ ನೆರವಾಗಿ, ಎಲ್ಲರಿಗೂ ಬೇಕಾಗಿರುವ ಕೃಷ್ಣ ಭಂಡಾರಿ ಕೋಟ್ಯಧಿಪತಿ ಅಲ್ಲ. ಅವರದ್ದೊಂದು ಅಂಗಡಿ ಮತ್ತು ಮನೆ ಇಷ್ಟೇ ಆಸ್ತಿ. ಹಾಗಂತ ತುಮರಿಯಲ್ಲಿ ಹಣವಿದ್ದವರಿಗೆ ಕೊರತೆಯೂ ಇಲ್ಲ. ಆದರೆ ಅವರಿಗೆ ಕೃಷ್ಣ ಭಂಡಾರಿಯಂತೆ ದಾನಿಗಳಲ್ಲ. ತನ್ನ ಆದಾಯದಲ್ಲೇ ಕೆಲವು ಸಾವಿರಗಳನ್ನು ಉಳಿಸಿ, ಅಗತ್ಯ ಇರುವವರಿಗೆ, ಅಗತ್ಯ ಇರುವಲ್ಲಿಗೆ ನೀಡುತ್ತಾ ಬಂದವರು.

ದೊಡ್ಡ ಅವಿಭಕ್ತ ಕುಟುಂಬದ ಮುಖ್ಯಸ್ಥ ಅವರು. ಆದರೆ ಅವರ ಮನಸು ಅದೆಷ್ಟು ಮಾನವೀಯ ಎಂದರೆ ಕೆಲ ಸಾವಿರಗಳನ್ನು ಅವರು ಪ್ರತ್ಯೇಕ ಎತ್ತಿ ಇಟ್ಟಿದ್ದಾರೆ. ಈ ಹಣವನ್ನು ಅವರು ಸ್ವಲ್ಪ ಸ್ವಲ್ಪ ತೀರ ಅಗತ್ಯ ಇದ್ದವರಿಗೆ ಸಹಾಯ ಮಾಡುತ್ತಾರೆ. ತುಮರಿ ದುಡಿಯುವ ಜನರೇ ಹೆಚ್ಚಿರುವ ಊರು. ಬದುಕಿನ ತುರ್ತು ಅವಘಡ ಆದಾಗ ಬಂಡಾರಿ ಸಾಮಾನ್ಯ ಜನರಿಗೆ ನೆನಪಾಗುತ್ತಾರೆ. ಇದು ಅವರ ದೊಡ್ಡತನ. ಇದೇ ಕಾರಣಕ್ಕೆ ಅವರು ಬಡವರ ಪಾಲಿನ ಆಪತ್ ಬಾಂಧವ. ಅಪಘಾತ, ಅವಘಡಗಳು ಉಂಟಾದಾಗ ಓಡಿ ಬರುವ ಕೃಷ್ಣಣ್ಣ ಈ ಕಾರಣದಿಂದಲೇ ಊರಿಗೆ ಬೇಕಾದ ಅಣ್ಣ ಆಗಿದ್ದಾರೆ.

ತುಮರಿ ಸಾಂಸ್ಕೃತಿಕ ನಾಡು. ಇಲ್ಲಿ ನಾಟಕ, ಯಕ್ಷಗಾನ ನಿರಂತರ ನಡೆಯುತ್ತಿರುತ್ತದೆ. ಇಲ್ಲಿನ ಗೋಪಾಲ ಗೌಡ ರಂಗಮಂದಿರ ರಾಜ್ಯದಲ್ಲೇ ಹೆಸರಿದೆ. ಕೃಷ್ಣ ಭಂಡಾರಿ ಆರಂಭದಲ್ಲಿ ಅಭಿವ್ಯಕ್ತಿ ಬಳಗ ರಂಗಮಂದಿರ ನಿರ್ಮಾಣ ಮಾಡುವಾಗ ಶ್ರಮದಾನದಲಿ ಪಾಲ್ಗೊಂಡು ಅದೇ ವೇದಿಕೆಯಲ್ಲಿ ನಾಟಕವೊಂದರಲಿ ಪಾತ್ರ ಕೂಡ ಮಾಡಿದ್ದರು. ಕಳೆದ 25 ವರ್ಷಗಳಿಂದ ತುಮರಿಯಲ್ಲಿ ಪ್ರತಿ ವರ್ಷ ಯಕ್ಷಗಾನ ಅಯೋಜನೆ ಮಾಡುತ್ತಿರುವ ಕೃಷ್ಣ ಬಂಡಾರಿಯವರು ಯಕ್ಷಗಾನ ಸಂಘಟಕರಾಗಿಯೂ ಪ್ರಸಿದ್ಧಿ ಪಡೆದವರು.

ಸಮಾಜ ಸೇವೆ ಮಾಡುವ ಕೃಷ್ಣ ಭಂಡಾರಿಯವರನ್ನ ಕಂಡರೆ ನಾಡಿನ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರಿಗೆ ಅಚ್ಚುಮೆಚ್ಚು. ಊರಿನಲ್ಲಿ ಎಲ್ಲ ಪಕ್ಷಗಳ ನಾಯಕರ ಜತೆಗೆ ಸುಮಧುರ ಬಾಂಧವ್ಯ ಇಟ್ಟುಕೊಂಡಿರುವ ಕೃಷ್ಣ ಭಂಡಾರಿ ತುಮರಿ ಎಂಬ ಊರಿನ ಆಸ್ತಿ ಆಗಿಬಿಟ್ಟಿದ್ದಾರೆ.

-ಭಂಡಾರಿ ವಾರ್ತೆ 

ಮಾಹಿತಿ :ಪ್ರದೀಪ್ ಕೆರೋಡಿ ,ಸಂತೋಷ್ ಭಂಡಾರಿ ಸಾಗರರ(ಜಿ. ಟಿ. ಸತ್ಯನಾರಾಯಣ. ಕರೂರುಸಹಯೋಗದೊಂದಿಗೆ )

Saturday 5 June 2021

ಪ್ಯಾಸ್ಟಿಕ್ ಮುಕ್ತ ಪರಿಸರ ನಮ್ಮ ಆದ್ಯತೆಯಾಗಲಿ ಬನ್ನಿ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಕೈ ಜೋಡಿಸೋಣ-ದಿವ್ಯಾ ಉಜಿರೆ

 ಪಂಚಭೂತಗಳಲ್ಲಿ ಅತೀ ಶ್ರೇಷ್ಟ ನಮ್ಮ ಪ್ರಕೃತಿ. ಜಗತ್ತಿನಲ್ಲಿರುವ ಎಲ್ಲಾ ಜೀವ ಸಂಕುಲಕ್ಕೆ ಪ್ರಕೃತಿ ಕೊಟ್ಟಿರುವ ಕೊಡುಗೆ ಅಪಾರ. ಮನುಷ್ಯನಿಗೆ ಅಥವಾ ಜೀವಿಗಳಿಗೆ ಬದುಕಲು ಬೇಕಾದ ಎಲ್ಲವನ್ನೂ ಪ್ರಕೃತಿ ನೀಡಿದೆ. ಆದರೆ ಮನುಷ್ಯ ತನ್ನ ಅತಿಯಾದ ಆಸೆ, ಐಷಾರಾಮಿ ಬದುಕಿಗಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿಕೊಂಡೇ ಬಂದಿದ್ದಾನೆ. ಶುದ್ಧಗಾಳಿ, ಶುದ್ಧ ನೀರು, ಹಸುರಿನಿಂದ ಕಂಗೊಳಿಸುತ್ತಿದ್ದ ಪ್ರದೇಶಗಳಲ್ಲಿ ಹಸಿರೇ ಕಾಣಿಸದೇ ಇರುವಷ್ಟರ ಮಟ್ಟಿಗೆ ಪ್ರಕೃತಿಯ ಆಪೋಶನವಾಗಿದೆ. ನೆರಳು ನೀಡುತ್ತಿದ್ದ ಮರಗಳು ಕಾಂಕ್ರಿಟ್ ಕಟ್ಟಡಕ್ಕಾಗಿ ಕೊಡಲಿಯೇಟಿಗೆ ಬಲಿಯಾಗುತ್ತಿದೆ. ತನ್ನ ವೈಯಕ್ತಿಕ ಆಸೆಯನ್ನು ಈಡೇರಿಸುವುದಕ್ಕಾಗಿ ಪ್ರಕೃತಿಯ ವಿರುದ್ಧ ಮನುಷ್ಯರು ಹೋಗುತ್ತಿರುವ ರೀತಿ ಇಂದು ಪ್ರಾಕೃತಿಕ ವಿಕೋಪದ ಮೂಲಕ ಆತನನ್ನೇ ಬಲಿ ಪಡೆದುಕೊಳ್ಳುತ್ತಿದೆ. ತಾನೇ ತೋಡಿಕೊಂಡ ಹಳ್ಳಕ್ಕೆ ಬೀಳುವಂತಾಗಿದೆ ಮನುಷ್ಯನ ಪರಿಸ್ಥಿತಿ.

ಪ್ರಕೃತಿ ಮುನಿದರೆ ಮನುಕುಲ ವಿನಾಶವಾಗುತ್ತದೆ ಅನ್ನೋ ಮಾತು ಈಗ ನಮ್ಮ ಅರಿವಿಗೆ ಬರುತ್ತಿದೆ. ಒಂದೆಡೆ ಮನುಷ್ಯನನ್ನು ಇಂಚಿಂಚಾಗಿ ಕೊಲ್ಲುತ್ತಿರುವ ವಾಯುಮಾಲಿನ್ಯ. ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ‘ಪ್ಲಾಸ್ಟಿಕ್‌ ’ ಮಾಡುತ್ತಿರುವ ಅನಾಹುತ ಅಂತಿಂಥದ್ದಲ್ಲ. ‘ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಗಟ್ಟಿ’ ಇದು ಈ ವರ್ಷದ ವಿಶ್ವ ಪರಿಸರ ದಿನದ ಘೋಷವಾಕ್ಯ. ನಮ್ಮ ಮಹಾನಗರಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಘನತ್ಯಾಜ್ಯಗಳು ಲಕ್ಷ ಲಕ್ಷ ಟನ್‌ಗಳಷ್ಟು. ಪರಿಸರ ಮಾತ್ರವಲ್ಲ ಮನುಷ್ಯರು, ಪ್ರಾಣಿಗಳ ಮೇಲೂ ಪ್ಲಾಸ್ಟಿಕ್ ದುಷ್ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಮನುಷ್ಯನನ್ನು ಬಲಿತೆಗೆದುಕೊಳ್ಳುತ್ತಿರುವ ಮಾರಕ ಕಾಯಿಲೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಪ್ಲಾಸ್ಟಿಕ್ ನಲ್ಲಿರುವ ವಿಷಕಾರಿ ಅಂಶವೇ ಕಾರಣ ಅನ್ನುವ ಆಘಾತಕಾರಿ ಮಾಹಿತಿಯನ್ನು ಸಂಶೋಧಕರೇ ಬಿಚ್ಚಿಟ್ಟಿದ್ದಾರೆ. ಇನ್ನು ಈ ಬಗ್ಗೆ ಎಷ್ಟು ಜಾಗೃತಿ ಮೂಡಿಸುವ ಕೆಲಸ ನಡೆದರೂ ನಾವು ಮಾತ್ರ ಹೋಟೆಲ್ ಗಳಿಂದ ಆಹಾರವನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತರುವುದನ್ನು ನಿಲ್ಲಿಸಿಲ್ಲ. ಇದೇ ಕಾರಣದಿಂದ ಪ್ಲಾಸ್ಟಿಕ್ ನಲ್ಲಿರುವ ಹಾನಿಕಾರಣ ಅಂಶಗಳು ನಾವು ತಿನ್ನುವ ಆಹಾರವನ್ನು ಸೇರಿಕೊಂಡು ನಾನಾ ತರದ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತಿದೆ.
ಇನ್ನು ಮನುಷ್ಯನ ಜೊತೆಗೆ ಅದೆಷ್ಟೋ ಪ್ರಾಣಿಗಳು, ಜಲಚರಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಪ್ರಾಣ ಕಳೆದುಕೊಂಡಿವೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ವಸ್ತುವಾಗಿರಬಹುದು, ಸಮುದ್ರದ ಒಡಲು ಸೇರುವ ಪ್ಲಾಸ್ಟಿಕ್ ತ್ಯಾಜ್ಯವಾಗಿರಬಹುದು ಅಲ್ಲಿನ ಜೀವಿಗಳ ಹೊಟ್ಟೆ ಸೇರಿ ಅವುಗಳನ್ನೇ ಬಲಿಪಡೆಯುತ್ತಿವೆ. ರಸ್ತೆ ಬದಿ, ಕಸದ ತೊಟ್ಟಿಗಳಲ್ಲಿರುವ ತ್ಯಾಜ್ಯವನ್ನು ತಿಂದು ಅದೆಷ್ಟೋ ಜಾನುವಾರುಗಳು, ನಾಯಿಗಳು ಪ್ರಾಣಕಳೆದುಕೊಂಡಿವೆ. ಇನ್ನು ಮಳೆ ನೀರಿನೊಂದಿಗೆ ಚರಂಡಿ ಸೇರುವ ಟನ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಒಂದೆಡೆ ನಿಂತು ನೀರು ಸರಾಗವಾಗಿ ಹರಿಯಲಾಗದೆ ನೆರೆ ಸೃಷ್ಟಿ ಮಾಡಿರುವುದಕ್ಕೆ ನಮ್ಮ ಕಣ್ಣೆದುರೇ ಹಲವು ನಿದರ್ಶನಗಳಿವೆ.  ವರ್ಷಂಪ್ರತಿ ಟನ್ ಗಟ್ಟಲೆ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಹೂಳಲು ಸ್ಥಳಾವಕಾಶವೂ ಇಲ್ಲ ಹಾಗಂತ ಪ್ಲಾಸ್ಟಿಕ್ ಬಳಸುವವರ ಸಂಖ್ಯೆಯಲ್ಲೂ ಕಡಿಮೆಯೂ ಆಗಿಲ್ಲ.
 
ಪ್ಲಾಸ್ಟಿಕ್ ನಿಂದ ಇಷ್ಟೆಲ್ಲಾ ತೊಂದರೆಗಳಿವೆ ಎಂದು ತಿಳಿದಿದ್ದರೂ , ಬಳಕೆಗೆ ಸುಲಭವಾಗಿದೆ ಅನ್ನುವ ಕಾರಣಕ್ಕೆ ಪ್ಲಾಸ್ಟಿಕನ್ನು ನೆಚ್ಚಿಕೊಂಡಿರುವವರು ಹಲವರು. ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವಂತೆ ಸರ್ಕಾರಗಳು, ಸಂಘ ಸಂಸ್ಥೆಗಳು ಮನವಿ ಮಾಡಿದರೂ ಅದನ್ನು ಉಪಯೋಗಿಸುವ ನಾವುಗಳು ಅದರ ಬಳಕೆಯನ್ನು ಕಡಿಮೆ ಮಾಡದಿದ್ದಲ್ಲಿ ಇನ್ನಷ್ಟು ಅನಾಹುತಗಳನ್ನು ನಾವೇ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಅನಾಹುತಗಳನ್ನು ತಡೆಯಬಹುದು. ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ ಬಳಸಿದರೆ ನಿಜಕ್ಕೂ ಉತ್ತಮ. ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಮೂರ್ತಿಗಳ ರಚನೆ, ತಂದ ಪ್ಲಾಸ್ಟಿಕ್ ವಸ್ತುಗಳನ್ನೂ ಎಲ್ಲೆಂದರಲ್ಲಿ ಎಸೆಯದೆ ಮರು ಬಳಕೆ ಮಾಡುವಂತಾದರೆ ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ತಿನ್ನುವುದನ್ನೂ ತಪ್ಪಿಸಬಹುದು.

ಅದೆಷ್ಟೇ ಗಿಡ ನೆಟ್ಟರೂ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗದ ಹೊರತು ಪರಿಸರ ಮಾಲಿನ್ಯ ತಡೆಗಟ್ಟುವುದು ಅಸಾಧ್ಯ. ಈ ಕೆಲಸ ನಮ್ಮಿಂದಲೇ ಆರಂಭವಾಗಲಿ. ನಮಗಾಗಿ ಇಷ್ಟೆಲ್ಲಾ ಕೊಟ್ಟಿರುವ ಪ್ರಕೃತಿಯ ಉಳಿವಿಗೆ ನಮ್ಮಿಂದ ಸಣ್ಣ ಕೊಡಗೆಯನ್ನಾದರೂ ನೀಡೋಣ. ಈ ಮೂಲಕ ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಲು ಪಣ ತೊಡೋಣ. ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಕೈ ಜೋಡಿಸೋಣ.

 

: ದಿವ್ಯಾ ವಿ ಭಂಡಾರಿ ಉಜಿರೆ 

Friday 4 June 2021

ಕಾರ್ಕಳ ತಾಲ್ಲೂಕು ಪಳ್ಳಿ ಗ್ರಾಮದ ದಾದಬೆಟ್ಟು ಎಂಬಲ್ಲಿನ ಶ್ರೀಮತಿ ಅಪ್ಪಿ ಭಂಡಾರಿ ವಿಧಿವಶ

 ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ದಾದ ಬೆಟ್ಟು ಕಲಾನಿಕೇತನ ದಿವಂಗತ ಶ್ರೀ ಎಲ್ಲಪ್ಪ ಭಂಡಾರಿ ಅವರ ಧರ್ಮಪತ್ನಿಶ್ರೀಮತಿ ಅಪ್ಪಿ ಭಂಡಾರಿ (89 ವರ್ಷ ) ಯವರು ಕಳೆದ ಒಂದು ವಾರದ ಅಸೌಖ್ಯದಿಂದ ಉಡುಪಿ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶುಕ್ರವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು

ಪುತ್ರರಾದ ಶ್ರೀ ವಸುಧೇಶ ಭಂಡಾರಿ ಪಳ್ಳಿ ದಾದಬೆಟ್ಟು , ಬೆಳುಪು ಸರಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶ್ರೀ ಹಿತೇಶ್ ಭಂಡಾರಿ ಮತ್ತು
ಶ್ರೀ ರವಿರಾಜ್ ಭಂಡಾರಿ ಕುಂಟಾಡಿ ಕಾರ್ಕಳ ಪುತ್ರಿಯರಾದ ಶ್ರೀಮತಿ ವಾರಿಜ ಶೇಖರ್ ಭಂಡಾರಿ ಕದ್ರಿ ಮಂಗಳೂರು ಹಾಗೂ ಶ್ರೀಮತಿ ವಸುಮತಿ ದಾಮೋದರ ಭಂಡಾರಿ ಮುಂಬಯಿ ಮತ್ತು ಸೊಸೆಯಂದಿರು ಅಳಿಯ ಹಾಗೂ ಮೊಮ್ಮಕ್ಕಳು ಸಹೋದರರಾದ ಶ್ರೀ ಸದಾಶಿವ ಭಂಡಾರಿ ಪಳ್ಳಿ ಕಾರ್ಕಳ ಶ್ರೀ ಆನಂದ ಭಂಡಾರಿ ಮುಂಬಯಿ ಸಹೋದರಿಯರಾದ ಶ್ರೀಮತಿ ಕಿಟ್ಟಿ ವಾಸು ಭಂಡಾರಿ ಬಜಗೋಳಿ ಕಾರ್ಕಳ , ಶ್ರೀಮತಿ ಶಾರದ ಭಂಡಾರಿ ಉಡುಪಿ ಹಾಗೂ ಬಂಧು ಮಿತ್ರರು ಕುಟುಂಬಸ್ಥರನ್ನು ಅಗಲಿದ್ದಾರೆ.

ಮಕ್ಕಳು ಮತ್ತು ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯನ್ನು ಸಹಿಸುವ ಶಕ್ತಿಯು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-- ಭಂಡಾರಿ ವಾರ್ತೆ

Thursday 3 June 2021

ಮಂಗಳೂರು ತಾಲ್ಲೂಕು ಕೈಕಂಬ, ಕಂದಾವರ ಗ್ರಾಮದ ಶ್ರೀಮತಿ ಗೀತಾ ಜಗದೀಶ್ ಭಂಡಾರಿ ವಿಧಿವಶ

 ಬಂಟ್ವಾಳ ಬೈಪಾಸ್ ರಸ್ತೆಯ ಅಜೆಕಲ ದಿವಂಗತ ಶ್ರೀ ಸೀನ ಭಂಡಾರಿ ಮತ್ತು ಶ್ರೀಮತಿ ಸರಸ್ವತಿ ದಂಪತಿಯ ಪುತ್ರಿ ಹಾಗೂ ಮಂಗಳೂರು ತಾಲ್ಲೂಕು ಕೈಕಂಬ , ಕಂದಾವರ ಗ್ರಾಮ ಪಂಚಾಯತ್ ಕಚೇರಿ ಸಮೀಪದ ನಿವಾಸಿ ಶ್ರೀ ಜಗದೀಶ್ ಭಂಡಾರಿ ಅವರ ಪತ್ನಿ ಶ್ರೀಮತಿ ಗೀತಾ ಜಗದೀಶ್ ಭಂಡಾರಿ ( 48 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಜೂನ್ 2 ನೇ ಬುಧವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದರು.

 ಸದಾ ಲವಲವಿಕೆಯಿಂದ ಎಲ್ಲರೊಂದಿಗೆ ಆತ್ಮೀಯತೆಯಿಂದ ಮಾತನಾಡುತ್ತಾ ಬಂಧುಗಳ ಪ್ರೀತಿಗೆ ಪಾತ್ರರಾಗಿದ್ದರು ಗೀತಾಕ್ಕ.

ತಾಯಿ, ಪತಿ, ಪುತ್ರ ಸ್ವಸ್ತಿಕ್ ಪುತ್ರಿಯರಾದ ಶ್ರೀಮತಿ ಸ್ವಾತಿ ಮತ್ತು ಕು ॥ ಶ್ರುತಿ ಅಳಿಯ ಯೋಗೀಶ್ ಭಂಡಾರಿ ಮೊಮ್ಮಗಳು ಬೇಬಿ ಐಶಾನಿ ಸಹೋದರರಾದ ಸುರೇಶ್ ಭಂಡಾರಿ ಮುಂಬಯಿ ,ಸತೀಶ್ ಭಂಡಾರಿ ಬಂಟ್ವಾಳ ಮತ್ತು ಸುಧಾಕರ ಭಂಡಾರಿ ಬಂಟ್ವಾಳ ಹಾಗೂ ಅಪಾರ ಬಂಧು ಬಳಗ ಕುಟುಂಬಸ್ಥರನ್ನು ಅಗಲಿದ್ದಾರೆ.
 ತಾಯಿ ,ಪತಿ ,ಮಕ್ಕಳು ಮತ್ತು ಸಹೋದರರಿಗೆ ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ