BhandaryVarthe Team

BhandaryVarthe Team
Bhandary Varthe Team

Saturday, 5 June 2021

ಪ್ಯಾಸ್ಟಿಕ್ ಮುಕ್ತ ಪರಿಸರ ನಮ್ಮ ಆದ್ಯತೆಯಾಗಲಿ ಬನ್ನಿ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಕೈ ಜೋಡಿಸೋಣ-ದಿವ್ಯಾ ಉಜಿರೆ

 ಪಂಚಭೂತಗಳಲ್ಲಿ ಅತೀ ಶ್ರೇಷ್ಟ ನಮ್ಮ ಪ್ರಕೃತಿ. ಜಗತ್ತಿನಲ್ಲಿರುವ ಎಲ್ಲಾ ಜೀವ ಸಂಕುಲಕ್ಕೆ ಪ್ರಕೃತಿ ಕೊಟ್ಟಿರುವ ಕೊಡುಗೆ ಅಪಾರ. ಮನುಷ್ಯನಿಗೆ ಅಥವಾ ಜೀವಿಗಳಿಗೆ ಬದುಕಲು ಬೇಕಾದ ಎಲ್ಲವನ್ನೂ ಪ್ರಕೃತಿ ನೀಡಿದೆ. ಆದರೆ ಮನುಷ್ಯ ತನ್ನ ಅತಿಯಾದ ಆಸೆ, ಐಷಾರಾಮಿ ಬದುಕಿಗಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿಕೊಂಡೇ ಬಂದಿದ್ದಾನೆ. ಶುದ್ಧಗಾಳಿ, ಶುದ್ಧ ನೀರು, ಹಸುರಿನಿಂದ ಕಂಗೊಳಿಸುತ್ತಿದ್ದ ಪ್ರದೇಶಗಳಲ್ಲಿ ಹಸಿರೇ ಕಾಣಿಸದೇ ಇರುವಷ್ಟರ ಮಟ್ಟಿಗೆ ಪ್ರಕೃತಿಯ ಆಪೋಶನವಾಗಿದೆ. ನೆರಳು ನೀಡುತ್ತಿದ್ದ ಮರಗಳು ಕಾಂಕ್ರಿಟ್ ಕಟ್ಟಡಕ್ಕಾಗಿ ಕೊಡಲಿಯೇಟಿಗೆ ಬಲಿಯಾಗುತ್ತಿದೆ. ತನ್ನ ವೈಯಕ್ತಿಕ ಆಸೆಯನ್ನು ಈಡೇರಿಸುವುದಕ್ಕಾಗಿ ಪ್ರಕೃತಿಯ ವಿರುದ್ಧ ಮನುಷ್ಯರು ಹೋಗುತ್ತಿರುವ ರೀತಿ ಇಂದು ಪ್ರಾಕೃತಿಕ ವಿಕೋಪದ ಮೂಲಕ ಆತನನ್ನೇ ಬಲಿ ಪಡೆದುಕೊಳ್ಳುತ್ತಿದೆ. ತಾನೇ ತೋಡಿಕೊಂಡ ಹಳ್ಳಕ್ಕೆ ಬೀಳುವಂತಾಗಿದೆ ಮನುಷ್ಯನ ಪರಿಸ್ಥಿತಿ.

ಪ್ರಕೃತಿ ಮುನಿದರೆ ಮನುಕುಲ ವಿನಾಶವಾಗುತ್ತದೆ ಅನ್ನೋ ಮಾತು ಈಗ ನಮ್ಮ ಅರಿವಿಗೆ ಬರುತ್ತಿದೆ. ಒಂದೆಡೆ ಮನುಷ್ಯನನ್ನು ಇಂಚಿಂಚಾಗಿ ಕೊಲ್ಲುತ್ತಿರುವ ವಾಯುಮಾಲಿನ್ಯ. ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ‘ಪ್ಲಾಸ್ಟಿಕ್‌ ’ ಮಾಡುತ್ತಿರುವ ಅನಾಹುತ ಅಂತಿಂಥದ್ದಲ್ಲ. ‘ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಗಟ್ಟಿ’ ಇದು ಈ ವರ್ಷದ ವಿಶ್ವ ಪರಿಸರ ದಿನದ ಘೋಷವಾಕ್ಯ. ನಮ್ಮ ಮಹಾನಗರಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಘನತ್ಯಾಜ್ಯಗಳು ಲಕ್ಷ ಲಕ್ಷ ಟನ್‌ಗಳಷ್ಟು. ಪರಿಸರ ಮಾತ್ರವಲ್ಲ ಮನುಷ್ಯರು, ಪ್ರಾಣಿಗಳ ಮೇಲೂ ಪ್ಲಾಸ್ಟಿಕ್ ದುಷ್ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಮನುಷ್ಯನನ್ನು ಬಲಿತೆಗೆದುಕೊಳ್ಳುತ್ತಿರುವ ಮಾರಕ ಕಾಯಿಲೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಪ್ಲಾಸ್ಟಿಕ್ ನಲ್ಲಿರುವ ವಿಷಕಾರಿ ಅಂಶವೇ ಕಾರಣ ಅನ್ನುವ ಆಘಾತಕಾರಿ ಮಾಹಿತಿಯನ್ನು ಸಂಶೋಧಕರೇ ಬಿಚ್ಚಿಟ್ಟಿದ್ದಾರೆ. ಇನ್ನು ಈ ಬಗ್ಗೆ ಎಷ್ಟು ಜಾಗೃತಿ ಮೂಡಿಸುವ ಕೆಲಸ ನಡೆದರೂ ನಾವು ಮಾತ್ರ ಹೋಟೆಲ್ ಗಳಿಂದ ಆಹಾರವನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತರುವುದನ್ನು ನಿಲ್ಲಿಸಿಲ್ಲ. ಇದೇ ಕಾರಣದಿಂದ ಪ್ಲಾಸ್ಟಿಕ್ ನಲ್ಲಿರುವ ಹಾನಿಕಾರಣ ಅಂಶಗಳು ನಾವು ತಿನ್ನುವ ಆಹಾರವನ್ನು ಸೇರಿಕೊಂಡು ನಾನಾ ತರದ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತಿದೆ.
ಇನ್ನು ಮನುಷ್ಯನ ಜೊತೆಗೆ ಅದೆಷ್ಟೋ ಪ್ರಾಣಿಗಳು, ಜಲಚರಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಪ್ರಾಣ ಕಳೆದುಕೊಂಡಿವೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ವಸ್ತುವಾಗಿರಬಹುದು, ಸಮುದ್ರದ ಒಡಲು ಸೇರುವ ಪ್ಲಾಸ್ಟಿಕ್ ತ್ಯಾಜ್ಯವಾಗಿರಬಹುದು ಅಲ್ಲಿನ ಜೀವಿಗಳ ಹೊಟ್ಟೆ ಸೇರಿ ಅವುಗಳನ್ನೇ ಬಲಿಪಡೆಯುತ್ತಿವೆ. ರಸ್ತೆ ಬದಿ, ಕಸದ ತೊಟ್ಟಿಗಳಲ್ಲಿರುವ ತ್ಯಾಜ್ಯವನ್ನು ತಿಂದು ಅದೆಷ್ಟೋ ಜಾನುವಾರುಗಳು, ನಾಯಿಗಳು ಪ್ರಾಣಕಳೆದುಕೊಂಡಿವೆ. ಇನ್ನು ಮಳೆ ನೀರಿನೊಂದಿಗೆ ಚರಂಡಿ ಸೇರುವ ಟನ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಒಂದೆಡೆ ನಿಂತು ನೀರು ಸರಾಗವಾಗಿ ಹರಿಯಲಾಗದೆ ನೆರೆ ಸೃಷ್ಟಿ ಮಾಡಿರುವುದಕ್ಕೆ ನಮ್ಮ ಕಣ್ಣೆದುರೇ ಹಲವು ನಿದರ್ಶನಗಳಿವೆ.  ವರ್ಷಂಪ್ರತಿ ಟನ್ ಗಟ್ಟಲೆ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಹೂಳಲು ಸ್ಥಳಾವಕಾಶವೂ ಇಲ್ಲ ಹಾಗಂತ ಪ್ಲಾಸ್ಟಿಕ್ ಬಳಸುವವರ ಸಂಖ್ಯೆಯಲ್ಲೂ ಕಡಿಮೆಯೂ ಆಗಿಲ್ಲ.
 
ಪ್ಲಾಸ್ಟಿಕ್ ನಿಂದ ಇಷ್ಟೆಲ್ಲಾ ತೊಂದರೆಗಳಿವೆ ಎಂದು ತಿಳಿದಿದ್ದರೂ , ಬಳಕೆಗೆ ಸುಲಭವಾಗಿದೆ ಅನ್ನುವ ಕಾರಣಕ್ಕೆ ಪ್ಲಾಸ್ಟಿಕನ್ನು ನೆಚ್ಚಿಕೊಂಡಿರುವವರು ಹಲವರು. ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವಂತೆ ಸರ್ಕಾರಗಳು, ಸಂಘ ಸಂಸ್ಥೆಗಳು ಮನವಿ ಮಾಡಿದರೂ ಅದನ್ನು ಉಪಯೋಗಿಸುವ ನಾವುಗಳು ಅದರ ಬಳಕೆಯನ್ನು ಕಡಿಮೆ ಮಾಡದಿದ್ದಲ್ಲಿ ಇನ್ನಷ್ಟು ಅನಾಹುತಗಳನ್ನು ನಾವೇ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಅನಾಹುತಗಳನ್ನು ತಡೆಯಬಹುದು. ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ ಬಳಸಿದರೆ ನಿಜಕ್ಕೂ ಉತ್ತಮ. ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಮೂರ್ತಿಗಳ ರಚನೆ, ತಂದ ಪ್ಲಾಸ್ಟಿಕ್ ವಸ್ತುಗಳನ್ನೂ ಎಲ್ಲೆಂದರಲ್ಲಿ ಎಸೆಯದೆ ಮರು ಬಳಕೆ ಮಾಡುವಂತಾದರೆ ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ತಿನ್ನುವುದನ್ನೂ ತಪ್ಪಿಸಬಹುದು.

ಅದೆಷ್ಟೇ ಗಿಡ ನೆಟ್ಟರೂ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗದ ಹೊರತು ಪರಿಸರ ಮಾಲಿನ್ಯ ತಡೆಗಟ್ಟುವುದು ಅಸಾಧ್ಯ. ಈ ಕೆಲಸ ನಮ್ಮಿಂದಲೇ ಆರಂಭವಾಗಲಿ. ನಮಗಾಗಿ ಇಷ್ಟೆಲ್ಲಾ ಕೊಟ್ಟಿರುವ ಪ್ರಕೃತಿಯ ಉಳಿವಿಗೆ ನಮ್ಮಿಂದ ಸಣ್ಣ ಕೊಡಗೆಯನ್ನಾದರೂ ನೀಡೋಣ. ಈ ಮೂಲಕ ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಲು ಪಣ ತೊಡೋಣ. ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಕೈ ಜೋಡಿಸೋಣ.

 

: ದಿವ್ಯಾ ವಿ ಭಂಡಾರಿ ಉಜಿರೆ 

No comments:

Post a Comment