BhandaryVarthe Team

BhandaryVarthe Team
Bhandary Varthe Team

Sunday, 10 October 2021

ಶ್ರೀಮತಿ ಶಕುಂತಲಾ ಡಾI ಚಂದ್ರಕಾಂತ್ ಕೋರೆ ಉತ್ತರ ಕರ್ನಾಟಕದ ಸುಪ್ರಸಿದ್ದ ವೈದ್ಯಕೀಯ ಕಾಲೇಜಿನ ನರ್ಸಿಂಗ್ ವಿಭಾಗದ ಸೂಪರಿಂಟೆಂಡೆಂಟ್ ಪದವಿಗೆ (superintendent) ಆಯ್ಕೆ

 ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ  ರಿಪ್ಪನ್ ಪೇಟೆ ಪಂಚಾಯತ್ ಉಪಾಧ್ಯಕ್ಷರಾಗಿದ್ದ ದಿ.ಕೆ ಮುದ್ದು ಭಂಡಾರಿ ಮತ್ತು ದಿ.ಕಮಲಮ್ಮನವರ ಪುತ್ರಿ ಶ್ರೀಮತಿ ಶಕುಂತಲಾ.ಡಾ.ಚಂದ್ರಕಾಂತ್ ಕೋರೆಯವರು ಉತ್ತರ ಕರ್ನಾಟಕದ ಪ್ರಸಿದ್ದ ವೈದ್ಯಕೀಯ ಕಾಲೇಜಿನ ನರ್ಸಿಂಗ್ ವಿಭಾಗದ ಸೂಪರಿಂಟೆಂಡೆಂಟ್ ಪದವಿಗೆ (superintendent) ಆಯ್ಕೆಯಾಗಿದ್ದಾರೆ.

ಶ್ರೀಮತಿ ಶಕುಂತಲಾರವರು ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ಸಮಿತಿಯ ಉಪಾಧ್ಯಕ್ಷರು ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಹೊಸನಗರ ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷರು ರಿಪ್ಪನ್ ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ರಿಪ್ಪನ್ ಪೇಟೆ ಪಂಚಾಯತ್ ಉಪಾಧ್ಯಕ್ಷರು ಆಗಿದ್ದ ದಿ.ಕೆ ಮುದ್ದು ಭಂಡಾರಿಯವರ  ಪುತ್ರಿ.

ರಿಪ್ಪನ್ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಶ್ರೀಮತಿ ಶಕುಂತಲಾ , ಹೆಚ್ಚಿನ ಶುಶ್ರೂಷ ಅಧಿಕಾರಿ ತರಬೇತಿಯನ್ನು ಬೆಳಗಾವಿಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆದಿರುತ್ತಾರೆ. ನಂತರದಲ್ಲಿ ಬೆಂಗಳೂರಿನ ಸೇಂಟ್ ಜಾನ್ ಮೆಡಿಕಲ್ ಕಾಲೇಜು ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಉದ್ಯೋಗ ಮಾಡಿದ್ದಾರೆ. ಆ ಬಳಿಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಊರಿನ ಶರಣ ಸಂಸ್ಕೃತಿಯ ಪ್ರತಿಪಾದಕರು, ದೊಡ್ಡ ಭೂ ಹಿಡುವಳಿದಾರರು, ಕೆ ಎಲ್ ಈ ಸೊಸೈಟಿಯ ಮತ್ತು ಸಹಕಾರಿ ಸಂಘದ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಆಗಿದ್ದ ದಿ. ಟಿ . ಡಿ ಕೋರೆ ಯವರ ಸುಪುತ್ರ ಡಾ.ಚಂದ್ರಕಾಂತ್ ಟಿ ಕೋರೆ ಯವರೊಂದಿಗೆ ವಿವಾಹವಾಗಿ ಹಾಲಿ ಈಗ ಬೆಳಗಾವಿಯಲ್ಲಿನೆಲೆಸಿದ್ದು ಉತ್ತರಕರ್ನಾಟಕದ ಸುಪ್ರಸಿದ್ಧ ಕೆ ಎಲ್ ಈ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ದಂಪತಿಗಳಿಬ್ಬರೂ ಸೇವೆ ಸಲ್ಲಿಸುತ್ತಿದ್ದಾರೆ.


ಇವರಿಗೆ ಈರ್ವರು ಪುತ್ರರಿದ್ದು ಅವರಲ್ಲಿ ಓರ್ವ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಇನ್ನೋರ್ವ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಮಲೆನಾಡಿನ ಭಂಡಾರಿ ಕುಟುಂಬದಲ್ಲಿ ಜನಿಸಿರುವ ದಕ್ಷಿಣ ಕರ್ನಾಟಕದ ಹೆಣ್ಣು ಮಗಳು ಉತ್ತರ ಕರ್ನಾಟಕದ ಸುಪ್ರಸಿದ್ಧ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ನರ್ಸಿಂಗ್ ಸುಪರಿಂಟೆಂಡೆಂಟ್ ಆಗಿ ನೇಮಕ ಹೊಂದಿರುವುದು ನಮ್ಮ ಸಮಾಜಕ್ಕೊಂದು ಹೆಮ್ಮೆಯ ಸಂಗತಿ.

ಶ್ರೀಮತಿ ಶಕುಂತಲಾರವರು ತನ್ನ ಸೇವಾವಧಿಯಲ್ಲಿ ಇನ್ನೂ ಹೆಚ್ಚಿನ ಪದೋನ್ನತಿ ಹೊಂದಲಿ, ಸಮಾಜಕ್ಕೆ ಕೀರ್ತಿಯನ್ನು ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಾ ಅಭಿನಂದನೆ ಸಲ್ಲಿಸುತ್ತದೆ.

ಮಾಹಿತಿ :ಮಂಜುನಾಥ ಭಂಡಾರಿ, ರಿಪ್ಪನಪೇಟೆ.

- ಭಂಡಾರಿ ವಾರ್ತೆ

 


"ಅರಳುವ ಮುನ್ನ" - ಎ.ಆರ್.ಭಂಡಾರಿ.ವಿಟ್ಲ.

 

ಕಥೆ - 4

"ಅರಳುವ ಮುನ್ನ"

"ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ "ಕವಿ ಕುವೆಂಪುರವರ ಹಾಡಿನ ಸಾಲುಗಳನ್ನು ಗುನುಗುತ್ತ ಸೋಫಾದಮೇಲೆ ಒರಗಿದ್ದ ನನ್ನನ್ನು ಸ್ಕೂಲ್ ಬಸ್ಸಿನ ಹಾರ್ನ್ ಎಚ್ಚರಿಸಿತು.ಅಷ್ಟರಲ್ಲಿ ಅಮ್ಮ ಎನ್ನುತ್ತಾ 'ಖುಷಿ'ಯು ಒಳ ಬಂದಾಯಿತು. ಕೆನ್ನೆಗೆ ಮುತ್ತಿಟ್ಟು ಫ್ರೆಶ್ ಆಗಲು ಕೋಣೆ ಸೇರಿದ "ಖುಷಿ"ಯ ಕಂಡು ನಾನು ತಿಂಡಿ ರೆಡಿ ಮಾಡಲು ಅಡುಗೆ ಕೋಣೆಯತ್ತ ನಡೆದೆ. ಅವಳಿಷ್ಟದ ಬೆಣ್ಣೆ ದೋಸೆ ಮತ್ತು ಹಾಲನ್ನು ಕೊಟ್ಟು ತರಗತಿಯ ವಿಷಯ ಮಾತನಾಡುತ್ತ ಕುಳಿತೆವು. ಅಷ್ಟರಲ್ಲಿ ಏನೋ ನೆನಪಾದವಳಂತೆ ಖುಷಿ ತನ್ನ ಬ್ಯಾಗಿನಿಂದ ಒಂದು ಪೊಟ್ಟಣವನ್ನು ಹಿಡಿದುಕೊಂಡು ಬಂದಳು. ಅಮ್ಮ ಇಂದು ನಮ್ಮ ಶಾಲೆಯಲ್ಲಿ ಎಲ್ಲರಿಗೂ 'ವಿಸ್ಪರ್ ಪ್ಯಾಡ'ನ್ನು ನೀಡಿದ್ದಾರೆ. ಅದೇ ರೀತಿ ಹದಿಹರೆಯದ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ನುಡಿದಳು. ಅವಳ ಮಾತನ್ನು ಕೇಳಿ ಬೆಚ್ಚಿ ಬೀಳುವ ಸರದಿ ನನ್ನದಾಗಿತ್ತು. ಅವಳು ಮತ್ತೆ ತನ್ನ ಗೆಳತಿಯರ ವಿಚಾರಗಳನ್ನು ಮಾತನಾಡ ತೊಡಗಿದಳು.ಆದರೆ ನಾನದಾವುದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.ನೇರವಾಗಿ ಸಿಡಿಯುತ್ತಿದ್ದ ತಲೆಯನ್ನು ಒತ್ತಿ ಹಿಡಿಯುತ್ತಾ ರೂಮಿನೊಳಗೆ‌ ಬಂದು ಮಲಗಿದೆ. ಸಿಡಿಯುವ ತಲೆಗೆ ನಿದ್ದೆಯನ್ನು ಬರಸೆಳೆಯುವ ಮನಸ್ಸಿರಲಿಲ್ಲ .ಮನಸು ಹಿಂದಕ್ಕೋಡಿತ್ತು.

ಹೌದು ನಾನಾಗ ಹದಿನಾಲ್ಕರ ಬಾಲೆ. ದೊಡ್ಡಮ್ಮ-ಚಿಕ್ಕಮ್ಮ,ಮಾವನ ಮಕ್ಕಳು,ಜತೆಗೆ ಸಹಪಾಠಿಗಳು "ನಾನು ದೊಡ್ಡವಳಾದೆ" ಎಂದೆನುತ half saree ಫಂಕ್ಷನ್ ನ್ನು ಮಾಡಿಕೊಂಡಾಗಿತ್ತು. ಆದರೆ ನನ್ನಲ್ಲಿ ಅಂತಹ ಬದಲಾವಣೆ ಕಾಣಿಸಲಿಲ್ಲ.ಅಮ್ಮ, ಅದಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಹೇಳಿದ್ದೂ ಆಯಿತು. ಅದೊಂದು ದಿನ ವಿಪರೀತ ಹೊಟ್ಟೆನೋವು, ಸೊಂಟನೋವು ಜತೆಗೆ ವಿಪರೀತ ಸುಸ್ತು. ನನ್ನೊಳಗೆ ಏನಾಗುತ್ತಿದೆ ಎಂಬ ಅರಿವಾಗುತ್ತಲೇ ಇರಲಿಲ್ಲ. ಏನೋ ಸಂಕಟ. ಅಮ್ಮನಿಗೆ ಹೇಳಿದರೆ ಆಕೆ ಮುಟ್ಟಾಗಬಹುದೆಂದು ಹೇಳಿ ಸಮಾಧಾನಿಸಿದಳು. ಜೀರಿಗೆ ಕಷಾಯವನ್ನು ಕುಡಿಸಿದಳು. ಜಾಗರೂಕತೆಯಿಂದ ಇರಲು ಹೇಳಿದಳು. ಆದರೆ ಅವಳಂದಂತೆ ಆಗಲೇ ಇಲ್ಲ.ಎರಡು ದಿನದಲ್ಲಿ ನಾನು ಚೇತರಿಸಿಕೊಂಡೆ.


ಮುಂದೆ ಎಂದಿನಂತೆ ಶಾಲೆಯತ್ತ ನಡೆದೆ. ಪರೀಕ್ಷೆಗಳು ಮುಗಿದು ಅಮ್ಮ ನಾನು ಚಿಕ್ಕಮಗಳೂರಿನ ಅಜ್ಜಿ ಮನೆಯತ್ತ ನಡೆದೆವು. ಅಲ್ಲಿ ಹೋದ ಒಂದು ವಾರಕ್ಕೆ ಮತ್ತೆ ಹೊಟ್ಟೆನೋವು ಕಾಣಿಸಿತು. ಅಮ್ಮನಿಗೆ ಹೇಳಿದರೆ ಸರಿ ಮಲಗಿಕೋ ಬಿಡು ಎಂಬ ಸಮಾಧಾನ. ಅಜ್ಜಿಯು ಏನೋ ಕಷಾಯವನ್ನು ಮಾಡಿ ಕುಡಿಸಿ ಮಲಗಿಸಿದರು. ಆದರೆ ನನಗೆ ಈ ಬಾರಿ ನಡೆಯಲು ಕಷ್ಟವಾಗುವ ಪರಿಸ್ಥಿತಿ. ಹೆಣ್ಣಿನ ಅಂಗದ ಬಳಿ ಏನು ಗೋಲಿ ಗಾತ್ರದ ನೀಲಿ ಚೆಂಡು ಮೂತ್ರ ಮಾಡಲು ಕೂಡ ಬಿಡದಂತೆ ಮುಚ್ಚಿತ್ತು. ಯಾಕೋ ಅಮ್ಮನಲ್ಲಿ ಹೇಳಲು ಭಯ. ನೀರನ್ನೇ ಕುಡಿಯುವುದನ್ನು ಬಿಟ್ಟು ಮಲಗುವುದೊಂದೆ ಆಗಿತ್ತು.ನೋವಿಗೂ ,ಉಪವಾಸವಿದ್ದದಕ್ಕೂ ಜ್ವರ ಬಂದಾಗಿತ್ತು. ಮತ್ತೆ ಎರಡು ಮೂರು ದಿನಗಳಲ್ಲಿ ಮೊದಲಿನಂತೆ ಆಗಿದ್ದೆ. ಇಪ್ಪತ್ತು ದಿನಗಳಿದ್ದು ಊರಿಗೆ ಹಿಂದುರುಗಿ ಬಂದಾಯಿತು.ಅಜ್ಜಿಯೂ "ಇಂಚರಾ " ಮೊದಲಿನಂತೆ ಲವಲವಿಕೆಯಾಗಲ್ಲ.ಗಮನಿಸಿಕೋ ಎಂದು ಅಮ್ಮನನ್ನು ಎಚ್ಚರಿಸಿ ಕಳುಹಿಸಿದ್ದರು.ಈ ಬಾರಿ ಮತ್ತೆ ಸೊಂಟನೋವು, ಹೊಟ್ಟೆನೋವು, ಜ್ವರ ನನ್ನನ್ನು ನಿತ್ಯಕರ್ಮಗಳನ್ನು ಮಾಡಲಾಗದ ಸ್ಥಿತಿಗೆ ತಂದಿತ್ತು. ಮೊದಲು ಕಾಣಿಸಿಕೊಂಡಿದ್ದ ಗಂಟು ಮತ್ತಷ್ಟು ದೊಡ್ಡದಾಗಿತ್ತು.ಎದ್ದು ನಡೆಯಲಾಗದಷ್ಟು ಯಾತನೆ.ಒಳ ಉಡುಪುಗಳನ್ನು ಧರಿಸಲಾಗುತ್ತಿರಲಿಲ್ಲ. ಕಾಲು ಅಗಲಿಸಿ ನಡೆಯುತ್ತಿದ್ದ ನನ್ನನ್ನು ಕಂಡು ಅಪ್ಪ,ಅಮ್ಮನ ಜೊತೆ ಅದೇ ಬೀದಿಯಲ್ಲಿದ್ದ ಡಾಕ್ಟರ್ ಮಾಲಿನಿ ಬಳಿ ಕಳುಹಿಸಿದರು. ನನ್ನ ಪರೀಕ್ಷಿಸಿದ ಡಾಕ್ಟರ್ ಕೂಡಲೇ ಅಪ್ಪನನ್ನು ಬರಹೇಳಿದರು. ಅವರು ಕೊಟ್ಟ ಉತ್ತರ ಅವರಷ್ಟೇ ಕುತೂಹಲಕಾರಿಯಾಗಿತ್ತು. ಕಾರಣ ಅವರು ಹೇಳಿದ ಪ್ರಕಾರ ನಾನು ಗರ್ಭಿಣಿಯಾಗಿದ್ದೆ. ಇದನ್ನು ಒಪ್ಪುವ ಸ್ಥಿತಿಯಲ್ಲಿ ಅಪ್ಪ-ಅಮ್ಮ ಇಬ್ಬರೂ ಇರಲಿಲ್ಲ .ನಾನಂತೂ ಏನೂ ಅರಿಯದ ಗೊಂದಲದಲ್ಲಿದ್ದೆ.ಹೆತ್ತವರ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇರಲಿಲ್ಲ. ಅಂತೂ ಇಂತೂ ಆ ದಿನ ನರಕ ಮಯವಾಗಿ ಕಳೆದು ಹೋಗಿತ್ತು. ಅಮ್ಮ ಅಳುತ್ತಾ ಕುಳಿತಿದ್ದರೆ ಅಪ್ಪ ಮಾತು ಬಿಟ್ಟಾಗಿತ್ತು.ನನ್ನದಲ್ಲದ ತಪ್ಪಿಗೆ ನಾನು ಅಪರಾಧಿಯಾಗಿದ್ದೆ.ಅಪ್ಪ ಅಮ್ಮ ಏನು ಮಾತನಾಡಿದರು ಗೊತ್ತಿಲ್ಲ.ಆದರೆ ಮರುದಿನ ಅಪ್ಪ ತನ್ನ ಸ್ನೇಹಿತರಾದ ಡಾಕ್ಟರ್ ಮಧುಕರ್ ಅವರ ಹಾಸ್ಪಿಟಲ್ಗೆ ಕರೆತಂದಾಯಿತು. ಅಲ್ಲಿ ಅವರ ಪತ್ನಿ ಡಾಕ್ಟರ್ ಸಮನ್ವಿ ನನ್ನನ್ನು ಪರೀಕ್ಷಿಸಿ ಸ್ಕ್ಯಾನಿಂಗ್ ಕೊಠಡಿಯತ್ತ ಕರೆದೊಯ್ದರು. ಅಪ್ಪ ಅಮ್ಮನ ಆತಂಕದ ಮುಖ ನೋಡಲಾಗುತ್ತಿರಲಿಲ್ಲ. ಡಾಕ್ಟರ್ ಮಧುಕರ್ ಹಾಗೂ ಸಮನ್ವಿ ಅಪ್ಪನನ್ನು ಅಮ್ಮನನ್ನು ಸಮಾಧಾನಿಸುತ್ತಾ, ವಿಷಯವನ್ನು ಹೇಳತೊಡಗಿದರು . 'ಇವಳು ರಸ ಜ್ವಾಲೆಯಾಗಿ ಮೂರು ನಾಲ್ಕು ತಿಂಗಳು ಕಳೆದಿದೆ. ಆದರೆ ಹೊರಗೆ ಹೋಗಬೇಕಾದ ದ್ರವ ಹೊರಹೋಗದಂತೆ ಕನ್ಯಾಪೊರೆ ತಡೆಹಿಡಿದಿದೆ. ಸುಲಭವಾಗಿ ಹೇಳಬೇಕೆಂದರೆ "ಮೊಗ್ಗು ಬಿರಿಯದ ಹಾಗೆ ಎಳೆಯೊಂದು ಸುತ್ತಿರುವ ಹಾಗೆ" ಒಂದು ಸಣ್ಣ ಶಸ್ತ್ರಚಿಕಿತ್ಸೆ ಮಾಡಿ ಸರಿಮಾಡಬಹುದು. ವೈದ್ಯಕೀಯ ಭಾಷೆಯಲ್ಲಿ ಇದನ್ನು 'ಇಂಪರ್ಫೋರತೆ ಹೈಮೆನ್' ಎಂದು ಕರೆಯುತ್ತೇವೆ. ಪ್ರತಿ ಹೆಣ್ಣು ಮಗುವಿನಲ್ಲೂ ಕನ್ಯಾಪೊರೆ ಇರುತ್ತದೆ ಆದರೆ ಅದು ಸಂಪೂರ್ಣವಾಗಿ ಜನನಾಂಗದ ಒಳಭಾಗವನ್ನು ಮುಚ್ಚುವುದಿಲ್ಲ. ಸ್ವಲ್ಪ ಸಣ್ಣ ಕಿರಿದಾದ ರಂದ್ರ ತೆರೆದಿರುತ್ತದೆ.ಹಾಗಾಗಿ ತಿಂಗಳ ಯಾವುದೇ ತಡೆಯಿಲ್ಲದೆ ಹೊರಗೆ ಹೋಗುತ್ತದೆ. ಆದರೆ ಸಾವಿರದಲ್ಲಿ ಒಬ್ಬರಿಗೆ ಅಪರೂಪಕ್ಕೆ ಕನ್ಯಾಪೊರೆ ಸಂಪೂರ್ಣವಾಗಿ ಆವರಿಸಿರುತ್ತದೆ . ಅವರಿಗೆ ಇಂತಹ ಸಮಸ್ಯೆ ಆಗುತ್ತದೆ. ಕೆಲವೊಮ್ಮೆ ಇದು ಅಲ್ಲೇ ಹಾನಿಕರ ಜೀವಕೋಶಗಳನ್ನು ಬೆಳೆಯಲು ಬಿಟ್ಟು ಕ್ಯಾನ್ಸರ್ ನಂತಹ ಮಾರಕ ರೋಗಕ್ಕೂ ಕಾರಣವಾಗಬಲ್ಲದು. ಪ್ರಾಣಾಪಾಯವನ್ನುತಂದೊಡ್ಡಬಲ್ಲದು.ಕೆಲವರಲ್ಲಿ ರಕ್ತನಾಳವೇ ಮುಚ್ಚಿರುವ ಸಾಧ್ಯತೆ ಇರುತ್ತದೆ.ಇವಳ ವಿಷಯದಲ್ಲಿ ಹಾಗಾಗಿಲ್ಲ ಎಂದು ತಿಳಿಸಿ ಶಸ್ತ್ರ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಕೊಂಡರು.ಜತೆಗೆ ಡಾ.ಮಾಲಿನಿಯವರಿಗೆ ಫೋನಾಯಿಸಿ ಅವರ ತಪ್ಪು ತಿಳುವಳಿಕೆಯ ಬಗ್ಗೆಯೂ ತಿಳಿಸಿದರು. ಒಂದು ಸೂಕ್ಷ್ಮವಾದ ಪದರ ಎಷ್ಟು ಒತ್ತಡವನ್ನು ಹಿಡಿದುಕೊಳ್ಳಬಹುದು?ಅಂತೂಇಂತೂ ಮೂರು-ನಾಲ್ಕು ತಿಂಗಳ ಉಳಿಕೆ ಯೆಲ್ಲವೂ‌ ನೀರು ತುಂಬಿದ ಬಲೂನಿನಂತೆ ಒಡೆದುಹೋಗಿತ್ತು. ವಿಪರೀತವಾದ ರಕ್ತಸ್ರಾವ ನನ್ನನ್ನು ಅರೆ ಪ್ರಜ್ಞಾವಸ್ಥೆಗೆ ದೂಡಿತ್ತು. ವೈದ್ಯರೊಬ್ಬರ ಅಲ್ಪಜ್ಞಾನ ನನ್ನನ್ನು ನನ್ನ ಮನೆಯವರನ್ನು ಸಾವಿನ ದವಡೆಗೆ ದೂಡುವುದರಲ್ಲಿತ್ತು.ಅಮ್ಮ ನನ್ನ ತಬ್ಬಿ ಅತ್ತಿದ್ದರೆ,ಅಪ್ಪ ಮೌನವಾಗಿ‌ ಕಣ್ಣೀರಾಗಿದ್ದರು. ಡಾಕ್ಟರ ಸಮನ್ವಿಯವರ ಕೂಲಂಕುಷವಾದ ಪರಿಶೀಲನೆ ಮುಗಿದು ನಾನು ಕ್ಯಾನ್ಸರ್ ರೋಗದ ಬಳಿಯು ಸುಳಿಯದಂತೆ ಮುತುವರ್ಜಿವಹಿಸಿದ್ದರು.ಅವರ ನಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು.


ಆಧುನಿಕ ಜಗತ್ತು ಈಗ ತುಂಬಾ ಮುಂದುವರಿದಿದೆ.ಹೆಣ್ಣುಶಿಶು ಹುಟ್ಟಿದಾಗಲೇ ಈ ಸಮಸ್ಯೆಯನ್ನು ಗುರುತಿಸಬಹುದು. ಹೆಣ್ಣು ಮಗುವಿನ ದೈಹಿಕ ಪರೀಕ್ಷೆಯಿಂದ ಯಾವಾಗ ಬೇಕಾದರೂ ಗುರುತಿಸಿ ಚಿಕಿತ್ಸೆ ಪಡೆಯಬಹುದು.ಹೆಣ್ಣು ಹರೆಯಕ್ಕೆ ಬಂದಾಗ ಆಕೆ ರಸಜ್ವಲೆಯಾಗಲು‌ ತಡವಾದರೆ ಈ ಪರೀಕ್ಷೆ ಅತಿ ಅಗತ್ಯ.ಕೆಲವೊಮ್ಮೆ ಹಾರ್ಮೋನ್ ಗಳ ಕಾರಣದಿಂದಲೂ ಋತುಮತಿಯಾಗಲು ತಡವಾಗಬಹುದು ಎಂಬುದನ್ನು ತಿಳಿಸಿದರು.ನನಗೆ ಬೇಕಾದ ಆಪ್ತ ಸಮಾಲೋಚನೆಯನ್ನೂ ನಡೆಸಿದರು. ಮುಂದೆ ಅಪ್ಪನಿಗೆ ಆ ಊರಿನಿಂದ ವರ್ಗವಾಯಿತು .ನಾವು ಬೆಂಗಳೂರನ್ನು ಬಿಟ್ಟು ಉಡುಪಿ ಸೇರಿಯಾಯ್ತು. ನಾನು ಎಲ್ಲರಂತಾದೆ ಎಂಬ ತೃಪ್ತಿ ಅಪ್ಪ ಅಮ್ಮನಲ್ಲಿತ್ತು.

ಪದವಿ ಕೊನೆಯ ಹಂತದಲ್ಲಿರುವಾಗ ಕಾಸರಗೋಡಿನಿಂದ ವಿಕ್ರಂ ಎಂಬ ಇಂಜಿನಿಯರ್ ಹುಡುಗನ ವರಪರೀಕ್ಷೆಯ ನನಗೆ ಎದುರಾಯಿತು. ಸಂಬಂಧ ಎಲ್ಲರಿಗೂ ಇಷ್ಟವಾಗಿ ನಿಶ್ಚಿತಾರ್ಥವು ಮುಗಿಯಿತು.ಮದುವೆಯ ಬಗ್ಗೆ ಹೊಂಗನಸುಗಳನ್ನು ಕಾಣುತ್ತಾ ನಾನು ಹಸೆಮಣೆ ಏರಿದೆ. ಆದರೆ ಕೊನೆಯ ಕ್ಷಣದಲ್ಲಿ ವಿಕ್ರಮನ ಚಿಕ್ಕಮ್ಮ ಎನಿಸಿಕೊಂಡಿದ್ದ ಅದೇ ಡಾಕ್ಟರ್ ಮಾಲಿನಿ ನನ್ನ ಹೆತ್ತವರನ್ನು ಕಂಡು ನಾನು ಹದಿಹರೆಯದಲ್ಲಿ ಗರ್ಭಿಣಿಯಾಗಿದ್ದೇನೆ ಎಂಬ ಸ್ಪೋಟಕ ಮಾಹಿತಿಯನ್ನು ಹೇಳಿ ವಿಕ್ರಂ ಹೆತ್ತವರ ಬಳಿ ಹೇಳಾಯಿತು.ಅವರ ಲೋಪವನ್ನು ಮಧುಕರ್ ದಂಪತಿಗಳು ತಿಳಿಸಿ ಎಚ್ಚರಿಸಿದ ಅಸಮಾಧಾನ ಅವರಲ್ಲಿ ಮನೆ ಮಾಡಿತ್ತು.. ಮತ್ತೆ ನಮ್ಮ ಸಂಸಾರಕ್ಕೆ ಬರಸಿಡಿಲು ಅಪ್ಪಳಿಸಿತ್ತು. ಆದರೆ ಅಂದು‌ ಕೂಡ ಸಮನ್ವಿ - ಮಧುಕರ್ ದಂಪತಿಗಳು ನಮ್ಮ ಪಾಲಿಗೆ ದೇವರಾಗಿ ಬಂದರು. ಡಾಕ್ಟರ್ ಮಾಲಿನಿಯವರ ಅರೆಬರೆ ವೈದ್ಯಕೀಯ ಜ್ಞಾನದ ಬಗ್ಗೆ ತಿಳಿಸಿದರು. ಜತೆಗೆ ಅವರಿಂದ ತೊಂದರೆಗೊಳಗಾದ ಇನ್ನಿತರ ರೋಗಿಗಳ ಬಗ್ಗೆ ತಿಳಿಸಿದರು.ನನ್ನನ್ನು ಕಳಂಕಿತೆ ಎಂಬ ಪಟ್ಟದಿಂದ ಹೊರ ತರುವುದರೊಂದಿಗೆ ಇಂತಹ ಸಂಬಂಧವೇ ಬೇಡವೆಂದು ತಮ್ಮಅಕ್ಕನ ಮಗ  ಡಾಕ್ಟರ್ ಸುಶಾಂತ್ ಗೆ ನನ್ನನ್ನು ಧಾರೆಯೆರೆದು, ಮನೆ ತುಂಬಿಕೊಂಡಿದ್ದರು. ನಮ್ಮಿಬ್ಬರ ಸುಖ ದಾಂಪತ್ಯದಲ್ಲಿ ಮೂಡಿದ ಚಿತ್ತಾರವೇ ಖುಷಿ.ಈಗವಳು ಹದಿಮೂರರ ಬಾಲೆ. ಎಲ್ಲವನ್ನೂ ಮರೆತು‌ ನೆಮ್ಮಂದಿಯಿಂದಿದ್ದರೂ ಅನುಭವಿಸಿದ ಅಪಮಾನ‌ ಮನದ ಮೂಲೆಯಲ್ಲಿ‌ ಹಾಗೆ ಕುಳಿತಿದೆ.ಇಂದೇಕೋ ಮತ್ತೆ ಮನಬಿರಿಯುವಂತೆ ಅಳಬೇಕನಿಸುತಿದೆ.ಅಷ್ಟರಲ್ಲಿ ಸುಶಾಂತ್ ಕೋಣೆಯೊಳಗೆ ಬಂದಾಗಿತ್ತು.ಖುಷಿಯನ್ನು ಮಾತನಾಡಿಸಿ ಬಂದವರಿಗೆ ನನ್ನ ಅಳುವಿಗೆ ಕಾರಣ ಗೊತ್ತಾಗಿತ್ತು."ಖುಷಿಯ ವಿಚಾರದಲ್ಲಿ ನೀನು ಭಯಪಡಬೇಡ ಇಂಚರಾ.ಅವಳು ಎಲ್ಲರಂತೆ ನಾರ್ಮಲ್ ಹುಡುಗಿ ಎಂದು‌ ಚಿಕ್ಕಮ್ಮ ಸಮನ್ವಿ ಹೇಳಿಲ್ವಾ..."ಎಂದವರನ್ನು ತಬ್ಬಿ ಬಿಕ್ಕಳಿಸಿದೆ.ಈ ಡಾಕ್ಟರ್ ಜತೆಲ್ಲಿರುವಾಗ ಮಾಸಿ ಹೋಗಿರುವ ಗಾಯವನ್ನು ಕೆದಕಿ ಮತ್ತಷ್ಟು‌ ಗಾಯಮಾಡಿಕ್ಕೊಳ್ಳುವ ಆಸೆನಾ? ಖುಷಿಯೆಂಬ ಔಷಧಿ ಇರುವಾಗ ಇನ್ನೊಂದು ointment ಬೇಕೇನು? ಎಂದವರತ್ತ ನಸು ನಗು ಬೀರಿದೆ.ಅವರ ಸಾಮೀಪ್ಯದಲ್ಲಿ ಹಾಗೆಯೇ ಜೊಂಪು ಹತ್ತ ತೊಡಗಿತು.

✍🏻 ಎ.ಆರ್.ಭಂಡಾರಿ.ವಿಟ್ಲ.



Saturday, 9 October 2021

"ಅನೂಹ್ಯ " - ಎ.ಆರ್.ಭಂಡಾರಿ.ವಿಟ್ಲ

 

ಕಥೆ - 3

"ಅನೂಹ್ಯ "

ಚಳಿಗಾಲದ ಸುಂದರ ಮುಂಜಾವು. ಮೂಡಣದಿಂದ ಮೆಲ್ಲಮೆಲ್ಲನೆ ಮೂಡಿ ಹೊನ್ನ ರಥವನ್ನೇರಿ ಹೊರಟ ದಿನಕರನ ಹೊಂಗಿರಣ. ಹಕ್ಕಿಗಳ ಚಿಲಿಪಿಲಿ ಕಲರವ, ದುಂಬಿಗಳ ಝೇಂಕಾರ, ಆಗತಾನೇ ಅರಳಿದ ಸೌಗಂಧ. ಭತ್ತದ ತೆನೆಯ ಮೇಲಿಂದ ಸಾಗಿ ಎಳೆಯ ಸೇರುತ್ತಿರುವ ಇಬ್ಬನಿಯ ಸಾಲು. ಪ್ರಕೃತಿಯ ಈ ಸ್ನೇಹಮಯ ನೋಟಕ್ಕೆ ಒಂದು ಗಳಿಗೆ ಅಪ್ಪ ಮಗಳಿಬ್ಬರು ಮೈಮರೆತು ನಿಂತರು. ಬೆಳ್ಳನೆ ಬೆಳಗಾಯಿತು ಎಂಬ ಹಾಡನ್ನು ಗುನುಗುತ್ತಾ "ಅನೂಹ್ಯ" ಗಿಡದಲ್ಲಿ ಬೆಳೆದಿದ್ದ ಹೂಗಳನ್ನು ಬಿಡಿಸುತ್ತಿದ್ದರೆ, ಶ್ರೀಧರ ರಾಯರು ಅಲ್ಲೇ ಇದ್ದ ಕಲ್ಲು ಬೆಂಚಿನಲ್ಲಿ ಕುಳಿತರು. ಅಷ್ಟರಲ್ಲೇ ಸ್ವಚ್ಚಂದವಾಗಿ ಹಾರಾಡುತ್ತ ಗುಬ್ಬಿಗಳೆರಡು ಉಷಃಕಾಲದ ನಿಶೆಯಲ್ಲಿ ಮೈಮರೆಯದೆ ಚಿವ್ ಚಿವ್ ಎಂದು ಮುಂಜಾನೆಗೆ ಭಾಷ್ಯ ಬರೆಯುತ್ತ ದಾಸವಾಳದ ಗಿಡವೊಂದರ ಮೇಲೆ ಕುಳಿತು ಅದಕ್ಕೆ ಕುಕ್ಕ ತೊಡಗಿದವು. ಬೆರಗು ಕಂಗಳಿಂದ ಅವುಗಳತ್ತಲೇ ನೋಡುತ್ತಿದ್ದ ಅನೂಹ್ಯಳನ್ನು ಕಂಡು,ರಾಯರ ಮೀಸೆಯಂಚಿನಲಿ ಕಿರು ನಗುವೊಂದು ಹಾದುಹೋಯಿತು. ಕಣ್ಣಂಚಿನಲ್ಲಿ ಕಂಡೂ ಕಾಣದಂತೆ ನೋವಿನ ಎಳೆಯೊಂದು ಮಿಂಚಿ ಮರೆಯಾಯಿತು. ಈ ಹುಡುಗಿಯ ಬಾಳಿನಲ್ಲಿ "ಆ" ಒಂದು ಕಪ್ಪು ಚುಕ್ಕೆಯನ್ನು ವಿಧಿ ಯಾಕೆ ಬರೆದ ? ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ . ಮನಸ್ಸು ಹಲವು ವರುಷಗಳ ಹಿಂದಕ್ಕೆ ಓಡಿತು. ಘಟನೆಗಳು ಕಣ್ಣ ಮುಂದೆ ಸುರುಳಿ ಬಿಚ್ಚಿದಂತೆ ಬಿಚ್ಚಿತ್ತ ಹೋದವು.


ಬಯಸಿ ಪಡೆದ ಮಗಳು ಅನೂಹ್ಯ ಅಪಘಾತವೊಂದರಲ್ಲಿ ಹೆಂಡತಿಯನ್ನು ಕಳೆದುಕೊಂಡ ರಾಯರಿಗೆ ಸರ್ವಸ್ವವಾದಳು. ಆಗತಾನೆ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಕಂಗಳಲ್ಲಿ ನೂರಾರು ಬಣ್ಣಬಣ್ಣದ ಕನಸುಗಳನ್ನು ತುಂಬಿ ಕಾಲೇಜ್ ಸೇರುವ ಧಾವಂತದಲ್ಲಿದ್ದ ಅನೂಹ್ಯ ಅಂದು ಗದ್ದೆಯಂಚಿನ ಮಾವಿನ ಮರದ ಕೆಳಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಮೈ ಕೆಂಡದಂತೆ ಸುಡುತ್ತಿತ್ತು.ಎರಡು ದಿನಗಳ ಆಸ್ಪತ್ರೆ ವಾಸದಿಂದ ಮನೆಗೆ ಬಂದ 'ಅನೂಹ್ಯ' ನಿರ್ಜೀವ ಬೊಂಬೆಯಂತಾದಳು. ಮನೆ ಮಗನಂತೆ ಬೆಳೆದ 'ಅವಿನಾಶ್' ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ತಿಳಿದು ಬಂದಿತ್ತು. ಅಂತೂ ಇಂತೂ ವೈದ್ಯರ , ಮನೆಯವರ ಪ್ರಯತ್ನದಿಂದ ಆಕೆ ಮೊದಲಿನಂತೆ ಆಗುವುದರಲ್ಲಿ ಆಕೆಯ ದೇಹದ ಮೇಲೆ ಗಮನಾರ್ಹ ಬದಲಾವಣೆಗಳು ಕಂಡುಬಂದವು. ಪರಿಸ್ಥಿತಿ ಕೈ ಮೀರಿ ಹೋಗುವುದರಲ್ಲಿ 'ಪಾಪದ ಪಿಂಡ'ವನ್ನು ತೆಗೆಸಿದ್ದು ಆಯ್ತು. ದಿನದಿಂದ ದಿನಕ್ಕೆ ನಿರ್ಲಿಪ್ತಳಾಗಿ ತೊಡಗಿದ ಅನೂಹ್ಯಳನ್ನು ಕಂಡು ವೈದ್ಯರು ವಾಸ್ತವ್ಯ‌ ಬದಲಾಯಿಸಲು ಹೇಳಿದರು. ಎಲ್ಲರ ಹಾರೈಕೆ ಫಲವೆಂಬಂತೆ ಚೇತರಿಸಿಕೊಂಡ ಅನೂಹ್ಯ , ಬಾಲ್ಯದ ಆಸೆಯಂತೆ ಪದವಿ ಮುಗಿಸಿ ಐ.ಎ.ಎಸ್ .ಪರೀಕ್ಷೆ ಬರೆದು ರಾಜ್ಯಕ್ಕೆ ಮೊದಲಿಗಳಾಗಿ ಪಾಸಾದಳು.

"ಏನಪ್ಪಾ ಯೋಚನೆ" ಎಂದು ಕೊರಳಿಗೆ ಜೋತುಬಿದ್ದ ಅನೂಹ್ಯಳ ಮಾತಿಗೆ ಶ್ರೀಧರರಾಯರು ವಾಸ್ತವದ ಕಡೆಗೆ ಮರಳಿದರು.ಒಂದು ಕ್ಷಣದ ಮೌನದ ಬಳಿಕ ಮಾತನ್ನು ಮುಂದುವರಿಸಿದರು. "ಅನು, ಅಂತೂ ನಿನ್ನ ಪರಿಶ್ರಮದಿಂದ ಐಎಎಸ್ ಪಾಸ್ ಆದೆ. ನನ್ನ ಆಸೆ ಯೊಂದು ಬಾಕಿ ಉಳಿದಿದೆಯಲ್ಲಾ? ಆ ಜೋಡಿ ಹಕ್ಕಿಗಳಂತೆ ನಿನ್ನ ಬದುಕಿಗೆ ಓರ್ವ ಉತ್ತಮ ಸಂಗಾತಿಯನ್ನು ಆರಿಸುವ ಜವಾಬ್ದಾರಿ ನನ್ನ ಮೇಲಿದೆ. ಪ್ರಾಯದ ಮದದಲ್ಲಿ "ಅವಿ" ಮಾಡಿದ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾನೆ. ನಿನ್ನ ಆಯ್ಕೆಗೆ ನನ್ನ ಒಪ್ಪಿಗೆ ಇದೆ ಮಗಳೆ. ಯಾರನ್ನಾದರೂ ಇಷ್ಟಪಟ್ಟಿದ್ದರೆ ಹೇಳಮ್ಮ ..."ಎಂದರು.ಅಪ್ಪನತ್ತ ಒಂದು ಕ್ಷಣ ದಿಟ್ಟಿಸಿದ ಅನೂಹ್ಯ " ಅಪ್ಪ ,ಹೀಗೆ ಹೇಳುತ್ತೇನೆಂದು ಬೇಜಾರು ಮಾಡಿಕೊಳ್ಳಬೇಡಿ. ಮದುವೆ ಎಂಬ ಕನಸಿನ ಗೋಪುರವನ್ನು ನಾನೆಂದು ಕಟ್ಟಿಲ್ಲ. ನನ್ನ ಗುರಿ ನಾನೊಬ್ಬಳು "ಐ.ಎ.ಎಸ್" ಅಧಿಕಾರಿಯಾಗಿ, ಸಮರ್ಥವಾಗಿ ಅದನ್ನು ನಿರ್ವಹಿಸಬೇಕು ಎಂಬುದು. ಆ ಗುರಿಯ ಕಡೆ ಹೆಜ್ಜೆ ಇಟ್ಟಿದ್ದೇನೆ. ನನ್ನ ಪರಿಶ್ರಮಕ್ಕಿಂತಲೂ ನಿಮ್ಮ ಬೆವರ ಹನಿಗಳ ಸಾಲು ನನ್ನ ಗುರಿಯ ಹಿಂದಿದೆ ಎಂಬುದನ್ನು ನಾನೆಂದಿಗೂ ಮರೆತಿಲ್ಲ.ಇನ್ನು ಪ್ರೀತಿ? ನಾನು ಪ್ರೀತಿಸಿದ್ದು "ಐ ಎ ಎಸ್"‌ ನನ್ನು. ಬಾಲ್ಯದಲ್ಲೇ ನೀವು ನನ್ನಲ್ಲಿ ಬಿತ್ತಿದ ಬೀಜ ಅದು. ನಾನು ಮೆಚ್ಚಿದ್ದು ನನ್ನ ಸಂಗಾತಿ ಎಂದರೆ ಇದುವೇ" .ಎಂದ ಅನುವಿನತ್ತ ಪ್ರಶ್ನಾರ್ಥಕವಾಗಿ ನೋಡಿದರು ರಾಯರು.


ಅನೂಹ್ಯ ಮಾತನ್ನು ಮುಂದುವರಿಸಿದಳು. "ಅಪ್ಪ , ಬದುಕು ಏನೆಂದು ಅರ್ಥವಾಗದ ವಯಸ್ಸಿನಲ್ಲಿ ನನ್ನೊಳಗೊಂದು ಜೀವ ಮೈದಳೆಯಿತು. ನನ್ನೊಳಗೊಂದು ಪುಟ್ಟ ಜೀವ ಚಿಗುರೊಡೆಯುತ್ತಿದೆ ಎಂದರಿವಾಗುವುದರೊಳಗೆ ಅದನ್ನು ಕಳೆದುಕೊಂಡೆ. ಮಾತ್ರವಲ್ಲದೆ ತಾಯ್ತನದ ಭಾಗ್ಯದಿಂದ ಶಾಶ್ವತವಾಗಿ ವಂಚಿತಳಾದೆ. ಅಂದು ವಿಪರೀತ ರಕ್ತಸ್ರಾವದಿಂದ ನನ್ನನ್ನು ಉಳಿಸಲು ನನ್ನ ತಾಯ್ತನ ಸಂಕೇತವಾದ ಗರ್ಭಕೋಶವನ್ನು ತೆಗೆಯಲಾಗಿದೆ ಎಂದು ನನಗೆ ತಿಳಿದಿದೆ. ಇಂದು ಆಧುನಿಕ ಜಗತ್ತು ಎಷ್ಟೇ ಮುಂದುವರಿದರೂ "ಹೆಣ್ತನ" ಸಾರ್ಥಕವಾಗುವುದು ತಾಯ್ತನದಲ್ಲಿ. ವಿಧಿ ನನ್ನ ಹಣೆಯಲ್ಲಿ ಅದನ್ನು ಮೊದಲೇ ಬರೆದಿತ್ತು ಏನೋ? ಆ ದಿನಗಳಲ್ಲಿ ನನಗಿಂತಲೂ ಹೆಚ್ಚು ನೀವು ಅನುಭವಿಸಿದ ನೋವನ್ನು ನಾನೊಬ್ಬಳೇ ಅರ್ಥ ಮಾಡಿಕೊಳ್ಳಬಲ್ಲೆ. ಅಪ್ಪಾ, ಪ್ರತಿ ಹೆಣ್ಣಿನಂತೆ ಗಂಡು ಕೂಡ ತನ್ನ ಮಗುವಿನ ಬಗ್ಗೆ ಕನಸನ್ನು ಕಾಣುತ್ತಾನೆ. "ಅಪ್ಪ"ಎಂದು ಕರೆಯಿಸಿಕೊಳ್ಳುವ ಪುಟ್ಟ ಜೀವಕ್ಕಾಗಿ ಹಾತೊರೆಯುತ್ತಾನೆ .ಆತನ ತಾಯಿತಂದೆಯರಿಗೂ ಆ ಹಂಬಲ ಇದ್ದೇ ಇರುತ್ತದೆ. ಯಾರೋ ಪ್ರಾಯದ ಮದದಲ್ಲಿ ಮಾಡಿದ ತಪ್ಪಿಗೆ ಇನ್ಯಾರಿಗೋ ಇಷ್ಟು ದೊಡ್ಡ ಶಿಕ್ಷೆ ನೀಡುವುದು ಬೇಡ. ಮಾತ್ರವಲ್ಲದೆ ಯಾವ ತಪ್ಪು ಮಾಡಿರದ ಹುಡುಗರು ನನ್ನ ಬಾಳಲ್ಲಿ ಬಂದು ಅವರನ್ನು ತಂದೆ ಎನಿಸಿಕೊಳ್ಳುವ ಭಾಗ್ಯದಿಂದ ನಿರ್ಭಾಗ್ಯವಂತರನ್ನಾಗಿ ಮಾಡಲುನನಗಿಷ್ಟವಿಲ್ಲ. ನಾನು ಪಡೆದು ಬಂದುದನ್ನು ನಾನೇ ಅನುಭವಿಸುತ್ತೇನೆ. ಅದರಲ್ಲಿ ಯಾರಿಗೂ ಪಾಲು ಬೇಡ. ನನ್ನ ದುಡಿಮೆಯಲ್ಲಿ ಅನಾಥ ಮಕ್ಕಳಿಗೊಂದು ಬಾಳು ಕೊಡುವ ಆಸೆ. ನನ್ನ ಆಸೆಗೆ ಒತ್ತಾಸೆಯಾಗಿ ನೀವಿರುವಿರಿ ಎಂಬ ಭರವಸೆ ಇದೆ" ಎಂದ ಮಗಳತ್ತ ಕಣ್ತುಂಬಿ ನೋಡಿದರು ಶ್ರೀಧರ ರಾಯರು. ರವಿ ನೀಲಾಗಸದಲ್ಲಿ ತನ್ನ ದಿನಚರಿಯನ್ನು ಮುಗಿಸುವ ತುರಾತುರಿಯಲ್ಲಿ ಸಾಗುತ್ತಿದ್ದ. ಹೂವಿನ ಬುಟ್ಟಿಯನ್ನು ಎತ್ತಿಕೊಂಡು ಮನೆಯೊಳಗೆ ನಡೆದ "ಅನೂಹ್ಯ "ನ ಪ್ರತಿ ಹೆಜ್ಜೆಯಲ್ಲೂ ನಿರ್ಧಾರದ ಸ್ಪಷ್ಟತೆ ಕಾಣುತ್ತಿತ್ತು. ಮಗಳು ಬದಲಾದಾಳು ಎಂಬ ಸಣ್ಣ ನಿರೀಕ್ಷೆಯೊಂದಿಗೆ , ಜೊತೆಗೆ ಮಗಳ ಬಗ್ಗೆ ಹೆಮ್ಮೆ ಪಡುತ್ತಾ ಶ್ರೀಧರ ರಾಯರು ಬದುಕುತ್ತಿದ್ದರೆ ಸಮಾಜದ ಕಣ್ಣಿಗೆ ಅವಳು ಅನೂಹ್ಯವಾಗಿ ಉಳಿದಳು.

( ಅನೂಹ್ಯ _ ರಹಸ್ಯ)

✍🏻 ಎ.ಆರ್.ಭಂಡಾರಿ.ವಿಟ್ಲ

Friday, 8 October 2021

ಅಂತರಾಳ - ಭಾಗ 2

 

ಇಲ್ಲಿಯವರೆಗೆ: ಶಮಿಕಾ ತಾಯಿ ಜೊತೆ ಇರುತ್ತಾಳೆ...ಇವಳ ತಂದೆ ಬಗ್ಗೆ ತಾಯಿ ಭವಾನಿ ಎನೂ ಹೇಳಿರುವುದಿಲ್ಲ.. ಹಾಗಾಗಿ ತಾಯಿ ಗ್ರಂಥಾಲಯಕ್ಕೆ ಹೋದ ಸಂದರ್ಭದಲ್ಲಿ ತಾಯಿಯ ಡೈರಿ ತೆಗೆದು ಓದುತ್ತಾಳೆ.....

ಅಂತರಾಳ - ಭಾಗ 2

 "ನನಗೆ ಆಗಿನ್ನೂ 2 ವರ್ಷ ನನ್ನ ತಂದೆ ತೋಟದ ಕೆಲಸಕ್ಕೆ ಹೋದವರು ಕುಸಿದು ಬಿದ್ದರಂತೆ ಮನೆಗೆ ತಂದಾಗ ಬಾಗಶಃ ಪ್ರಾಣ ಹೋಗಿತ್ತು.ನೆರೆ ಮನೆಯವರ ಸಹಾಯದಿಂದ ವೈದ್ಯರು ಮನೆಗೆ ಬಂದಾಗ ಪ್ರಾಣ ಹೋಗಿತ್ತು. ವೈದ್ಯರು ಹೃದಯಾಘಾತವಾಗಿದೆ ಎಂದರು. ನನ್ನ ಅಮ್ಮ ಸಣ್ಣ ಮಗುವನ್ನು ಅಪ್ಪಿ ತಲೆ ಚಚ್ಚಿಕೊಂಡು ರೋಧಿಸಿದರಂತೆ.ವಿಷಯ ತಿಳಿದು ದೂರದಲ್ಲಿರುವ ತಾಯಿ ಮನೆಯಿಂದ ನನ್ನ ಮಾವ ಬಂದು ಶವ ಸಂಸ್ಕಾರ ಮಾಡಿ ತಂಗಿ ಮಗುವನ್ನು ಜೊತೆಯಲ್ಲಿ ಮನೆಗೆ ಕರೆ ತಂದರು.ಅಲ್ಲಿಂದ ಬಂದ ಮೇಲೆ ನಮ್ಮ ಕಷ್ಟ ಹೇಳತೀರದಾಯಿತು.


ಅಮ್ಮನನ್ನು ದಿನವಿಡೀ ಕೂಲಿಯಾಳಾಗಿ ದುಡಿಸುತ್ತಿದ್ದರು. ಅಮ್ಮ ಮರು ಮಾತನಾಡದೆ ವಿಧಿಯನ್ನು ಹಳಿಯುತ್ತಾ ಮಗುವನ್ನು ಅಪ್ಪಿ ಮರೆಯಲ್ಲಿ ಅತ್ತು ಕೆಲಸ ಮಾಡುತ್ತಿದ್ದರು. ಹಾಗೂ ಹೇಗೂ ನನಗೆ 6 ವರ್ಷ ತುಂಬಿ ಮಾವ ನೆರೆ ಹೊರೆಯವರ ಮಾತಿಗೆ  ನನ್ನನ್ನು ಶಾಲೆಗೇ ಸೇರಿಸಿದರು.ಅಮ್ಮನಿಗೆ ಅದೊಂದು ನೆಮ್ಮದಿ ಇತ್ತು. ನನ್ನ ಮಗಳು ಭವಾನಿ ಶಾಲೆಗೆ ಹೋಗುತ್ತಿದ್ದಾಳೆ. ಮುಂದೆ ಅವಳೂ ನಾನು ಬೇರೆ ಮನೆ ಮಾಡಿ ಯಾರ ಹಂಗೂ ಇಲ್ಲದೆ ಬದುಕುತ್ತೇವೆ ಎಂದು ದಿನಾ ಕನಸು ಕಟ್ಟುತ್ತಿದ್ದಳು....ಹೀಗೆ ವರ್ಷ ಕಳೆದು ನಾನು ಹದಿ ಹರೆಯಕ್ಕೆ ಬಂದೆ. ನನ್ನ ಎಸ್ ಎಸ್ ಎಲ್ ಸಿ ಮುಗಿಸಿ ಕಾಲೇಜಿಗೆ ಕಳುಹಿಸಲು ನನ್ನ ಮಾವ ಒಪ್ಪಲಿಲ್ಲ. ಹಳ್ಳಿಯಿಂದ ದೂರದ ಪೇಟೆ ಉಡುಪಿಗೆ ಬಸ್ಸು ಇಲ್ಲ. ಅಲ್ಲೇ ಎಲ್ಲಾದರೂ ಹಾಸ್ಟೆಲ್ ಗೆ ಸೇರಿಸಬೇಕು. ತುಂಬಾ ಖರ್ಚು ಕೂಡಾ ಆಗುತ್ತದೆ ಎಂದಾಗ ಅಮ್ಮ ಮರೆಯಲ್ಲಿ ನಿಂತು ಅತ್ತರು. ಎದುರು ಮಾತನಾಡಿದರೆ ಹೊಡೆಯಲೂ ಹಿಂಜರಿಯದ ಅಣ್ಣ. ಅತ್ತಿಗೆ ಸ್ವಲ್ಪ ಕರುಣೆ ತೋರಿಸಿದರೂ ಅಣ್ಣ ಬೈಯ್ಯುತ್ತಿದ್ದರು. ಬಿಟ್ಟಿಯಾಗಿ ತಾಯಿ ಮಗಳು ತಿನ್ನುತ್ತಾರೆ ಎಂದು ತಾತ್ಸಾರ ಮಾಡುತ್ತಿದ್ದರು. ನನ್ನ ಶಾಲಾ ಮುಖ್ಯೋಪಾಧ್ಯಾಯಿನಿ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರು ಮನೆಗೆ ಬಂದು ನನ್ನ ಮಗಳು ಕಾಲೇಜಿಗೆ ಸೇರುತ್ತಾಳೆ, ನಿಮ್ಮ ಸೊಸೆ ಭವಾನಿಯನ್ನೂ ಸೇರಿಸಿ , ಓದುವುದರಲ್ಲೂ ಮುಂದಿದ್ದಾಳೆ ನಿಮಗೆ ಕಷ್ಟವಾದರೆ ನಾನೇ ದುಡ್ಡು ವ್ಯವಸ್ಥೆ ಮಾಡುತ್ತೇನೆ ಎಂದು ಮಾವನಲ್ಲಿ ಹೇಳಿದಾಗ ದುಡ್ಡಿಗೆ ಏನೂ ಕಷ್ಟವಿಲ್ಲದ ಮಾವನಿಗೆ ಯಾಕೋ ಕಳುಹಿಸುವುದಿಲ್ಲ ಎಂದು ಮುಖ್ಯೋಪಾಧ್ಯಾಯಿನಿಯವರಲ್ಲಿ ಹೇಳಲು ಆಗದೆ ಕಾಲೇಜಿಗೆ ಸೇರಿಸಲು ಒಪ್ಪಿಕೊಂಡರು. ಅಂತೂ ಬಂದ ಕಷ್ಟ ಪರಿಹಾರವಾಯ್ತಲ್ಲ ಎಂದು ಅಮ್ಮ ನನ್ನನ್ನು  ರಾತ್ರಿ ಅಪ್ಪಿಕೊಂಡು ಮುದ್ದಾಡಿದರು ಹಾಗೂ ಮೆಲ್ಲಗೆ ಹೇಳಿದರು ನೀನು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆದು ನನನ್ನು ಕರೆದುಕೊಂಡು ಹೋಗು ಭವಾನಿ, ತಿಂಗಳಿಗೊಮ್ಮೆ ಮನೆಗೆ ಬಾ. ನಾನು ನಿನಗಾಗಿ ಬದುಕುತ್ತಿದ್ದೇನೆ. ನೀನು ಇಲ್ಲದಿದ್ದರೆ ನಿನ್ನ ಅಪ್ಪನ ಜೊತೆ ನಾನೂ ಸಾಯುತ್ತಿದ್ದೆ ಭವಾನಿ..  ಈ ಕಷ್ಟ ಅವಮಾನ ಎಲ್ಲವನ್ನೂ ನನ್ನ ಮಗಳಿಗಾಗಿ ಸಹಿಸುತ್ತೇನೆ ಮಗಳೇ .. ಚೆನ್ನಾಗಿ ಓದು. ನಿನ್ನ ಗಮನ, ಆಸಕ್ತಿ ಬೇರೆಲ್ಲೂ ಕಳೆದು ಹೋಗಲು ಬಿಡಬೇಡ.. ಪತ್ರ ಬರೆಯುತ್ತಾ ಇರು ಎಂದು ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನಾನೂ ಅಮ್ಮನ ಜೊತೆ ದುಃಖಿಸಿದೆ. ಅಮ್ಮನನ್ನು ನಾನೇ ಸಂತೈಸಿದೆ. ಅಳಬೇಡ ಅಮ್ಮ ನಾನು ಖಂಡಿತ ನಿನ್ನನ್ನು ಬೇರೆ ಮನೆ ಮಾಡಿ ಕರೆದುಕೊಂಡು ಹೋಗುತ್ತೇನೆ ಖುಷಿಯಾಗಿರು ಎಂದೆ.

ಮರುದಿನ ನಾನು ಕಾಲೇಜಿಗೆ ಸೇರಲು ಮಾವನ ಜೊತೆಗೆ ಉಡುಪಿಗೆ ಬಂದೆ.ಕಾಲೇಜಿಗೆ ಸೇರಿ , ಮೂರು ದಿನ ಬಿಟ್ಟು ಎಲ್ಲಾ ಪುಸ್ತಕ, ಸಾಮಾನು ತಂದು ಹಾಸ್ಟೆಲ್ ಗೆ ಸೇರಿ ಆಯಿತು. ನನ್ನ ಜೀವನ 2 ವರ್ಷದಿಂದ 15 ವರ್ಷಗಳ ವರೆಗೆ ಮಾವನ ಮನೆಯಲ್ಲಿ ಕಳೆಯಿತು.ಈಗ ಹಾಸ್ಟೆಲ್ ನಲ್ಲಿ ಬೇರೆಯೇ ಲೋಕ ಎಂಬುದು ತಿಳಿಯಿತು. ಕೆಲವು ಹೆಣ್ಣು ಮಕ್ಕಳ  ಅಪ್ಪ ಅಮ್ಮ ವಾರಕೊಮ್ಮೆ ಬರುತ್ತಿದ್ದರು.ಬರುವಾಗ ತಿಂಡಿ ತಿನಿಸುಗಳನ್ನೂ ತರುತ್ತಿದ್ದರು. ಎಲ್ಲರ ಅಪ್ಪ ಅಮ್ಮ ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಬರುತ್ತಿದ್ದರು.

ಆದರೆ ನನ್ನ ಮನೆಯಿಂದ ಮಾತ್ರ ಯಾರೂ ಬರುತ್ತಿರಲಿಲ್ಲ. ಎಲ್ಲ ಮಕ್ಕಳು ನನಗೆ ತಿಂಡಿ ನೀಡಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಮ್ಮಹಿಂದಿನ ಶಾಲೆಯ ಮುಖ್ಯೋಪಾದ್ಯಾಯಿನಿಯ ಮಗಳು ಪದ್ಮಜಾ ಕೂಡಾ ನನ್ನೊಂದಿಗೆ ಇದ್ದಳು. ಅವಳ ಅಮ್ಮ ಬಂದಾಗ ಅವರು ನನ್ನನ್ನು ಅವರ ಮಗಳಂತೆ ನನ್ನ ಬೇಕು ಬೇಡಗಳನ್ನು ಕೇಳಿ ತಿಂಡಿ, ಪುಸ್ತಕ ತಂದು ಕೊಡುತ್ತಿದ್ದರು. 6 ತಿಂಗಳಿಗೆ ಒಮ್ಮೆ ಮಾವ ಬಂದು ಮನೆಗೆ ಕರೆದುಕೊಂಡು ಹೋದಾಗ ಅಮ್ಮ ಕಡ್ಡಿಯಾಗಿ ಹೋಗಿದ್ದರು. ಕಣ್ಣು ಆಳಕ್ಕೆ ಹೋಗಿತ್ತು. ಯಾಕೋ ಅಮ್ಮನನ್ನು ನೋಡಿ ಮನಸ್ಸಿನಲ್ಲೇ ಭಯವಾಯ್ತು.ಯಾಕೆ ಅಮ್ಮ ಈ ರೀತಿ ಆಗಿದ್ದೀಯಾ. ಹುಷಾರಿಲ್ವಾ ಎಂದು ಕಕ್ಕುಲತೆಯಿಂದ ವಿಚಾರಿಸಿದಾಗ ಎರಡು ಹನಿ ಕಣ್ಣೀರು ಅಮ್ಮನ ಉತ್ತರವಾಯಿತು. ನೆರೆಮನೆಯವರಿಂದ ತಿಳಿಯಿತು ಅಮ್ಮನಿಗೆ ಮಾವ ಆಗಾಗ ಕೋಣ ಓಡಿಸುವ ಬೆತ್ತದಿಂದ ಹೊಡೆಯುತ್ತಿದ್ದಾರೆ ಎಂದು.!.ನಾನು ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ....ಎರಡು ದಿನ ಇದ್ದು ಪುನಃ ಹಾಸ್ಟೆಲ್ ಗೆ ಕಳುಹಿಸಿದರು. ಹೀಗೆ ಎರಡು ವರ್ಷ ಕಳೆದು ನನ್ನ ಪಿ. ಯು. ಸಿ.ಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದೆ. ಪಿ ಯು ಸಿ ಕೊನೆಯ ಹಂತದಲ್ಲಿ ಇರುವಾಗಲೇ ಹಾಸ್ಟೆಲ್ ನ ವಾರ್ಡನ್ " ಇಲ್ಲೇ ಸಮೀಪದ ಗ್ರಂಥಾಲಯಕ್ಕೆ ಸಹಾಯಕಿ ಒಬ್ಬರು ಬೇಕಂತೆ  ನೀನೆ ಯಾಕೆ ವಿಚಾರಿಸಬಾರದು ಭವಾನಿ" ಎಂದರು.ನನಗೆ ಎಲ್ಲೂ ಅಳುಕು. ಪದ್ಮಜಾಳಲ್ಲಿ ಕೇಳಿದೆ. ಅವಳೂ ಅವಳ ಅಮ್ಮನಿಗೆ ಪತ್ರ ಬರೆದು ವಿಚಾರಿಸಿದಳು.

ಅವರು ನೇರ ಹಾಸ್ಟೆಲ್ ಗೆ ಬಂದರು. ನಾನೇ ವಿಚಾರಿಸುತ್ತೇನೆ, ಕೆಲಸ ಸಿಕ್ಕಿದರೆ ಒಳ್ಳೆಯದು ಭವಾನಿ, ಪುನಃ ಊರಿಗೆ ಹೋಗಿ ಮಾವನ ಜೊತೆ ಇದ್ದರೆ ವಾಪಸು ಕಳುಹಿಸಲಾರರು. ಹೇಗೂ ರಿಸಲ್ಟ್ ಬರುವಾಗ 1 ತಿಂಗಳು ಆಗುತ್ತದೆ. ಹೋಗೋಣ ವಿಚಾರಿಸುವ ಎಂದು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋದರು. ಹೋಗಿ ಮಾತನಾಡಿ ಬೆಳಿಗ್ಗೆ 9 .30  ರಿಂದ ಸಂಜೆ 7 ಗಂಟೆ.ಮದ್ಯಾಹ್ನ 1 ಗಂಟೆ ವಿರಾಮ.ಒಳ್ಳೆಯ ಕೆಲಸ. ನಿನಗೂ ಬೇರೆ ಬೇರೆ ಪುಸ್ತಕ ಓದಬಹುದು ಎಂದರು. ನನಗೆ ಸಂತೋಷದಿಂದ ಮಾತೇ ಹೊರಡಲಿಲ್ಲ. ಆದರೂ ಹೇಳಿದೆ ಮಾವ ಒಪ್ಪುವರಾ?. ನಾನು ಎಲ್ಲಿ ಇರುವುದು? ಎಂದು. ಅದಕ್ಕೆ ಮಾವನನ್ನು ನಾನೂ ಒಪ್ಪಿಸುತ್ತೇನೆ. ಹಾಸ್ಟೆಲ್ ವಾರ್ಡನ್ ನಲ್ಲಿ ಕೇಳೋಣ ಅವರು ನಿನಗೆ ಸಹಾಯ ಮಾಡುವರು ಎಂದರು. ಹಾಗೇನೇ ವಾರ್ಡನ್ ನಲ್ಲಿ ಕೇಳಿದಾಗ ನನ್ನ ಪರಿಸ್ಥಿತಿ ನೋಡಿ ಅಲ್ಲಿಯೇ ಇರಲು ಒಪ್ಪಿಕೊಂಡರು.ಬೇರೆ ಯಾರಲ್ಲೂ ಹೇಳಬೇಡಿ ಎಂದರು. ಮುಖ್ಯೋಪಾಧ್ಯಾಯಿನಿಯವರು ನೀನು ಊರಿಗೆ ಬರಬೇಡ ಇಲ್ಲೇ ಇರು,ಕೆಲಸಕ್ಕೆ ಸೇರು ನಿನ್ನ ಅಮ್ಮನಲ್ಲಿ ನಾನು ಹೇಳುತ್ತೇನೆ . ಮಾವನನ್ನು ಒಪ್ಪಿಸುತ್ತೇನೆ. ನೋಡೋಣ 6 ತಿಂಗಳು ಕಳೆದು ಸಾಧ್ಯವಾದರೆ ಅಮ್ಮನನ್ನು ನಿನ್ನ ಬಳಿ ನೋಡಲು ಕರೆ ತರುತ್ತೇನೆ" ಎಂದು ಧೈರ್ಯ ಹೇಳಿ ಹೋದರು.

ವಾರ್ಡನ್ ನನಗೆ ಸೀರೆ ತೆಗೆದುಕೊಳ್ಳಲು ಇತರೆ ಖರ್ಚಿಗಾಗಿ ಮುಂಗಡ ಹಣ ನೀಡಿ ಸಹಕರಿಸಿದರು. ಕಾಲೇಜಿನ ಜೀವನದಿಂದ ಕೆಲಸದ ಜೀವನಕ್ಕೆ ಕಾಲಿರಿಸಿದೆ......

(ಮುಂದುವರಿಯುವುದು)

✍️ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ


ನಾನು ಮಹತಿ - ಎ.ಆರ್.ಭಂಡಾರಿ.ವಿಟ್ಲ.

 

ಕಥೆ - 2

ನಾನು ಮಹತಿ

ಕನ್ನಡಿಯೆದುರು ನಿಂತವಳಿಗೆ ಕೆನ್ನೆ ಸೋಕುತ್ತಿರುವ ಮುತ್ತಿನ ಜುಮುಕಿ ಗಳು ನನ್ನನ್ನೇ ಅಣಕಿಸಿದಂತಾಯಿತು.ಅಮ್ಮ ತಂದಿಟ್ಟಿದ್ದ ಹಸಿರು ರೇಷ್ಮೆ ಸೀರೆ ನೆನಪಿನಾಳಕ್ಕೆ ಕರೆತಂದಂತಾಗಿತ್ತು .

ಹೌದು, ಪ್ರೌಢಶಾಲಾ ಶಿಕ್ಷಕರ ಮಗ ನಾನು. ಹೆಸರು "ಅಭಿಷೇಕ" .‌ ಎಳವೆಯಲ್ಲಿ ಅಪ್ಪನ ಕೈ ಹಿಡಿದು ಶಾಲೆಯ ಅಂಗಳಕ್ಕೆ ಕಾಲಿಟ್ಟ ನನಗೆ ಅವರ ವಿದ್ಯಾರ್ಥಿಗಳೆಲ್ಲರೂ ಅಣ್ಣ ಅಕ್ಕಂದಿರು. ನನ್ನ ತುಂಟಾಟಕ್ಕೆ ಅವರೆಲ್ಲ ಹಾತೊರೆಯುವವರು ಆಗಿದ್ದರು. ನಾನು ಬೆಳೆದು ದೊಡ್ಡವನಾಗ ತೊಡಗಿದೆ.ವಿಧಿ ನಿಯಮವೋ ಏನೋ ಎಂಬಂತೆ ಅಮ್ಮ ಮತ್ತೆ ಗರ್ಭ ಧರಿಸಲಿಲ್ಲ.ಬಯಸಿ ಪಡೆದ ನನ್ನನ್ನೆ ಪ್ರೀತಿಯಿಂದ ಬೆಳೆಸ ತೊಡಗಿದರು.ಬೆಳೆಯತ್ತಾ ಹೊದಂತೆ ನನ್ನೊಳಗಿನ ಭಾವನೆಗಳು ವ್ಯತಿರಿಕ್ತವಾಗತೊಡಗಿದವು.ಅದಾಗಲೇ ನನ್ನ ವರ್ತನೆಯ ಮೇಲೆ ಕಣ್ಣಿರಿಸಿದ್ದ ತಂದೆಯವರು ನೇರವಾಗಿ ವೈದ್ಯರ ಬಳಿ ಕರೆದೊಯ್ದಿದ್ದರು. ಅವರ ಅನುಮಾನ ನಿಜವಾಗಿತ್ತು.ನಾನು ಅವಳಾಗ ತೊಡಗಿದೆ. ಅಲ್ಲಿವರೆಗೆ ನನ್ನೊಳಗೆ ನಡೆಯುತ್ತಿದ್ದ ತುಮುಲಗಳಿಗೆ ನಿಜರೂಪ ದೊರಕಿತ್ತು.ಯಾವ ಔಷಧಗಳೂ,ಪೂಜೆ ಹೋಮಗಳು ನನ್ನನ್ನು ಬದಲಾಯಿಸಲ್ಲಿಲ್ಲ.ನಾನು ಅವಳಾಗ ತೊಡಗಿದೆ.ಅಪ್ಪ, ಅಮ್ಮನಿಗೂ ವಿಷಯ ಮನವರಿಕೆ ಮಾಡಿ ನನ್ನನ್ನು 'ಮಹತಿ'ಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದರು.ತವರು ಮನೆಯವರ ಗಂಡನ ಮನೆಯವರ ನಿಂದನೆಗೂ ಒಳಗಾದರು.ಕುಟುಂಬಿಕರ , ಸಹೋದ್ಯೋಗಿಗಳ ಕಟು ಮಾತಿಗೆ ಆಹಾರವಾಗುವುದನ್ನು ತಪ್ಪಿಸಲು ದೂರದ ಈ "ಮುಗಿಲು ಪೇಟೆಗೆ" ವರ್ಗವಾಗಿ ಬಂದರು. ವಿಪರ್ಯಾಸವೆಂದರೆ ಈ ಊರಲ್ಲಿ ಮನೆಗೊಂದರಂತೆ ನನ್ನಂತ ಅಮಾಯಕ ಮಕ್ಕಳ ಜನನವಾಗುತ್ತಿತ್ತು.ಅವರೆಲ್ಲ ಬೀದಿಗೆ ಬಿದ್ದು ಎಲ್ಲೋ ಊರು ಬಿಟ್ಟು ನಡೆಯುತ್ತಿದ್ದರು.ವಿಷಯ ತಿಳಿದ ಅಪ್ಪ ಅವರನ್ನೆಲ್ಲಾ ಒಟ್ಟು ಸೇರಿಸಿದರು.ಊರಿನವರಿಗೆ ಶಿಕ್ಷಣದ ಮನವರಿಕೆ ಮಾಡಿದರು.ಮನೆ ಮಕ್ಕಳನ್ನು ಹೆತ್ತವರೇ ಕಾಪಾಡಬೇಕೆಂದು ಮನವರಿಕೆ ಮಾಡಿದರು.ಯಾವುದೇ ತಪ್ಪಿಲ್ಲದೆ ಮಂಗಳ ಮುಖಿಯಾರಾಗಿ ಬದಲಾದ ಮಕ್ಕಳ ಜತೆ ಮಾನಸಿಕವಾಗಿ ದೈಹಿಕವಾಗಿ ಹೆತ್ತವರಿರಬೇಕಾದ ಅನಿವಾರ್ಯತೆಯನ್ನು ತಿಳಿಸಿದರು.ಪರಿಣಾಮ ಊರ ಮಕ್ಕಳೆಲ್ಲಾ ಒಂದಾಗಿದ್ದೇವೆ.ನಾನಿಂದು ಹೆಸರುವಾಸಿಯಾದ ವೀಣಾವಾದಕಿ ಆಗಿದ್ದೇನೆ.ಇದೇ ರೀತಿ ಅನೇಕ ಸಾಧಕರು ನನ್ನೂರಿನೊಳಗಿದ್ದಾರೆ. ನನ್ನೊಳಗಿನ ಕಲೆಗೆ ಪೋಷಣೆ ನೀಡಿದವರು ನನ್ನ ತಾಯಿಯವರು.ಇಡೀ ಸಮಾಜ ತುಚ್ಚವಾಗಿ ಕಂಡರೂ ನನ್ನೂರಿನ ಜನರಿಗೆ ನಾನು ಮನೆಮಗಳು. ನನ್ನ ಹೆತ್ತವರಂತೆ ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತವರು. "ಅಭಿಷೇಕ" ನನ್ನು"ಮಹತಿ"ಯನ್ನಾಗಿ ಪ್ರೀತಿಸಿದವರು.
ಇವರಿಗಾಗಿಯೇ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ.ಬಂಧು ಬಳಗದಿಂದ ದೂರಾಗಿ ಬಂದ ನಮಗೆ ಇವರೇ ಕುಟುಂಬಿಕರು.


ಊರ ಶಾಲೆ ಇಂದು ಹಲವು ಶಿಕ್ಷಣ ಸಂಸ್ಥೆಗಳೊಂದಿಗೆ ವಿಶಾಲವಾಗಿ ಬೆಳೆದಿದೆ. ನನ್ನಂತೆ ಮಂಗಳಮುಖಿ ಎನಿಸಿಕೊಂಡ ಎಷ್ಟೋ ಜೀವಗಳಿಗೆ ಆಸರೆಯಾಗಿದೆ. ಹೊರ ಊರಿಂದ ಅನೇಕ ನಮ್ಮಂತ ಜನರು ಇಲ್ಲಿ ಬಂದು ಸೇರಿದ್ದಾರೆ.ದುಡಿಮೆಯ ಬದುಕನ್ನು ಸಂತೋಷದಿಂದ ಬದುಕಲು ಅನೇಕ ಸ್ವ ಉದ್ಯೋಗಗಳು ಇಲ್ಲಿದೆ.ಇಲ್ಲಿನ ವಸ್ತುಗಳು ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಿವೆ.ಎಷ್ಟೋ ಮಂಗಳಮುಖಿಯರಿಗೆ ಗೌರವದ ಬದುಕು ಲಭಿಸಿದೆ.ಹೆತ್ತವರ ಪ್ರೀತಿ ಲಭಿಸಿದೆ.ಕುಟುಂಬದ ಭದ್ರತೆ ದೊರಕಿದೆ.ಸ್ವಾಭಿಮಾನಿಯಾಗಿ ಬದುಕಲು ಪ್ರೇರಣೆಯಾಗಿದೆ.ಊರು ಬಿಟ್ಟು ಹೋದವರೂ ಮರಳಿ ಬಂದಿದ್ದಾರೆ.ವಿಕಲಚೇತನರು, ಅನಾಥರೂ ನಮ್ಮ ಜತೆ ಸೇರಿದ್ದಾರೆ‌.ಒಟ್ಟಂದಿನಲ್ಲಿ ಪರಿಪೂರ್ಣ ಕುಟುಂಬ ನಮ್ಮದಾಗಿದೆ.


ಮರೆತೆ ಬಿಟ್ಟಿದ್ದೆ. ನಾನಿಂದು ಈ ಊರಲ್ಲಿ ತಂದೆ-ತಾಯಿಯರ ಹೆಸರಿನಲ್ಲಿ ನಿರ್ಮಿಸಿದ ಸುಸಜ್ಜಿತ ಆಸ್ಪತ್ರೆಯ ಉದ್ಘಾಟನೆಗೆ ತಯಾರಾಗುತ್ತಿದ್ದೇನೆ. ಅದಾಗಲೇ ವೇಳೆಯಾಯಿತು ಎಂದನಿಸುತಿದೆ‌‌.ಅಷ್ಟರಲ್ಲಿ "ಪುಟ್ಟಾ,.... ಅದಾಗಲೇ ಎಲ್ಲರೂ ಹೊರಟಾಯ್ತು" ಎಂಬ ಅಮ್ಮನ ದನಿಯೊಂದಿಗೆ ಅವರೇ ನೇಯ್ದ ಮಲ್ಲಿಗೆಯ ದಂಡೆ ನನ್ನ ತುರುಬೇರಿತು. ಎಲ್ಲರ ಒಡಗೂಡಿ ಆಸ್ಪತ್ರೆಯ ಅಂಗಳಕ್ಕೆ ಬಂದವಳಿಗೆ ಊರವರ ಹಾರೈಕೆ ಪ್ರೀತಿ ಮೈಮರೆಸಿ ನಿಲ್ಲಿಸಿದೆ.ಆಸ್ಪತ್ರೆಯ ಉದ್ಘಾಟನೆ ನನ್ನ ಹೆತ್ತವರಿಂದಲೇ ನಡೆಯುತ್ತಿದೆ. ಸಭಾಕಾರ್ಯಕ್ರಮದಲ್ಲಿ ವೇದಿಕೆಯೇರಿದ ನಾನು ಎದ್ದು ನಿಂತು ಈ ದಿನದ ನೆನಪಿಗಾಗಿ "ನನ್ನ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಸ್ಪತ್ರೆಗೆ ದಾನ ಇರಿಸಿದ್ದೇನೆ ನನ್ನ ನಡೆ ನನ್ನಂಥ ಎಷ್ಟೋ ಮಂಗಳಮುಖಿಯರಿಗೆ ಸ್ಪೂರ್ತಿಯಾಗಲಿ. ಮುಂದೆ ವೈದ್ಯಕೀಯ ಪ್ರಯೋಗಗಳು ನಡೆದು ಮಂಗಳಮುಖಿಯರ ಜನನ ಆಗದಿರಲಿ ಎಂಬುದಷ್ಟೇ ನನ್ನ ಆಶಯ "ಎಂದು ನುಡಿದೆ‌. ಊರಿಗೆ ಊರೇ ಎದ್ದುನಿಂತು ನನ್ನ ಹರಸಿದ್ದು ಕಂಡು ಸಾರ್ಥಕತೆಯ ಭಾವ ನನ್ನ ಹೆತ್ತವರ ಮೊಗದಲ್ಲಿತ್ತು.ನಾನು ಪಾವನಳಾದೆ ಎಂದೆನಿಸಿತು.ದೇವರಿತ್ತ‌ ಜನ್ಮ ಕೊನೆಗೂ ಶಾಪವಾಗಲಿಲ್ಲ . ಎಷ್ಟೋ ಅಮಾಯಕರಿಗೆ ದಾರಿದೀಪ ಮಾಡಲು ಅವಕಾಶವಿತ್ತ ಹೆತ್ತವರ ಬಗ್ಗೆ ಹೆಮ್ಮೆ ಎನಿಸಿತು.


✍🏻ಎ.ಆರ್.ಭಂಡಾರಿ.ವಿಟ್ಲ.