ಪ್ರಕೃತಿಯಲ್ಲಿ ಮೂರು ಶಕ್ತಿಗಳಿಲ್ಲದೆ ಯಾವ ಜೀವರಾಶಿಗಳೂ ಬದುಕಲುಸಾಧ್ಯವಿಲ್ಲ. ಅವುಗಳೆಂದರೆ ನೀರು, ಗಾಳಿ, ಬೆಂಕಿ. ಕೆಲವೊಂದು ಬಾರಿ ಈ ಮೂರೂ ಶಕ್ತಿಗಳು
ಮುನಿಸಿಕೊಂಡಾಗ ಪ್ರಕೃತಿ ವಿಕೋಪದಂತಹ ಅನಾಹುತಗಳು ಸಂಭವಿಸಿ ಪ್ರಾಣಹಾನಿ ಆಸ್ತಿಪಾಸ್ತಿ ನಷ್ಟವಾಗೋದನ್ನು ಕಾಣಬಹುದು. ಈ ಶಕ್ತಿಗಳಿಂದ ಉಂಟಾಗುವ ಪ್ರಕೃತಿ
ವಿಕೋಪದಂತಹ ಘಟನೆಗಳಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಒಂದು ಸಂಸ್ಥೆ
ಎಂದರೆ ಅದು ಅಗ್ನಿಶಾಮಕ ದಳ. ಇಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಂಡಾರಿ ಸಮಾಜದ ಸುನಿಲ್ ಕುಮಾರ್ ರವರೇ ಇಂದಿನ ಚಿಪ್ಪಿನೊಳಗಿನ ಭಂಡಾರಿ ಮುತ್ತು.
ಜನನ
ಮೂಡಬಿದ್ರೆಯ ತೋಡಾರಿನ ದಿ.ಕೆ.ಕೃಷ್ಣಪ್ಪ ಭಂಡಾರಿ ಹಾಗೂ ದಿ.ಕೆ.ವಿಮಲ ದಂಪತಿಗಳ ಆರು ಮಂದಿ ಮಕ್ಕಳಲ್ಲಿ ಮೂರನೇ ಮಗನಾಗಿ ಸುನಿಲ್ ಕುಮಾರ್ ಜನಿಸಿದರು.
ಶಿಕ್ಷಣ
ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಸಿಸಿಲೀಸ್ ಕಾನ್ವೆಂಟ್, ಉಡುಪಿ ಹಾಗೂ ಮಾಡರ್ನ್ ಹೈಸ್ಕೂಲ್ ಉಡುಪಿಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಕ್ರಿಶ್ಚಿಯನ್ ಹೈಸ್ಕೂಲ್ ಉಡುಪಿ ಹಾಗೂ ರೊಜಾರಿಯೊ ಹೈಸ್ಕೂಲ್ ಮಂಗಳೂರಿನಲ್ಲಿ ಪೂರ್ಣಗೊಳಿಸಿದರು. ತನ್ನ ಪ್ರಥಮ ದರ್ಜೆಯ ವಿದ್ಯಾಭ್ಯಾಸವನ್ನು ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಮುಗಿಸಿ ಲಯನ್ಸ್ ಕ್ಲಬ್ ಮಲ್ಲಿಕಟ್ಟೆ, ಮಂಗಳೂರಿನಲ್ಲಿ ಟೈಪ್ ರೈಟಿಂಗ್ ಕಲಿತಿದ್ದಾರೆ.
ಜೀವನ ಪಯಣ
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಆಘಾತವೆಂಬಂತೆ 15ನೇ ವಯಸ್ಸಿನಲ್ಲಿಯೇ ಇವರ ತಂದೆ ಅನಾರೋಗ್ಯ ಸಮಸ್ಯೆಯಿಂದ ದೈವಾಧೀನರಾಗುತ್ತಾರೆ. ಗಂಡು ಮಕ್ಕಳಲ್ಲಿ ಹಿರಿಯವರಾದ ಸುನಿಲ್ ಕುಮಾರ್ ತನ್ನ ಸಂಸಾರದ ಜವಾಬ್ದಾರಿಯನ್ನು ಅರಿತು ತಾನು ಕಷ್ಟಪಟ್ಟು ಓದಿ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆಯಾಗುತ್ತಾರೆ. ಇವರ ತಾಯಿಗೆ ಸಿಗುವ ಪಿಂಚಣಿಯಿಂದಲೇ ಸಂಸಾರ ನಡೆಯಬೇಕಿತ್ತು. ಹಾಗಾಗಿ ದುಡಿಮೆಯತ್ತ ಮುಖಮಾಡಿದ ಸುನಿಲ್, ಸಮಾಜ ಬಾಂಧವರ ಒಡೆತನದ ಮೆ: ಸ್ಯಾನ್ ಸನ್ಸ್ ಸೇಲ್ಸ್ ಕಾರ್ಪೋರೇಶನ್ ಸಂಸ್ಥೆಗೆ 1982 ರಲ್ಲಿ ಸೇರಿ ಜೊತೆಗೆ ಕಾಲೇಜು ಶಿಕ್ಷಣವನ್ನೂ ಮುಂದುವರೆಸುತ್ತಾರೆ. ಹೀಗೆ ದ್ವಿತೀಯ ಬಿ.ಎ ಮಾಡುತ್ತಿರುವ ವೇಳೆ ಕರ್ನಾಟಕ ಸರಕಾರ ಅಗ್ನಿ ಶಾಮಕ ಮತ್ತು ತುರ್ತು ಸೇವೆಯ ವಿಭಾಗದಲ್ಲಿ ಕೆಲಸ ದೊರೆಯುತ್ತದೆ. 1987 ರಲ್ಲಿ ಅಗ್ನಿಶಾಮಕ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಮಂಗಳೂರು,
ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಸೇವೆಯನ್ನು ಸಲ್ಲಿಸಿರುವ ಇವರು ಪ್ರಸ್ತುತ ಮಂಗಳೂರಿನ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗೌರವ ಪುರಸ್ಕಾರ
ಇವರ ಉತ್ತಮ ಸೇವೆಯನ್ನು ಗಮನಿಸಿ 2011 ನೇ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೆ ಇವರ ಉತ್ತಮ ಸೇವೆಗೆ 2017ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಘನತೆವೆತ್ತರಾಷ್ಟ್ರಪತಿಯವರ ಶ್ಲಾಘನೀಯ ಅಗ್ನಿ ಶಾಮಕ ಸೇವಾ ಪದಕವನ್ನು ಪಡೆದಿದ್ದಾರೆ. ಸುನಿಲ್ ಕುಮಾರ್ ರವರು ಪ್ರಸ್ತುತ ತನ್ನ ಪತ್ನಿ ಮೀರಾ.ಎಮ್ ಹಾಗೂ ಮಕ್ಕಳಾದ ಪ್ರತೀಕ್ಷ ಎಸ್ ಮತ್ತು ಸಮೀಕ್ಷ ಎಸ್ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಇನ್ನಷ್ಟು ಯಶಸ್ಸು ದೊರಕಲಿ ಅನ್ನೋದು ಭಂಡಾರಿ ವಾರ್ತೆ ತಂಡದ ಹಾರೈಕೆ
.
✍: ಎಸ್.ಕೆ.ಬಂಗಾಡಿ, ಭಂಡಾರಿ ವಾರ್ತೆ
No comments:
Post a Comment