BhandaryVarthe Team

BhandaryVarthe Team
Bhandary Varthe Team

Tuesday, 27 April 2021

ಕಾಪು ತಾಲೂಕಿನ ಎಲ್ಲೂರು ಬಂಡೋಜಿಯ ಶ್ರೀಮತಿ ಇಂದಿರಾ ಆರ್ ಭಂಡಾರಿಯವರ ನೂತನ ಮನೆ " ಅಮ್ಮ" ದ ಗೃಹ ಪ್ರವೇಶ

 ಕಾಪು ತಾಲೂಕಿನ ಎಲ್ಲೂರು ಬಂಡೋಜಿಯ ಶ್ರೀಮತಿ ಇಂದಿರಾ ಆರ್ ಭಂಡಾರಿ ಕುಟುಂಬವು ನಿರ್ಮಿಸಿರುವ ನೂತನ ಮನೆ "ಅಮ್ಮ" ದ ಗೃಹ ಪ್ರವೇಶವು ಏಪ್ರಿಲ್ 27, 2021 ರ ಮಂಗಳವಾರದಂದು ಗಣಹೋಮ ಹಾಗೂ ಸತ್ಯನಾರಾಯಣ ಪೂಜೆಯೊಂದಿಗೆ ನೆರವೇರಿತು.

ನೂತನ ಗೃಹ ಪ್ರವೇಶದ ಸಂಭ್ರಮದಲ್ಲಿರುವ ಶ್ರೀಮತಿ ಇಂದಿರಾ ಆರ್ ಭಂಡಾರಿ ಕುಟುಂಬಕ್ಕೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು "ಭಂಡಾರಿವಾರ್ತೆ" ಹಾರ್ದಿಕವಾಗಿ ಶುಭ ಕೋರುತ್ತದೆ.

-ಭಂಡಾರಿವಾರ್ತೆ

Sunday, 25 April 2021

ಹೆಣ್ಣು ಶಿಶು ಮತ್ತು ಲೈಂಗಿಕ ದುರ್ಬಳಕೆ

  

   "ಹೆಣ್ಣು ಸಮಾಜದ ಕಣ್ಣು"  ಎಷ್ಟು ಚೆನ್ನಾಗಿದೆ ಈ ಮಾತು,ಇದು ಕೇವಲ ಬಾಯಿಮಾತಾಗಿದೆಯೇ ಹೊರತು ಕೃತಿಗಿಳಿದಿಲ್ಲ ಎನ್ನುವುದು ವಿಪರ್ಯಾಸ. ಹೆಣ್ಣೆಂದರೆ ಕೇವಲ ನಾಲ್ಕು ಗೋಡೆಯ ಮಧ್ಯೆ ಜೀವಿಸುವವಳು ಎಂದು ಅಂದುಕೊಂಡಿದ್ದಾರೆ ಇಂದಿನವರು..ನಮ್ಮ ಪೂರ್ವಜರು ಕೂಡಾ ಹಾಗೇ ಮಾಡಿದ್ದರು.ಮನುಸ್ಮೃತಿಯಲ್ಲಿ ಮನು ಹೀಗಂದಿದ್ದಾನೆ "ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೆ ತತ್ರಾ ದೇವತಾ" ಎಂಬುದಾಗಿ,ಅದೇ ಮನು ಹೀಗೂ ಹೇಳಿದ್ದಾನೆ "ಪಿತಾ ರಕ್ಷಂತಿ ಕೌಮಾರೆ,ಭ್ರಾತ ರಕ್ಷಂತಿ ಯೌವನೆ,ರಕ್ಷಂತಿ ಪುತ್ರ ಸ್ತವಿರೆ" ಎಂಬುದಾಗಿ. ಅಂದರೆ ಬಾಲ್ಯದಲ್ಲಿ ತಂದೆಯಿಂದ,ಯೌವ್ವನದಲ್ಲಿ ಪತಿಯಿಂದ ಮತ್ತು ಮುಪ್ಪಿನಲ್ಲಿ ಮಗನಿಂದ ರಕ್ಷಿಸಲ್ಪಡುವವಳು ಎಂದರ್ಥ.ಅಂದಿನ ಮನು ಕೂಡಾ ಹೆಣ್ಣಿಗೆ ಚೌಕಟ್ಟನ್ನು ನಿರ್ಮಿಸಿದ್ದ ಎಂಬುದು ವಿಪರ್ಯಾಸ ಅಲ್ಲವೇ?!
 
       ಇಂದಿನ ಆಧುನಿಕ ಯುಗದಲ್ಲಿ ಕೂಡಾ ಹೆಣ್ಣು ಶೋಷಿತಳೇ ಯಾಕೆಂದರೆ ಈಗಲೂ ರಾಜಸ್ತಾನ, ಹರಿಯಾಣಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣುತ್ತಿದ್ದಾರೆ.ಹೆಣ್ಣು ಶಿಶುವಿನ ಹತ್ಯೆ ಆಧುನಿಕ ಯುಗದಲ್ಲೂ ಮಾಡುತ್ತಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ.ಮಗು ಹೆಣ್ಣೆ, ಗಂಡಾ ಎಂದು ಮೊದಲೇ ತಿಳಿದುಕೊಂಡು ಅಬಾರ್ಷನ್, ಹಸಿರು ಮದ್ದುಗಳಿಂದ ಹುಟ್ಟಬೇಕಾದ ಪುಟ್ಟ ಕಂದಮ್ಮನನ್ನು ಕೊಲ್ಲುವರು..ಹೆಣ್ಣೆಂದರೆ ತಾತ್ಸಾರವೇ ಇವರಿಗೆ ಹೆಣ್ಣನ್ನು ತೀರಾ ಕೆಳಮಟ್ಟಕ್ಕೆ ತಳ್ಳಿ ಬಿಟ್ಟಿದ್ದಾರೆ..
      ಬಾಲ್ಯದಲ್ಲೇ ಸಾವನ್ನು ಜಯಿಸಿ ಬಂದರೆ ಬೆಳೆದಂತೆ ಅದಕ್ಕಿಂತ ಹೆಚ್ಚಿನ ತೊಂದರೆಯನ್ನು ಹೆಣ್ಣು ಅನುಭವಿಸುತ್ತಾಳೆ..ಮನೆಯವರಿಂದಲೇ ನೋವನ್ನು ಅನುಭವಿಸುತ್ತಾಳೆ. ವಿದ್ಯೆ ನೀಡುವುದರಲ್ಲಿಯೂ ಕಟ್ಟುಪಾಡು..ಬಾಲ್ಯದಲ್ಲೇ ವಿವಾಹ..ಆಟವಾಡೋ ವಯಸ್ಸಿಗೆ ಮಗುವನ್ನು ಹೆರಬೇಕಾದ ಅನಿವಾರ್ಯತೆ... ಮದುವೆಯಾಗದಿದ್ದಲ್ಲಿ ದೇವಸ್ಥಾನಕ್ಕೆ ಬಸವಿ ಬಿಡುವಂಥ ನೀಚ ನಂಬಿಕೆಗಳು, ಕೆಲಸಕ್ಕೆ ಸೇರಿದಳೆಂದರೆ ಮೂರು ಬಿಟ್ಟವಳೆಂಬ ಹಣೆಪಟ್ಟಿ  ಅಲ್ಲೂ ಮೇಲಿನ ಅಧಿಕಾರಿಗಳಿಂದ ಲೈಂಗಿಕ ಕಿರುಕುಳ, ಬೀದಿ ಕಾಮಣ್ಣರುಗಳಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳುವಷ್ಟರಲಿ ಜೀವನವೇ ಸಾಕೆನಿಸಿಬಿಡುತ್ತದೆ. ಪುಟ್ಟ ಮಕ್ಕಳನ್ನು ಬಿಡದ ರಾಕ್ಷಸ ಮನದ ಕಾಮುಕರನ್ನು ನೆನೆಸಿಕೊಂಡಾಗ ನಡುಬೀದಿಯಲ್ಲಿ ನಿಲ್ಲಿಸಿ, ಕಲ್ಲು ಹೊಡೆಯಬೇಕೆನಿಸುತ್ತದೆ.
ಉಪಸಂಹಾರ
      ಹೆಣ್ಣಿಂದಲೇ ಜನಿಸಲ್ಪಡುವ ನಾವು ಯಾಕೆ ಆಕೆಯನ್ನು ಗೌರವಿಸಲು ಹಿಂಜರಿಯಬೇಕು, ಹುಟ್ಟುವಾಗಲೇ ಕಂದಮ್ಮನನ್ನು ಸಾಯಿಸದಿರಿ ನನ್ನ ಹುಟ್ಟು ಕೂಡಾ ಹೆಣ್ಣಿಂದಲೇ ಆಗಿರುವುದು ಎಂಬುದನ್ನು ನೆನಪಿಡಿ...ಕ್ಷಣಿಕ ಸುಖದ ಆಸೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಸಗದಿರಿ..ಹೆತ್ತ ತಾಯಿ ಕೂಡಾ ಹೆಣ್ಣು ಎಂದು ಮರೆಯದಿರಿ ಸಹನಾಮಯಿ, ವಾತ್ಸಲ್ಯಮೂರ್ತಿ, ಕರುಣಾಮಯಿ ಹೆಣ್ಣು..."ಒಲಿದರೆ ನಾರಿ, ಮುನಿದರೆ ಮಾರಿ" ಆಗುವಂತೆ ಮಾಡದಿರಿ. ಹೆಣ್ಣು ಮಾತೆಯೂ ಆಗಬಲ್ಲಳು ದಮನ ಮಾಡೋ ದುರ್ಗೆಯು ಆಗುತ್ತಾಳೆ. ಹಾಗಾಗಿ ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿದರೆ ಸಮಾಜದ ಸ್ವಾಸ್ಥವು ಚೆನ್ನಾಗಿರುತ್ತದೆ.
ನಾಗಶ್ರೀ ಭಂಡಾರಿ, ಮೂಡುಬಿದಿರೆ

Friday, 23 April 2021

25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶ್ರೀಮತಿ ಶಾರದ ಮತ್ತು ಶ್ರೀ ಗೋಪಾಲ ಭಂಡಾರಿ ಹಾಗೂ  ಶ್ರೀಮತಿ ಶಶಿಕಲಾ ಮತ್ತು ಶ್ರೀ ಬಾಬು ಭಂಡಾರಿ ದಂಪತಿಗಳು  

 ಭಂಡಾರಿ ಸಮಾಜ ಸಂಘ ಸೊರಬ - ಶಿರಾಳಕೊಪ್ಪ ಘಟಕದ ಮಾಜಿ ಅಧ್ಯಕ್ಷರುಗಳಾದ ಶ್ರೀಯುತ ಗೋಪಾಲ ಭಂಡಾರಿ ಶಿರಾಳಕೊಪ್ಪ ಮತ್ತು ಶ್ರೀಯುತ ಬಾಬು ಭಂಡಾರಿ ಸೊರಬ ಇವರು ದಿನಾಂಕ 22-04-2021 ರಂದು ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

ಹಿಲಿಯಾಣ ಜಡ್ಡುವಿನ ದಿವಂಗತ ನಾರಾಯಣ ಭಂಡಾರಿ ದಂಪತಿಯ ಎರಡನೇ ಪುತ್ರ ಶ್ರೀ ಗೋಪಾಲ ಭಂಡಾರಿ ಇವರು ಅಸೋಡಿನ ದುಗ್ಗ ಭಂಡಾರಿ ಯವರ ದ್ವಿತೀಯ ಪುತ್ರಿ ಶಾರದ (ಬೇಬಿ) ಹಾಗೂ ಅಸೋಡಿನ ದಿವಂಗತ ದುಗ್ಗ ಭಂಡಾರಿಯವರ ದ್ವಿತೀಯ ಪುತ್ರ ಶ್ರೀ ಬಾಬು ಭಂಡಾರಿ ಇವರು ಹಿಲಿಯಾಣ ಜಡ್ಡುವಿನ ದಿವಂಗತ ನಾರಾಯಣ ಭಂಡಾರಿಯವರ ತೃತೀಯ ಪುತ್ರಿ ಶಶಿಕಲಾ ಇವರ ವಿವಾಹವು ದಿನಾಂಕ: 22-04-1996 ರಂದು ನಾರಾಯಣ ಭಂಡಾರಿ ಯವರ ಸ್ಚಗೃಹ "ಮಾತೃಕೃಪ" ದಲ್ಲಿ ನೆರವೇರಿತ್ತು.

25 ವರ್ಷ ಸುಖ ಸಂಸಾರ ಮಾಡಿದ ಜೋಡಿಗಳ ವಿವಾಹ ವಾರ್ಷಿಕೋತ್ಸವವನ್ನು ಭಂಡಾರಿ ಸಮಾಜ ಸಂಘ ಬೆಂಗಳೂರು‌ ವಲಯದ ಪ್ರಧಾನ ಕಾರ್ಯದರ್ಶಿ ಶಿರಾಳಕೊಪ್ಪದ ಸುಧಾಕರ ಆರ್ ಭಂಡಾರಿಯವರ ಮನೆಯಲ್ಲಿ ಆಚರಿಸಲಾಯಿತು.

ಈ ಶುಭ ಸಂದರ್ಭ ದಲ್ಲಿ ಸುಧಾಕರ ಭಂಡಾರಿಯವರ ಪತ್ನಿ ಗೀತಾ, ಮಕ್ಕಳಾದ ವೈಷ್ಣವಿ ಮತ್ತು ಅಧಿತಿ ಜೊತೆಗಿದ್ದು ದಂಪತಿಗಳನ್ನು ಸತ್ಕರಿಸಿ ಸಂತೋಷ ಪಟ್ಟರು.

ದಂಪತಿಗಳ ಮಕ್ಕಳಾದ ತನುಶ್ರೀ, ತೇಜಸ್ವಿನಿ, ಚಿರಂಜೀವಿ ಮತ್ತು ಚೈತ್ರ ಇವರು ಹಾಜರಿದ್ದು ದಂಪತಿಗಳಿಗೆ ಶುಭ ಹಾರೈಸಿದರು.

ದಾಂಪತ್ಯ ಜೀವನದ ಇಪ್ಪತ್ತೈದನೇ ವಸಂತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯಗಳನ್ನಿತ್ತು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು "ಭಂಡಾರಿವಾರ್ತೆ"  ಮತ್ತು ತಂಡದಿಂದ ಹಾರ್ದಿಕ ಶುಭ ಹಾರೈಕೆಗಳು.
-ಭಂಡಾರಿವಾರ್ತೆ
 

Wednesday, 21 April 2021

ಅಡುಗೆ ಮನೆಯ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ವಿಧಾನ ಹೇಗೆ?-ವನಿತಾ ಅರುಣ್ ಭಂಡಾರಿ, ಬಜ್ಪೆ

 ಪ್ರತಿಯೊಬ್ಬರಿಗೂ ಮನೆಗೆ ಬೇಕಾದ ತರಕಾರಿ ,ಸೊಪ್ಪುಗಳನ್ನು ತಾವೇ ಬೆಳೆಸಬೇಕೆಂಬ  ಹಂಬಲ ಇರುತ್ತದೆ.ಆದರೆ ವಿವಿಧ ಕಾರಣಗಳಿಂದ ಬೆಳೆಸಲು ಸಾಧ್ಯವಾಗುವುದಿಲ್ಲ.




ಕೆಲವರಿಗೆ ಸಮಯ ಇರುವುದಿಲ್ಲ, ಇನ್ನೂ ಕೆಲವರಿಗೆ ಹೇಗೆ ಬೆಳೆಸುವುದು   ಎಂದು ತಿಳಿದಿರುವುದಿಲ್ಲ. ತುಂಬಾ ಜನರಿಗೆ ಅದಕ್ಕೆ ಬೇಕಾದ ಜಾಗ, ಮಣ್ಣು ಇರುವುದಿಲ್ಲ.

 ಸ್ವಲ್ಪವೇ ಜಾಗದಲ್ಲಿ ಅಥವಾ ಮನೆಯ ತಾರಸಿ (ಟೆರೇಸ್ )ಮೇಲೆ ಕುಂಡದಲ್ಲಿ, ಗೋಣಿ ಚೀಲದಲ್ಲಿ, ಬಕೆಟ್ ನಲ್ಲಿ ಸಣ್ಣ ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿ ಸೊಪ್ಪುಗಳನ್ನು ಬೆಳೆಸಬಹುದು.ಇದನ್ನು ಬೆಳೆಸುವುದರಿಂದ ನಮಗೆ ವಿವಿಧ ರೀತಿಯ ಪ್ರಯೋಜನಗಳಿವೆ.

  • ಮನೆಗೆ ಬೇಕಾದ ತರಕಾರಿ ಸೊಪ್ಪು ಸಿಗುತ್ತದೆ.
  • ದೈಹಿಕವಾಗಿ ವ್ಯಾಯಾಮ ದೊರಕುತ್ತದೆ, ವಾಕಿಂಗ್ ಹೋಗಬೇಕಾಗಿಲ್ಲ.
  • ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ.

ದಿನಾ  ಹೊರಗೆ ಹೋಗಿ ದುಡಿಯುವವರು ಕೂಡ ತಮ್ಮ ಮನೆಯಲ್ಲಿಯೇ  ತರಕಾರಿ ಬೆಳೆಸಬಹುದು.

ವಾರದ ರಜೆಯಲ್ಲಿ ಇದರ ಕೆಲಸ ಮಾಡಬಹುದು. ಮನೆಯಲ್ಲಿ ಮಾಡಬಹುದಾದ ನಾನು ಮಾಡಿದ ತರಕಾರಿ, ಸೊಪ್ಪುಗಳು ಯಾವುದೆಂದರೆ ಬಸಳೆ, ಪುದಿನಾ ,ಬೆಂಡೆಕಾಯಿ, ಟೊಮೆಟೊ, ಬದನೆ,ಕಾಯಿ ಮೆಣಸು ,ಸಿಹಿಗೆಣಸು, ಸೌತೆಕಾಯಿ ಇಷ್ಟೆಲ್ಲ ತರಕಾರಿಗಳನ್ನು ತಾರಸಿ (ಟೆರೇಸ್ ) ಮೇಲೆ ಬೆಳೆಸಬಹುದು.ಈ ಎಲ್ಲ ತರಕಾರಿಗಳನ್ನು ಹೇಗೆ ಬೆಳೆಸಬಹುದು ಎಂದು ಮುಂದೆ ತಿಳಿಯೋಣ.

ಈಗ ನಮ್ಮಲ್ಲಿ  ಸ್ವಲ್ಪ ಮಣ್ಣಿದ್ದರೆ ಅದನ್ನು ಜಾಸ್ತಿ  ಮಾಡುವುದು ಹೇಗೆ ಅಥವಾ ಸಾವಯವ ಗೊಬ್ಬರ ಹೇಗೆ ಮಾಡುವುದು ಎಂದು ತಿಳಿಯೋಣ.

ಮೊದಲಿಗೆ ಒಂದು ಕೆ.ಜಿ ಯಷ್ಟು ಮಣ್ಣನ್ನು ತಂದು ಇಟ್ಟುಕೊಳ್ಳಿ ಆಮೇಲೆ ಮನೆಯಲ್ಲಿ ಯಾವುದಾದರೂ ಹಳೆಯ ಅಥವಾ ಪೈಂಟ್ ಬಕೆಟ್, ಅಥವಾ ದೊಡ್ಡದಾದ  ಪ್ಲಾಸ್ಟಿಕ್ ಬಾಟಲನ್ನು ತೆಗೆದುಕೊಂಡು ಅದರ ಅಡಿಭಾಗದಲ್ಲಿ 4 ಅಥವಾ 5 ಸಾಧಾರಣ ತೂತುಗಳನ್ನು ಕೊರೆಯಬೇಕು. (ತೂತು ಕೊರೆಯಲು ಕಬ್ಬಿಣದ ತುಂಡು ಅಥವಾ ತೆಳುವಾದ ಚೂರಿ ಅಥವಾ ಚಿತ್ರದಲ್ಲಿ ತೋರಿಸಿದಂತಹ ಚಮಚ ಬೆಂಕಿಗೆ ಇಟ್ಟು ಬಿಸಿ ಮಾಡಿ ತಕ್ಷಣ ಬಕೆಟ್ ಗೆ ತೂತು ಕೊರೆಯ ಬೇಕು)

ತೂತು ಕೊರೆದಿರುವ ಬಕೆಟ್ಟನ್ನು ನಿಮ್ಮಲ್ಲಿ ಜಾಗ ಇದ್ದರೆ ನೇರವಾಗಿ  ಮಣ್ಣಲ್ಲೇ ಇಡಬಹುದು. ಟೆರೆಸ್ ಮೇಲೆ ಇಡುವವರು ಬಕೆಟ್ ನ ಅಡಿಭಾಗದಲ್ಲಿ ಬೇರೆ ಬಕೇಟ್ ‌ನ ಅಥವಾ ಯಾವುದಾದರೂ ಮುಚ್ಚಳವನ್ನು ಇಟ್ಟು ಅದರ ಮೇಲೆ ತುತೂ ಕೊರೆದಿರುವ ಬಕೆಟ್ಟನ್ನು ಇಡಬೇಕು ಅಡಿಯಲ್ಲಿ ಮುಚ್ಚಳವನ್ನು ಇಟ್ಟುಕೊಳ್ಳುವ ಉದ್ದೇಶ ನಾವು ಮಾಡುವ ಗೊಬ್ಬರದಿಂದ ಬಕೇಟ್ ನ ತೂತಿನ ಮೂಲಕ ಅದರ ರಸ ಬೀಳಬಹುದು  ಅದಕ್ಕಾಗಿ.

 ಈ ರಸವನ್ನು ಯಾವುದೇ ಗಿಡಕ್ಕೆ ಹಾಕಬಹುದು ಇದು ತುಂಬಾ ರಸಭರಿತ ದ್ರವ ವಾಗಿರುತ್ತದೆ.

ಈಗ ಬಕೆಟ್ ಗೆ ಸ್ವಲ್ಪ ಮಣ್ಣನ್ನು ಹಾಕಬೇಕು. ನಂತರ ಅದರ ಮೇಲೆ ಮನೆಯಲ್ಲಿ ಅಡುಗೆ ಮಾಡಿದಾಗ ಉಳಿದ ತರಕಾರಿಯ ಸಿಪ್ಪೆ, ದೇವರಿಗೆ ಇಟ್ಟ ಒಣಗಿರುವ ಹೂವು, ಪೆನ್ಸಿಲ್ ಕಸ, ಮೊಟ್ಟೆಯ ಸಿಪ್ಪೆ, ಈರುಳ್ಳಿ, ಬೀನ್ಸ್ ,ಕುಂಬಳಕಾಯಿ, ಸೌತೆ, ಅನನಾಸು, ಕಿತ್ತಳೆ, ಮೂಸಂಬಿ  ಹೀಗೆ ಚಿತ್ರದಲ್ಲಿ ತೋರಿಸಿದಂತೆ ಮನೆಗೆ ಏನು ತಂದರೂ  ಅದರ ಸಿಪ್ಪೆ, ಬೀಜ, ಎಲೆ ,ದಂಟು ಎಲ್ಲವನ್ನು ಈ ಬಕೆಟ್ ಗೆ ಹಾಕಿ ಅದರ ಮೇಲೆ ಅದು ಕಾಣದಷ್ಟು ಸ್ವಲ್ಪಸ್ವಲ್ಪವೇ ಮಣ್ಣು ಹಾಕಿ ಮುಚ್ಚಳ ಮುಚ್ಚಿ ಬಿಡಿ.

ಮುಚ್ಚಳ ಗಟ್ಟಿಯಾಗಿ ಮುಚ್ಚಬೇಕು ಎಂದೇನು ಇಲ್ಲ, ಅದಕ್ಕೆ ನೀರು ಬೀಳದ ಹಾಗೆ ಇಡಬೇಕು ಅಷ್ಟೇ. ಸಿಪ್ಪೆಗಳನ್ನು ಹಾಕುವಾಗ ಯಾವುದೇ ಕಾರಣಕ್ಕೂ ನೀರು,ಅನ್ನ,ಸಾರು, ಪಲ್ಯ ಸಾಂಬಾರು, ಮೀನಿನ ಮುಳ್ಳು, ಮಾಂಸದ ಎಲುಬುಗಳನ್ನು ಇದಕ್ಕೆ ಹಾಕಬಾರದು.ಮುಚ್ಚಳ ಮುಚ್ಚಿದ ಬಕೆಟ್ಟನ್ನು ಹಾಗೆ ಬಿಡಿ ದಿನ ನಿಮ್ಮಲ್ಲಿ ತುಂಬಾ ತರಕಾರಿಗಳ ,ಹಣ್ಣುಗಳ ಸಿಪ್ಪೆ ಇದ್ದರೆ ಅದಕ್ಕೆ ಹಾಕಿ ಹಾಗೆಯೇ ಮಣ್ಣು ಹಾಕಿ ಮುಚ್ಚಿಬಿಡಿ. ತುಂಬಾ ಸಿಪ್ಪೆ ಇಲ್ಲದಿದ್ದಾಗ ಎರಡು ಮೂರು ದಿನಗಳ ಸಿಪ್ಪೆಗಳನ್ನು ಸಂಗ್ರಹಿಸಿ ನಂತರ ಹಾಕಿ , ಮೊದಲು ಹಾಕಿದ ಹಾಗೆ ಮಣ್ಣನ್ನು ಹಾಕಬೇಕು,

ಬಕೆಟ್ ಗೆ ಮಣ್ಣು ಸಿಪ್ಪೆ ಹಾಕುವಾಗ ಒತ್ತಿ ಒತ್ತಿ ಹಾಕಬೇಕು. ಸಿಪ್ಪೆಯ ಜೊತೆಗೆ  ಮನೆಯ ಸುತ್ತ ಮುತ್ತ ಒಣಗಿದ ಎಲೆಗಳು ಹಸಿ ಎಲೆಗಳನ್ನು ಇದ್ದರೆ ಹಾಕಬಹುದು. ಬಕೆಟ್  ಪೂರ್ತಿಯಾದ ಮೇಲೆ ಅದನ್ನು ಮುಚ್ಚಿ 2ತಿಂಗಳು ಬಿಡಬೇಕು.

2 ತಿಂಗಳ ಬಳಿಕ ತೆಗೆದಾಗ ಎಲ್ಲ ತರಕಾರಿ ಹಣ್ಣುಗಳ ಸಿಪ್ಪೆ ಪೂರ್ತಿಯಾಗಿ ಕರಗಿ ನಿಮಗೆ ಸಾವಯವ ಗೊಬ್ಬರ ಸಿಗುತ್ತದೆ.ಚಿತ್ರದಲ್ಲಿ ಕರಗಿದ ಮಣ್ಣನ್ನು ನೋಡಬಹುದು.

ಇದನ್ನು ನೀವು ಬಕೆಟ್, ಗೋಣಿ ಚೀಲ, ಕುಂಡದಲ್ಲಿ ತುಂಬಿಸಿ ಗಿಡ ನೆಡಬಹುದು ಅಥವಾ ಈ ಸಾವಯವ ಗೊಬ್ಬರವನ್ನು ಗೋಣಿ ಚೀಲದಲ್ಲಿ ತುಂಬಿಸಿ ಪುನಃ ಇದೇ ಬಕೆಟ್ಟಿನಲ್ಲಿ ನಾವು ಮಾಡಿದ ಹಾಗೆ ಇದೇ ಮಣ್ಣನ್ನು ಉಪಯೋಗಿಸಿ ತರಕಾರಿ ಸಿಪ್ಪೆ ಬಳಸಿ ಇನ್ನೊಂದು ಬಕೆಟ್ ಸಾವಯವ ಗೊಬ್ಬರ ತಯಾರಿಸಬಹುದು . ಒಮ್ಮೆನೀವು ಈ ಗೊಬ್ಬರ ತಯಾರಿಸುವ ಕೆಲಸ ಶುರು ಮಾಡಿದರೆ ಮಾಡುತ್ತಲೇ ಇರುತ್ತೀರಿ. ಅಷ್ಟು ಖುಷಿ  ಕೊಡುವ  ಕೆಲಸ ಇದು. ಅಲ್ಲದೆ ಈ ಮಣ್ಣಿನಲ್ಲಿ ತರಕಾರಿ ಗಿಡಗಳನ್ನು ನೆಟ್ಟರೆ ತುಂಬಾ ಸುಲಭವಾಗಿ ತರಕಾರಿಗಳನ್ನು ಪಡೆಯಬಹುದು.

ನಿಮಗೆ ಇದರಲ್ಲಿ ಏನಾದರೂ ಸಂದೇಹ ಗಳಿದ್ದರೆ  ನನ್ನನ್ನು ಮೊಬೈಲ್ ಮೂಲಕ ಸಂಪರ್ಕಿಸಬಹುದು.

 ವನಿತಾ ಅರುಣ್ ಭಂಡಾರಿ

8660450845

Monday, 19 April 2021

ಮಕ್ಕಳ ಭವಿಷ್ಯಕ್ಕಾಗಿ ಆಸ್ತಿಕೂಡಿಡುವ ನಾವು ಜೀವಜಲವನ್ನೇಕೆ ಬರಿದು ಮಾಡುತ್ತಿದ್ದೇವೆ?-ಪ್ರಶಾಂತ್ ಭಂಡಾರಿ ಕಾರ್ಕಳ

 ಜೀವಜಲ ಜೀವನದಿಗಳ ಬರಿದಾಗಿಸಿ ದೇಶದ ಅಥವಾ ನಮ್ಮ ಮಕ್ಕಳ ಭವಿಷ್ಯತ್ತಿನ ಕನಸು ಕಾಣಲು ಸಾಧ್ಯವಿಲ್ಲ. ಜೀವ ಜಲವಿಲ್ಲದೆ ಜಗತ್ತು ಇಲ್ಲ. “ಮುಂದೊಂದು ದಿನ ಮಹಾಯುದ್ಧವಾದರೆ ಅದು ನೀರಿಗಾಗಿ”ಎಂಬ ಮಾತಿದೆ. ಈ ವಿಚಾರದಲ್ಲಿ ನಾವು ಗಂಭೀರವಾಗಿ ಅಲೋಚಿಸಬೇಕಾದ ಅನಿವಾರ್ಯತೆ ಇದೆ.

   ನಮ್ಮ ಪೂರ್ವಜರು ಜೀವಜಲವನ್ನು ದೇವರೆಂದು ಪೂಜಿಸಿದರು. ಏಕೆಂದರೆ ಅವರಿಗೆ ನೀರಿನ ಮಹತ್ವದ ಅರಿವು ಇತ್ತು. ಸುಜಲಾಂ ಸುಫಲಂ ಎಂದು ಹೇಳುವ ದೇಶದಲ್ಲಿ ನಾವಿದ್ದೇವೆ. ಜೀವಜಲದ ಮಹತ್ವದ ಬಗ್ಗೆ ಮಳೆಯ ಮಹತ್ವದ ಬಗ್ಗೆ ಪುರಾಣ ಕತೆಗಳು ನಮ್ಮಲ್ಲಿವೆ. ಗಂಗಾ, ಯಮುನಾ,ಬ್ರಹ್ಮಪುತ್ರ,ತುಂಗಾ,ಭದ್ರಾ, ಕಾವೇರಿ, ಗೋದಾವರಿ ಕೃಷ್ಣಾ ಮುಂತಾದ ಜೀವನದಿಗಳು ದೇಶವನ್ನು ಪೋಷಿಸುತ್ತಿವೆ. ಈ ಪುಣ್ಯನದಿಗಳನ್ನು ಮಾತೆಯರೆಂದೆ ಪೂಜಿಸುತ್ತೇವೆ. ಕತೆ , ಹಾಡು, ಸಿನಿಮಾಗಳಲ್ಲಿ ನದಿ , ಮಳೆ, ಸರೋವರ, ಜಲಪಾತ ಮುಂತಾದುವುಗಳ ವರ್ಣಿಸುತ್ತೇವೆ. ನೀರಿನ ಸೌಂದರ್ಯಕ್ಕೆ ಮೈಮರೆಯುತ್ತೇವೆ. ಆದರೆ ಇಂದು ಪ್ರಕೃತಿಯ ಆರಾಧನೆ ನಡೆಯುವ ಬದಲಾಗಿ ನಗರೀಕರಣ ಕೈಗಾರಿಕರಣದ ಹೆಸರಲ್ಲಿ ಕಾಡಿನ ನಾಶ ನಡೆಯುತ್ತಿದೆ, ಮಳೆ ಕಡಿಮೆಯಾಗಿದೆ. ಮಳೆ ಬಂದರೂ ಭೂಮಿ ಅದನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ.

ದೇಶದಲ್ಲಿ ಈಗಾಗಲೇ ನೀರಿನ ಕೊರತೆ ಉಂಟಾಗಿದೆ. ಇದೇ ಕಾರಣಕ್ಕೆ ಕೊಳವೆ ಬಾವಿ , ಅಣೆಕಟ್ಟುಗಳ ನಿರ್ಮಾಣವಾಗಿದೆ. ಆದರೆ ಅಂತರ್ಜಲವಿಲ್ಲದಿದ್ದರೆ ಅಣೆಕಟ್ಟು, ಕೊಳವೆ ಬಾವಿಯಿದ್ದು ಏನು ಪ್ರಯೋಜನವಾದೀತು?

ಈಗ ಇರುವ ನೀರು ಕೇವಲ 20 ವರ್ಷದಲ್ಲೆ 50% ಮುಗಿದು ಹೋಗಲಿದೆ. ಮತ್ತೆ 10 ವರ್ಷದಲ್ಲಿ ಜೀವಜಲವೇ ಇಲ್ಲವಾಗಬಹುದು.ನಮ್ಮ ಜೀವಿತಾವಧಿಯಲ್ಲೆ ಹೀಗಾದರೆ ಇನ್ನು ಭವಿಷ್ಯದ ನಮ್ಮ ಮಕ್ಕಳ ಕತೆಯೇನು? ಅವರಿಗಾಗಿ ಸುಂದರ ಭೂಮಿ ಉಳಿಯುವುದು ಬೇಡವೇ?  ಈ ಪ್ರಶ್ನೆಗಳು ನಿಜವಾಗಿಯೂ ಮುಂದೆ ಆಗಬಹುದಾದ ಅಪಾಯವನ್ನು ತಿಳಿಸುತ್ತದೆ. ದೇಶದ ಭವಿಷ್ಯದ ಜನತೆಗೆ ನಾವು ಬರಡುಭೂಮಿಯನ್ನು ಕೊಟ್ಟು ಹೋಗಲು ಯಾರಿಗೂ ಇಚ್ಚೆಯಿಲ್ಲ‌, ಆದರೆ ಯಾರಿಗೂ ಸರಿಯಾದ ದೃಷ್ಟಿಕೋನ ಮತ್ತು ನೀರಿನ ಮಹತ್ವದ ಅರಿವು ಇಲ್ಲ.

ನೀರಿಗಾಗಿ, ನದಿ ಉಳಿಸಲು ಅಭಿಯಾನವೊಂದರ ಅಗತ್ಯವಿದೆ. ನದಿಗಳು ನಾಗರಿಕತೆಯ ಸೃಷ್ಡಿಗೆ ಕಾರಣವಾದ ದೇವತೆಯೆಂದು ನಮ್ಮ ಪೂರ್ವಜರ ನಂಬಿಕೆ. ನಮ್ಮ ಪೂರ್ವಜರು ಆರಾಧಿಸಿ ಕೊಂಡು ಬರುತ್ತಿರುವ ದೇವತೆಗಳನ್ನು ರಕ್ಷಿಸಿ , ಪೂಜಿಸುವ ಕೆಲಸವಾಗಬೇಕಿದೆ.

ಪ್ರಸ್ತುತ್ತ ಈ ಶಾ ಪೌಂಡೇಶನ್ ಮತ್ತು ಇತರ ಸಂಘ ಸಂಸ್ಥೆಗಳು Rally for River ಎಂಬ ಬೃಹತ್ ಅಭಿಯಾನ ಕೈಗೊಂಡಿದೆ. ನೀರಿನ ಮಹತ್ವವನ್ನು ದೇಶದೆಲ್ಲೆಡೆ ಸಾರುವ ಕೆಲಸ ಮಾಡುತ್ತಿವೆ. ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ದೇಶದ ಪ್ರಜೆಗಳನ್ನು ಬಡಿದೆಬ್ಬಿಸಿ ನೀರಿನ ಮೂಲವಾದ ನದಿಗಳ ಉಳಿವಿಗೆ ಸರ್ಕಾರಕ್ಕೆ ಹೊಸ ನೀತಿಯೊಂದನ್ನು ರಚಿಸಬೇಕೆಂದು ಆಗ್ರಹಿಸುವುದಾಗಿದೆ. ಇಷ್ಟೇ ಅಲ್ಲದೆ ನದಿಯ ಎರಡು ದಂಡೆಗಳಲ್ಲಿ ಮರಗಳನ್ನು ಬೆಳೆಸಿ, ಹೆಚ್ಚಿನ ನೀರು ಇಂಗಿಸಲು ಕೊಳವೆ ಬಾವಿ ಮಾದರಿಯಲ್ಲಿ ಇಂಗುಗುಂಡಿಗಳನ್ನು ನದಿಯ ಪಕ್ಕದಲ್ಲಿ ನಿರ್ಮಿಸಬೇಕು ಎಂಬ ಎರಡು ಸಲಹೆಗಳನ್ನು ನೀಡಲಾಗಿದೆ. ಈ ಆಗ್ರಹಕ್ಕೆ ನೀರು ಕುಡಿಯುವವರೆಲ್ಲ ಬೆಂಬಲಿಸಬೇಕಾದುದು ನಮ್ಮ ಕರ್ತವ್ಯ.

ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಚ ಭಾರತ ಯೋಜನೆ, ಸ್ಮಾರ್ಟ್ ಸಿಟಿ ಮತ್ತು ಗಂಗಾ ನದಿ ಶುದ್ಧೀಕರಣ ಯೋಜನೆ ನೀರಿನ ಸಂರಕ್ಷಣೆಯಲ್ಲಿ ಹೊಸ ಆಶಾಕಿರಣವಾಗಿ ಗೋಚರಿಸುತ್ತಿದೆ. ಸರ್ಕಾರ ಜಲಜೀವನ್ ಮಿಷನ್ ಎಂಬ ಯೋಜನೆಯಡಿ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆ ಹಮ್ಮಿಕೊಂಡಿದೆ . ಸ್ವಚ್ಚ ಭಾರತ ಯೋಜನೆ ಮುಖೇನ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕದೇ ಇರುವುದರಿಂದ ನೀರು ಕಲುಷಿತಗೊಳ್ಳುವುದನ್ನು ಕಡಿಮೆ ಮಾಡುವುದೂ ಈ ಯೋಜನೆಯ ಹೈಲೈಟ್. ಆದರೆ ಎಲ್ಲಾ ಜವಾಬ್ದಾರಿ ಸರಕಾರದ ಮೇಲೆ ಹಾಕುವಂತಿಲ್ಲ. ಬರೀ ಸರಕಾರದಿಂದ ಮಾತ್ರ ಇದು ಸಾಧ್ಯವಾಗುವ ಮಾತಲ್ಲ. . ನೀರಿನ ಬಗ್ಗೆ ಬರೆಯುವುದು, ಮಾತಾಡುವುದು ನೀರು ಕುಡಿದಷ್ಟೇ ಸುಲಭ. ಆದರೆ ಸಾರ್ವಜನಿಕ ಸಹಭಾಗಿತ್ವವವಿಲ್ಲದಿದ್ದರೆ ಮುಂದೊಂದು ದಿನ ಪ್ರಕೃತಿಯೇ ನಮಗೆ ನೀರು ಕುಡಿಸುವುದರಲ್ಲಿ ಅನುಮಾನವಿಲ್ಲ.

ಸುಜಲಾಂ ಸುಫಲಾಂ ಎಂದು ಭಕ್ತಿಯಿಂದ ಹಾಡುವವರು ನಾವು. ಜಲವಿದ್ದರೆ ಫಲವೂ ಇದೆ. ಅದಿಲ್ಲದಿದ್ದರೆ ಏನೇನೂ ಇಲ್ಲ ಎಂಬುದು ನಮಗೆಲ್ಲರಿಗೂ ಇನ್ನಾದರೂ ಅರ್ಥವಾಗಲಿ. ಭಗೀರಥನಂತೆ ತಪಸ್ಸು ಮಾಡಿ ಗಂಗೆಯನ್ನು ಉಕ್ಕಿಸಲೂ ಹೇಗೂ ನಮ್ಮಿಂದ ಸಾಧ್ಯವಿಲ್ಲ. ಆದರೆ ಇರುವ ಗಂಗೆ(ನೀರು)ಯನ್ನು ಉಳಿಸಿಕೊಳ್ಳಲಂತೂ ಖಂಡಿತಾ ಸಾಧ್ಯವಿದೆ ಅಲ್ಲವೇ?

 

✍:ಪ್ರಶಾಂತ್ ಭಂಡಾರಿ ಕಾರ್ಕಳ, ಭಂಡಾರಿ ವಾರ್ತೆ

Saturday, 17 April 2021

ಆದಾಯ ತೆರಿಗೆಯ ಸಾಮಾನ್ಯ ತತ್ವಗಳು-ಸುಭಾಶ್ ಭಂಡಾರಿ ಕೊರಂಗ್ರಪಾಡಿ

 ಜನಿಸಿದ ಪ್ರತಿ ವ್ಯಕ್ತಿಗೆ ಜೀವನದಲ್ಲಿ ಎರಡು ಪ್ರಮುಖ ಅಂಶಗಳು ಖಂಡಿತ ಇರುತ್ತವೆ; ಅದು ಸಾವು ಮತ್ತು ತೆರಿಗೆಗಳು- ಬೆಂಜಮಿನ್ ಪ್ರಾಂಕ್ಲಿನ್


ಕ್ರಿಯಾತ್ಮಕ ಚಟುವಟಿಕೆಯುಳ್ಳ ಜಗತ್ತಿನಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಗಳು ಆಗುತ್ತಿರುತ್ತದೆ. ಬೆಂಜಮಿನ್ ಪ್ರಾಂಕ್ಲಿನ್ ಹೇಳಿದಂತೆ ಪ್ರತಿಯೊಬ್ಬನ ಜೀವನಚಕ್ರದಲ್ಲಿ ಕ್ಷಣ ಕ್ಷಣವೂ ಬದಲಾವಣೆಯೆಂಬುದು ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ ನೀವು ಸ್ವಂತ ವಾಹನದಲ್ಲಿ ಟೋಲ್ ರೋಡ್ ನಲ್ಲಿ ಪ್ರಯಣಿಸಬೇಕಾದರೆ ನಿರ್ದಿಷ್ಟ ಸುಂಕ ನೀಡಬೇಕು, ಅದೇ ರೀತಿ ನೀವು ಒಬ್ಬ ಉದ್ಯಮಿಯಾಗಿದ್ದರೆ ನಿವೃತ್ತಿ ನಿಶ್ಚಿತವಾಗಿರುತ್ತದೆ.

ಸರ್ಕಾರ ತೆರಿಗೆ ತಪ್ಪಿಸಲು ಅವಕಾಶ ನೀಡಿತೆಂದರೆ, ಯಾರೊಬ್ಬರು ತೆರಿಗೆ ಕಟ್ಟಲು ಇಚ್ಚಿಸುವುದಿಲ್ಲ. ಇದಕ್ಕಾಗಿ ಸರ್ಕಾರ ತನ್ನ ಆದಾಯ ಸಂಗ್ರಹಕ್ಕಾಗಿ ಮತ್ತು ವೃದ್ದಿಸುವ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ ನ್ನು ಮಂಡಿಸುತ್ತದೆ. ಬಜೆಟ್ ನಲ್ಲಿ ಸರ್ಕಾರ ತೆರಿಗೆ/ ಆದಾಯ ಸಂಗ್ರಹಿಸುವ ಗುರಿ ಮತ್ತು ನೀತಿ ನಿಯಮಗಳನ್ನು ತಿಳಿಸುತ್ತದೆ. ಮತ್ತು ಸರ್ಕಾರದ ವೆಚ್ಚದ ಅಂದಾಜನ್ನು ತಿಳಿಸುತ್ತದೆ.




ತೆರಿಗೆ ಎಂದ ಕೂಡಲೇ ಭಯಪಡುವವರಿಗೆ ಮತ್ತು ತೆರಿಗೆಯ ಸೂಕ್ಷ್ಮತೆಯ ಅರಿವು ಇಲ್ಲದವರಿಗೆ ಈ ಲೇಖನವು ಆದಾಯ ತೆರಿಗೆಯ ಸೂಕ್ಷ್ಮ ವಿಚಾರ ಮತ್ತು ಆದಾಯ ತೆರಿಗೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಒದುಗರಿಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತದೆ.

ಆದಾಯ ತೆರಿಗೆಯನ್ನು ಪ್ರತಿ ಹಣಕಾಸು ವರ್ಷದಲ್ಲಿ ನಿಗದಿತ ವರ್ಷದ ಗಳಿಕೆಯ ಮೇಲೆ ವಿಧಿಸಲಾಗುತ್ತದೆ. ‘ಆದಾಯ’ ಎಂಬ ಪದವು ವಿಶಾಲ ಅರ್ಥವನ್ನು ಹೊಂದಿದೆ ಇದು ನಿಗದಿತ ಸಮಯದಲ್ಲಿ ನಿರಂತರವಾಗಿ ಮತ್ತು ಕೆಲವು ನಿಶ್ಚಿತ ಮೂಲಗಳಿಂದ ಬರುವ ನಿರಂತರವಾಗಿ ‘ಒಳಬರುವ’ ಅಥವಾ ‘ಆಯ' ಹಣ,ಆಸ್ತಿ, ಸಂಪತ್ತು ಎಂದಾಗಿದೆ.

ಆದಾಯದ ಮೂಲಭೂತ ತತ್ವಗಳು

  1. ನಿರಂತರ ಮತ್ತು ನಿಶ್ಚಿತ ಮೂಲ: ಉದಾ – ವೇತನ
  2. ವಿಭಿನ್ನ ಬಗೆಯ ಆದಾಯ- ಇದು ನಗದು ಆಗಿರಬಹುದು ಅಥವಾ ವಸ್ತುವಿನ ರೂಪದಲ್ಲಾಗಿರಬಹುದು . ನೀವು ಲಾಟರಿ ಮೂಲಕ ಕಾರು ಗೆದ್ದರೆ, ಆ ಕಾರಿನ ನಿಜವಾದ ಮೌಲ್ಯದಷ್ಟನ್ನು ನಿಮ್ಮ ಆದಾಯವೆಂದು ಪರಿಗಣಿಸಲಾಗುತ್ತದೆ.
  3. ಸ್ವೀಕರಿಸಿದ Vs ಗಳಿಸಿದ ಆದಾಯ- ಸ್ವೀಕೃತ ಆದಾಯ ವಾಗಿರಲಿ ಅಥವಾ ಗಳಿಸಿದ ಆದಾಯವಾಗಿರಲಿ, ಅದು ತೆರಿಗೆ ಗೊಳಪಡುತ್ತದೆ. ಸ್ವೀಕರಿಸಲ್ಪಟ್ಟ ವೇತನ ಆದಾಯಕ್ಕೆ ಸ್ವೀಕೃತಿಯ ಮೇಲೆ ಅಥವಾ ಬಾಕಿ ಆಧಾರದ ಮೇಲೆ ತೆರಿಗೆ ವಿಧಿಸಲ್ಪಡುತ್ತದೆ. ನಿಮ್ಮ ಠೇವಣಿಗೆ ಗಳಿಸಿದ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.
  4. ತಾತ್ಕಾಲಿಕ ಮತ್ತು ನಿಶ್ಚಿತ ಆದಾಯ - ಆದಾಯ ತೆರಿಗೆಯ ನಿಯಮದಂತೆ ತಾತ್ಕಾಲಿಕ ಮತ್ತು ನಿಶ್ಚಿತ ಆದಾಯಕ್ಕೆ ವಿಧಿಸುವ ತೆರಿಗೆಗೆ ಯಾವುದೇ ವ್ಯತ್ಯಾಸವಿಲ್ಲ. ಲಾಟರಿಯಲ್ಲಿ ಗೆದ್ದ ಹಣ ತಾತ್ಕಾಲಿಕ ಆದಾಯವಾದರೂ ಕೂಡಾ ತೆರಿಗೆಗೆ ಒಳಪಡುತ್ತದೆ.
  5. ಅನಧಿಕೃತ ಆದಾಯ - ಆದಾಯ ತೆರಿಗೆಗೆ ಅಧಿಕೃತ ಮತ್ತು ಅನಧಿಕೃತ ರಂಬ ಬೇಧವಿಲ್ಲ, ಆದಾಯ ಹೇಗೆ ಗಳಿಸಿದರೂ ಆದಾಯ ತೆರಿಗೆ ವಸೂಲಿ ಮಾಡಲಾಗುತ್ತದೆ.
  6. ಆದಾಯ ನಷ್ಟವನ್ನು ಒಳಗೊಂಡಿದೆ- ಇದು ಆದಾಯತೆರಿಗೆಯ ಒಂದು ವಿಭಿನ್ನ ಲಕ್ಷಣ. ರಾಜ್ಯ ಸರ್ಕಾರ ವಿಧಿಸುವ ಯಾವುದೇ ತೆರಿಗೆ (GST) , ಸ್ಥಳೀಯಾಡಳಿತ ವಿಧಿಸುವ ಮನೆ ತೆರಿಗೆ ಕಟ್ಟುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಆದಾಯ ಅಥವಾ ನಷ್ಟವನ್ನು ಪರಿಗಣಿಸುವುದಿಲ್ಲ. ಉದಾಹರಣೆಗೆ ಪುರಸಭೆ ಮನೆತೆರಿಗೆ ಸಂಗ್ರಹಿಸುವಾಗ ಮನೆಯ ಯಜಮಾನ ಆ ಮನೆಯಿಂದ ಗಳಿಸುವ ಆದಾಯವನ್ನು ಪರಿಗಣಿಸುವುದಿಲ್ಲ. ನೀವು ಪುರಸಭೆ ವ್ಯಾಪ್ತಿಯಲ್ಲಿ ನಿಮ್ಮ ಸ್ವಂತ ಮನೆಯಲ್ಲಿ ವಾಸವಾಗಿದ್ದರೂ ಮನೆತೆರಿಗೆ ಕಟ್ಟಬೇಕಾಗುತ್ತದೆ. ಅದೇ ರೀತಿ ನೀವು 25 ಲಕ್ಷ ವ್ಯವಹಾರದ ಉದ್ದಿಮೆ ಹೊಂದಿದ್ದರೆ ನೀವು ಮಾರಾಟದ ಮೇಲಿನ ಲಾಭದ ಮೇಲೆ GST ಕಟ್ಟಲೆಬೇಕು.

ಇದಕ್ಕೆ ತದ್ವಿರುದ್ದವಾಗಿ , ಒಂದು ವೇಳೆ ಒಂದು ಮನೆಯ ಯಜಮಾನ ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟು ಬಂದ ಬಾಡಿಗೆಯೂ ಮನೆ ಕಟ್ಟಲು ತೆಗೆದು ಕೊಂಡ ಬಡ್ಡಿ ಕಟ್ಟಿದಾಗ ಉಳಿದ ಮೊತ್ತ ಋಣಾತ್ಮಕವಾಗಿದ್ದರೆ, ನಿಮ್ಮ ವೇತನ ಮತ್ತು ಉದ್ದಿಮೆಯ ಆದಾಯದ ಲೆಕ್ಕಕ್ಕೆ ಸೇರಿಸಬಹುದು. ಈಗಲೂ ನಿಮ್ಮ ಆದಾಯ ಲೆಕ್ಕದಲ್ಲಿ ನಷ್ಟವಿದ್ದರೆ ಅದನ್ನು ಮುಂದಿನ ಹಣಕಾಸು ವರ್ಷದ ಲೆಕ್ಕಕ್ಕೆ ಸೇರಿಸಬೇಕು.

ಸಾಮಾನ್ಯವಾಗಿ ಆದಾಯ ತೆರಿಗೆ ವಿಧಿಸುವಾಗ ಆದಾಯ ಗಳಿಸಿರುವ ನಿರ್ದಿಷ್ಟ ವ್ಯಕ್ತಿಯನ್ನು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಆದಾಯ ಗಳಿಸದೇ ಇನ್ನೊಬ್ಬರ ಆದಾಯವನ್ನು ತನ್ನ ಹೆಸರಲ್ಲಿ ಇಟ್ಟುಕೊಂಡಿರುವವರಿಂದ ತೆರಿಗೆ ಪಡೆಯಲಾಗುತ್ತದೆ.

ಇದು ಬೇರೆಯೊಬ್ಬರ ವಶದಲ್ಲಿರುವ ಆದಾಯಕ್ಕೆ ವಿಧಿಸುವ ತೆರಿಗೆಯಾಗಿದೆ. ಉದಾಹರಣೆಗೆ ತೆರಿಗೆದಾರರೊಬ್ಬನ ಹೆಂಡತಿ/ಗಂಡ ತೆರಿಗೆದಾರನ ಆದಾಯದ ಮೂಲದಿಂದ ಠೇವಣಿಯಿಟ್ಟು ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.

ಆದಾಯ ತೆರಿಗೆಯೂ ಈ ಕೆಳಗಿನಂತೆ ಒಬ್ಬ ತೆರಿಗೆದಾರಗೆ ತೆರಿಗೆ ವಿಧಿಸುತ್ತದೆ. ಒಬ್ಬ ತೆರಿಗೆ ದಾರನೆಂದರೆ:

  • ಒಬ್ಬ ವ್ಯಕ್ತಿ ನಿರ್ದಿಷ್ಟ ಹಣಕಾಸು ವರ್ಷಕ್ಕೆ ತನ್ನ ಆದಾಯದ ವಿವರ ಸಲ್ಲಿಸಿ ತೆರಿಗೆ ಪಾವತಿಸುವವನು.
  • ಆದಾಯ ತೆರಿಗೆ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ನೋಟಿಸ್ ಪಡೆದು ತೆರಿಗೆ ಸಲ್ಲಿಸಬೇಕಾದ ವ್ಯಕ್ತಿ.
  • ತೆರಿಗೆದಾರ ಸೂಚಿಸಿದ ನಿರ್ದಿಷ್ಟ ವ್ಯಕ್ತಿ , ಉದಾಹರಣೆಗೆ ಕಾನೂನು ಪ್ರತಿನಿಧಿ
  • ಯಾವುದೇ ಕಾಯ್ದೆಯ ನಿಬಂಧನೆಗೊಳಪಟ್ಟು ತೆರಿಗೆದಾರನೆಂದು ಪರಿಗಣಿಸಲ್ಪಟ್ಟ ವ್ಯಕ್ತಿ. ಉದಾಹರಣೆಗೆ ತನ್ನ ಇತರ ಹೂಡಿಕೆಯ ಗಳಿಕೆಗೆ ಕಡಿತವಾದ ತೆರಿಗೆಯಿಂದ ತನ್ನ ಪಾವತಿಯ ಕಡಿತ ಪಡೆಯಲು ಇಚ್ಚಿಸುವ ವ್ಯಕ್ತಿ ತೆರಿಗೆದಾರನೆಂದು ಪರಿಗಣಿಸಲ್ಪಡುತ್ತಾನೆ. (ಇದು TDS ಎಂದು ಜನಪ್ರಿಯವಾಗಿದೆ.)

(ಮುಂದುವರೆಯುವುದು....)

    • ಸುಭಾಶ್ ಭಂಡಾರಿ ಕೊರಂಗ್ರಪಾಡಿ 

Friday, 16 April 2021

ತ್ವಚೆಯ ಮೂಲಭೂತ ಅಂಶಗಳು-ವಿದ್ಯಾ ಪ್ರಕಾಶ್ ಭಂಡಾರಿ

 ಮೊದಲು ನಿಮ್ಮ ತ್ವಚೆಯ ಸ್ವರೂಪವನ್ನು ನಿರ್ಧರಿಸಿ ಅದಕ್ಕೆ ಸರಿಯಾದ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಬೇಕಾದುದು ಅತ್ಯಂತ ಮುಖ್ಯವಾಗಿದೆ.ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಲ್ಲದ ಉತ್ಪನ್ನಗಳು ಬಳಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಬದಲಾಗಿ ನಿಮ್ಮ ಚರ್ಮದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಜೊತೆಗೆ ಸೌಂದರ್ಯ ಇನ್ನಷ್ಟು ಹದಗೆಡಬಹುದು. ಮೊಡವೆ, ರೊಸಾಸಿಯಾ(ಮುಖದ ಮೇಲೆ ಬೀಳುವ ಕೆಂಪಾದ ಮೊಡವೆ) ಮತ್ತು ಉರಿ ತ್ವಚೆ ಯಂತಹ ಚರ್ಮ ಸಂಬಂಧಿತ ಸೋಂಕು ನಿವಾರಣೆಗೆ ಉತ್ಪನ್ನಗಳನ್ನು ಖರೀದಿಸುವಾಗ ನಿರ್ದಿಷ್ಟ ಕಾಳಜಿ ವಹಿಸಬೇಕು.

ತ್ವಚೆಯ ವಿವಿಧ ಸ್ವರೂಪಗಳು:
ಸಾಮಾನ್ಯ ಚರ್ಮ:-
      ಸಾಮಾನ್ಯ ಚರ್ಮ ಸಣ್ಣ ಅಥವಾ ಮಧ್ಯಮ ಗಾತ್ರದ ಸೂಕ್ಷ್ಮರಂಧ್ರವುಳ್ಳಾದಾಗಿದ್ದು, ನಯವಾದ ಸ್ಪರ್ಶವನ್ನು ಹೊಂದಿದೆ. ಈ ವಿಧದ ತ್ವಚೆಯೂ ಒಣ ತ್ವಚೆ ಮತ್ತು ಎಣ್ಣೆ ತ್ಚಚೆ‌ಗಿಂತ ಭಿನ್ನ ಗುಣವುಳ್ಳದಾಗಿದ್ದು ಈ ವಿಧದ ತ್ವಚೆಯೂ ಕೇವಲ ಹವಾಗುಣ ಬದಲಾವಣೆಗೆ ಸಂಬಂಧಿಸಿದ ಸೋಂಕುಗಳಿಗೆ ತುತ್ತಾಗುತ್ತದೆ. ಈ ಸಮಸ್ಯೆಗೆ ಸಾಮಾನ್ಯ-ತ್ವಚೆ- ಆರೈಕೆಗಳಾದ ಶುದ್ಧೀಕರಣ, moisturizer ಮತ್ತು ಹವಮಾನಕ್ಕೆ ತಕ್ಕಂತೆ ಸ್ಪಾಟ್ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.
ಒಣ ತ್ವಚೆ:-
      ಒಣ ಚರ್ಮವು ಸಾಮಾನ್ಯವಾಗಿ ತುಂಬಾ ಬಿಗಿಯಾಗಿರುವಂತೆ ಅನುಭವವಾಗುತ್ತದೆ ಮತ್ತು ನೋಡಲು ತೆಳುಪದರ / ಚಿಪ್ಪುಗಳುಳ್ಳ ಮತ್ತು ಹೆಚ್ಚಿನ ಭಾಗದಲ್ಲಿ ತ್ವಚೆ ಕೆಂಪಾಗಿರುತ್ತದೆ. ಒಣ ತ್ವಚೆಯೂ ಸಾಮಾನ್ಯವಾಗಿ ದೇಹದಲ್ಲಿನ ನೀರಿನಂಶದ (hydration) ಕೊರತೆಯಿಂದಾಗಿ ಉಂಟಾಗುತ್ತದೆ; ಆದ್ದರಿಂದ, ಶುಷ್ಕ-ತ್ವಚೆಯ ಆರೋಗ್ಯಕ್ಕಾಗಿ ನಿಯಮಿತ ಸ್ವಚ್ಚತೆ, ದಿನಂಪ್ರತಿ ಮಾಯಿಶ್ಚರೈಸರ್ ಮತ್ತು ನೈಟ್ ಕ್ರೀಮ್ ಬಳಸಿ ಮುಖಕ್ಕೆ ಆಳವಾದ ಮಸಾಜ್ ನ ಅಗತ್ಯವಿರುತ್ತದೆ
ತೈಲ ತ್ವಚೆ:-
      ಎಣ್ಣೆಯುಕ್ತ ತ್ಚಚೆಯೂ ಹೊಳೆಯುವುದರ ಜೊತೆಗೆ ಸ್ಪರ್ಶಸುವಾಗ ಸ್ವಲ್ಪ ತೇವವಾಗಿರುತ್ತದೆ. ಎಣ್ಣೆ ತ್ವಚೆಯಲ್ಲಿ ಹೆಚ್ಚಿನ ರಂಧ್ರಗಳನ್ನು ಕಾಣಬಹುದು. ಇದು ತ್ವಚೆಯು ಕ್ಷೀಣತೆಗೆ ಕಾರಣವಾಗುತ್ತದೆ. ಎಣ್ಣೆಯುಕ್ತ ತ್ವಚೆಯ ಆರೋಗ್ಯಕ್ಕಾಗಿ ಶುದ್ಧೀಕರಣ, ಟೋನಿಂಗ್, ಪಿರಿಯಡಿಕ್ ಎಕ್ಸ್ಫಾಲಿಯೇಶನ್, ಸ್ಪಾಟ್ ಟ್ರೀಟ್ಮೆಂಟ್, ಮತ್ತು ಲೋಷನ್ ಮತ್ತು ಸಿರಮ್ ಜೊತೆಗೆ light moiserize ಮಾಡಿದರೆ ಉತ್ತಮ.
ಮಿಶ್ರ ತ್ವಚೆ:-
       ಮಿಶ್ರ ತ್ವಚೆಯೂ ವಿವಿಧ ಚರ್ಮದ ಮಿಶ್ರಣವಾಗಿದೆ. ನೀವು ಮಿಶ್ರ ತ್ವಚೆವನ್ನು ಹೊಂದಿದ್ದರೆ, ನಿಮ್ಮ ಮೂಗು, ಗಲ್ಲದ ಮತ್ತು ಹಣೆಯ ಪ್ರದೇಶದ ಸುತ್ತಲೂ ಎಣ್ಣೆಯುಕ್ತವಾಗಿರಲು ಮತ್ತು ನಿಮ್ಮ ಗಲ್ಲ ಸುತ್ತಲೂ ಒಣ ತ್ವಚೆ ಹೊಂದಿರುತ್ತದೆ. ನಿಮ್ಮ ಉಳಿದ ತ್ವಚೆಯೂ ತುಲನಾತ್ಮಕವಾಗಿ ಸಾಮಾನ್ಯವಾಗಿದೆ. ನೀವು ಮಿಶ್ರ ತ್ವಚೆಯನ್ನು ಹೊಂದಿದ್ದರೆ, ನಿಮ್ಮ ದಿನನಿತ್ಯದ ಆರೈಕೆಯಾದ ಶುದ್ಧತೆಯ ಜೊತೆಗೆ ಒಣಚರ್ಮಕ್ಕೆ ಚಿಕಿತ್ಸೆ ನೀಡಬೇಕು. ಕಾಲಕಾಲಕ್ಕೆ Moischarization ಮತ್ತು spot treatment ಮಾಡುತ್ತಿರಬೇಕು.
ಸೂಕ್ಷ್ಮ ತ್ವಚೆ:-
       ಸೂಕ್ಷ್ಮ ತ್ವಚೆಯೂ ಹೆಚ್ಚು ಸುಲಭವಾಗಿ ಪೀಡಿತವಾಗುತ್ತದೆ ಮತ್ತು ಚರ್ಮದ ಉರಿಯೂತ ಹೆಚ್ಚಾಗಿರುತ್ತದೆ. ಕೆಲವು ಸೌಂದರ್ಯವರ್ಧಕಗಳು, ವಾತಾವರಣ ಏರುಪೇರು, ಬದಲಾದ ಪರಿಸರ ಮತ್ತು ಪೌಷ್ಟಿಕಾಂಶದ ಏರುಪೇರು ಮುಂತಾದುವುಗಳು ಉರಿಯಂತಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನೀವು ಸೂಕ್ಷ್ಮವಾದ ತ್ವಚೆಯನ್ನು ಹೊಂದಿದ್ದರೆ, ಸೂಕ್ಷ್ಮ ತ್ವಚೆಗೆ ಮಾತ್ರ ಸೂಕ್ತವಾದ ಕೆಲವು ವಿಧಾನದಲ್ಲಿ ನಿರಂತರ ಶುದ್ಧೀಕರಿಸುವ, moisturizer ಮತ್ತು ಸ್ಪಾಟ್ ಚಿಕಿತ್ಸೆಯನ್ನು ಬಳಸಿ ತ್ವಚೆಯ ಆರೋಗ್ಯವನ್ನು ಕಾಪಾಡಬಹುದು.
ಸಲಹೆ: ನೀವು ಸೂಕ್ಷ್ಮ ತ್ವಚೆಯನ್ನು ಹೊಂದಿದ್ದರೆ ಅಥವಾ ಚರ್ಮದ ಊತ ಅಥವಾ ಅಲರ್ಜಿಯು ಅತಿಯಾಗಿದ್ದರೆ ಇದು ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಕೂಡಲೇ ಇಂತಹ ಲಕ್ಷಣಗಳು ಆಗಾಗ ಕಂಡುಬರುತ್ತಿದ್ದರೆ "ಪ್ಯಾಚ್ ಅಲರ್ಜಿ ಪರೀಕ್ಷೆ" ಯನ್ನು ಮಾಡುವುದು ಒಳ್ಳೆಯದು. ಮನೆಯಲ್ಲೆ ಇಂತಹ ಸೋಂಕನ್ನು ಪರೀಕ್ಷೆ ಮಾಡಲು ನಿಮ್ಮ ಮುಂಗೈಗೆ ಸೌಂದರ್ಯ ವರ್ಧಕ (moisturizer, Make up, cleanser) ತೆಳುವಾಗಿ ಹಚ್ಚಿ ಬ್ಯಾಂಡೇಜ್ ನಿಂದ ಅದನ್ನು ಕಟ್ಟಿ. ಸೌಂದರ್ಯವರ್ಧಕ ದಿನನಿತ್ಯ ಅಂದರೆ, ಸುಮಾರು 3 ರಿಂದ 5 ದಿನಗಳವರೆಗೆ ಮುಂದುವರೆಸಬೇಕು. ತ್ವಚೆಯ ಉರಿಯೂತ ಅಥವಾ ಯಾವುದೇ ಚಿಹ್ನೆಗಳು-ಅಂದರೆ, ಕೆಂಪು, ತುರಿಕೆ, ಶುಷ್ಕತೆಯಿಲ್ಲದೆ, ಹಲವಾರು ದಿನಗಳ ಬಳಿಕ ನಿಮ್ಮ ತ್ವಚೆಯು ಸಂಪೂರ್ಣವಾಗಿ ಸಾಮಾನ್ಯವಾಗಿದ್ದರೆ, ನಿಮ್ಮ ಮುಖದ ಮೇಲೆ ಕಾಸ್ಮೆಟಿಕ್ ನ್ನು ಬಳಸುವುದು ಸುರಕ್ಷಿತವಾಗಿರುತ್ತದೆ.
ನಿಮ್ಮ ತ್ವಚೆ ಸೂಕ್ಷ್ಮ ಮತ್ತು ಸೌಮ್ಯವಾಗಿರುತ್ತದೆ:
ಅತಿಯಾಗಿ ನಿಮ್ಮ ತ್ವಚೆಯನ್ನು ಉಜ್ಜಿಕೊಳ್ಳಬೇಡಿ, ಎಳೆಯಬೇಡಿ ಅಥವಾ ಚರ್ಮವನ್ನು ಬಿಗಿ ಮಾಡಿ ಉಜ್ಜಬೇಡಿ. ಕಣ್ಣಿನ ರೆಪ್ಪೆಗಳ ತೆಳ್ಳಗಿನ ತ್ವಚೆಯ ಕಡೆ ವಿಶೇಷವಾಗಿ ಜಾಗರೂಕರಾಗಿರಿ. ಅವೈಜ್ಞಾನಿಕ ವಿಧಾನದ ಪುನರಾವರ್ತಿಸುವಿಕೆಯಿಂದ ತ್ವಚೆಯ ಸ್ಥಿತಿಸ್ಥಾಪಕತ್ವ ಮತ್ತು ತ್ವಚೆಯ ಸ್ವ-ರಕ್ಷಣೆ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು ಮತ್ತು ಸಡಿಲ ಮತ್ತು ನಿಶಕ್ತ ತ್ವಚೆಗೆ ಕಾರಣವಾಗಬಹುದು.

ನಿಮ್ಮ ತ್ವಚೆಯನ್ನು ಹಿಸುಕಿ ಯಾವುದೇ ಚಿಕಿತ್ಸೆ ಬೇಡ;
       ಮೊಡವೆಗಳನ್ನು ಹಿಸುಕುವುದು ಮತ್ತು ಚುಚ್ಚುವುದು ಮಾಡಬಾರದು. ಇದರಿಂದ ನಿಮ್ಮ ತ್ವಚೆಯ ಬಣ್ಣ ಬದಲಾಗುವುದರೊಂದಿಗೆ ಕಪ್ಪಾದ ಕಲೆಗಳು ಕಾಣಿಸುತ್ತವೆ. ತ್ವಚೆಯ ಸೋಂಕಿಗೆ ಒಳಗಾಗಿ ಕಲೆಗೆ ತುತ್ತಾದರೆ ಬಿಳಿ ತ್ವಚೆಯ ವ್ಯಕ್ತಿಗಳಲ್ಲಿ ಕೆಂಪಾದ ಬಣ್ಣದ ಕಲೆಗಳಾಗಿ ಬದಲಾಗುತ್ತದೆ.ಕಪ್ಪು ತ್ವಚೆಯ ಜನರು ಕಡು ಕಪ್ಪು ಕಲೆಯಾಗಿ ಶಾಶ್ವತವಾಗಿ ಉಳಿದುಬಿಡುತ್ತದೆ. ಇಂತಹ ಕೆಟ್ಟ ಕಲೆಯು ತ್ವಚೆಯಲ್ಲಿ ಕಾಣಿಸಿಕೊಳ್ಳುವುದರಿಂದ ತ್ವಚೆ ಮತ್ತು ಸ್ನಾಯು ಭಾಗದಲ್ಲಿರುವ ಜೀವಕೋಶಗಳಿಗೆ ಹಾನಿಯಾಗಬಹುದು ಮತ್ತು ಕಲೆಗಳು ಶಾಶ್ವತ ಖಿನ್ನತೆಗೆ ಕಾರಣವಾಗಬಹುದು.

ನಿಮ್ಮ ಮುಖವನ್ನು ಮುಟ್ಟಬೇಡಿ ತಿಕ್ಕಿಕೊಳ್ಳಬೇಡಿ :
      ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮದವರಿಗೆ ಇದು ಮುಖ್ಯವಾಗಿದೆ. ನಿಮ್ಮ ಕೈಯಿಂದ, ಸೆಲ್ ಪೋನ್, ಟೋಪಿ , ಹೆಲ್ಮೆಟ್ ಮುಂತಾದವುಗಳನ್ನು ಸದಾ ಸ್ಪರ್ಶಿಸುವ ಕೈಗಳಲ್ಲಿ ಲೆಕ್ಕವಿಲ್ಲದಷ್ಟು  ಬ್ಯಾಕ್ಟೀರಿಯಾಗಳಿರುತ್ತವೆ. ನಿಮ್ಮ ಮುಖಕ್ಕೆ ಇದು ವರ್ಗಾವಣೆಯಾಗಬಹುದು. ಮುಖದಲ್ಲಿರುವ ತ್ವಚೆಯ ರಂಧ್ರಗಳಲ್ಲಿ ಕೊಳಕು ಉಳಿದುಬಿಡಬಹುದು. ಇದರಿಂದಾಗಿ ಮುಖದ ತ್ವಚೆಯ ಹಿಗ್ಗುವಿಕೆ, ಉರಿಯೂತ ಮತ್ತು ಮೊಡವೆ-ರೀತಿಯ ಗಾಯಗಳಿಗೆ ಕಾರಣವಾಗುತ್ತದೆ. ತೊಳೆಯದ ಕೂದಲು, ಮೇಕ್ಅಪ್ ಅಪ್ಲಿಕೇಷನ್ ಕುಂಚಗಳು, ಶಾಂಪೂ ಮತ್ತು ಹೇರ್ ಕಂಡಿಷನರ್, ಉಳಿದು ಹೋದ ಮೇಕಪ್ ಗಳು, ತೈಲಗಳು ಮತ್ತು ರಂಧ್ರ-ಮುಚ್ಚುವಿಕೆಯ ವಸ್ತುಗಳು ಮುಂತಾದುವುಗಳನ್ನು ಮುಂಜಾರೂಕತೆಯಿಂದ ಪರಿಗಣಿಸಿ ಸ್ವಚತೆ ಮತ್ತು ವೈಜ್ಞಾನಿಕ ಚಿಕಿತ್ಸೆಯ ಕಡೆಗೆ ಗಮನಕೊಡಬೇಕು

ಸಲಹೆ : ನಿಮ್ಮ ಮುಖದ ತ್ವಚೆಯ ಮೇಲ್ಮೈಯಿಂದ ಯಾವುದೇ ಕೊಳಕು ಮತ್ತು ಸಾಮಾನ್ಯ ಸ್ವಚತೆಯಿಂದ ಹೋಗದಿರುವ ಕೊಳಕನ್ನು ತೆಗೆದುಹಾಕಲು ಶಾಂಪೂಯಿಂಗ್ ಮತ್ತು ಕಂಡೀಷನಿಂಗ್ ಮಾಡಿ ನಂತರ ನಿಮ್ಮ ಮುಖವನ್ನು ತೊಳೆಯಬೇಕು. ಮುಖ್ಯವಾಗಿ ಮೊದಲು ನಿಮ್ಮ ಮುಖವನ್ನು ಸ್ಪರ್ಶಿಸುವ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನೀವು ಮೇಕಪ್ ಮಾಡುವ ಪ್ರಕ್ರಿಯೆಯಲ್ಲಿ ಶುದ್ಧೀಕರಣವನ್ನು ಸಹ ಪರಿಗಣಿಸಬೇಕು. ಇಲ್ಲವಾದರೆ ತೈಲ-ಹೀರಿಕೊಳ್ಳುವ ಕಾಗದ ಕೂಡಾ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಇಂತಹ ಕಾಗದವನ್ನು ಒಮ್ಮೆ ಮಾತ್ರ ಬಳಸಿ, ಇಲ್ಲದಿದ್ದರೆ ನೀವು ತೈಲ ಮತ್ತು ಮಣ್ಣನ್ನು ನಿಮ್ಮ ಮುಖಕ್ಕೆ ಮತ್ತೆ ಹಚ್ಚುವ ಕೆಲಸ ಮಾಡಿ ಅಪಾಯಕ್ಕೊಳಗಾಗುತ್ತೀರಿ.

Cleanser , Toner , moisturizers :
Cleanser ಶುದ್ಧೀಕರಣ:
ತೀವ್ರ ಅಥವಾ ಸೂಕ್ಷ್ಮ ಶುದ್ಧೀಕರಣ ಉತ್ಪನ್ನಗಳು (CeraVe ಹೈಡ್ರೇಟಿಂಗ್ ಕ್ಲೀನರ್ , ಸೆಟಾಫಿಲ್, ನ್ಯೂಟ್ರೋಜೆನಾ ಮೇಕಪ್ ರಿಮೋವರ್ ಕ್ಲೀನ್ಸಿಂಗ್ ಟೌಲೆಟ್ಗಳು, ನಿಯೋಕಟಿಸ್ ನಿಯೋ-ಕ್ಲೆನ್ಸ್ ಜೆಂಟಲ್ ಸ್ಕಿನ್) ಹೆಚ್ಚುವರಿ ತೈಲವನ್ನು ತೆಗೆದುಹಾಕಿ ಮತ್ತು ತೀವ್ರವಾದ ರಾಸಾಯನಿಕಗಳನ್ನು ಬಳಸದೆ ಆರೋಗ್ಯಕರ ತ್ವಚೆಯ ಉತ್ತೇಜನಕ್ಕೆ ಕಾರಣವಾಗುತ್ತದೆ. ತ್ವಚೆಯನ್ನು ಶುಚಿಗೊಳಿಸಿದ ನಂತರ ನಿಮ್ಮ ತ್ವಚೆ ಬಿಗಿಯಾಗಿ, ಒಣಗಿದ ಅಥವಾ ನೋಯುತ್ತಿರುವಂತಿದ್ದರೆ, ನಿಮ್ಮ ತ್ವಚೆಗೆ ಪೇಸ್ ವಾಶ್ ತುಂಬಾ ಕಠಿಣವಾಗಿದೆ ಎಂದರ್ಥ. ತೈಲ ಮತ್ತು ಮೊಡವೆ ಪೀಡಿತ ತ್ವಚೆಯು ಲಿಪೊಫಿಲಿಕ್ (ತೈಲವನ್ನು ಕರಗಿಸುತ್ತದೆ) ಮತ್ತು ರಂಧ್ರಗಳಲ್ಲಿ (ನ್ಯೂಟ್ರೋಜೆನಾ ಆಯಿಲ್-ಫ್ರೀ ಮೊಡವೆ ವಾಶ್) ಒಳಸೇರಿರುವ ಪೊರೆಯ ಕೊಳಕನ್ನು ಸ್ಯಾಲಿಸಿಲಿಕ್ ಆಮ್ಲದೊಂದಿಗಿನ ಶುದ್ಧೀಕರಣದಿಂದ ಹೊಗಲಾಡಿಸಿ ಪ್ರಯೋಜನ ಪಡೆಯಬಹುದು. ನಿಮ್ಮ ಮುಖದ ಮೇಲೆ ಹಸಿಯಾಗಿರುವ ಮೊಡವೆ ಗಾಯಗಳನ್ನು ನಿರ್ದಿಷ್ಟ ಸಮಯದವರೆಗೆ ನಿಗಾವಹಿಸಬೇಕು. ಅತಿಯಾದ ಬೆಂಜಾಯ್ಲ್ ಪೆರಾಕ್ಸೈಡ್-ಹೊಂದಿರುವ ಉತ್ಪನ್ನಗಳನ್ನು ಬಳಸಬಾರದು. (ಕ್ಲೀನ್ & ಕ್ಲೀಯರ್ ನೊಕ್ಸಮೆಮಾ, ಆಕ್ಸಿ, ಅಥವಾ ಕ್ಲಿಯಸಾಸಿಲ್ ) ಈ ಉತ್ಪನ್ನಗಳು ತುಂಬಾ ಪರಿಣಾಮಕಾರಿಯಾಗಿರುತ್ತದೆ ಮತ್ತು ತ್ವಚೆಯ ನೈಸರ್ಗಿಕ ಎಣ್ಣೆಯಂಶವನ್ನು ತೆಗೆದುಹಾಕುತ್ತವೆ, ಒಣ ತ್ವಚೆಯನ್ನಾಗಿ ಬದಲಾಯಿಸುತ್ತದೆ ಮತ್ತು ತ್ಚಚೆಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸೂಕ್ಷ್ಮ ತ್ಚಚೆಗೆ ನಯವಾದ ಶುದ್ಧೀಕರಣದ ಅಗತ್ಯವಿರುತ್ತದೆ. ತ್ವಚೆಯ ಆರೋಗ್ಯಕರ ಬೆಳವಣಿಗೆಗೆ ನೈಸರ್ಗಿಕ ಮೂಲಿಕೆಗಳನ್ನು ಒಳಗೊಂಡ ಪೇಸ್ ವಾಶ್ ಬಳಸಬೇಕು (CeraVe Hydrating Cleanser, Cetaphil, Dove, SkinCeuticals Gentle Cleanser). ಆಯಸ್ಸಾದ ತ್ವಚೆ, ಕಾಂತಿರಹಿತ ಮತ್ತು ಅತಿ ಕೆರಟೀನೊಸಿಟ್ಸ್ ಲಕ್ಷಣಗಳನ್ನು ಹೊಂದಿರುವ ತ್ವಚೆಗೆ ರಾಸಾಯನಿಕ ಅಂಶಗಳಾದ ಅಲ್ಪಾ ಹೈಡ್ರೋಕ್ಸೈಡ್ಸ್, ಗ್ಲಿಕೊಲಿಕ್ ಆ್ಯಸಿಡ್ ಅಂಶವಿರುವ cleanser ಉತ್ಪನ್ನ (SkinCeuticals LHA Cleansing Gel) ಗಳನ್ನು
ಬಳಸಬೇಕು.
ಪೇಸ್ ವಾಷ್ ಗೆ ಉತ್ತಮ ವಿಧಾನ:
• ಮುಖದ ತ್ವಚೆ ಬ್ಯಾಕ್ಟೀರಿಯಾ ಸೋಂಕಿಗೆ ಬಲಿಯಾಗದಂತೆ, ಮೊದಲು ನಿಮ್ಮ ಕೈಗಳನ್ನು ತೊಳೆದುಕೊಳ್ಳಬೇಕು.
• ಮುಖದಲ್ಲಿ ಆಳವಾದ ತ್ವಚೆಯನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ನಂತರ ಕ್ಲೀನ್ಸರ್ ಹಚ್ಚಿ ಮೇಲ್ಮುಖವಾಗಿ ಪೇಸ್ ಮಸಾಜ್
ಮಾಡಬೇಕು. ಜೊತೆಗೆ ವೃತ್ತಾಕಾರವಾಗಿ ನಯವಾಗಿ ಮಸಾಜ್ ಮಾಡಬೇಕು. ವಿಶೇಷವಾಗಿ ಸಾಲಿಸಿಕ್ ಮತ್ತು ಗ್ಲಿಕೊಲಿಕ್ ಆಮ್ಲಗಳ
ಉತ್ಪನ್ನಗಳನ್ನು ವಾಷ್ ಗೆ ಬಳಸಿ ಒಂದು ನಿಮಿಷ ಅಥವಾ ಸ್ವಲ್ಪ ನಿಮಿಷಗಳ ಕಾಲ ಬಿಟ್ಟರೆ ಮೇಕಪ್, ದೂಳು ಮತ್ತು ಎಣ್ಣೆ ಜಿಡ್ಡು ಕರಗಿ
ತ್ವಚೆ ಸ್ವಚ್ಚವಾಗುತ್ತದೆ.
• ಮುಖದ ಮೇಲೆ ಹಚ್ಚಿರುವ ಪೇಸ್ ವಾಶ್ ಕ್ರೀಮ್ ಅಥವಾ ಜೆಲ್ ನ್ನು ಹತ್ತಿ ಬಟ್ಟೆ, ಒಗೆದ ಬಟ್ಟೆ ಅಥವಾ ಬಿಸಿ ನೀರಿನಲ್ಲಿ ಮುಖ
ತೊಳೆಯಬೇಕು. ಮುಖಕ್ಕೆ ಹಚ್ಚಿದ ಉತ್ಪನ್ನಗಳನ್ನು ಸಂಪೂರ್ಣ ಮುಖ ತೊಳೆಯಬೇಕು.

• ತ್ವಚೆಯ ಶುದ್ಧೀಕರಣದ ಕೊನೆಯದಾಗಿ ನೀರಿನೊಂದಿಗೆ ರೋಸ್ ವಾಟರ್ ಬಳಸಿ ತ್ವಚೆ ರಂಧ್ರಗಳನ್ನು ಚೆನ್ನಾಗಿ ಸ್ವಚ್ಚ ಮಾಡಬೇಕು. ಈಗ
ಮುಖವು ಕಾಂತಿಯುಕ್ತವಾಗಿ ಮತ್ತು ಮುಖದ ಕೆಂಪು ಬಣ್ಣ ಕಡಿಮೆಯಾಗುತ್ತದೆ.
• ಮುಖವನ್ನು ಬಟ್ಟೆ ಅಥವಾ ಪೇಪರ್ ಟವಲ್ ನಿಂದ ನಿಧಾನವಾಗಿ ಒತ್ತಿ ಮುಖವನ್ನು ಒರೆಸಿ , ಆದರೆ ಜೋರಾಗಿ ತಿಕ್ಕಿ ಒರೆಸಬೇಡಿ.
ಸಲಹೆ : ಸಂಪೂರ್ಣ ಮೇಕಪ್ ತೆಗೆಯದೇ ರಾತ್ರಿ ಮಲಗಬೇಡಿ. ಮೇಕಪ್ ತೊಳೆಯದೆ ಮಲಗಿದರೆ ತ್ವಚೆಗೆ ಅಪಾಯವಾಗುತ್ತದೆ ಮತ್ತು ತ್ವಚೆಯ ರಂಧ್ರದೊಳಗೆ ಕೊಳಕು ಸಂಗ್ರಹವಾಗಿರುತ್ತದೆ. ರಾತ್ರಿ ಮೇಕಪ್ ನ ಅನಿವಾರ್ಯ ಕಾರಣಕ್ಕೆ ಕ್ಲೀನಿಂಗ್ ಮಾಡಲಾಗದಿದ್ದರೆ ನ್ಯುಟ್ರೋಜೆನಾ ಮೇಕಪ್ ರಿಮೂವರ್ ಕ್ಲಿನ್ಸಿಂಗ್ ಟವಲ್ ಬಳಸಿ ಮಾಡಬಹುದು.
Toning ಟೋನಿಂಗ್ (ಮುಖದ ಛಾಯೆಯ ವರ್ಧನೆ) :
ಕ್ಲೀನ್ಸಿಂಗ್ ನ ಕೆಲವು ನಿಮಿಷಗಳ ನಂತರ ನಿಮ್ಮ ಮುಖವನ್ನು Tone ಮಾಡಬೇಕು. ಟೋನರ್ ನಿಮ್ಮ ತ್ವಚೆಯ pH level ನ್ನು ತಟಸ್ಥವಾಗಿಡಲು ಸಹಕರಿಸುತ್ತದೆ‌. ಕ್ಲಿನ್ಸಿಂಗ್ ನಿಂದ ಉಂಟಾಗುವ ಆಮ್ಲೀಯತೆಯನ್ನು ಸರಿದೂಗಿಸುತ್ತದೆ. ತ್ವಚೆಯ pH level ಸಾಮಾನ್ಯವಾಗಿದ್ದರೆ ನಿಮ್ಮ ತ್ವಚೆಯ ಮರುಬೆಳವಣಿಗೆಗೆ ವೇಗವಾಗಿ ಆಗುತ್ತದೆ. ಸೂಕ್ಷಾಣು ಜೀವಿಗಳು ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಬಲ್ಲದು. ಇಷ್ಟೇ ಅಲ್ಲದೆ ಚರ್ಮ ಕೆಂಪಾಗುವುದು ಮತ್ತು ಉರಿಯೂತದಂತಹ ಸಮಸ್ಯೆಗಳನ್ನು ಹತೋಟಿಯಲ್ಲಿಡುತ್ತದೆ.
ಸಲಹೆ: ಟೋನರ್ ಮಾಡುವ ಸಂದರ್ಭದಲ್ಲಿ ಹೆಚ್ಚು ತಿಕ್ಕಿ ಉಜ್ಜ ಬೇಡಿ .
Moisturizing (ತ್ವಚೆಯ ತೇವಗೊಳಿಸುವಿಕೆ):
        ಪೇಸ್ ವಾಷ್ / ಟೋನಿಂಗ್ ಮಾಡಿದ ನಂತರ ಮಾಯಿಸ್ಚರೈಜೆಷನ್ ಮಾಡಬೇಕು. ತ್ವಚೆಯ ತೇವಗೊಳಿಸುವ ಪ್ರಕ್ರಿಯೆಯು ತ್ವಚೆಯ ಆರೈಕೆಯ ಮಹತ್ವದ ಭಾಗವಾಗಿದೆ. ಮುಖ್ಯವಾಗಿ ವಯಸ್ಸಾದವರ ತ್ವಚೆ ( 35 ವರ್ಷಗಿಂತ ಹೆಚ್ಚು ವಯಸ್ಸಾದ ವ್ಯಕ್ತಿಗಳ ತ್ವಚೆ) ಮಾಯಿಸ್ಚರೈಜ್ ಬಹಳ ಕ್ಲಿಷ್ಟಕರವಾಗಿದೆ. ಇದಕ್ಕಾಗಿ ಉತ್ತಮ ಮಾಯಿಸ್ಚರೈಸರರ್ ಬಳಸಬೇಕು. ಉತ್ಪನ್ನಗಳ ಆಧಾರ ( ಕ್ರೀಮ್, ಜೆಲ್, ಒಯಿಂಟ್ಮೆಂಟ್) ಮತ್ತು ಉತ್ಪನ್ನದಲ್ಲಿರುವ ಮೂಲಿಕೆಗಳು , ಈ ಎರಡು ಅಂಶಗಳನ್ನು ಗಮನದಲ್ಲಿರಿಸಬೇಕು. ಸಾಮಾನ್ಯವಾಗಿ ointments (ಎಣ್ಣೆ ರೂಪದ ಸೌಂದರ್ಯ ಉತ್ಪನ್ನ ) ಗಳು ತ್ವಚೆಯ ತೇವಗೊಳಿಸುವಿಕೆಗೆ ಕ್ರೀಮ್ ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಲೋಷನ್ ಗಿಂತ ಕ್ರೀಮ್ ಮಾಯ್ಚರೈಸರರ್ ಉತ್ತಮ. ಜೆಲ್ ಉತ್ಪನ್ನಗಳು ತ್ವಚೆ ತೇವಗೊಳಿಸಲು ಅಷ್ಟು ಪರಿಣಾಮಕಾರಿಯಲ್ಲದಿದ್ದರೂ ಎಣ್ಣೆಯುಕ್ತ/ಮೊಡವೆ ತ್ವಚೆಗೆ ಇದು ಉತ್ತಮ. ಕ್ರೀಮ್ ಮತ್ತು ಒಯಿಂಟ್ಮ್ಮೆಂಟ್ ಉತ್ಪನ್ನಗಳು ಸೂಕ್ಷ್ಮ ತ್ವಚೆ/ ಒಣ ತ್ವಚೆಗೆ ಮಾಯಿಸ್ಚರ್ ಮಾಡಲು ಉತ್ತಮ, ಮತ್ತು light ಸೆರಮ್ಸ್ ಸಾಮಾನ್ಯ ತ್ವಚೆ/ಎಣ್ಣೆಯುಕ್ತ ತ್ವಚೆಗೆ ಅತ್ಯುತ್ತಮ ಮಾಯಿಸ್ಚರೈಸರರ್ ಆಗಿ ಕೆಲಸ ಮಾಡುತ್ತದೆ. ಬಹು ಉಪಯೋಗಿ ಮಾಯಿಸ್ಚರೈಸರ್ ಉತ್ಪನ್ನಗಳನ್ನು ಖರೀದಿಸಿ. ಎಲ್ಲ ಸ್ವರೂಪದ ತ್ವಚೆಗೆ ಸೂಕ್ತವಾದ ಮತ್ತು ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ, ಮೌಲ್ಯವರ್ಧಿತ ಗುಣಗಳುಳ್ಳ ಮಾಯ್ಚರೈಸರ್ ಉತ್ಪನ್ನಗಳನ್ನು ಬಳಸಿ ಜೊತೆಗೆ ಅಧಿಕ ಲಾಭ ಪಡೆಯಿರಿ.
ದಿನದ ಮಾಯ್ಚರೈಸರ್:
UV ಕಿರಣಗಳ ತೀವ್ರತೆ, ಪರಿಸರದ ಪ್ರಭಾವ,ಕಳಪೆ ಆಹಾರ ಮತ್ತು ಕಾಲಾನುಕ್ರಮದಲ್ಲಿ ವಯಸ್ಸಾದ ತ್ವಚೆಯನ್ನುಂಟು ಮಾಡುವ ಆಮ್ಲೀಯತೆ. ಹಾನಿಯನ್ನು ಎದುರಿಸಲು ಆಮ್ಲ ನಿರೋಧಕ ಮತ್ತು ನಿಯಂತ್ರಕಗಳನ್ನು ಬಳಸಿ. ವಿಟಮಿನ್ ಸಿ (ಆಸ್ಕೋರ್ಬಿಕ್ ಆಸಿಡ್), ವಿಟಮಿನ್ ಇ, ಫೆರುಲಿಕ್ ಆಸಿಡ್ (ಸ್ಕಿನ್ಕ್ಯೂಟಿಕಲ್ಸ್ ಸಿ ಇ ಫೆರುಲಿಕ್, ಫ್ಲೋರೆಟಿನ್ ಸಿಎಫ್, ಒಬಾಗಿ  ಪ್ರೊಫೆಷನಲ್ ಸಿ-ಸೆರಮ್, ನಿಯೋಕಟಿಸ್ ರಿಯಾಕ್ಟಿವ್), ರೆಸ್ವೆರಾಟ್ರೊಲ್ (ಸೀಎಸ್ಡರ್ಮಾ ರೆಸ್ವೆರಾಡರ್ಮ್ ಆಂಟಿಒಎಕ್ಸ್), ಗ್ರೀನ್ ಟೀ ಸಾರ. ಮುಂತಾದುವುಗಳನ್ನು ಆಯ್ದುಕೊಳ್ಳಬಹುದು.
ಸಲಹೆ: ವಿಟಮಿನ್ C. ಯೂ ಒಂದು ಆಮ್ಲನಿರೋಧಕ ಮತ್ತು ಕಾಲಜನ್ ಸಂಶ್ಲೇಷಣೆಗೆ ಉತ್ತೇಜನ ನೀಡುತ್ತದೆ. ಕಾಲಜನ್ ಸಂಶ್ಲೇಷಣೆಯೂ ತ್ವಚೆಯ ಮೆಲನಿನ್ ಏರುಪೇರನ್ನು (Sunspot or sun burn) ನಿರ್ಬಂಧಿಸುತ್ತದೆ. ಇದೊಂದು ತ್ವಚೆಯ ಆರೈಕೆಯ ಸಾಂಪ್ರದಾಯಿಕ ವಿಧಾನವೆನ್ನಬಹುದು. ಸೌಂದರ್ಯ ಉತ್ಪನ್ನ (ಕ್ರೀಮ್ ಮತ್ತು ಸೆರಮ್ ) ಗಳು ನೀರಿನಂಶ, ಉಷ್ಣಾಂಶ ಮತ್ತು ಬೆಳಕಿನ ತೀವ್ರತೆಗೆ ಒಳಗಾದರೆ ವಿಟಮಿನ್ C ಸ್ಥಿರವಾಗಿರುವುದಿಲ್ಲ ಮತ್ತು ಯಾವುದೇ ಪ್ರಭಾವವಿರುವುದಿಲ್ಲ. ಅತ್ಯುತ್ತಮ ಪ್ರಯೋಜನಕ್ಕಾಗಿ ನೀರಿನಂಶ ರಹಿತ ವಿಟಮಿನ್ C ಸೆರಮ್ ಮತ್ತು ಜೆಲ್ ನ್ನು ಖರೀದಿಸಿ ಬಳಸಿ.ವಿಟಮಿನ್ C ಉತ್ಪನ್ನದ ಸುರಕ್ಷತೆಗೆ ಪ್ರಿಡ್ಜ್ ನ ಡಾರ್ಕ್ ಸಂಗ್ರಹಕದಲ್ಲಿ ಇಡಿ.
ರಾತ್ರಿ ಸಮಯ ದ ಮಾಯ್ಚರೈಸರ್ :
      ರಾತ್ರಿ ಸಮಯ ಮಾಯ್ಚರೈಸರ್ ಜೊತೆಗೆ ತ್ವಚೆ ಆರೋಗ್ಯ ಮತ್ತು ತ್ವಚೆಯ ಮರು ಬೆಳವಣಿಗೆಗೆ ಆದ್ಯತೆ ನೀಡಿ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬೇಕು.ಎಲಾಸ್ಟಿಕ್ ಪೈಬರ್ ಮತ್ತು ಕಾಲಜೆನ್ ಮರುವೃದ್ದಿ ಜೊತೆಗೆ ಉತ್ತೇಜನ ನೀಡಲು ಕಾಲಜೆನ್ ಉತ್ತೇಜಕ (Neocutis Bio Serum, Olay Regenerist line) ಉತ್ಪನ್ನಗಳು, ರೆಟಿನಾಯ್ಡ್ ಉತ್ಪನ್ನಗಳನ್ನು ಬಳಸಿ. ಮೊಡವೆ ನಿವಾರಣೆ ಮತ್ತು ವಯಸ್ಸಾದ ಚರ್ಮದ ಆರೈಕೆಗೆ ( RoC Retinol Correxion Night Cream, Neocutis Nouvelle Plus Retinol Correction Cream) ಉತ್ತಮ ದರ್ಜೆಯ ರೆಟಿನಾಯ್ಡ್ ಉತ್ಪನ್ನಗಳು, ತಾಜಾ ರೆಟಿನೊಲ್ ಮತ್ತು ತಜ್ಞರ ನಿರ್ದೇಶನದೊಂದಿಗೆ ಶಕ್ತಿಯುತ ರೆಟಿನೊಯಿಕ್ ಆ್ಯಸಿಡ್ ( ರೆಟಿನಾಲ್ ನ ಜೈವಿಕ ಶಕ್ತಿಗಿಂತ ರೆಟಿನೊಯಿಕ್ ಆ್ಯಸಿಡ್ ನ ಶಕ್ತಿ 100 ಕ್ಕೂ ಹೆಚ್ಚು ಪಟ್ಟು ಜಾಸ್ತಿಯಾಗಿರುತ್ತದೆ) ಆಯ್ಕೆ ಉತ್ತಮ. ಸಹಜ ಮತ್ತು ಸಮಾನ ಸುಂದರ ತ್ವಚೆಯ ಕಾಂತಿ ಹೆಚ್ಚಿಸಲು, ಕಪ್ಪು ಗೆರೆಯ ಹೊಗಲಾಡಿಸುವಿಕೆ, ಕಣ್ಣಂಚಿನ ಕಪ್ಪು ಕಲೆ ಮತ್ತು ಬೆಳಕಿನ ತೀವ್ರತೆಯಿಂದ ಉಂಟಾದ ಕಪ್ಪು/ಕೆಂಪು ಕಲೆಯ ಹೊಗಲಾಡಿಸುವಿಕೆ , ಹೊಸ ಕೊಲಜೆನ್ ಮತ್ತು ಎಲಸ್ಟಿಕ್ ಪೈಬರ್ ನ ಉತ್ತೇಜನ ಮುಂತಾದ ಪ್ರಯೋಜನಗಳಿವೆ ಎಂದು ಹಲವಾರು ವೈದ್ಯಕೀಯ ತಜ್ಞರ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಬಹಿರಂಗವಾಗಿದೆ.

 
✍: ವಿದ್ಯಾ ಪ್ರಕಾಶ್ ಭಂಡಾರಿ

Thursday, 15 April 2021

ದಿನನಿತ್ಯ ಜೀವನದಲ್ಲಿ ಮಾತಿನ ಮಹತ್ವ-ಸುಪ್ರೀತಾ ಭಂಡಾರಿ, ಸೂರಿಂಜೆ

         ಭೂಮಿ ಮೇಲಿರುವ ಕೋಟ್ಯಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುದರಲ್ಲಿ ಎರಡು ಮಾತಿಲ್ಲ. ಆ ದೇವರ ಅಪರೂಪದ ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಟಿ. ಮಾನವರಾದ ನಮಗೆ ಆಲೋಚನಾ ಶಕ್ತಿ ಇದೆ. ತರ್ಕಬದ್ಧವಾಗಿ ಯೋಚಿಸುವ ಹಾಗೂ ತನ್ನ ಭಾವನೆಗಳನ್ನು ಇತರರೊಡನೆ ವ್ಯಕ್ತಪಡಿಸುವ ಸಾಮರ್ಥವನ್ನು ಪಡೆದಿದ್ದೇವೆ ಭಾವನೆಗಳ ಅಭಿವ್ಯಕ್ತಿಗೆ ಮಾತು ಆ ದೇವರು ನಮಗಿತ್ತ ಅಪೂರ್ವ ಕೊಡುಗೆ.

        ನಮ್ಮ ಜೀವನದಲ್ಲಿ ಮಾತು  ಎನ್ನುವ ಎರಡು ಪದಗಳಿಗೆ ಮಹತ್ತರ ಪಾತ್ರವಿದೆ . ನಾವು ಆಡುವ ಉಪಯೋಗಿಸುವ ಮಾತು ಮುತ್ತಿನ ಹಾರದಂತಿರಬೇಕು. ಮಾತಿನಲ್ಲಿ ನಯ-ವಿನಯವಿದ್ದರೆ ದ್ವೇಷದ ದ್ವಾರವನ್ನು ತೆರೆಯಬಲ್ಲದು. ಸಮರ ಸಾರುದಾಗಾಲಿ ಶಾಂತಿ ಸಂಧಾನವಾಗಲಿ ಎರಡನ್ನು ಮಾಡುವುದು ಮಾತಿನ ಸಾಮರ್ಥ್ಯ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತ್ತು ಎಂಬಂತೆ ಮಾತು ಆಡುವಾಗ ಎಚ್ಚರದಿಂದರಬೇಕು.

        ಮಾತು ಮಾನವ ಸಮಾಜದ ಜೊತೆಗೆ ಶುರುವಾಯಿತೆನ್ನುತ್ತಾರೆ ಬಲ್ಲವರು. ಅಕ್ಷರವಿಲ್ಲದ ಸಮಾಜಗಳು ಇಂದಿಗೂ ಹಲವಿದೆ.ಆದರೆ ಮಾತಿಲ್ಲದ ಸಮಾಜಗಳು ಎಲ್ಲಿಯೂ ಇಲ್ಲ. ಅಕ್ಷರಸ್ಥ ಸಮಾಜಗಳಲ್ಲೂ ಬರವಣಿಗೆಗಿಂತ ಮಾತಿನದೇ ಮೇಲುಗೈ. ನಾವೆಲ್ಲರೂ ಒಂದು ದ್ವೀಪವಾದರೆ ಮಾತು ನಮ್ಮನ್ನು ಸಾಗರೋಪಾದಿಯಲ್ಲಿ ಆವರಿಸಿದೆ. ಮಾತು ಗಾಳಿಯಲ್ಲಿ ತೇಲಿ ಹೋಗಬಾರದೆಂಬ ಇಚ್ವೆಯಿಂದ ಜನ ಬರವಣಿಗೆ ಶುರು ಹಚ್ಚಿಕೊಂಡರು.

        ಮನುಷ್ಯ ಸಮಾಜ ಜೀವಿಯಾದುದರಿಂದ ಮತ್ತು ಮನುಷ್ಯನೊಳಗೆ ಮನಸ್ಸಿರುವುದರಿಂದ ಆ ಮನಸ್ಸಿನ ಭಾಗವಾಗಿಯೇ ಸಂವಹನ ಸಾಧ್ಯವಾಗುವುದು. ಮನಸ್ಸಿನ ಭಾವನೆಯನ್ನು ಮಾತಿನ ರೂಪದಲ್ಲಿ ಹೊರಹಾಕುತ್ತೇವೆ. ಸಂವಹನದ ಬಹುಮುಖ್ಯ ಭಾಗ ಮಾತು. ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲ ಇರುವುದು ಸಂವಹನದ ಕೊರತೆಯಿಂದಾಗಿ. ಮನುಷ್ಯ-ಮನುಷ್ಯರ ನಡುವೆ ನಿರಂತರ ಸಂವಾದ ಮತ್ತು ಅರ್ಥವಂತಿಕೆಯನ್ನು ಸ್ಥಾಪಿಸಲು ಸಂವಹನ ಅತಿ ಅಗತ್ಯ. ಮಾತಿಗೂ ಸಂದರ್ಭಕ್ಕೂ ಸನ್ನಿವೇಶಕ್ಕೂ ನಿಕಟ ಸಂಬಂಧವಿರುತ್ತದೆ. ಆದ್ದರಿಂದ ಒಂದೇ ಮಾತನ್ನು ಅಥವಾ ನಡವಳಿಕೆಯನ್ನು ಎಲ್ಲ ಕಡೆಯೂ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಆಯಾಯ ಸಂದರ್ಭಕ್ಕೆ ತಕ್ಕಂತೆ ನಮ್ಮ ಮಾತಿನ ಮೇಲೆ ನಮಗೆ ಹಿಡಿತವಿದ್ದರೆ ಒಳ್ಳೆಯದು...

       ಮಾತನಾಡುವುದು ಒಂದು ಕಲೆ.ಮಾತು ಯಾವಾಗಲೂ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಮಾತಾಡುವ ಕಲೆ ಜ್ಞಾನದೊಂದಿಗೆ ವಿದ್ಯೆಯೊಂದಿಗೆ ಬೆಳೆಯಬೇಕು. ಮಾತು ಬಲ್ಲವರೆಲ್ಲ ಮಾತುಗಾರರಲ್ಲ. ತಾನು ಎಷ್ಟು ಮಾತನಾಡಿದೆ ಎನ್ನುದಕ್ಕಿಂತ ಹೇಗೆ ಮಾತನಾಡಿದೆ ಅನ್ನೋದು ಮುಖ್ಯ. ಅರ್ಥವೇ ಇಲ್ಲದ ಮಾತಿಗೆ ಬೆಲೆಯಿಲ್ಲ. ಮಾತು ಬರುವುದು ಬೇರೆ, ಮಾತನಾಡಬಲ್ಲವರು ಬೇರೆ. ಮಾತು ಒಂದು ಪರಿಣಾಮಕಾರಿಯಾಗಲು ಅದಕ್ಕೆ ಸಾಧನೆಯೂ ಅಗತ್ಯ. ಮಾತನಾಡುವವರು ಮತ್ತು ಸ್ವೀಕರಿಸುವವರು ಮಾತಿನ ಮಹತ್ವವನ್ನು ಅರಿತಿದ್ದರೆ ಸಂವಹನ ತನ್ನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ತಾನೊಬ್ಬ ಒಳ್ಳೆಯ ಮಾತುಗಾರ, ತಾನೇನು ಮಾತನಾಡಿದರೂ ನಡೆಯುತ್ತದೆ ಎಂಬ ಧೋರಣೆ ಇಟ್ಟುಕೊಂಡವನು. ಮಾತುಗಾರಿಕೆಯ ಬಗ್ಗೆ ಕಲಿಯುದಕ್ಕೇನಿದೆ ಎಂದು ಉದಾಸೀನ ತಾಳುವನು.

       ಮಾತಿನಲ್ಲಿ ಅನೇಕ ವಿಧಗಳಿವೆ. ಕೊಕ್ಕೆಮಾತು (ವಕ್ರ ನುಡಿ), ಗಾಳಿ ಮಾತು ತೊದಲ ಮಾತು (ಅಸ್ಪಷ್ಟ ನುಡಿ) ಬಣ್ಣದ ಮಾತು ಬೆಲ್ಲದ ಮಾತು ಪಡೆ ಮಾತು ಇತ್ಯಾದಿ. ಹೀಗೆ ಅನೇಕ ಬಗೆಗಳಲ್ಲಿ ಮಾತಿನ ಅನೇಕ ಅವತಾರಗಳನ್ನು ಅರಿತು ಅರಿಯದೆಯೋ ನಮ್ಮ ದಿನನಿತ್ಯದ ಮಾತುಕತೆಯಲ್ಲಿ ಪ್ರಸ್ತಾಪಿಸುತ್ತೇವೆ. ಮಾತಿಗೆ ಎಷ್ಟು ಪ್ರಾಮುಖ್ಯತೆ ಇದೆಯೆಂದರೆ ಅರ್ಥವಿಲ್ಲದ ಮಾತು ಅಪಹಾಸ್ಯಕ್ಕೆ ಗುರಿಯಾದೀತು..ಇದೇ ಕಾರಣಕ್ಕಾಗಿ ಮಾತು ಬಲ್ಲವನಿಗೆ ಜಗಳವಿಲ್ಲ,ಮಾತು ಮನೆ ಕೇಡಿಸಿತು,  ಮುಂತಾದ ಪಡೆನುಡಿಗಳು ಜನಸಾಮಾನ್ಯರಲ್ಲಿ ಪ್ರಚಲಿತವಾಗಿದೆ.

        ಮಾತುಗಾರಿಕೆ ಅನ್ನುವುದು ಯಾರಿಗೂ ಹುಟ್ಟಿನಿಂದಲೇ ಸಿದ್ದಿಸಿಲ್ಲ.ನಾಯಕತ್ವ ಕೂಡಾ ಹಾಗೆಯೇ. ನಾವು ಆಡುವ ಮಾತು ಪುಸ್ತಕದ ಬದನೆಯಂತಿದ್ದರೆ ಕೇಳಲು ಹಿತವಾಗಿರುದಿಲ್ಲ.ಮಾತಿನಲ್ಲಿ ಹಾವ-ಭಾವ ಕೈಗಳ ಚಲನೆ ಹಾಸ್ಯದ ಸಂದರ್ಭ ಬಂದಾಗ ನಗು ಕೌತುಕದ ಸಂದರ್ಭದಲ್ಲಿ ವಿಸ್ಮಯದ ಛಾಯೆ ನಮ್ಮ ಮುಖ  ಅಥವಾ ಮಾತಿನಲ್ಲಿದ್ದರೆ ನಮ್ಮ ಎದುರಿಗಿದ್ದವರಿಗೂ ಮಾತನ್ನು ಮತ್ತು ಮತ್ತು ಕೇಳಬೇಕೆನಿಸುತ್ತದೆ.ಮುಗ್ಧ ಮಗುವಿನ ತೊದಲು ನುಡಿ ನಮಗೆ ಕೇಳಿದಷ್ಟು ಸಾಲದು ಅಲ್ಲವೇ ಹಾಗೆಯೇ ....ಮಾತು ಒಂದೆಡೆ ಕುಟುಂಬವನ್ನು ಬೆಸೆಯುವಲ್ಲಿ ಮುಂದಾದರೆ ಇನ್ನೊಂದೆಡೆ ಒಡೆಯುವಲ್ಲಿಯೂ ಪಾತ್ರ ವಹಿಸುತ್ತದೆ.ಹೀಗಾಗಿ ನಮ್ಮ ಮಾತಿನ ಮೇಲೆ ನಾವು ನಿಗವಹಿಸಿದರೆ ಉತ್ತಮ..

       ಇತರರ ಹೊಗಳಿಕೆಗಾಗಿ ಹಂಬಲಿಸುವುದು ಮಾನವ ಸಹಜ ಗುಣ.ಹಾಗೆಯೇ ಹೊಗಳುವುದು ಮತ್ತೊಂದು ಸಹಜ ಕ್ರಿಯೆ. ಹೆಂಡತಿಯನ್ನು ಓಲೈಸಲು ಗಂಡ ತುಂಟ ಮಗುವನ್ನು ದಾರಿಗೆ ತರಲು ತಂದೆ-ತಾಯಿ.. ಮುನಿಸಿಕೊಂಡಿರುವ ಪ್ರೇಯಸಿಯನ್ನು ಒಲಿಸಿಕೊಳ್ಳಲು ಹರಸಾಹಸ ಪಡುವ ಪ್ರಿಯಕರ....ಹೀಗೆ ಒಂದೇ ಎರಡೇ ದಿನನಿತ್ಯ ಜೀವನದಲ್ಲಿ ಒಂದಿಲ್ಲೊಂದು ಕಾರಣಕ್ಕಾಗಿ ಅನೇಕ ವಿಧಗಳಲ್ಲಿ ಮಾತನಾಡುವ ನಾವು ನಮ್ಮ ಮಾತಿನ ಬಗ್ಗೆ ಯೋಚಿಸದೆ ತಿಳಿದೋ ತಿಳಿಯದೆಯೋ ಇನ್ನೊಬ್ಬರಿಗೆ ಉಪದೇಶವನ್ನು ನೀಡುತ್ತೇವೆ..ಇದೇ ಮಾತನ್ನು ಕಲೆಯಂತೆ ಸಾಧನೆ ಮಾಡಿರುವವರು ಅದೆಷ್ಟೋ ಮಂದಿ ನಮ್ಮಲ್ಲಿ ಇದ್ದಾರೆ. ಆಕಾಶವಾಣಿ, ದೂರದರ್ಶನ ನಾಟಕ ಯಕ್ಷಗಾನ ಹೀಗೆ ಹತ್ತು ಹಲವು ರಂಗಗಳಲ್ಲಿ ತಮ್ಮ ವಾಕ್ಚತುರ್ಯದಿಂದ ಹೆಸರು ಮಾಡಿದವರಿದ್ದಾರೆ.

       ಇನ್ನು ಭಾಷಣಕಾರರ ವಿಷಯಕ್ಕೆ ಬರೋಣ ಸಭೆ-ಸಮಾರಂಭಗಳಲ್ಲಿ ಗಂಟೆಗಟ್ಟಲೆ ಮಾತಾಡಿ ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ ಎನ್ನುವ ಭೂಪರು.., ಗೊತ್ತಿಲ್ಲದ ಭಾಷೆಯಲ್ಲಿ ಯಾರೋ ಸಹಾಯಕರು ಬರೆದುಕೊಟ್ಟ ಚೀಟಿ ನೋಡಿ ಭಾಷಣ ಬಿಗಿಯುವರು.., ಗಂಟಲು ಹರಿಯುವಂತೆ ಕಿರುಚಿ ಓಟು ಗಿಟ್ಟಿಸಿಕೊಳ್ಳುವ ರಾಜಕಾರಣಿಗಳು ತಮ್ಮ ಎಲುಬಿಲ್ಲದ ನಾಲಗೆಯ ಮೂಲಕ ಪ್ರಮಾದವೆಸಗಿ, ಕೊನೆಗೆ ತಾವು ಹಾಗೆ ಹೇಳಲಿಲ್ಲ ಎಂದು ಜಾರಿಕೊಳ್ಳುತ್ತಾರೆ... ಅಸಂಬದ್ಧ ಪ್ರಲಾಪ ಗೈಯುವವರು ತನ್ನ ಮತ್ತು ಇತರರ ಸಮಯವನ್ನು ಪೋಲು ಮಾಡುತ್ತಾರೆಂದೇ ಲೆಕ್ಕ... ಅರ್ಥವಿಲ್ಲದ ಮಾತಿಗೆ, ಪೇಚಿಗೆ ಸಿಲುಕಿಕೊಳ್ಳುವವರ ಕಥೆಯಂತೂ ಇನ್ನು ಸ್ವಾರಸ್ಯಕರವಾದದ್ದು...

      ಅಳುವಿನಿಂದ ಶುರುವಾದ ನಮ್ಮ ಬದುಕು ಸುತ್ತಮುತ್ತಲ ಪ್ರಭಾವದಿಂದ ಮಾತು ಕಲಿಸುತ್ತಾ ಹೋಗುತ್ತದೆ. ಯಾವ ಭಾಷೆ ಅನ್ನುವುದು ನಮ್ಮ ಪರಿಸರದ ಮೇಲೆ ನಿಂತಿದೆ.ಮಾತನಾಡುವ ಶಕ್ತಿ ಸ್ವಾಭವಿಕವಾದರೂ ಅದು ಕಲೆಯೂ ಹೌದು.ಎಲ್ಲ ಸಮಾಜಗಳಲ್ಲಿ ದೊಡ್ಡವರು ಮಕ್ಕಳಿಗೆ ಮಾತಿನ ಸರಿ-ತಪ್ಪುಗಳನ್ನು ಕಲಿಸುತ್ತಾರೆ. ಯಾರ ಜೊತೆ ಹೇಗೆ ಮಾತನಾಡಬೇಕು, ಎಲ್ಲಿ ಯಾವ ತರಹ ಮಾತನಾಡಬೇಕು ಇತ್ಯಾದಿಗಳು ನಾವು ಸಮಾಜದಿಂದ ಕಲಿಯುವದರ ಮುಖ್ಯ ಭಾಗ ಎಂಬುದರಲ್ಲಿ ಎರಡು ಮಾತಿಲ್ಲ..

ಸುಪ್ರೀತಾ ಭಂಡಾರಿ, ಸೂರಿಂಜೆ

Tuesday, 13 April 2021

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರ ಆಪ್ತ ಸಹಾಯಕ ಪರಮೇಶ್ವರ್ ಭಂಡಾರಿಗೆ ಚಿನ್ನದ ಪದಕ .

 ಗದಗ ಗ್ರಾಮೀಣ ವಿವಿ ಪ್ರಾಂಗಣದಲ್ಲಿತಾರೀಕು ಏಪ್ರಿಲ್ 10 ರಂದು ನಡೆದ ರಾಜ್ಯ ಗ್ರಾಮೀಣಾಭಿವೃದ್ಧಿಮತ್ತುಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಲ್ಲಿ ನಡೆದ ಪ್ರಥಮ ಘಟಿಕೋತ್ಸವದಲ್ಲಿ ಹಿಂದುಳಿದ ವರ್ಗಗಳ ಮತ್ತು ಮುಜರಾಯಿ ಇಲಾಖೆ ಸಚಿವ , ದಕ್ಷಿಣ ಕನ್ನಡ ಉಸ್ತುವಾರಿ ಮಂತ್ರಿ ಕೋಟಾ ಶ್ರೀನಿವಾಸ್ ಪೂಜಾರಿಯವರ ಆಪ್ತ ಸಹಾಯಕ ಪರಮೇಶ್ವರ್ ಭಂಡಾರಿ ಯವರಿಗೆ ಎಂ ಕಾಂ ನಲ್ಲಿಪಡೆದ ಪ್ರಥಮ ಸ್ಥಾನಕ್ಕಾಗಿ ಚಿನ್ನದ ಪದಕದ ಜೊತೆ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.

ವಿವೇಕಾನಂದ ಯೂಥ್ ಮೂವ್ ಮೆಂಟ್ ಮತ್ತು ಮೈಸೂರ್ ನ ಗ್ರಾಸ್ ರೂಟ್ಸ್ ರಿಸರ್ಚ್ ಮತ್ತು ಅಡ್ವೊಕೆಸಿ ಮೂವ್ ಮೆಂಟ್ ನ ಸಂಸ್ಥಾಪಕ ಅಧ್ಯಕ್ಷ ಡಾ. ಆರ್ . ಬಾಲಸುಬ್ರಹ್ಮಣ್ಯಂ, ಗ್ರಾವಿವಿ ಕುಲಪತಿ ಪ್ರೊ .ವಿಷ್ಣುಕಾಂತ್ ಎಸ್ ಚಟಪಲ್ಲಿ,ವಿಶ್ವವಿದ್ಯಾಲಯದ ಉಪಕುಲಪತಿಯೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪಉಪಸ್ಥಿತರಿದ್ದರು.

ಕೆ. ಎಸ್. ಈಶ್ವರಪ್ಪನೇತೃತ್ವದಲ್ಲಿ ಪದವಿ ಸಮಾರಂಭ ನಡೆಯಿತು.

ಮೂಡಬಿದ್ರೆ ಅಲಂಗಾರು ಉಳಿಯಮನೆ ಶ್ರೀಮತಿ ಪದ್ಮಾವತಿ ಭಂಡಾರಿ ಮತ್ತು ದಿವಂಗತ ಸದಾಶಿವ ಭಂಡಾರಿ ದಂಪತಿಯ 7 ಜನ ಮಕ್ಕಳಲ್ಲಿ 4 ನೇಯವರಾಗಿ ಜನಿಸಿದ ಪರಮೇಶ್ವರ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮೂಡುಬಿದಿರೆಯಲ್ಲಿ, ಪದವಿ ಶಿಕ್ಷಣ ಮಂಗಳೂರಿನ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಪಡೆದರು.

ನಂತರ ಬೆಂಗಳೂರಿನಲ್ಲಿರುವ ವಿ ಗಾರ್ಡ್ ಗ್ರೂಪಿನ ವಂಡರ್ ಲಾದಲ್ಲಿ , ಮಂಗಳೂರಿನಲ್ಲಿರುವ ರಿಲಯನ್ಸ್ ಗ್ರೂಪಿನ 92.7 ಬಿಗ್ ಎಫ್ ಎಂ ರೇಡಿಯೋದಲ್ಲಿ ಕೆಲಸ ನಿರ್ವಹಿಸಿದರು.

ಏಪ್ರಿಲ್ 2010ರಲ್ಲಿಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿಯಾಗಿ (ಪಿ ಡಿ ಓ) ಕರ್ನಾಟಕ ಸರಕಾರದಿಂದ ನೇಮಕ ಗೊಂಡ ಪರಮೇಶ್ವರ್ 2017 ರವರೆಗೆ ಮಂಜನಾಡಿ ಗ್ರಾಮ ಪಂಚಾಯತ್ ನಲ್ಲಿ ಸೇವೆ ಮಾಡಿ ಸರಕಾರದ ಮೂಲಕ ಉನ್ನತ ಶಿಕ್ಷಣಕ್ಕಾಗಿ ಗದಗ್ ಗೆ ತೆರಳುತ್ತಾರೆ.

ಎರಡು ವರ್ಷದ ಉನ್ನತ ಶಿಕ್ಷಣದ ನಂತರ ಮತ್ತೆ ಹಳೆಯಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿಯಾಗಿ 2019 ರ ಆಗಸ್ಟ್ ನಲ್ಲಿ ನೇಮಕಗೊಳ್ಳುತ್ತಾರೆ. 

2019 ರ ನವೆಂಬರ್ ನಲ್ಲಿ ಪರಮೇಶ್ವರ್ ರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕರಾಗಿ ಸಚಿವರ ಮಂಗಳೂರು ಕಚೇರಿಯಲ್ಲಿ ಕರ್ತವ್ಯಕ್ಕೆ ನೇಮಕಗೊಳಿಸಿ ಸರಕಾರ ಆದೇಶಿಸಿದೆ.

ಸ್ನಾತಕ್ಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ಪರಮೇಶ್ವರ್ಗೆ ಪದವಿ ಜೊತೆಯಲ್ಲಿ ಚಿನ್ನದ ಪದಕ ದೊರಕಿರುವುದು ಸಮಾಜಕ್ಕೊಂದು ಹೆಮ್ಮೆಯ ಸಂಗತಿ.

ಇವರ ಪ್ರತಿಯೊಂದು ಕೆಲಸದಲ್ಲಿ ಧರ್ಮಪತ್ನಿ ಶ್ರೀಮತಿ ಆಶಿಕಾ ಪರಮೇಶ್ವರ್ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ಮಾಡೂರಿನಲ್ಲಿ ನೆಲೆಸಿರುತ್ತಾರೆ.


ಅವರ ಮುಂದಿನ ಭವಿಷ್ಯವು ಉಜ್ವಲವಾಗಲಿ, ಅವರು ಸೇವೆ ಮಾಡುವ ಕ್ಷೇತ್ರದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿ ಜಿಲ್ಲೆ ಮತ್ತು ಭಂಡಾರಿ ಸಮಾಜದ ಮನ್ನಣೆ ಮತ್ತು ಕೀರ್ತಿಗೆ ಪಾತ್ರರಾಗಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ .

ವರದಿ :ಕುಶಲ್ ಕುಮಾರ್,ಬೆಂಗಳೂರು

Monday, 12 April 2021

ಚಿಪ್ಪಿನೊಳಗಿನ ಭಂಡಾರಿ ಮುತ್ತು - ಸುನಿಲ್ ಕುಮಾರ್

       ಪ್ರಕೃತಿಯಲ್ಲಿ ಮೂರು ಶಕ್ತಿಗಳಿಲ್ಲದೆ ಯಾವ ಜೀವರಾಶಿಗಳೂ ಬದುಕಲುಸಾಧ್ಯವಿಲ್ಲ. ಅವುಗಳೆಂದರೆ ನೀರು, ಗಾಳಿ, ಬೆಂಕಿ. ಕೆಲವೊಂದು ಬಾರಿ ಈ ಮೂರೂ ಶಕ್ತಿಗಳು

ಮುನಿಸಿಕೊಂಡಾಗ ಪ್ರಕೃತಿ ವಿಕೋಪದಂತಹ ಅನಾಹುತಗಳು ಸಂಭವಿಸಿ ಪ್ರಾಣಹಾನಿ ಆಸ್ತಿಪಾಸ್ತಿ ನಷ್ಟವಾಗೋದನ್ನು ಕಾಣಬಹುದು. ಈ ಶಕ್ತಿಗಳಿಂದ ಉಂಟಾಗುವ ಪ್ರಕೃತಿ
ವಿಕೋಪದಂತಹ ಘಟನೆಗಳಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು  ಹೋರಾಡುವ ಒಂದು ಸಂಸ್ಥೆ
ಎಂದರೆ ಅದು ಅಗ್ನಿಶಾಮಕ ದಳ. ಇಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಂಡಾರಿ ಸಮಾಜದ ಸುನಿಲ್ ಕುಮಾರ್ ರವರೇ ಇಂದಿನ ಚಿಪ್ಪಿನೊಳಗಿನ ಭಂಡಾರಿ ಮುತ್ತು.

 

ಜನನ
ಮೂಡಬಿದ್ರೆಯ ತೋಡಾರಿನ ದಿ.ಕೆ.ಕೃಷ್ಣಪ್ಪ ಭಂಡಾರಿ ಹಾಗೂ ದಿ.ಕೆ.ವಿಮಲ ದಂಪತಿಗಳ ಆರು ಮಂದಿ ಮಕ್ಕಳಲ್ಲಿ ಮೂರನೇ ಮಗನಾಗಿ ಸುನಿಲ್ ಕುಮಾರ್ ಜನಿಸಿದರು.

ಶಿಕ್ಷಣ 
ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಸಿಸಿಲೀಸ್ ಕಾನ್ವೆಂಟ್, ಉಡುಪಿ ಹಾಗೂ ಮಾಡರ್ನ್ ಹೈಸ್ಕೂಲ್ ಉಡುಪಿಯಲ್ಲಿ  ಮುಗಿಸಿದರು.  ಪ್ರೌಢ ಶಿಕ್ಷಣವನ್ನು ಕ್ರಿಶ್ಚಿಯನ್ ಹೈಸ್ಕೂಲ್ ಉಡುಪಿ ಹಾಗೂ ರೊಜಾರಿಯೊ ಹೈಸ್ಕೂಲ್ ಮಂಗಳೂರಿನಲ್ಲಿ ಪೂರ್ಣಗೊಳಿಸಿದರು. ತನ್ನ ಪ್ರಥಮ ದರ್ಜೆಯ ವಿದ್ಯಾಭ್ಯಾಸವನ್ನು ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಮುಗಿಸಿ ಲಯನ್ಸ್ ಕ್ಲಬ್ ಮಲ್ಲಿಕಟ್ಟೆ, ಮಂಗಳೂರಿನಲ್ಲಿ ಟೈಪ್ ರೈಟಿಂಗ್  ಕಲಿತಿದ್ದಾರೆ.

ಜೀವನ ಪಯಣ 
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಆಘಾತವೆಂಬಂತೆ 15ನೇ ವಯಸ್ಸಿನಲ್ಲಿಯೇ ಇವರ ತಂದೆ ಅನಾರೋಗ್ಯ ಸಮಸ್ಯೆಯಿಂದ ದೈವಾಧೀನರಾಗುತ್ತಾರೆ. ಗಂಡು ಮಕ್ಕಳಲ್ಲಿ ಹಿರಿಯವರಾದ ಸುನಿಲ್ ಕುಮಾರ್ ತನ್ನ ಸಂಸಾರದ ಜವಾಬ್ದಾರಿಯನ್ನು ಅರಿತು ತಾನು ಕಷ್ಟಪಟ್ಟು ಓದಿ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆಯಾಗುತ್ತಾರೆ. ಇವರ ತಾಯಿಗೆ ಸಿಗುವ ಪಿಂಚಣಿಯಿಂದಲೇ ಸಂಸಾರ ನಡೆಯಬೇಕಿತ್ತು. ಹಾಗಾಗಿ ದುಡಿಮೆಯತ್ತ ಮುಖಮಾಡಿದ ಸುನಿಲ್, ಸಮಾಜ ಬಾಂಧವರ ಒಡೆತನದ ಮೆ: ಸ್ಯಾನ್ ಸನ್ಸ್ ಸೇಲ್ಸ್ ಕಾರ್ಪೋರೇಶನ್ ಸಂಸ್ಥೆಗೆ 1982 ರಲ್ಲಿ ಸೇರಿ ಜೊತೆಗೆ ಕಾಲೇಜು ಶಿಕ್ಷಣವನ್ನೂ ಮುಂದುವರೆಸುತ್ತಾರೆ.  ಹೀಗೆ ದ್ವಿತೀಯ ಬಿ.ಎ ಮಾಡುತ್ತಿರುವ ವೇಳೆ ಕರ್ನಾಟಕ ಸರಕಾರ ಅಗ್ನಿ ಶಾಮಕ ಮತ್ತು ತುರ್ತು ಸೇವೆಯ ವಿಭಾಗದಲ್ಲಿ ಕೆಲಸ ದೊರೆಯುತ್ತದೆ. 1987 ರಲ್ಲಿ ಅಗ್ನಿಶಾಮಕ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಮಂಗಳೂರು,
ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಸೇವೆಯನ್ನು ಸಲ್ಲಿಸಿರುವ ಇವರು ಪ್ರಸ್ತುತ ಮಂಗಳೂರಿನ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೌರವ ಪುರಸ್ಕಾರ 
ಇವರ ಉತ್ತಮ ಸೇವೆಯನ್ನು ಗಮನಿಸಿ 2011 ನೇ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೆ ಇವರ ಉತ್ತಮ ಸೇವೆಗೆ 2017ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಘನತೆವೆತ್ತರಾಷ್ಟ್ರಪತಿಯವರ ಶ್ಲಾಘನೀಯ ಅಗ್ನಿ ಶಾಮಕ ಸೇವಾ ಪದಕವನ್ನು ಪಡೆದಿದ್ದಾರೆ. ಸುನಿಲ್ ಕುಮಾರ್ ರವರು ಪ್ರಸ್ತುತ  ತನ್ನ ಪತ್ನಿ ಮೀರಾ.ಎಮ್ ಹಾಗೂ ಮಕ್ಕಳಾದ ಪ್ರತೀಕ್ಷ ಎಸ್ ಮತ್ತು ಸಮೀಕ್ಷ ಎಸ್ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಇನ್ನಷ್ಟು ಯಶಸ್ಸು ದೊರಕಲಿ ಅನ್ನೋದು ಭಂಡಾರಿ ವಾರ್ತೆ ತಂಡದ ಹಾರೈಕೆ
.

✍: ಎಸ್.ಕೆ.ಬಂಗಾಡಿ, ಭಂಡಾರಿ ವಾರ್ತೆ

Sunday, 11 April 2021

ಬಂಟ್ವಾಳ ತಾಲೂಕು ಪೊಳಲಿ, ಕರಿಯಂಗಳ ಸಚಿನಾ ಭಂಡಾರಿ ವಿಧಿವಶ

 ಕಳೆದ ಜನವರಿ 7 ನೇ ತಾರೀಕಿನಂದು ಬಿ.ಸಿ ರೋಡು - ಬಂಟ್ವಾಳ ಸರ್ಕಲ್ ಸಮೀಪ ನಡೆದ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕು ಪೊಳಲಿ, ಕರಿಯಂಗಳ ದಯಾನಂದ ಭಂಡಾರಿ ಯವರ ಪತ್ನಿ ಸಚಿನಾ ಪಿ.ಜಿ ( 36 ವ) ಯವರು ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 10 ರ ಶನಿವಾರ ಮಧ್ಯಾಹ್ನ ವಿಧಿವಶರಾದರು.

ಇವರು ಪತಿ ಮತ್ತು ಎರಡು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.

ಸಚಿನಾ ರವರು ನೇತ್ರಾವತಿ ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ಧೇಶ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು.

ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ , ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ತುಂಬಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

- ಭಂಡಾರಿ ವಾರ್ತೆ

 

ಲಿಷಾ ಕೊಕ್ಕರ್ಣೆಗೆ ದೈಜಿ ವರ್ಲ್ಡ್ ಫೋನ್ -ಇನ್ ಸಂಗೀತ ತಾರೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

 ಮಂಗಳೂರಿನ ದೈಜಿ ವರ್ಲ್ಡ್ ಖಾಸಗಿ ಚಾನೆಲ್ ನ ಫೋನ್ ಇನ್ "ಸಂಗೀತ ತಾರೆ" ಸ್ಪರ್ಧೆಯಲ್ಲಿ ಕುಂದಾಪುರದ ಲಿಷಾ ಕೊಕ್ಕರ್ಣೆ ದ್ವಿತೀಯ ಸ್ಥಾನ ಗಳಿಸಿದ್ದಾರೆ .

ದೈಜಿ ವರ್ಲ್ಡ್ ಚಾನೆಲ್ 2020 ರ ಜೂನ್ ನಲ್ಲಿ ಮೆಗಾ ಆಡಿಷನ್ ನಡೆಸಿತ್ತು. ದೇಶ ವಿದೇಶಗಳಿಂದ ಸುಮಾರು 400 ಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯು ಫೋನ್ ಇನ್ ಮೂಲಕ ನಡೆದಿತ್ತು.

ಅಂತಿಮ ಸುತ್ತಿನಲ್ಲಿ 16 ಸ್ಪರ್ಧಿಗಳು ಭಾಗವಹಿಸಿದ್ದರು ಮತ್ತು ಅಂತಿಮ ಸುತ್ತು ದೈಜಿ ವರ್ಲ್ಡ್ ನ ಮಂಗಳೂರಿನ ಸ್ಟುಡಿಯೋ ದಲ್ಲಿ ನಡೆದಿತ್ತು.

ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಲಿಷಾ ಕೊಕ್ಕರ್ಣೆಯವರು ದ್ವಿತೀಯ ಸ್ಥಾನ ಪಡೆದು ಸಮಾಜದ ಮನ್ನಣೆಗೆ ಪಾತ್ರರಾಗಿದ್ದಾರೆ.

 

ಕುಂದಾಪುರ ಕೊಕ್ಕರ್ಣೆಯ ಶ್ರೀ ಲವಕರ ಭಂಡಾರಿ ಮತ್ತು ಶ್ರೀಮತಿ ಶೈಲಜಾ ಭಂಡಾರಿ ಯವರ ಏಕೈಕ ಪುತ್ರಿ ಲಿಷಾ ಕೊಕ್ಕರ್ಣೆ. 

ದಿನಾಂಕ 12-8-2006ರಲ್ಲಿ ಜನಿಸಿದ ಇವರು L. K. G. ಯಿಂದ ಬ್ರಹ್ಮಾವರದ ಹಾರಾಡಿ G. M. ವಿದ್ಯಾನಿಕೇತನ ಆಂಗ್ಲ ಮಾಧ್ಯಮ  ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಪ್ರಸ್ತುತ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರ ಅಜ್ಜಿ ಸೀತಾ ಭಂಡಾರಿ ಯವರು ಹಳ್ಳಿಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದುದನ್ನು ಬಿಟ್ಟರೆ ಬೇರೆ ಯಾವುದೇ ಸಂಗೀತದ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದ ಇವರು ಸುಮಾರು 25 ಪ್ರಶಸ್ತಿಗಳ ಸರದಾರೆ. ಒಂದನೇ ತರಗತಿಯ ಗುರುಗಳಾದ ಗೀತಾ ರವರಿಂದ ಪ್ರೇರಣೆಗೊಂಡ ಇವರು ನಂತರ ಉಡುಪಿಯ ಮುಕುಂದ ಕೃಪಾ ಸಂಗೀತ ಶಾಲೆಯಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ  ಸಂಗೀತ ಅಭ್ಯಾಸ ಪ್ರಾರಂಭಿಸಿದರು. ಶಾಲೆಯಲ್ಲಿ ಪ್ರತೀ ವಾರ ನಡೆಯುವ Talent hour ನಲ್ಲಿ ಹಾಡುತ್ತಿದ್ದ ಇವರು ಶಿಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿದ್ದರು.


 ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಕು. ಲಿಷಾರವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಮಧುರ ಕಂಠ ವನ್ನು ಹೊಂದಿದ್ದು ಮುಂದೆ ಅತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಲಿ. ಭಂಡಾರಿ ಸಮಾಜದ ಸಂಗೀತ ಪ್ರತಿಭೆ ಮುಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಹೊರಹೊಮ್ಮಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.

ಕು. ಲಿಷಾ ಸಂಗೀತ ನೋಡಲು CLICK ಮಾಡಿ

-ರಮೇಶ್ ಭಂಡಾರಿ ಪಾಂಗಾಳ

 

Saturday, 10 April 2021

ಸಂಗೀತ ಕ್ಷೇತ್ರದಲ್ಲಿ ಉದಯಿಸುತ್ತಿರುವ ಪ್ರತಿಭೆ ಕು. ರಿಯಾ ರಂಜಿತ್ ಭಂಡಾರಿ ಮುಂಬಯಿ

 ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಂಗೀತ ಕ್ಷೇತ್ರದಲ್ಲಿ ಪ್ರತಿಭೆಯೊಂದು ಅರಳುತ್ತಿದೆ. ಮುಂಬಯಿ ರಂಜಿತ್ ಸೀತಾರಾಂ ಭಂಡಾರಿ ಮತ್ತು ಶ್ರಿಮತಿ ಪಲ್ಲವಿ ದಂಪತಿಯ ಸುಪುತ್ರಿ ರಿಯಾ ರಂಜಿತ್‌ ಈ ಉದಯೋನ್ಮುಖ ತಾರೆ.

ಮಂಗಳೂರಿನ ಪ್ರಸಿದ್ಧ ಖಾಸಗಿ ಟಿ.ವಿ. ಚಾನೆಲ್‌ ‘ ದಾಯಿಜಿ ವರ್ಲ್ಡ್‌ ’ ಆಯೋಜಿಸಿದ ಪ್ರತಿಷ್ಠಿತ ಫೋನ್ ''ಸಂಗೀತ ತಾರೆ" ಪ್ರತಿಸ್ಪರ್ಧೆಯಲ್ಲಿ ರಿಯಾ ರಂಜಿತ್ ತೃತೀಯ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ
.
ದಾಯಿಜಿ ವರ್ಲ್ಡ್ ಚಾನೆಲ್‌ನ ಈ ಫೋನ್ "ಸಂಗೀತ ತಾರೆ" ಕಾರ್ಯಕ್ರಮದ ಮೊದಲನೆಯ ಹಂತದ ಆಡಿಷನ್ 2020ರ ಜೂನ್ 22 ರಂದು ರಂದು ಪ್ರಾರಂಭವಾಗಿತ್ತು. ದೇಶ, ವಿದೇಶದ 400ಕ್ಕೂ ಹೆಚ್ಚು ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಲವು ತಿಂಗಳ ಕಾಲ ನಡೆದ ಈ ಆಡಿಷನ್ ನಲ್ಲಿ ಅಂತಿಮ ಘಟ್ಟಕ್ಕೆ 16 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಇವೆಲ್ಲಾ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆಯು ಫೋನ್ ರೆಕಾರ್ಡ್ ಕಳುಹಿಸುವ ಮೂಲಕ ನಡೆಸಲಾಗಿತ್ತು. ಅಂತಿಮ ಸುತ್ತಿನ ಸ್ಪರ್ಧೆ ಮಂಗಳೂರು ದಾಯಿಜಿ ವರ್ಲ್ಡ್ ವಾಹಿನಿಯ ಸ್ಟುಡಿಯೋದಲ್ಲಿ ನಡೆಸಲಾಗಿತ್ತು.

ತೀವ್ರ ಕುತೂಹಲ ಮೂಡಿಸಿದ್ದ ಈ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಮತ್ತು ಪ್ರಶಂಸೆಗೆ ಪಾತ್ರಳಾದ ರಿಯಾ ರಂಜಿತ್ ಭಂಡಾರಿ ಫೈನಲ್ ನಲ್ಲಿ ಮೂರನೇ ಸ್ಥಾನ ಪಡೆದು ಎಲ್ಲರ ಮನಗೆದ್ದಿದ್ದಾರೆ.

ಈ ಸಂಗೀತ ತಾರೆ ಅಂತಿಮ ಸುತ್ತಿನ ಸ್ಪರ್ಧೆ ಏಪ್ರಿಲ್‌ 10ರಂದು ರಾತ್ರಿ 9.00 ಗಂಟೆಯಿಂದ 10.00ರವರಿಗೆ ದಾಯಿಜಿ ವರ್ಲ್ಡ್ ಚಾನಲ್‌ನಲ್ಲಿ ಪ್ರಸಾರ ಆಗಲಿದೆ.

 

ರಿಯಾ ರಂಜಿತ್‌ ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತ ಶಕ್ತಿಯನ್ನು ಶ್ರೀ ನಾಗೇಶ್ವರ ದೇವರು ಅನುಗ್ರಹಿಸಲಿ ಇನ್ನಷ್ಟು ದೊಡ್ಡ ವೇದಿಕೆಗಳಲ್ಲಿ ರಿಯಾ ರಂಜಿತ್ ಮಿಂಚಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

 

- ಭಂಡಾರಿ ವಾರ್ತೆ