BhandaryVarthe Team

BhandaryVarthe Team
Bhandary Varthe Team

Monday, 31 May 2021

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿ

 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ...

ಅರ್ಹತೆ: 1. ದ್ವಿತೀಯ ಪಿಯುಸಿ ಉತ್ತೀರ್ಣವಾಗಿರಬೇಕು 
            2. 168 ಸೆ.ಮೀ ಎತ್ತರ ಇರಬೇಕು.

ವೇತನ ಶ್ರೇಣಿ: ರೂ.23500-47650. ಅಂದರೆ ಸುಮಾರು ರೂ.34000.00 ವೇತನ
ಹುದ್ದೆಗಳು
ಮಂಗಳೂರು ನಗರ-135 ಹುದ್ದೆಗಳು.
ದಕ ಜಿಲ್ಲೆ-68ಹುದ್ದೆಗಳು.
ಉಡುಪಿ ಜಿಲ್ಲೆ-81 ಹುದ್ದೆಗಳು.

ವಯೋಮಿತಿ : ಕನಿಷ್ಟ 19ವರ್ಷ
ಗರಿಷ್ಟ -ಸಾಮಾನ್ಯ ವರ್ಗ 25ವರ್ಷ
SC /ST/ OBC -27ವರ್ಷ

ಅರ್ಜಿ ಸಲ್ಲಿಸಲು ಪ್ರಾರಂಭ: 25.05.2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.06.2021
ಅರ್ಜಿ ಶುಲ್ಕ ಸಮೀಪದ ಅಂಚೆ ಕಚೇರಿಯಲ್ಲಿ ಪಾವತಿಸಬಹುದು.

ಬೇಕಾಗುವ ದಾಖಲೆ
1.SSLC ಮಾರ್ಕ್ ಕಾರ್ಡ್
2.ಪಿಯುಸಿ ಮಾರ್ಕ್ ಕಾರ್ಡ್
3.ಆಧಾರ್ ಕಾರ್ಡ್
4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5.ಕನ್ನಡ ಮಾಧ್ಯಮ
6.ಗ್ರಾಮೀಣ ವಿದ್ಯಾಭ್ಯಾಸ ಪ್ರಮಾಣ ಪತ್ರ
7. ನಾಲ್ಕು ಪಾಸ್ಪೋರ್ಟ್ ಸೈಜ್ ಪೋಟೋ.

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://recruitment.ksp.gov.in/online-recruitment-application

-ಭಂಡಾರಿ ವಾರ್ತೆ

Sunday, 30 May 2021

ಚಿಪ್ಪಿನೊಳಗಿನ ಭಂಡಾರಿ ಮುತ್ತು - ರಾಘವೇಂದ್ರ. ಜೆ . ಭಂಡಾರಿ(ರಾಘವ್ )

 ಈ ಸಂಚಿಕೆಯಲ್ಲಿ ಭಂಡಾರಿವಾರ್ತೆಯೆಂಬ ಚಿಪ್ಪಿನೊಳಗಡೆಯಿಂದ ಹೊರಬರುತ್ತಿರುವ ಮುತ್ತು ಅಂತಿಂಥ ಸಾಧಾರಣ ಮುತ್ತಲ್ಲ.ಜೀವನದಲ್ಲಿ ಹಲವಾರು ಅಗ್ನಿಪರೀಕ್ಷೆಗಳನ್ನು ಎದುರಿಸಿ,ಪ್ರತೀ ಸೋಲಿನಲ್ಲೂ ಒಂದೊಂದು ಹೊಸ ಹೊಸ ಪಾಠ ಕಲಿತು ಪಕ್ವವಾಗಿರುವ ಮುತ್ತು ಇದು. ಇಷ್ಟವಿಲ್ಲವೆಂದು ಕಡೆಗಣಿಸಿದ್ದ ವೃತ್ತಿಯಲ್ಲಿಯೇ ಇಂದು ಸಾಧಿಸಿ,ದೂರದ ಮುಂಬಯಿಯಲ್ಲಿ ಜೀವನ ಸಾಗಿಸುತ್ತಿರುವ ನಮ್ಮ ಭಂಡಾರಿ ಕುಟುಂಬದ ರಾಘವೇಂದ್ರ. ಜೆ . ಭಂಡಾರಿ(ರಾಘವ್ ). ಇವರ ಬದುಕಿನ ಪುಟಗಳನ್ನು ತಿರುವಿ ಹಾಕಿದ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡುವುದರಲ್ಲಿ ಅನುಮಾನವಿಲ್ಲ. ಕುಂದಾಪುರ ಮೂಲದವರಾದ ಜಗನ್ನಾಥ ಭಂಡಾರಿ ಮತ್ತು ಶಾಂತಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಇವರು ಕೊನೆಯವರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ.

       ಅವರ ಬಾಲ್ಯ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ತಂದೆಯ ದುಡಿಮೆಯಿಂದ ಜೀವನ ನಿರ್ವಹಣೆ ಸಾದ್ಯವಾಗದೇ ತಾಯಿಯೂ ಮನೆನಿರ್ಮಾಣ ಕೆಲಸಕ್ಕೆ ದಿನಗೂಲಿಯಾಗಿ ದುಡಿದು ಜೀವನ ನಿರ್ವಹಿಸುವಂತಹ ಬಡತನವಿತ್ತು. ಹಾಗಾಗಿ ಚಿಕ್ಕವಯಸ್ಸಿನಲ್ಲಿಯೇ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಸಗುಡಿಸುವುದು,ನೀರು ತಂದು ಹಾಕುವ ಕೆಲಸದೊಂದಿಗೆ ಅವರ ದುಡಿಮೆ ಆರಂಭಗೊಂಡಿತು. ಮುಂದೆ ಮನೆಮನೆಗೆ ಹಾಲು ಸರಬರಾಜು ಮಾಡುವ ಕೆಲಸವನ್ನೂ ಮಾಡಿದರು. ಹತ್ತನೆಯ ತರಗತಿ ಪರೀಕ್ಷೆ ಬರೆದವರು ಫಲಿತಾಂಶಕ್ಕೂ ಕಾಯದೇ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಕಲಿಯುವ ಉದ್ದೇಶದಿಂದ ಮಾವನ ಮನೆಯಾದ ಕಮ್ಮರಡಿಗೆ ಬಂದರು. ಮೊದಲಿನಿಂದಲೂ ಎಡಗೈ ಹೆಚ್ಚಾಗಿ ಬಳಸುತ್ತಿದ್ದದ್ದರಿಂದ ಕತ್ತಿ,ಕತ್ತರಿ ಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗೇ ಮಾವನ ತಮ್ಮನ ಜೊತೆ ಸೇರಿ ತೋಟದಲ್ಲಿ ವೀಳ್ಯದೆಲೆ ಕೊಯ್ಯುವುದು ಮತ್ತು ಹತ್ತಿರದ ತೀರ್ಥಹಳ್ಳಿ, ಬೆಜ್ಜವಳ್ಳಿ, ಕೋಣಂದೂರು ಮಾರುಕಟ್ಟೆಗೆ ಸಾಗಿಸುವ ಕೆಲಸವನ್ನು ಮಾಡಿದರು. ಆ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತಿದ್ದರೆಂದರೆ ಕೆಲವೇ ದಿನಗಳಲ್ಲಿ ಸುತ್ತಮುತ್ತಲ ಊರುಗಳಲ್ಲಿ ಎಲೆರಾಘು ಎಂದೇ ಜನಪ್ರಿಯರಾದರು.ಎರಡು ಕೈಗಳಿಂದ ದಿನವೂ ಸಾವಿರಾರು ಎಲೆಗಳನ್ನು ಕೊಯ್ದ ಪರಿಣಾಮ ಕ್ಷೌರಿಕ ವೃತ್ತಿ ಕಲಿಯಲು ಅವರ ಕೈಗಳು ಸಹಕರಿಸಿದವು. ಸ್ವಲ್ಪ ಮಟ್ಟಿಗೆ ಕೆಲಸವನ್ನು ಕಲಿತರು.
ಸಹೋದರ ಫಿನಿಷಿಂಗ್ ಟಚ್ ನವೀನ್ ಭಂಡಾರಿಯವರ ಒತ್ತಾಸೆಯ ಮೇಲೆ 1998 ರಲ್ಲಿ ಮುಂಬಯಿಗೆ ಬಂದರು. ಕೆಲಕಾಲ ಲ್ಯಾಂಡ್ರಿಯಲ್ಲಿ ಕೆಲಸ ಮಾಡಿದರು. ಬಟ್ಟೆಗಳಿಗೆ ಸ್ವತಃ ಇವರೇ ಇಸ್ತ್ರಿ ಕೂಡ ಮಾಡುತ್ತಿದ್ದರು. ಕೀ ಚೈನ್ ಮಾರಿದರು. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಿದರು. ಸಂಜೆ ಅಂಗಡಿ ಅಂಗಡಿ ತಿರುಗಿ ಹಣ ಸಂಗ್ರಹಿಸುವ ಪಿಗ್ಮೀ ಕಲೆಕ್ಟರ್ ಕೆಲಸ ಮಾಡಿದರು. ಸೇಲ್ಸ್ ಮ್ಯಾನ್ ಆಗಿ ದುಡಿದರು.ಬಾರ್ ಅ್ಯಂಡ್ ರೆಸ್ಟೋರೆಂಟ್ ಗಳಲ್ಲಿ ವೇಟರ್ ಆಗಿ ರಾತ್ರಿ ಒಂದೆರಡು ಗಂಟೆಗಳವರೆಗೆ ದುಡಿದರು. ಬೇಕರಿಯಲ್ಲಿ ಕೆಲಸ ಮಾಡಿ, ಪಾಲುದಾರಿಕೆಯಲ್ಲಿ ಬೇಕರಿ ಮಾಡಿ ಸ್ವಲ್ಪ ಹಣ ಕಳೆದುಕೊಂಡರು. ಇದೆಲ್ಲದರೊಟ್ಟಿಗೆ ಕುಲಕಸುಬು ಕಲೀತಾ ಇದ್ದರು.
           ಕೊನೆಗೆ ಅಣ್ಣನ ಮಾತಿಗೆ ಬೆಲೆಕೊಟ್ಟು ಪ್ರತಿಷ್ಠಿತ ಸ್ಟೈಲೋ ಸಂಸ್ಥೆಯಲ್ಲಿ ಹೇರ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿ ಸುಮಾರು ವರ್ಷ ವೃತ್ತಿ ಮಾಡಿದ ಮೇಲೆ ಅನಿವಾರ್ಯವಾಗಿ ಆ ಸಂಸ್ಥೆಯಿಂದ ಹೊರಬಂದರು‌. 2009 ರಲ್ಲಿ ಮುಂಬಯಿಯ ವರ್ಲಿಯಲ್ಲಿ ನೆಲೆಸಿರುವ, ಮೂಲತಃ ಮಂಗಳೂರು ಧಂಬೆಯವರಾದ ಆನಂದಭಂಡಾರಿ ಮತ್ತು ಸುಮತಿ ಆನಂದಭಂಡಾರಿ ಯವರ ಎರಡನೇ ಪುತ್ರಿ ಸ್ಮಿತಾ ಅವರನ್ನು ಮದುವೆಯಾದರು. ಅವರು ಮದುವೆಯಾದ ನಂತರವೂ ಪತ್ನಿಯ ಓದಿಗೆ ಸಹಕಾರ ನೀಡಿದ ಪರಿಣಾಮ 2011ರಲ್ಲಿ ಪತ್ನಿ ಸ್ಮಿತಾ ಅವರು ಕೇಂದ್ರ ಸರಕಾರಿ ಅಂಚೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದರು. ಇವರಿಗೆ 6 ವರ್ಷದ ಸ್ಮಿರಾಗ್ ಮತ್ತು ಒಂದು ವರ್ಷದ ಸ್ವರಾಗ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಪತ್ನಿಯ ಸಹಕಾರದಿಂದ ಹತ್ತನೇ ತರಗತಿಗೆ ಬಿಟ್ಟಿದ್ದ ಓದನ್ನು ಮುಂದುವರೆಸಿ Maharashtra State certificate in information technology (MSCIT) ಮತ್ತು ಪುಣೆ ವಿದ್ಯಾಪೀಠದಲ್ಲಿ ಕಂಪ್ಯೂಟರ್ ಕೋರ್ಸ್ ಮಾಡಿದರು. ರಾತ್ರಿ ಶಾಲೆಯಲ್ಲಿ ಓದಿ ಪರೀಕ್ಷೆಗಳನ್ನೆಲ್ಲಾ ಪ್ರಥಮ ದರ್ಜೆಯಲ್ಲಿ ಪಾಸಾದರು.
ಕ್ಷೌರಿಕ ವೃತ್ತಿಯನ್ನು ಕಲಿಯುವುದೇ ಬೇಡವೆಂದುಕೊಂಡಿದ್ದ ಇವರು 2013ರಲ್ಲಿ ಸಲೂನ್ ಅ್ಯಂಡ್ ಬ್ಯೂಟಿಪಾರ್ಲರ್ ಅಸೋಸಿಯೇಷನ್(ಮುಂಬಯಿ) ಯವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಮುಂತಾದ ಕಡೆಗಳಿಂದ ಬಂದಿದ್ದ 750ಕ್ಕೂ ಹೆಚ್ಚಿನ ಸ್ಪರ್ಧಿಗಳಲ್ಲಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಅವರ ವೃತ್ತಿ ಕುಶಲತೆಗೆ ಹಿಡಿದ ಕೈಗನ್ನಡಿಯಾಗಿದೆ.
       ಇತ್ತೀಚಿಗೆ ಬಿಡುಗಡೆಯಾದ ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟನೆಯ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ಅಮೀರ್ ಖಾನ್ ರ Look Designer ಆಗಿ ಕೆಲಸ ಮಾಡಿದ ಅವರ ಅನುಭವ ಅದ್ಬುತ.

      ಬಂಧುಗಳೇ ನೋಡಿದಿರಾ? ಪ್ರತೀ ಹಂತದಲ್ಲೂ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳಲು ಅವರು ಬಡಿದಾಡಿದ ರೀತಿಯನ್ನು. ಇದು ನಮ್ಮ ಸಮುದಾಯದ ಯುವಕರಿಗೆ ಸ್ಪೂರ್ತಿಯಾಗಲಿ. ಇವರ ಸಾಧನೆ ಸಣ್ಣ ಸಣ್ಣ ಸೋಲಿಗೆ ಎದೆಗುಂದುವ ಯುವಕರಿಗೆ ಹೊಸ ಚೈತನ್ಯ ನೀಡಲಿ ಎಂಬುದು ಭಂಡಾರಿವಾರ್ತೆಯ ಹಾರೈಕೆ.
ರಾಘವ್ ಭಂಡಾರಿ, ಸ್ಮಿತಾ ರಾಘವ್ ಭಂಡಾರಿ ಮತ್ತು ಸ್ಮಿರಾಗ್. ಸ್ವರಾಗ್ ಎಲ್ಲರಿಗೂ ಭಗವಂತನು ಆಯುರಾರೋಗ್ಯ ಭಾಗ್ಯ ಕರುಣಿಸಲಿ. ಅವರಿಗೆ ಜೀವನದಲ್ಲಿ ಇನ್ನಷ್ಟು ಗೆಲುವು ಸಿಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

✍ : ಭಾಸ್ಕರ್ ಭಂಡಾರಿ. ಸಿ.ಆರ್. ಶಿರಾಳಕೊಪ್ಪ

Wednesday, 26 May 2021

ವೈವಾಹಿಕ ಜೀವನದ ಸುವರ್ಣ ಸಂಭ್ರಮಾಚರಣೆಯಲ್ಲಿ ಶ್ರೀ ಪೂವಪ್ಪ ಭಂಡಾರಿ ಮತ್ತು ಶ್ರೀಮತಿ ಭವಾನಿ ಭಂಡಾರಿ ಪಣೆಜಾಲು

 ಭಂಡಾರಿ ಸಮಾಜದ ಹೆಮ್ಮೆಯ ಪುತ್ರರಾದ ಶ್ರೀ ಪೂವಪ್ಪ ಭಂಡಾರಿಯವರನ್ನು ತಿಳಿಯದವರು ಬೆಳ್ತಂಗಡಿ ತಾಲ್ಲೂಕಿನಲ್ಲಿ ಯಾರು ಇಲ್ಲವೆಂದು ಭಾವಿಸಬಹುದು. ಓರ್ವ ಹುಟ್ಟು ಹೋರಾಟಗಾರರಾದ ಇವರು ನಮ್ಮ ಬೆಳ್ತಂಗಡಿ ತಾಲ್ಲೂಕಿನಲ್ಲಿ ಭಂಡಾರಿ ಸಮಾಜದವರನ್ನು ಒಗ್ಗೂಡಿಸಿ ತಾಲ್ಲೂಕು ಸಂಘಟನೆಯನ್ನು ಕಟ್ಟಿ ಬೆಳೆಸಿದವರು. ಬೆಳ್ತಂಗಡಿ ತಾಲ್ಲೂಕಿನ ಪಣೆಜಾಲು ದೇಜು ಭಂಡಾರಿ ಮತ್ತು ಶ್ರೀಮತಿ ಚಿನ್ನಮ್ಮ ರವರ ಮೂರು ಗಂಡು ಓರ್ವ ಹೆಣ್ಣು ಮಗುವಿನ ಕುಟುಂಬದಲ್ಲಿ ಕೊನೆಯವರಿವರು.

ಅಂದಿನ ದಿನಗಳಲ್ಲಿ ಉಳಿದೆಲ್ಲಾ ಮನೆಗಳಂತೆ ಬಡತನದ ಜೀವನ ಮೂರು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದಂತಹ ಸಮಯವದು, ಆದರೆ ಅಂತಹ ಕಷ್ಟದ ಜೀವನದಲ್ಲೂ ಪರಹಿತಕ್ಕಾಗಿ ಬಾಳಿದವರು. ಯಾರಾದರೊಬ್ಬರು ಕಷ್ಟವೆಂದು ಬಂದಾಗ ತನ್ನ ಕೈಲಾದ ಸಹಾಯವನ್ನು ಮಾಡದೆ ಯಾವತ್ತೂ ಬರಿಗೈಯಲ್ಲಿ ಹಿಂದೆ ಕಳುಹಿಸುವ ಜಾಯಮಾನದವರಲ್ಲ. ಎಳೆಯ ಪ್ರಾಯದಿಂದಲೇ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡು ಬೆಳೆದವರು.

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು, ಆ ಮೂಲಕ ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡವರು. ಜೀವನ ನಿರ್ವಹಣೆಗೆ ಕುಲಕಸುಬು ಕ್ಷೌರಿಕ ವೃತ್ತಿ. ಹಾಗೆಯೇ ಹಿರಿಯರಿಂದ ಬಂದಂತಹ ಸ್ವಲ್ಪ ಜಮೀನಿನಲ್ಲಿ ಕೃಷಿ ಕಾಯಕ. ಇವರು ನಿರ್ವಹಿಸುವ ಯಾವುದೇ ಕೆಲಸವಿರಲಿ; ಅದರಲ್ಲಿ ಪರಿಪೂರ್ಣತೆ ಪಕ್ವತೆ ಖಂಡಿತಾ ಇರುತ್ತಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಉತ್ತಮ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಇವರ ಕಾಯಕದಲ್ಲಿರುವ ಬದ್ಧತೆ, ಪರಿಪೂರ್ಣತೆಗೆ ಸಾಕ್ಷಿ.

ನಮ್ಮ ದೇಶದ ಯಶಸ್ವಿ ಹೋರಾಟಗಳಲ್ಲೊಂದಾದ ಅಯೋಧ್ಯಾ ಚಳುವಳಿಯಲ್ಲಿ ಭಾಗವಹಿಸಿ ಸಮಾಜದಲ್ಲಿ ಗುರುತಿಸಲ್ಪಟ್ಟವರಿವರು. ಕುವೆಟ್ಟು ಗ್ರಾಮ ಪಂಚಾಯತ್ನಲ್ಲಿ ಸತತ ಹದಿನೈದು ವರ್ಷಗಳ ಕಾಲ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಪಾರದರ್ಶಕವಾದ ಇವರ ಕಾರ್ಯವೈಖರಿಯಿಂದ ಮೂಡಿಬಂದ ಯೋಜನೆಗಳಿಗಾಗಿ ಅರ್ಹವಾಗಿಯೇ ಭಾರತ ಸರಕಾರದ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಒಲಿದು ಬಂದುದಲ್ಲದೇ ಈ ಪುರಸ್ಕಾರವನ್ನು ಭಾರತದ ರಾಷ್ಟ್ರಪತಿಗಳ ಕೈಯಿಂದ ಪಡೆಯುವ ಯೋಗವು ಇವರದ್ದಾಗಿತ್ತು. ಯಾವಾಗಲೂ ತನ್ನ ಪಕ್ಷದ, ತನ್ನ ಸರಕಾರದ ನೀತಿಗೆ ವಿರೋಧವಾದರೂ ಸರಿಯೇ ಜನಪರವಾದ ಹೋರಾಟಗಳಿಗೆ ಸದಾ ಮುಂದೆ ನಿಲ್ಲುವಂತಹ ಇವರ ಗುಣವೇ ಅವರನ್ನು ಪರಿಸರದ ಸಮಾಜದ ಓರ್ವ ಆದ್ವಿತೀಯ ನಾಯಕನನ್ನಾಗಿಸಿದ್ದು.

ಬೆಳ್ತಂಗಡಿ ತಾಲ್ಲೂಕು ಭಂಡಾರಿ ಸಮಾಜದ ಅಧ್ಯಕ್ಷರಾಗಿ ಸತತ ಎರಡು ಬಾರಿ 7ವರ್ಷಗಳ ಕಾಲ ಕಾರ್ಯನಿರ್ವಹಿಸಿರುವುದೇ ಅಲ್ಲದೇ, ಗೇರುಕಟ್ಟೆಯ ಕಳಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಪ್ರಸ್ತುತ ಉಪಾಧ್ಯಕ್ಷರಾಗಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ, ದೇವಸ್ಥಾನ ಹಾಗೂ ಭಂಡಾರಿ ಮಹಾಮಂಡಲದ ಮಾಸಿಕ ಮತ್ತು ವಾರ್ಷಿಕ ಮಹಾಸಭೆಗೆ ಬೆಳ್ತಂಗಡಿ ತಾಲ್ಲೂಕಿನ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಕಚ್ಚೂರಿನಲ್ಲಿ ಸರಿಯಾದ ಸಮಯದಲ್ಲಿ ಉಪಸ್ಥಿತರಿರುತ್ತಿದ್ದರು. ದೇವಸ್ಥಾನದ ಮತ್ತು ಸಮಾಜದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಎಲ್ಲಿ ಮನಸಿಗೆ ಹಿತ ಎಂದು ಕಾಣಿಸಿಕೊಳ್ಳದಿದ್ದರೆ ಅದನ್ನು ಪ್ರತಿರೋಧಿಸುವ ನೇರ ನಡೆ ನುಡಿಯ ವ್ಯಕ್ತಿತ್ವದವರು ಪೂವಪ್ಪ ಅಣ್ಣ.

ಪಣೆಜಾಲು ಶ್ರೀಸ್ಟಾರ್‌ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಪಣೆಜಾಲು ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷರಾಗಿ, ರೇಷ್ಮೆ ಅಂಗನವಾಡಿ ಕೇಂದ್ರದ ಅಧ್ಯಕ್ಷರಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಡಿಲ್ನಾಳದ ಅಮೃತ ಮಹೋತ್ಸವದ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾಗಿ, ಪಣೆಜಾಲು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಸಭಾಧ್ಯಕ್ಷರು, ಅಲ್ಲದೆ ಊರಿನ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದಣಿವರಿಯದೆ ದುಡಿದವರು. ಇವರೋರ್ವ ಅಪ್ರತಿಮ ಮಾತುಗಾರ. ತಾಲ್ಲೂಕಿನ ಸಮಾಜ ಬಾಂಧವರ ಮನೆಯಲ್ಲಿ ನಡೆಯುವ ಹುಟ್ಟು, ಮದುವೆ, ಮುಂಜಿ, ಸಾವು, ಯಾವುದೇ ಕಾರ್ಯಕ್ರಮವಿರಲಿ; ಇವರ ಉಪಸ್ಥಿತಿ ಇದ್ದಲ್ಲಿ ಕಾರ್ಯಕ್ರಮಕ್ಕೊಂದು ಮೆರುಗು.ತನ್ನ ಅಪ್ರತಿಮವಾದ ಮಾತಿನ ವೈಖರಿಯಿಂದ ನೆರೆದವರನ್ನು ಮಂತ್ರಮುಗ್ಧರನ್ನಾಗಿಸುವ ವಿಶೇಷವಾದ ಸಾಮರ್ಥ್ಯ ಇವರದು.

ಉಜಿರೆಯ ಕೃಷ್ಣ ಭಂಡಾರಿ ಮತ್ತು ರುಕ್ಮಿಣಿ ದಂಪತಿಗಳ ಐವರು ಹೆಣ್ಣುಮಕ್ಕಳಲ್ಲಿ ಪ್ರಥಮ ಮಗಳಾದ ಭವಾನಿಯವರನ್ನು 26/05/1971 ರಂದು ವಿವಾಹವಾಗಿ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆಗೈದ ಆರತಿಗೊಬ್ಬ ಕೀರ್ತಿಗೊಬ್ಬ ಮಕ್ಕಳೆಂಬಂತೆ ಈರ್ವರು ಮಕ್ಕಳನ್ನು ಪಡೆದು, 4ಜನ ಮೊಮ್ಮಕ್ಕಳೊಂದಿಗೆ ಸಂತೃಪ್ತಿಯ ಜೀವನವನ್ನು ನಡೆಸುತ್ತಿರುವುದು, ಮಾತ್ರವಲ್ಲದೆ ಆ ಮದುವೆಯ ಸುವರ್ಣ ಸಂಭ್ರಮ ದಿನಾಚರಣೆಯನ್ನು ಈ ದಿನ ಆಚರಿಸುತ್ತಿರುವ ನಮ್ಮ ತಾಲ್ಲೂಕಿನ ಸಮಾಜ ಬಾಂಧವರ ಕಣ್ಮಣಿ, ಮಹಾನ್ ಸಂಘಟಕ, ಸಹೃದಯಿ, ಸಾಮಾಜಿಕ ಧಾರ್ಮಿಕ ಮುಂದಾಳು ಅಣ್ಣೆ ಭಂಡಾರಿ ಯಾನೆ ಪೂವಪ್ಪ ಭಂಡಾರಿ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲು ನಾವೆಲ್ಲ ಅತೀವ ಸಂತೋಷ ಪಟ್ಟಿದ್ದೇವೆ. ತಾವು ಆರೋಗ್ಯಪೂರ್ಣವಾಗಿ ಲವಲವಿಕೆಯಿಂದ ತಮ್ಮ ಧರ್ಮಪತ್ನಿ ಮಕ್ಕಳು, ಮೊಮ್ಮಕ್ಕಳೊಂದಿಗೆ, ನೂರುಕಾಲ ಬಾಳುವಂತಾಗಲಿ ಆ ಮೂಲಕ ನಿಮ್ಮ ನಾಯಕತ್ವದಲ್ಲಿ ಭರವಸೆ ಇಟ್ಟಿರುವಂತಹ ಸಾವಿರಾರು ದೀನದಲಿತರಿಗೆ ತಾವು ನೆರಳಾಗಿರಿ ಎಂದು ಆಶಿಸುತ್ತಿದ್ದೇವೆ.

ಮುಂದೆಯೂ ನಿಮ್ಮ ಕಾರ್ಯ ಕೈಂಕರ್ಯ ಈ ರೀತಿ ಮುಂದುವರಿಯಲಿ, ನಾವು ನಂಬಿಕೊಂಡು ಬಂದಂತಹ ಕಚ್ಚೂರು ಶ್ರೀ ನಾಗೇಶ್ವರ ದೇವರು ನಿಮಗೆ ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಜೀವನ ನಡೆಸುವಂತಾಗಲಿ, ದಾಂಪತ್ಯ ಜೀವನದಲ್ಲಿ ಶತಮಾನೋತ್ಸವವನ್ನು ಆಚರಿಸುವಂತಾಗಲಿ, ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ದಂಪತಿಗಳಿಗೆ ಶುಭ ಹಾರೈಸುತ್ತದೆ.

ಭಂಡಾರಿ ವಾರ್ತೆ

Monday, 24 May 2021

ತೊಕ್ಕೋಟು ಓವರ್ ಬ್ರಿಡ್ಜ್ , ಗಣೇಶ ನಗರದ ಶ್ರೀಮತಿ ಪೂರ್ಣಿಮಾ ರವಿ ಭಂಡಾರಿ ಮತ್ತು ಶ್ರೀ ರವಿ ಭಂಡಾರಿ ದಂಪತಿಗೆ 30 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ

 ತೊಕ್ಕೋಟು ಓವರ್ ಬ್ರಿಡ್ಜ್ , ಗಣೇಶ ನಗರದ ಶ್ರೀಮತಿ ಪೂರ್ಣಿಮಾ ರವಿ ಭಂಡಾರಿ ಮತ್ತು ಶ್ರೀ ರವಿ ಭಂಡಾರಿ ದಂಪತಿ ಮೇ 24 ರ ಸೋಮವಾರದಂದು ತಮ್ಮ 30 ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡರು.


ಈ ಸಂದರ್ಭದಲ್ಲಿ ಮಗಳು ರಮ್ಯಾ , ಅಳಿಯ ಶ್ರೀಪಾಲ್ , ಮಗ ಲಿಖಿತ್ ಮತ್ತು ಬಂಧು ಬಾಂಧವರು ಶುಭ ಹಾರೈಸಿದರು.


ಭಗವಂತ ದಂಪತಿಗೆ ಆಯುಷ್ಯ ಅರೋಗ್ಯ ಭಾಗ್ಯ ಸುಖ ಸಂಪತ್ತಿನ ಜೊತೆಗೆ ಸಂತೋಷ ಭರಿತ ನೆಮ್ಮದಿಯ ಜೀವನ ದಯಪಾಲಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡು ಶುಭ ಹಾರೈಸುತ್ತಿದೆ.

-ಭಂಡಾರಿ ವಾರ್ತೆ

Saturday, 22 May 2021

ಹೊಸನಗರ ತಾಲೂಕು, ರಿಪ್ಪನ್ ಪೇಟೆ ಸಮೀಪದ ಹರತಾಳು ಗ್ರಾಮದ ಶ್ರೀನಿವಾಸ ಭಂಡಾರಿ ವಿಧಿವಶ

 ಹೊಸನಗರ ತಾಲೂಕು, ರಿಪ್ಪನ್ ಪೇಟೆ ಸಮೀಪದ ಹರತಾಳು ಗ್ರಾಮದ ದಿವಂಗತ ಕುಂದ ಭಂಡಾರಿ ಯವರ ಮಗ ಹರತಾಳು ಶ್ರೀನಿವಾಸ ಭಂಡಾರಿ ಇವರು ಅಲ್ಪ ಕಾಲದ ಅಸೌಖ್ಯದಿಂದ ಮೇ 21 ರಂದು ವಿಧಿವಶರಾದರು.

ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು.


ದಿವಂಗತರು ಎರಡು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ .

ದಿ.ಶ್ರೀನಿವಾಸ ಭಂಡಾರಿ,ಹರತಾಳು.ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೇ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು, ರಿಪ್ಪನ್ ಪೇಟೆ ಭಂಡಾರಿ ಜನಾಂಗದ ಸೊಸೈಟಿ, ರಿ, ಹಾಗೂ ಹೊಸನಗರ ತಾಲೂಕು ಸವಿತಾ ಸಮಾಜದಲ್ಲಿ ಸಕ್ರೀಯರು.

ಅಗಲಿದ ಆತ್ಮಕೆ ಚಿರಶಾಂತಿ ಸಿಗಲಿ , ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ