ಭಂಡಾರಿ ಸಮಾಜದ ಹೆಮ್ಮೆಯ ಪುತ್ರರಾದ ಶ್ರೀ ಪೂವಪ್ಪ ಭಂಡಾರಿಯವರನ್ನು ತಿಳಿಯದವರು ಬೆಳ್ತಂಗಡಿ ತಾಲ್ಲೂಕಿನಲ್ಲಿ ಯಾರು ಇಲ್ಲವೆಂದು ಭಾವಿಸಬಹುದು. ಓರ್ವ ಹುಟ್ಟು ಹೋರಾಟಗಾರರಾದ ಇವರು ನಮ್ಮ ಬೆಳ್ತಂಗಡಿ ತಾಲ್ಲೂಕಿನಲ್ಲಿ ಭಂಡಾರಿ ಸಮಾಜದವರನ್ನು ಒಗ್ಗೂಡಿಸಿ ತಾಲ್ಲೂಕು ಸಂಘಟನೆಯನ್ನು ಕಟ್ಟಿ ಬೆಳೆಸಿದವರು. ಬೆಳ್ತಂಗಡಿ ತಾಲ್ಲೂಕಿನ ಪಣೆಜಾಲು ದೇಜು ಭಂಡಾರಿ ಮತ್ತು ಶ್ರೀಮತಿ ಚಿನ್ನಮ್ಮ ರವರ ಮೂರು ಗಂಡು ಓರ್ವ ಹೆಣ್ಣು ಮಗುವಿನ ಕುಟುಂಬದಲ್ಲಿ ಕೊನೆಯವರಿವರು.
ಅಂದಿನ ದಿನಗಳಲ್ಲಿ ಉಳಿದೆಲ್ಲಾ ಮನೆಗಳಂತೆ ಬಡತನದ ಜೀವನ ಮೂರು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದಂತಹ ಸಮಯವದು, ಆದರೆ ಅಂತಹ ಕಷ್ಟದ ಜೀವನದಲ್ಲೂ ಪರಹಿತಕ್ಕಾಗಿ ಬಾಳಿದವರು. ಯಾರಾದರೊಬ್ಬರು ಕಷ್ಟವೆಂದು ಬಂದಾಗ ತನ್ನ ಕೈಲಾದ ಸಹಾಯವನ್ನು ಮಾಡದೆ ಯಾವತ್ತೂ ಬರಿಗೈಯಲ್ಲಿ ಹಿಂದೆ ಕಳುಹಿಸುವ ಜಾಯಮಾನದವರಲ್ಲ. ಎಳೆಯ ಪ್ರಾಯದಿಂದಲೇ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡು ಬೆಳೆದವರು.
ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು, ಆ ಮೂಲಕ ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡವರು. ಜೀವನ ನಿರ್ವಹಣೆಗೆ ಕುಲಕಸುಬು ಕ್ಷೌರಿಕ ವೃತ್ತಿ. ಹಾಗೆಯೇ ಹಿರಿಯರಿಂದ ಬಂದಂತಹ ಸ್ವಲ್ಪ ಜಮೀನಿನಲ್ಲಿ ಕೃಷಿ ಕಾಯಕ. ಇವರು ನಿರ್ವಹಿಸುವ ಯಾವುದೇ ಕೆಲಸವಿರಲಿ; ಅದರಲ್ಲಿ ಪರಿಪೂರ್ಣತೆ ಪಕ್ವತೆ ಖಂಡಿತಾ ಇರುತ್ತಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಉತ್ತಮ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಇವರ ಕಾಯಕದಲ್ಲಿರುವ ಬದ್ಧತೆ, ಪರಿಪೂರ್ಣತೆಗೆ ಸಾಕ್ಷಿ.
ನಮ್ಮ ದೇಶದ ಯಶಸ್ವಿ ಹೋರಾಟಗಳಲ್ಲೊಂದಾದ ಅಯೋಧ್ಯಾ ಚಳುವಳಿಯಲ್ಲಿ ಭಾಗವಹಿಸಿ ಸಮಾಜದಲ್ಲಿ ಗುರುತಿಸಲ್ಪಟ್ಟವರಿವರು. ಕುವೆಟ್ಟು ಗ್ರಾಮ ಪಂಚಾಯತ್ನಲ್ಲಿ ಸತತ ಹದಿನೈದು ವರ್ಷಗಳ ಕಾಲ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಪಾರದರ್ಶಕವಾದ ಇವರ ಕಾರ್ಯವೈಖರಿಯಿಂದ ಮೂಡಿಬಂದ ಯೋಜನೆಗಳಿಗಾಗಿ ಅರ್ಹವಾಗಿಯೇ ಭಾರತ ಸರಕಾರದ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಒಲಿದು ಬಂದುದಲ್ಲದೇ ಈ ಪುರಸ್ಕಾರವನ್ನು ಭಾರತದ ರಾಷ್ಟ್ರಪತಿಗಳ ಕೈಯಿಂದ ಪಡೆಯುವ ಯೋಗವು ಇವರದ್ದಾಗಿತ್ತು. ಯಾವಾಗಲೂ ತನ್ನ ಪಕ್ಷದ, ತನ್ನ ಸರಕಾರದ ನೀತಿಗೆ ವಿರೋಧವಾದರೂ ಸರಿಯೇ ಜನಪರವಾದ ಹೋರಾಟಗಳಿಗೆ ಸದಾ ಮುಂದೆ ನಿಲ್ಲುವಂತಹ ಇವರ ಗುಣವೇ ಅವರನ್ನು ಪರಿಸರದ ಸಮಾಜದ ಓರ್ವ ಆದ್ವಿತೀಯ ನಾಯಕನನ್ನಾಗಿಸಿದ್ದು.
ಬೆಳ್ತಂಗಡಿ ತಾಲ್ಲೂಕು ಭಂಡಾರಿ ಸಮಾಜದ ಅಧ್ಯಕ್ಷರಾಗಿ ಸತತ ಎರಡು ಬಾರಿ 7ವರ್ಷಗಳ ಕಾಲ ಕಾರ್ಯನಿರ್ವಹಿಸಿರುವುದೇ ಅಲ್ಲದೇ, ಗೇರುಕಟ್ಟೆಯ ಕಳಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಪ್ರಸ್ತುತ ಉಪಾಧ್ಯಕ್ಷರಾಗಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ, ದೇವಸ್ಥಾನ ಹಾಗೂ ಭಂಡಾರಿ ಮಹಾಮಂಡಲದ ಮಾಸಿಕ ಮತ್ತು ವಾರ್ಷಿಕ ಮಹಾಸಭೆಗೆ ಬೆಳ್ತಂಗಡಿ ತಾಲ್ಲೂಕಿನ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಕಚ್ಚೂರಿನಲ್ಲಿ ಸರಿಯಾದ ಸಮಯದಲ್ಲಿ ಉಪಸ್ಥಿತರಿರುತ್ತಿದ್ದರು. ದೇವಸ್ಥಾನದ ಮತ್ತು ಸಮಾಜದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಎಲ್ಲಿ ಮನಸಿಗೆ ಹಿತ ಎಂದು ಕಾಣಿಸಿಕೊಳ್ಳದಿದ್ದರೆ ಅದನ್ನು ಪ್ರತಿರೋಧಿಸುವ ನೇರ ನಡೆ ನುಡಿಯ ವ್ಯಕ್ತಿತ್ವದವರು ಪೂವಪ್ಪ ಅಣ್ಣ.
ಪಣೆಜಾಲು ಶ್ರೀಸ್ಟಾರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಪಣೆಜಾಲು ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷರಾಗಿ, ರೇಷ್ಮೆ ಅಂಗನವಾಡಿ ಕೇಂದ್ರದ ಅಧ್ಯಕ್ಷರಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಡಿಲ್ನಾಳದ ಅಮೃತ ಮಹೋತ್ಸವದ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾಗಿ, ಪಣೆಜಾಲು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಸಭಾಧ್ಯಕ್ಷರು, ಅಲ್ಲದೆ ಊರಿನ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದಣಿವರಿಯದೆ ದುಡಿದವರು. ಇವರೋರ್ವ ಅಪ್ರತಿಮ ಮಾತುಗಾರ. ತಾಲ್ಲೂಕಿನ ಸಮಾಜ ಬಾಂಧವರ ಮನೆಯಲ್ಲಿ ನಡೆಯುವ ಹುಟ್ಟು, ಮದುವೆ, ಮುಂಜಿ, ಸಾವು, ಯಾವುದೇ ಕಾರ್ಯಕ್ರಮವಿರಲಿ; ಇವರ ಉಪಸ್ಥಿತಿ ಇದ್ದಲ್ಲಿ ಕಾರ್ಯಕ್ರಮಕ್ಕೊಂದು ಮೆರುಗು.ತನ್ನ ಅಪ್ರತಿಮವಾದ ಮಾತಿನ ವೈಖರಿಯಿಂದ ನೆರೆದವರನ್ನು ಮಂತ್ರಮುಗ್ಧರನ್ನಾಗಿಸುವ ವಿಶೇಷವಾದ ಸಾಮರ್ಥ್ಯ ಇವರದು.
ಉಜಿರೆಯ ಕೃಷ್ಣ ಭಂಡಾರಿ ಮತ್ತು ರುಕ್ಮಿಣಿ ದಂಪತಿಗಳ ಐವರು ಹೆಣ್ಣುಮಕ್ಕಳಲ್ಲಿ ಪ್ರಥಮ ಮಗಳಾದ ಭವಾನಿಯವರನ್ನು 26/05/1971 ರಂದು ವಿವಾಹವಾಗಿ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆಗೈದ ಆರತಿಗೊಬ್ಬ ಕೀರ್ತಿಗೊಬ್ಬ ಮಕ್ಕಳೆಂಬಂತೆ ಈರ್ವರು ಮಕ್ಕಳನ್ನು ಪಡೆದು, 4ಜನ ಮೊಮ್ಮಕ್ಕಳೊಂದಿಗೆ ಸಂತೃಪ್ತಿಯ ಜೀವನವನ್ನು ನಡೆಸುತ್ತಿರುವುದು, ಮಾತ್ರವಲ್ಲದೆ ಆ ಮದುವೆಯ ಸುವರ್ಣ ಸಂಭ್ರಮ ದಿನಾಚರಣೆಯನ್ನು ಈ ದಿನ ಆಚರಿಸುತ್ತಿರುವ ನಮ್ಮ ತಾಲ್ಲೂಕಿನ ಸಮಾಜ ಬಾಂಧವರ ಕಣ್ಮಣಿ, ಮಹಾನ್ ಸಂಘಟಕ, ಸಹೃದಯಿ, ಸಾಮಾಜಿಕ ಧಾರ್ಮಿಕ ಮುಂದಾಳು ಅಣ್ಣೆ ಭಂಡಾರಿ ಯಾನೆ ಪೂವಪ್ಪ ಭಂಡಾರಿ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲು ನಾವೆಲ್ಲ ಅತೀವ ಸಂತೋಷ ಪಟ್ಟಿದ್ದೇವೆ. ತಾವು ಆರೋಗ್ಯಪೂರ್ಣವಾಗಿ ಲವಲವಿಕೆಯಿಂದ ತಮ್ಮ ಧರ್ಮಪತ್ನಿ ಮಕ್ಕಳು, ಮೊಮ್ಮಕ್ಕಳೊಂದಿಗೆ, ನೂರುಕಾಲ ಬಾಳುವಂತಾಗಲಿ ಆ ಮೂಲಕ ನಿಮ್ಮ ನಾಯಕತ್ವದಲ್ಲಿ ಭರವಸೆ ಇಟ್ಟಿರುವಂತಹ ಸಾವಿರಾರು ದೀನದಲಿತರಿಗೆ ತಾವು ನೆರಳಾಗಿರಿ ಎಂದು ಆಶಿಸುತ್ತಿದ್ದೇವೆ.
ಮುಂದೆಯೂ ನಿಮ್ಮ ಕಾರ್ಯ ಕೈಂಕರ್ಯ ಈ ರೀತಿ ಮುಂದುವರಿಯಲಿ, ನಾವು ನಂಬಿಕೊಂಡು ಬಂದಂತಹ ಕಚ್ಚೂರು ಶ್ರೀ ನಾಗೇಶ್ವರ ದೇವರು ನಿಮಗೆ ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಜೀವನ ನಡೆಸುವಂತಾಗಲಿ, ದಾಂಪತ್ಯ ಜೀವನದಲ್ಲಿ ಶತಮಾನೋತ್ಸವವನ್ನು ಆಚರಿಸುವಂತಾಗಲಿ, ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ದಂಪತಿಗಳಿಗೆ ಶುಭ ಹಾರೈಸುತ್ತದೆ.
ಭಂಡಾರಿ ವಾರ್ತೆ
No comments:
Post a Comment