BhandaryVarthe Team

BhandaryVarthe Team
Bhandary Varthe Team

Saturday, 5 August 2017

ಹ್ಯಾಪಿ ಫ್ರೆಂಡ್ ಶಿಪ್ ಡೇ

ಸ್ನೇಹ, ರಕ್ತ ಸಂಬಂಧಗಳನ್ನೂ ಮೀರಿದ ಬಂಧ. ಸ್ನೇಹಿತರಿಲ್ಲದ ಬದುಕು ಊಹಿಸಲೂ ಅಸಾಧ್ಯ. ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ನೋವು ನಲಿವಿನಲ್ಲಿ, ಕಷ್ಟ ಸುಖಗಳಲ್ಲಿ ಅವರಿದ್ದರೇನೆ ಅದಕ್ಕೊಂದು ಅರ್ಥ. ರಕ್ತ ಸಂಬಂಧಗಳನ್ನೇ ಮೀರಿಸೋ ಅನುಬಂಧಕ್ಕೆ ವಯಸ್ಸಿನ ಮಿತಿಯಿಲ್ಲ. ಜಾತಿ ಧರ್ಮದ ಹಂಗಿಲ್ಲ. ಪರಸ್ಪರ ನಂಬಿಕೆ, ಕಾಳಜಿ, ಪ್ರೀತಿ, ಆತ್ಮೀಯತೆ.. ಹೀಗೆ ಮತ್ತೊಬ್ಬರ ನಗುವಿಗೆ, ಕಣ್ಣೀರಿಗೆ ಸಾಥ್ ಕೊಟ್ಟು ಜೊತೆಯಲ್ಲೇ ಬೆರೆಯುವ ಮಧುರ ಸಂಬಂಧವಿದು. ನಿಜವಾದ ಸ್ನೇಹಿತರೇ ಹಾಗೇ, ತಮ್ಮ ಖುಷಿಗಿಂತಲೂ ಸ್ನೇಹಿತರು ಚೆನ್ನಾಗಿದ್ದರೇನೆ ಅವರ ಮನಸ್ಸಿಗೆ ನೆಮ್ಮದಿ. ಸ್ನೇಹಿತರಿಗೋಸ್ಕರ, ಅವರ ಹಿತಕ್ಕೋಸ್ಕರ ಯಾವುದೇ ಸಮಸ್ಯೆಗಳನ್ನು ಎದುರಿಸಲು ಅವರು ಸಿದ್ಧವಾಗಿರುತ್ತಾರೆ. ಮತ್ತೊಬ್ಬರ ಕಷ್ಟ, ಸುಖಗಳಲ್ಲಿ ಭಾಗಿಯಾಗೋ ಅಂತಹ ಗೆಳೆಯ ಗೆಳತಿಯರನ್ನು ನೆನೆಯುವ ಸುದಿನವೇ ಸ್ನೇಹಿತರ ದಿನ
          ಹೌದು, ಹಿಂದೆಲ್ಲಾ ಸ್ನೇಹಿತರ ದಿನ ಬಂತಂದ್ರೆ ಸಾಕು ಫ್ರೆಂಡ್ ಶಿಪ್ ಬ್ಯಾಂಡ್ ಗಳನ್ನು ಹಿಡಿದುಕೊಂಡು ಸ್ನೇಹಿತರಿಗೆ ಶುಭಾಶಯ ಕೋರಿ ಬ್ಯಾಂಡ್ ಗಳನ್ನು ಕಟ್ಟುತ್ತಿದ್ದೆವುಉಡುಗೊರೆಗಳನ್ನು ನೀಡುತ್ತಿದ್ದೆವುಆದ್ರೆ ಈಗ ಹಾಗಲ್ಲ, ದಿನವನ್ನ ಜನ ಕೊಂಚ ಡಿಫರೆಂಟ್ ಆಗಿ ಆಚರಿಸುತ್ತಾರೆ. ಸಾಮಾಜಿಕ ಜಾಲತಾಣಗಳಂತೂ ದಿನ ಭಿನ್ನ ವಿಭಿನ್ನ ಪೋಸ್ಟ್ ಗಳಿಂದ ರಾರಾಜಿಸುತ್ತಿರುತ್ತದೆ. ಮಾರುಕಟ್ಟೆಯಲ್ಲಂತೂ ಕೇಳೋದೆ ಬೇಡ, ಕಲರ್ ಫುಲ್ ಬ್ಯಾಂಡ್ ಗಳು, ವಿವಿಧ ವಿನ್ಯಾಸಗಳ ಗ್ರೀಟಿಂಗ್ ಕಾರ್ಡ್ ಗಳು ಗಮನ ಸೆಳೆಯುತ್ತವೆ. ಅಲ್ಲದೆ ಭಾನುವಾರವಾಗಿರೋದ್ರಿಂದ ಸ್ನೇಹಿತರೊಂದಿಗೆ ಪ್ರವಾಸ, ಪಾರ್ಟಿಗಳು ಜೋರಾಗಿಯೇ ಇರುತ್ತವೆ. ನಮ್ಮ ಸಂತೋಷಕ್ಕೋಸ್ಕರ, ನಮ್ಮ ಹಿತಕ್ಕೋಸ್ಕರ, ಕಷ್ಟ ಸುಖಗಳಲ್ಲಿ ನಮ್ಮೊಂದಿಗಿರುವ ಸ್ನೇಹಿತರಿಗೋಸ್ಕರ ಖರ್ಚು ಮಾಡೋದು ದೊಡ್ಡ ವಿಷಯವಲ್ಲ. ಹೀಗಾಗಿಯೇ ದುಬಾರಿ ವೆಚ್ಚದ ಗಿಫ್ಟ್, ಕಾರ್ಡ್ ಗಳ ಮೊರೆ ಹೋಗುವವರೂ ನಮ್ಮಲ್ಲಿ ಅನೇಕರಿದ್ದಾರೆ.
           ಹಿಂದೆಲ್ಲ ದೂರದೂರಿಗೆ ಹೋದ ಸ್ನೇಹಿತರು ಮತ್ತೆ ಸಿಗೋದೆ ಅಪರೂಪಸಿಕ್ಕಿದ್ರೂನು ಹಿಂದಿನ ಆತ್ಮೀಯತೆ ಇರೋದು ಕಡಿಮೆ. ಆದರೆ ಈಗ ಹಾಗಿಲ್ಲ, ಕಾಲ ಬದಲಾದಂತೆ ತಂತ್ರಜ್ಞಾನಗಳು ಅಭಿವೃದ್ಧಿಯಾಗಿವೆ. ಪತ್ರಗಳ ಜಾಗಕ್ಕೆ ಫೇಸ್ಬುಕ್, ವಾಟ್ಸಾಪ್ ಗಳು ಲಗ್ಗೆ ಇಟ್ಟಿವೆ. ಮೆಸೇಜ್, ವಾಯ್ಸ್ ಕಾಲ್, ವೀಡಿಯೋ ಕಾಲ್ ಗಳು ದೂರದೂರಿನ ಸ್ನೇಹಿತರನ್ನ ಒಟ್ಟುಗೂಡಿಸುವ ಸೇತುವೆಯಾಗಿ ಕೆಲಸ ಮಾಡುತ್ತಿವೆ. ಗೆಟ್ ಟುಗೆದರ್, ಎಂಗೇಜ್ ಮೆಂಟ್, ಮದುವೆ, ಸಂತೋಷ ಕೂಟ, ಪ್ರವಾಸದ ನೆಪದಲ್ಲಿ ಹಳೆ ಸ್ನೇಹಿತರು ಮತ್ತೆ ಒಟ್ಟುಗೂಡಿ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಲು ಸಹಾಯ ಮಾಡುತ್ತಿವೆ. ಮೂಲಕ ಹಳೆ ಸ್ನೇಹಿತರು ಮತ್ತೆ ನಮ್ಮ ಬಾಂಧವ್ಯವನ್ನು ಮುಂದುವರಿಸುವ ವೇದಿಕೆಯಾಗುತ್ತಿವೆ.  

          ಅದೇನೆ ಇರಲಿ, ಸ್ನೇಹಿತರು ಎಂದು ಹೇಳಿಕೊಳ್ಳುವ ಎಲ್ಲರೂ ನಿಜವಾದ ಸ್ನೇಹಿತರಾಗಿರುವುದಿಲ್ಲ. ಜೀವನದ ಏಳು, ಬೀಳುಗಳಲ್ಲಿ ನಮ್ಮೊಂದಿಗಿದ್ದು, ಧೈರ್ಯ ತುಂಬಿ ನಮ್ಮನ್ನ ಮುನ್ನಡೆಸಿಕೊಂಡು ಹೋದರೇನೆ ಸ್ನೇಹಕ್ಕೊಂದು ಅರ್ಥ. ಹೀಗಾಗಿ ಬೆಸ್ಟ್ ಫ್ರೆಂಡ್, ಜಸ್ಟ್ ಫ್ರೆಂಡ್, ಕ್ಲೋಸ್ ಫ್ರೆಂಡ್, ವೆಲ್ ವಿಷರ್ ಅನ್ನೋ ಹೆಸರಿನಲ್ಲಿ ಯಾರೆಲ್ಲ ತಮ್ಮ ಸ್ನೇಹಿತರಿಗಾಗಿ ತಮ್ಮ ಸ್ನೇಹಿತರ ಖುಷಿಗಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದೀರೋ, ಅವರೆಲ್ಲರಿಗೂ ಸ್ನೇಹಿತರ ದಿನದ ಶುಭಾಷಯಗಳು.
:ದಿವ್ಯ ಉಜಿರೆ.  ಸಂಪಾದಕರು,
ಭಂಡಾರಿ ವಾರ್ತೆ


Thursday, 3 August 2017

ವರಮಹಾಲಕ್ಷ್ಮೀ ವ್ರತಾಚರಣೆ

       ತುಳುನಾಡು ಹೊರತುಪಡಿಸಿ ಉಳಿದೆಡೆಗಳಲ್ಲಿ ಆಷಾಡ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ. ಇದು ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸದ ಪ್ರಾರಂಭ. ಶ್ರಾವಣ ಮಾಸವೆಂದರೆ ಎಲ್ಲರಲ್ಲೂ ಸಂತಸದ ನಗು ಹೊಮ್ಮುತ್ತದೆ. ಶ್ರಾವಣ ಮಾಸ ಬಂತೆಂದರೆ ಸಾಕು ಹಬ್ಬಗಳು ಸರತಿ ಸಾಲಿನಲ್ಲಿ ನಿಲ್ಲುತ್ತದೆ. ನಮಗೇನಿದ್ದರೂ ಇನ್ನು ಹಬ್ಬಗಳನ್ನು ಆಚರಿಸುವ ಕೆಲಸವಷ್ಟೇ ಬಾಕಿ. ಶ್ರಾವಣ ಮಾಸದ ಪ್ರತಿದಿನ ಕೂಡ ಅತ್ಯಂತ ಶ್ರೇಷ್ಠ ದಿನವಾಗಿದ್ದು, ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ನೂಲ ಹುಣ್ಣಿಮೆ, ಶ್ರಿ ಕ್ರಷ್ಣ ಜನ್ಮಾಷ್ಟಮಿ ,ಗಣೇಶ ಚತುರ್ಥಿ ಹೀಗೆ ಹಬ್ಬಗಳ ಸರಮಾಲೆಯೆ ಇದೆ. ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ವ್ರತ ಮಹಿಳೆಯರಿಗೆ ಅತ್ಯಂತ ಶ್ರೇಷ್ಠವಾದ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ಕುಟುಂಬವು ಸಂಪತ್ತು, ಸಮೃದ್ಧಿಯಿಂದ ಕೂಡಿರಲೆಂದು,  ತಮ್ಮ ಗಂಡನ ಆಯಸ್ಸು, ಆರೋಗ್ಯ ಹೆಚ್ಚಲೆಂದು, ಕನ್ಯೆಯರು ಒಳ್ಳೆಯ ಗಂಡ ಸಿಗಲೆಂದು ವ್ರತವನ್ನೂ ಆಚರಿಸುತ್ತಾರೆ.

ಇತಿಹಾಸದ ಒಂದು ಕಥೆ


          ಮಗಧ ರಾಜ್ಯದ ಒಂದು ನಗರದಲ್ಲಿ ಚಾರುಮತಿ ಎಂಬ ಬ್ರಾಹ್ಮಣ ಮಹಿಳೆ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಳು. ಆಕೆಯ ಭಕ್ತಿ, ಪರಾಕಾಷ್ಟೆಗೆ ಮೆಚ್ಚಿ ದೇವಿ ಮಹಾಲಕ್ಷ್ಮಿಯು ಅವಳ ಕನಸಿನಲ್ಲಿ ಬಂದು ವರ-ಮಹಾಲಕ್ಷ್ಮಿಯ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಮಾಡಬೇಕೆಂದೂ, ಇದರಿಂದ ಇಷ್ಟಾರ್ಥಗಳು ಈಡೇರುವುದೆಂದು ಕನಸಲ್ಲಿ ಸೂಚಿಸಿದರು. ವರಮಹಾಲಕ್ಷ್ಮಿಯು ವಿಷ್ಣುದೇವನ ಪತ್ನಿಯ ಇನ್ನೊಂದು ರೂಪವಾಗಿದ್ದು ಹಾಗೂ ಸಂಪತ್ತಿನ ಅಧಿದೇವತೆಯೂ ಆಗಿರುತ್ತಾಳೆ. ಚಾರುಮತಿಯು ತನ್ನ ಕನಸಿನ ಬಗ್ಗೆ ಕುಟುಂಬದವರಲ್ಲಿ ಹೇಳಿದಾಗ ವ್ರತವನ್ನು ಆಚರಿಸುವುದು ಒಳ್ಳೆಯದು ಎಂದು ಆಕೆಗೆ ಪ್ರೊತ್ಸಾಹ ನೀಡಿದರು. ಹೀಗಾಗಿ ನಗರದ ಎಲ್ಲಾ ಮಹಿಳೆಯರು ಒಟ್ಟು ಸೇರಿ ವರಮಹಾಲಕ್ಷ್ಮಿ ವ್ರತವನ್ನು ಶ್ರಧ್ಧೆ-ಭಕ್ತಿಯಿಂದ ಆಚರಿಸಿದರು

ಪೂಜೆಯ ವಿಧಾನ

        ಶುಕ್ರವಾರದ ದಿನ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಮನೆಯನ್ನೆಲ್ಲಾ ಶುಚಿಗೊಳಿಸಿ , ಮನೆಯ ಮುಂದೆ ರಂಗೋಲಿ ಹಾಕಿ, ಹಸಿರು ತೋರಣ ಕಟ್ಟಿ, ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು, ರೇಷ್ಮೆಯ ಬಟ್ಟೆ ಧರಿಸಿ, ಪೂಜೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾರೆ. ಮೊದಲಿಗೆ ಕಳಶ ಸ್ಥಾಪನೆ, ಒಂದು ಕಂಚಿನ ಅಥವಾ ಬೆಳ್ಳಿ ಚೊಂಬು ತೆಗೆದುಕೊಂಡು, ಅದಕ್ಕೆ ಶ್ರೀಗಂಧವನ್ನು ಲೇಪನ ಮಾಡಿ ಕಳಶದ ಚೊಂಬಿಗೆ ಅಕ್ಕಿ ಅಥವಾ ನೀರು ಹಾಗೂ ವೀಳ್ಯದೆಲೆ, ಅಡಿಕೆ , ನಾಣ್ಯಗಳನ್ನು ಹಾಕಿ ತುಂಬಿಸುತ್ತಾರೆ. ರೀತಿ ಚೊಂಬಿನಲ್ಲಿ ತುಂಬುವ ಸಂಪ್ರದಾಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಕೆಲವು ಕಡೆ ಚೊಂಬಿನ ಸುತ್ತ ಒಂದು ಬಟ್ಟೆಯನ್ನು ಕಟ್ಟಿ , ಚೊಂಬಿನ ಬಾಯಿಯಲ್ಲಿ ಮಾವಿನ ಎಲೆಯನ್ನಿಟ್ಟು ನಿಲ್ಲಿಸಿ, ಒಂದು ತೆಂಗಿನ ಕಾಯಿಗೆ ಅರಿಶಿನವನ್ನು ಬಳಿದು ,ತೆಂಗಿನ ಕಾಯಿಯ ಜುಟ್ಟು ಮೇಲೆ ಬರುವ ಹಾಗೆ ಕೂರಿಸುತ್ತಾರೆ. ತೆಂಗಿನ ಕಾಯಿಗೆ ಲಕ್ಷ್ಮೀ ದೇವಿಯ ಮುಖವಾಡವನ್ನು ಕಟ್ಟುತ್ತಾರೆ ಅಥವಾ ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ರೀತಿ ಮಾಡುವುದರಿಂದ ಕಳಶವು ಲಕ್ಷ್ಮಿ ದೇವಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಇದೆ‌. ಹೀಗೆ ಆಭರಣಗಳಿಂದ ಭೂಷಿತಳಾದ ಲಕ್ಷ್ಮಿ ದೇವಿಯನ್ನು ಸುಮಧುರ ಸುವಾಸನೆಯುಳ್ಳ ಮಲ್ಲಿಗೆ, ಸಂಪಿಗೆ, ಸೇವಂತಿಗೆ ಹೂವುಗಳಿಂದ ಅಲಂಕರಿಸಲಾಗುತ್ತದೆ. ಬಳಿಕ ಅರಿಶಿನ ಕುಂಕುಮ ಶೋಭಿತೆಯಾದ ಲಕ್ಷ್ಮಿಯ ಕಳಶವನ್ನು ಒಂದು ಅಕ್ಕಿಯ ಪೀಠದಲ್ಲಿ ಸ್ಥಾಪಿಸಿ. ಬಳಿಕ ವಿವಿಧ ರೀತಿಯ ಸಿಹಿ ತಿಂಡಿಗಳು, ಹಣ್ಣು, ಕಾಯಿ ,ಹಾಲು ಸಕ್ಕರೆಗಳನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಆರಂಭಿಸುತ್ತಾರೆ. ಮಹಾಲಕ್ಷ್ಮಿಯ ಶ್ಲೋಕಗಳನ್ನು ಹೇಳುತ್ತಾ ,ಲಕ್ಷ್ಮಿ ಸಹಸ್ರನಾಮಗಳನ್ನು ಜಪಿಸುತ್ತಾ, ಕಷ್ಟಗಳನ್ನು ದೂರ ಮಾಡಿ ಮನೆಯಲ್ಲಿ ಸುಖ - ಶಾಂತಿ ನೆಲೆಸಿ, ಸಮೃಧ್ದಿ, ಸಂಪತ್ತು ಹೆಚ್ಚಾಗಲೆಂದು ಬೇಡಿಕೊಳ್ಳುತ್ತಾರೆ
            "ಮಂಗಳಾರತಿಯ ತಂದು ಬೆಳಗಿರೆ ಅಂಬುಜಾಕ್ಷಿಯ ರಾಣಿಗೆ" ಎಂದು ಹಾಡುತ್ತಾ ಕಳಶಕ್ಕೆ ಆರತಿ ಮಾಡುತ್ತಾರೆ. ಕೆಲವು ಕಡೆ ಪೂಜೆ ಮಾಡುವ ಮಹಿಳೆಯರು ತಮ್ಮ 'ಕೈ' ಮಣಿಕಟ್ಟಿನ ಸುತ್ತಲೂ ಅರಿಶಿಣ ದಾರವನ್ನು (ಕಂಕಣ) ಕಟ್ಟಿಕೊಳ್ಳುತ್ತಾರೆ. ಕೊನೆಯಲ್ಲಿ ಮನೆಗೆ ಬಂದ ಮುತ್ತೈದೆಯರಿಗೆ ಅರಿಶಿಣ- ಕುಂಕುಮ ಕೊಟ್ಟು, 'ಬಾಗಣ' ವನ್ನು ನೀಡಿ ಆಶಿರ್ವಾದ ಪಡೆಯುತ್ತಾರೆ. ಎಲ್ಲರೂ ಒಟ್ಟುಗೂಡಿ ಹಬ್ಬದೂಟವನ್ನು ಮಾಡಿ ಸಂಭ್ರಮಿಸುತ್ತಾರೆ.
 ✍: ಪ್ರತಿಭಾ ಭಂಡಾರಿ, ಹರಿಹರಪುರ


  

ರಾಜಕೀಯವೆಂದರೆ ರಾಜನಿಲ್ಲದ ಆಡಳಿತ, ಜನರಿಲ್ಲದೆ ಇರುವ ಸಂವಿಧಾನ


      ರಾಜಕೀಯವೆಂದರೆ ಒಂದು ದೇಶದ ಆಡಳಿತ, ಅಭಿವೃದ್ಧಿಯನ್ನು ವಿಮರ್ಶಿಸುವ ರಂಗ ಎನ್ನಬಹುದು. ರಾಜಕೀಯವನ್ನು ನಾವೀಗ ಸುಲಭವಾಗಿ ತಿಳಿಯಬಹುದು. ಆಧುನಿಕತೆಯ ಬಿರುಗಾಳಿ ಬೀಸುವ ಇಂದಿನ ಐಟಿ-ಬಿಟಿ ಯುಗದಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಜಾಹಿರಾತು, ಮಾಧ್ಯಮಗಳಿಂದ ರಾಜಕೀಯದ ವಿವಿಧ ಸ್ವರೂಪವನ್ನು ತಿಳಿಯಬಹುದು.
           ರಾಜಕೀಯವೆಂಬುದು ಕೇವಲ ಆಧುನಿಕ ಯುಗದಲ್ಲಿ ಮಾತ್ರ ಇದ್ದಂತಹದ್ದಲ್ಲ. ಅರಿಸ್ಟ್ರಾಟಲ್ ನನ್ನು ರಾಜಕೀಯದ ಪಿತಾಮಹ ಎನ್ನಲು ಕಾರಣವೇನೆಂದರೆ ಅವನು ರಾಜಕೀಯದ ಬಗ್ಗೆ ಬರೆದಿರುವ ಪುಸ್ತಕ. ಹೀಗೆ ಪ್ಲೇಟೋ, ಸಾಕ್ರಟಿಸ್ ಮೊದಲಾದವರೆಲ್ಲ ರಾಜಕೀಯ ಚಿಂತಕರೆನಿಸಿಕೊಂಡವರು. ರಾಜಕೀಯದಲ್ಲಿ ಅದರಲ್ಲೂ ಪ್ರಜಾಪ್ರಭುತ್ವ ಮಾದರಿಯ ಸರ್ಕಾರವನ್ನು ರಚಿಸಿದ್ದರು. ಸಂವಿಧಾನವನ್ನು ಕೂಡ ರಚನೆ ಮಾಡಿದ್ದರು. ಡಾ| ಬಾಬು ರಾಜೇಂದ್ರ ಪ್ರಸಾದ್ರವರು ಸಂವಿಧಾನ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ಡಾ| ಬಿ.ಆರ್.ಅಂಬೇಡ್ಕರ್ ರವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದ ಪ್ರಥಮ ಪ್ರಧಾನಿಯಾದ ಜವಾಹರಲಾಲ್ ನೆಹರೂರವರು ಭಾರತೀಯ ಕಾಂಗ್ರೆಸ್ ಪಕ್ಷದವರಾಗಿದ್ದರು. ನಂತರ ಬಂದ ರಾಜಕೀಯವನ್ನು  ಇಂದಿನ ಕವಿಗಳು ಈ ರೀತಿಯಾಗಿ ವರ್ಣಿಸಿದ್ದಾರೆ. ರ ಎಂದರೆ ರಾವಣ, ಜ ಎಂದರೆ ಜರಾಸಂಧ, ಕಿ ಎಂದರೆ ಕೀಚಕ, ಯ ಎಂದರೆ ಯಮನೆಂದು. ಇದನ್ನೇ ನಾನು ಈ ರೀತಿಯಾಗಿ ಹೇಳಲು ಇಚ್ಛಿಸುತ್ತೇನೆ. ರಾಜಕೀಯವೆಂದರೆ ರಾಜನಿಲ್ಲದ ಆಡಳಿತ, ಜನರಿಲ್ಲದೆ ಇರುವ ಸಂವಿಧಾನ, ಕಿರುಚಾಡುತ್ತಿರುವ ಶಾಸಕರು, ಯಮನಂತೆ ಇರುವ ಪ್ರತಿನಿಧಿಗಳು ಎಂದು. ಇಂದಿನ ರಾಜಕೀಯ ಪರಿಸ್ಥಿತಿಯು ಇದೇ ರೀತಿ ಆಗಿದೆ. ರಾವಣ, ಕೀಚಕ, ಜರಾಸಂಧ, ಯಮ ಇವರೇ ತುಂಬಿಕೊಂಡುಬಿಟ್ಟಿದ್ದಾರೆ..
         ಭ್ರಷ್ಟಾಚಾರ ಎನ್ನುವುದು ರಾಜಕೀಯದಲ್ಲಿ ಸಾಮಾನ್ಯವಾಗಿಬಿಟ್ಟಿದೆ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬರುವ ರಾಜಕಾರಣಿಗಳು ಜನರನ್ನ ಮರೆತು ಹೆಣ್ಣು,ಹೊನ್ನು,ಮಣ್ಣಿನ ಆಸೆಗೆ ಚುನಾವಣೆಗೇ ಮುನ್ನ ಇಟ್ಟುಕೊಂಡಿದ್ದ ಆದರ್ಶಗಳನ್ನು ದೂರಮಾಡಿ ಆಡಂಬರದ ಜೀವನಕ್ಕೆ ಜೋತುಬೀಳುತ್ತಾರೆ. ಲಂಚವನ್ನು ನೀಡದೆ ಈಗ ಯಾವುದೇ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲಾರದು ಎನ್ನುವುದು ಬೇಸರದ ಸಂಗತಿ.
ಉಪಸಂಹಾರ
          ರಾಜಕೀಯವೆನ್ನುವುದು ಶಕ್ತಿ ಇದ್ದ ಹಾಗೆ.ಯುಕ್ತಿ ಇರಬೇಕು,ಆದರೆ ಕುಯುಕ್ತಿ ಇರಬಾರದು.ಪ್ರಜೆಗಳನ್ನು ಮಕ್ಕಳ ಹಾಗೇ ನೋಡಿಕೊಳ್ಳುವವನೇ ನಿಜವಾದ ನಾಯಕ, ಅಂತಹ ನಾಯಕನನ್ನು ಪ್ರಜೆಗಳಾದ ನಾವು ಆರಿಸಬೇಕು.ಆಗ ಮಾತ್ರ ಸುಸ್ಥಿರ ಸಂವಿಧಾನ,ಸಮಾನ ಆಡಳಿತವನ್ನು ನೀಡಲು ಸಾಧ್ಯ.

 ನಾಗಶ್ರೀ ಭಂಡಾರಿ,  ಮೂಡುಬಿದಿರೆ