BhandaryVarthe Team

BhandaryVarthe Team
Bhandary Varthe Team

Monday 31 May 2021

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿ

 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ...

ಅರ್ಹತೆ: 1. ದ್ವಿತೀಯ ಪಿಯುಸಿ ಉತ್ತೀರ್ಣವಾಗಿರಬೇಕು 
            2. 168 ಸೆ.ಮೀ ಎತ್ತರ ಇರಬೇಕು.

ವೇತನ ಶ್ರೇಣಿ: ರೂ.23500-47650. ಅಂದರೆ ಸುಮಾರು ರೂ.34000.00 ವೇತನ
ಹುದ್ದೆಗಳು
ಮಂಗಳೂರು ನಗರ-135 ಹುದ್ದೆಗಳು.
ದಕ ಜಿಲ್ಲೆ-68ಹುದ್ದೆಗಳು.
ಉಡುಪಿ ಜಿಲ್ಲೆ-81 ಹುದ್ದೆಗಳು.

ವಯೋಮಿತಿ : ಕನಿಷ್ಟ 19ವರ್ಷ
ಗರಿಷ್ಟ -ಸಾಮಾನ್ಯ ವರ್ಗ 25ವರ್ಷ
SC /ST/ OBC -27ವರ್ಷ

ಅರ್ಜಿ ಸಲ್ಲಿಸಲು ಪ್ರಾರಂಭ: 25.05.2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.06.2021
ಅರ್ಜಿ ಶುಲ್ಕ ಸಮೀಪದ ಅಂಚೆ ಕಚೇರಿಯಲ್ಲಿ ಪಾವತಿಸಬಹುದು.

ಬೇಕಾಗುವ ದಾಖಲೆ
1.SSLC ಮಾರ್ಕ್ ಕಾರ್ಡ್
2.ಪಿಯುಸಿ ಮಾರ್ಕ್ ಕಾರ್ಡ್
3.ಆಧಾರ್ ಕಾರ್ಡ್
4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5.ಕನ್ನಡ ಮಾಧ್ಯಮ
6.ಗ್ರಾಮೀಣ ವಿದ್ಯಾಭ್ಯಾಸ ಪ್ರಮಾಣ ಪತ್ರ
7. ನಾಲ್ಕು ಪಾಸ್ಪೋರ್ಟ್ ಸೈಜ್ ಪೋಟೋ.

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://recruitment.ksp.gov.in/online-recruitment-application

-ಭಂಡಾರಿ ವಾರ್ತೆ

Sunday 30 May 2021

ಚಿಪ್ಪಿನೊಳಗಿನ ಭಂಡಾರಿ ಮುತ್ತು - ರಾಘವೇಂದ್ರ. ಜೆ . ಭಂಡಾರಿ(ರಾಘವ್ )

 ಈ ಸಂಚಿಕೆಯಲ್ಲಿ ಭಂಡಾರಿವಾರ್ತೆಯೆಂಬ ಚಿಪ್ಪಿನೊಳಗಡೆಯಿಂದ ಹೊರಬರುತ್ತಿರುವ ಮುತ್ತು ಅಂತಿಂಥ ಸಾಧಾರಣ ಮುತ್ತಲ್ಲ.ಜೀವನದಲ್ಲಿ ಹಲವಾರು ಅಗ್ನಿಪರೀಕ್ಷೆಗಳನ್ನು ಎದುರಿಸಿ,ಪ್ರತೀ ಸೋಲಿನಲ್ಲೂ ಒಂದೊಂದು ಹೊಸ ಹೊಸ ಪಾಠ ಕಲಿತು ಪಕ್ವವಾಗಿರುವ ಮುತ್ತು ಇದು. ಇಷ್ಟವಿಲ್ಲವೆಂದು ಕಡೆಗಣಿಸಿದ್ದ ವೃತ್ತಿಯಲ್ಲಿಯೇ ಇಂದು ಸಾಧಿಸಿ,ದೂರದ ಮುಂಬಯಿಯಲ್ಲಿ ಜೀವನ ಸಾಗಿಸುತ್ತಿರುವ ನಮ್ಮ ಭಂಡಾರಿ ಕುಟುಂಬದ ರಾಘವೇಂದ್ರ. ಜೆ . ಭಂಡಾರಿ(ರಾಘವ್ ). ಇವರ ಬದುಕಿನ ಪುಟಗಳನ್ನು ತಿರುವಿ ಹಾಕಿದ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡುವುದರಲ್ಲಿ ಅನುಮಾನವಿಲ್ಲ. ಕುಂದಾಪುರ ಮೂಲದವರಾದ ಜಗನ್ನಾಥ ಭಂಡಾರಿ ಮತ್ತು ಶಾಂತಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಇವರು ಕೊನೆಯವರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ.

       ಅವರ ಬಾಲ್ಯ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ತಂದೆಯ ದುಡಿಮೆಯಿಂದ ಜೀವನ ನಿರ್ವಹಣೆ ಸಾದ್ಯವಾಗದೇ ತಾಯಿಯೂ ಮನೆನಿರ್ಮಾಣ ಕೆಲಸಕ್ಕೆ ದಿನಗೂಲಿಯಾಗಿ ದುಡಿದು ಜೀವನ ನಿರ್ವಹಿಸುವಂತಹ ಬಡತನವಿತ್ತು. ಹಾಗಾಗಿ ಚಿಕ್ಕವಯಸ್ಸಿನಲ್ಲಿಯೇ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಸಗುಡಿಸುವುದು,ನೀರು ತಂದು ಹಾಕುವ ಕೆಲಸದೊಂದಿಗೆ ಅವರ ದುಡಿಮೆ ಆರಂಭಗೊಂಡಿತು. ಮುಂದೆ ಮನೆಮನೆಗೆ ಹಾಲು ಸರಬರಾಜು ಮಾಡುವ ಕೆಲಸವನ್ನೂ ಮಾಡಿದರು. ಹತ್ತನೆಯ ತರಗತಿ ಪರೀಕ್ಷೆ ಬರೆದವರು ಫಲಿತಾಂಶಕ್ಕೂ ಕಾಯದೇ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಕಲಿಯುವ ಉದ್ದೇಶದಿಂದ ಮಾವನ ಮನೆಯಾದ ಕಮ್ಮರಡಿಗೆ ಬಂದರು. ಮೊದಲಿನಿಂದಲೂ ಎಡಗೈ ಹೆಚ್ಚಾಗಿ ಬಳಸುತ್ತಿದ್ದದ್ದರಿಂದ ಕತ್ತಿ,ಕತ್ತರಿ ಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗೇ ಮಾವನ ತಮ್ಮನ ಜೊತೆ ಸೇರಿ ತೋಟದಲ್ಲಿ ವೀಳ್ಯದೆಲೆ ಕೊಯ್ಯುವುದು ಮತ್ತು ಹತ್ತಿರದ ತೀರ್ಥಹಳ್ಳಿ, ಬೆಜ್ಜವಳ್ಳಿ, ಕೋಣಂದೂರು ಮಾರುಕಟ್ಟೆಗೆ ಸಾಗಿಸುವ ಕೆಲಸವನ್ನು ಮಾಡಿದರು. ಆ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತಿದ್ದರೆಂದರೆ ಕೆಲವೇ ದಿನಗಳಲ್ಲಿ ಸುತ್ತಮುತ್ತಲ ಊರುಗಳಲ್ಲಿ ಎಲೆರಾಘು ಎಂದೇ ಜನಪ್ರಿಯರಾದರು.ಎರಡು ಕೈಗಳಿಂದ ದಿನವೂ ಸಾವಿರಾರು ಎಲೆಗಳನ್ನು ಕೊಯ್ದ ಪರಿಣಾಮ ಕ್ಷೌರಿಕ ವೃತ್ತಿ ಕಲಿಯಲು ಅವರ ಕೈಗಳು ಸಹಕರಿಸಿದವು. ಸ್ವಲ್ಪ ಮಟ್ಟಿಗೆ ಕೆಲಸವನ್ನು ಕಲಿತರು.
ಸಹೋದರ ಫಿನಿಷಿಂಗ್ ಟಚ್ ನವೀನ್ ಭಂಡಾರಿಯವರ ಒತ್ತಾಸೆಯ ಮೇಲೆ 1998 ರಲ್ಲಿ ಮುಂಬಯಿಗೆ ಬಂದರು. ಕೆಲಕಾಲ ಲ್ಯಾಂಡ್ರಿಯಲ್ಲಿ ಕೆಲಸ ಮಾಡಿದರು. ಬಟ್ಟೆಗಳಿಗೆ ಸ್ವತಃ ಇವರೇ ಇಸ್ತ್ರಿ ಕೂಡ ಮಾಡುತ್ತಿದ್ದರು. ಕೀ ಚೈನ್ ಮಾರಿದರು. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಿದರು. ಸಂಜೆ ಅಂಗಡಿ ಅಂಗಡಿ ತಿರುಗಿ ಹಣ ಸಂಗ್ರಹಿಸುವ ಪಿಗ್ಮೀ ಕಲೆಕ್ಟರ್ ಕೆಲಸ ಮಾಡಿದರು. ಸೇಲ್ಸ್ ಮ್ಯಾನ್ ಆಗಿ ದುಡಿದರು.ಬಾರ್ ಅ್ಯಂಡ್ ರೆಸ್ಟೋರೆಂಟ್ ಗಳಲ್ಲಿ ವೇಟರ್ ಆಗಿ ರಾತ್ರಿ ಒಂದೆರಡು ಗಂಟೆಗಳವರೆಗೆ ದುಡಿದರು. ಬೇಕರಿಯಲ್ಲಿ ಕೆಲಸ ಮಾಡಿ, ಪಾಲುದಾರಿಕೆಯಲ್ಲಿ ಬೇಕರಿ ಮಾಡಿ ಸ್ವಲ್ಪ ಹಣ ಕಳೆದುಕೊಂಡರು. ಇದೆಲ್ಲದರೊಟ್ಟಿಗೆ ಕುಲಕಸುಬು ಕಲೀತಾ ಇದ್ದರು.
           ಕೊನೆಗೆ ಅಣ್ಣನ ಮಾತಿಗೆ ಬೆಲೆಕೊಟ್ಟು ಪ್ರತಿಷ್ಠಿತ ಸ್ಟೈಲೋ ಸಂಸ್ಥೆಯಲ್ಲಿ ಹೇರ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿ ಸುಮಾರು ವರ್ಷ ವೃತ್ತಿ ಮಾಡಿದ ಮೇಲೆ ಅನಿವಾರ್ಯವಾಗಿ ಆ ಸಂಸ್ಥೆಯಿಂದ ಹೊರಬಂದರು‌. 2009 ರಲ್ಲಿ ಮುಂಬಯಿಯ ವರ್ಲಿಯಲ್ಲಿ ನೆಲೆಸಿರುವ, ಮೂಲತಃ ಮಂಗಳೂರು ಧಂಬೆಯವರಾದ ಆನಂದಭಂಡಾರಿ ಮತ್ತು ಸುಮತಿ ಆನಂದಭಂಡಾರಿ ಯವರ ಎರಡನೇ ಪುತ್ರಿ ಸ್ಮಿತಾ ಅವರನ್ನು ಮದುವೆಯಾದರು. ಅವರು ಮದುವೆಯಾದ ನಂತರವೂ ಪತ್ನಿಯ ಓದಿಗೆ ಸಹಕಾರ ನೀಡಿದ ಪರಿಣಾಮ 2011ರಲ್ಲಿ ಪತ್ನಿ ಸ್ಮಿತಾ ಅವರು ಕೇಂದ್ರ ಸರಕಾರಿ ಅಂಚೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದರು. ಇವರಿಗೆ 6 ವರ್ಷದ ಸ್ಮಿರಾಗ್ ಮತ್ತು ಒಂದು ವರ್ಷದ ಸ್ವರಾಗ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಪತ್ನಿಯ ಸಹಕಾರದಿಂದ ಹತ್ತನೇ ತರಗತಿಗೆ ಬಿಟ್ಟಿದ್ದ ಓದನ್ನು ಮುಂದುವರೆಸಿ Maharashtra State certificate in information technology (MSCIT) ಮತ್ತು ಪುಣೆ ವಿದ್ಯಾಪೀಠದಲ್ಲಿ ಕಂಪ್ಯೂಟರ್ ಕೋರ್ಸ್ ಮಾಡಿದರು. ರಾತ್ರಿ ಶಾಲೆಯಲ್ಲಿ ಓದಿ ಪರೀಕ್ಷೆಗಳನ್ನೆಲ್ಲಾ ಪ್ರಥಮ ದರ್ಜೆಯಲ್ಲಿ ಪಾಸಾದರು.
ಕ್ಷೌರಿಕ ವೃತ್ತಿಯನ್ನು ಕಲಿಯುವುದೇ ಬೇಡವೆಂದುಕೊಂಡಿದ್ದ ಇವರು 2013ರಲ್ಲಿ ಸಲೂನ್ ಅ್ಯಂಡ್ ಬ್ಯೂಟಿಪಾರ್ಲರ್ ಅಸೋಸಿಯೇಷನ್(ಮುಂಬಯಿ) ಯವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ಮುಂತಾದ ಕಡೆಗಳಿಂದ ಬಂದಿದ್ದ 750ಕ್ಕೂ ಹೆಚ್ಚಿನ ಸ್ಪರ್ಧಿಗಳಲ್ಲಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಅವರ ವೃತ್ತಿ ಕುಶಲತೆಗೆ ಹಿಡಿದ ಕೈಗನ್ನಡಿಯಾಗಿದೆ.
       ಇತ್ತೀಚಿಗೆ ಬಿಡುಗಡೆಯಾದ ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟನೆಯ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ಅಮೀರ್ ಖಾನ್ ರ Look Designer ಆಗಿ ಕೆಲಸ ಮಾಡಿದ ಅವರ ಅನುಭವ ಅದ್ಬುತ.

      ಬಂಧುಗಳೇ ನೋಡಿದಿರಾ? ಪ್ರತೀ ಹಂತದಲ್ಲೂ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳಲು ಅವರು ಬಡಿದಾಡಿದ ರೀತಿಯನ್ನು. ಇದು ನಮ್ಮ ಸಮುದಾಯದ ಯುವಕರಿಗೆ ಸ್ಪೂರ್ತಿಯಾಗಲಿ. ಇವರ ಸಾಧನೆ ಸಣ್ಣ ಸಣ್ಣ ಸೋಲಿಗೆ ಎದೆಗುಂದುವ ಯುವಕರಿಗೆ ಹೊಸ ಚೈತನ್ಯ ನೀಡಲಿ ಎಂಬುದು ಭಂಡಾರಿವಾರ್ತೆಯ ಹಾರೈಕೆ.
ರಾಘವ್ ಭಂಡಾರಿ, ಸ್ಮಿತಾ ರಾಘವ್ ಭಂಡಾರಿ ಮತ್ತು ಸ್ಮಿರಾಗ್. ಸ್ವರಾಗ್ ಎಲ್ಲರಿಗೂ ಭಗವಂತನು ಆಯುರಾರೋಗ್ಯ ಭಾಗ್ಯ ಕರುಣಿಸಲಿ. ಅವರಿಗೆ ಜೀವನದಲ್ಲಿ ಇನ್ನಷ್ಟು ಗೆಲುವು ಸಿಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

✍ : ಭಾಸ್ಕರ್ ಭಂಡಾರಿ. ಸಿ.ಆರ್. ಶಿರಾಳಕೊಪ್ಪ

Wednesday 26 May 2021

ವೈವಾಹಿಕ ಜೀವನದ ಸುವರ್ಣ ಸಂಭ್ರಮಾಚರಣೆಯಲ್ಲಿ ಶ್ರೀ ಪೂವಪ್ಪ ಭಂಡಾರಿ ಮತ್ತು ಶ್ರೀಮತಿ ಭವಾನಿ ಭಂಡಾರಿ ಪಣೆಜಾಲು

 ಭಂಡಾರಿ ಸಮಾಜದ ಹೆಮ್ಮೆಯ ಪುತ್ರರಾದ ಶ್ರೀ ಪೂವಪ್ಪ ಭಂಡಾರಿಯವರನ್ನು ತಿಳಿಯದವರು ಬೆಳ್ತಂಗಡಿ ತಾಲ್ಲೂಕಿನಲ್ಲಿ ಯಾರು ಇಲ್ಲವೆಂದು ಭಾವಿಸಬಹುದು. ಓರ್ವ ಹುಟ್ಟು ಹೋರಾಟಗಾರರಾದ ಇವರು ನಮ್ಮ ಬೆಳ್ತಂಗಡಿ ತಾಲ್ಲೂಕಿನಲ್ಲಿ ಭಂಡಾರಿ ಸಮಾಜದವರನ್ನು ಒಗ್ಗೂಡಿಸಿ ತಾಲ್ಲೂಕು ಸಂಘಟನೆಯನ್ನು ಕಟ್ಟಿ ಬೆಳೆಸಿದವರು. ಬೆಳ್ತಂಗಡಿ ತಾಲ್ಲೂಕಿನ ಪಣೆಜಾಲು ದೇಜು ಭಂಡಾರಿ ಮತ್ತು ಶ್ರೀಮತಿ ಚಿನ್ನಮ್ಮ ರವರ ಮೂರು ಗಂಡು ಓರ್ವ ಹೆಣ್ಣು ಮಗುವಿನ ಕುಟುಂಬದಲ್ಲಿ ಕೊನೆಯವರಿವರು.

ಅಂದಿನ ದಿನಗಳಲ್ಲಿ ಉಳಿದೆಲ್ಲಾ ಮನೆಗಳಂತೆ ಬಡತನದ ಜೀವನ ಮೂರು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದಂತಹ ಸಮಯವದು, ಆದರೆ ಅಂತಹ ಕಷ್ಟದ ಜೀವನದಲ್ಲೂ ಪರಹಿತಕ್ಕಾಗಿ ಬಾಳಿದವರು. ಯಾರಾದರೊಬ್ಬರು ಕಷ್ಟವೆಂದು ಬಂದಾಗ ತನ್ನ ಕೈಲಾದ ಸಹಾಯವನ್ನು ಮಾಡದೆ ಯಾವತ್ತೂ ಬರಿಗೈಯಲ್ಲಿ ಹಿಂದೆ ಕಳುಹಿಸುವ ಜಾಯಮಾನದವರಲ್ಲ. ಎಳೆಯ ಪ್ರಾಯದಿಂದಲೇ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡು ಬೆಳೆದವರು.

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು, ಆ ಮೂಲಕ ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡವರು. ಜೀವನ ನಿರ್ವಹಣೆಗೆ ಕುಲಕಸುಬು ಕ್ಷೌರಿಕ ವೃತ್ತಿ. ಹಾಗೆಯೇ ಹಿರಿಯರಿಂದ ಬಂದಂತಹ ಸ್ವಲ್ಪ ಜಮೀನಿನಲ್ಲಿ ಕೃಷಿ ಕಾಯಕ. ಇವರು ನಿರ್ವಹಿಸುವ ಯಾವುದೇ ಕೆಲಸವಿರಲಿ; ಅದರಲ್ಲಿ ಪರಿಪೂರ್ಣತೆ ಪಕ್ವತೆ ಖಂಡಿತಾ ಇರುತ್ತಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಉತ್ತಮ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಇವರ ಕಾಯಕದಲ್ಲಿರುವ ಬದ್ಧತೆ, ಪರಿಪೂರ್ಣತೆಗೆ ಸಾಕ್ಷಿ.

ನಮ್ಮ ದೇಶದ ಯಶಸ್ವಿ ಹೋರಾಟಗಳಲ್ಲೊಂದಾದ ಅಯೋಧ್ಯಾ ಚಳುವಳಿಯಲ್ಲಿ ಭಾಗವಹಿಸಿ ಸಮಾಜದಲ್ಲಿ ಗುರುತಿಸಲ್ಪಟ್ಟವರಿವರು. ಕುವೆಟ್ಟು ಗ್ರಾಮ ಪಂಚಾಯತ್ನಲ್ಲಿ ಸತತ ಹದಿನೈದು ವರ್ಷಗಳ ಕಾಲ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಪಾರದರ್ಶಕವಾದ ಇವರ ಕಾರ್ಯವೈಖರಿಯಿಂದ ಮೂಡಿಬಂದ ಯೋಜನೆಗಳಿಗಾಗಿ ಅರ್ಹವಾಗಿಯೇ ಭಾರತ ಸರಕಾರದ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಒಲಿದು ಬಂದುದಲ್ಲದೇ ಈ ಪುರಸ್ಕಾರವನ್ನು ಭಾರತದ ರಾಷ್ಟ್ರಪತಿಗಳ ಕೈಯಿಂದ ಪಡೆಯುವ ಯೋಗವು ಇವರದ್ದಾಗಿತ್ತು. ಯಾವಾಗಲೂ ತನ್ನ ಪಕ್ಷದ, ತನ್ನ ಸರಕಾರದ ನೀತಿಗೆ ವಿರೋಧವಾದರೂ ಸರಿಯೇ ಜನಪರವಾದ ಹೋರಾಟಗಳಿಗೆ ಸದಾ ಮುಂದೆ ನಿಲ್ಲುವಂತಹ ಇವರ ಗುಣವೇ ಅವರನ್ನು ಪರಿಸರದ ಸಮಾಜದ ಓರ್ವ ಆದ್ವಿತೀಯ ನಾಯಕನನ್ನಾಗಿಸಿದ್ದು.

ಬೆಳ್ತಂಗಡಿ ತಾಲ್ಲೂಕು ಭಂಡಾರಿ ಸಮಾಜದ ಅಧ್ಯಕ್ಷರಾಗಿ ಸತತ ಎರಡು ಬಾರಿ 7ವರ್ಷಗಳ ಕಾಲ ಕಾರ್ಯನಿರ್ವಹಿಸಿರುವುದೇ ಅಲ್ಲದೇ, ಗೇರುಕಟ್ಟೆಯ ಕಳಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಪ್ರಸ್ತುತ ಉಪಾಧ್ಯಕ್ಷರಾಗಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ, ದೇವಸ್ಥಾನ ಹಾಗೂ ಭಂಡಾರಿ ಮಹಾಮಂಡಲದ ಮಾಸಿಕ ಮತ್ತು ವಾರ್ಷಿಕ ಮಹಾಸಭೆಗೆ ಬೆಳ್ತಂಗಡಿ ತಾಲ್ಲೂಕಿನ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಕಚ್ಚೂರಿನಲ್ಲಿ ಸರಿಯಾದ ಸಮಯದಲ್ಲಿ ಉಪಸ್ಥಿತರಿರುತ್ತಿದ್ದರು. ದೇವಸ್ಥಾನದ ಮತ್ತು ಸಮಾಜದ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಎಲ್ಲಿ ಮನಸಿಗೆ ಹಿತ ಎಂದು ಕಾಣಿಸಿಕೊಳ್ಳದಿದ್ದರೆ ಅದನ್ನು ಪ್ರತಿರೋಧಿಸುವ ನೇರ ನಡೆ ನುಡಿಯ ವ್ಯಕ್ತಿತ್ವದವರು ಪೂವಪ್ಪ ಅಣ್ಣ.

ಪಣೆಜಾಲು ಶ್ರೀಸ್ಟಾರ್‌ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಪಣೆಜಾಲು ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷರಾಗಿ, ರೇಷ್ಮೆ ಅಂಗನವಾಡಿ ಕೇಂದ್ರದ ಅಧ್ಯಕ್ಷರಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಡಿಲ್ನಾಳದ ಅಮೃತ ಮಹೋತ್ಸವದ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾಗಿ, ಪಣೆಜಾಲು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಸಭಾಧ್ಯಕ್ಷರು, ಅಲ್ಲದೆ ಊರಿನ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದಣಿವರಿಯದೆ ದುಡಿದವರು. ಇವರೋರ್ವ ಅಪ್ರತಿಮ ಮಾತುಗಾರ. ತಾಲ್ಲೂಕಿನ ಸಮಾಜ ಬಾಂಧವರ ಮನೆಯಲ್ಲಿ ನಡೆಯುವ ಹುಟ್ಟು, ಮದುವೆ, ಮುಂಜಿ, ಸಾವು, ಯಾವುದೇ ಕಾರ್ಯಕ್ರಮವಿರಲಿ; ಇವರ ಉಪಸ್ಥಿತಿ ಇದ್ದಲ್ಲಿ ಕಾರ್ಯಕ್ರಮಕ್ಕೊಂದು ಮೆರುಗು.ತನ್ನ ಅಪ್ರತಿಮವಾದ ಮಾತಿನ ವೈಖರಿಯಿಂದ ನೆರೆದವರನ್ನು ಮಂತ್ರಮುಗ್ಧರನ್ನಾಗಿಸುವ ವಿಶೇಷವಾದ ಸಾಮರ್ಥ್ಯ ಇವರದು.

ಉಜಿರೆಯ ಕೃಷ್ಣ ಭಂಡಾರಿ ಮತ್ತು ರುಕ್ಮಿಣಿ ದಂಪತಿಗಳ ಐವರು ಹೆಣ್ಣುಮಕ್ಕಳಲ್ಲಿ ಪ್ರಥಮ ಮಗಳಾದ ಭವಾನಿಯವರನ್ನು 26/05/1971 ರಂದು ವಿವಾಹವಾಗಿ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆಗೈದ ಆರತಿಗೊಬ್ಬ ಕೀರ್ತಿಗೊಬ್ಬ ಮಕ್ಕಳೆಂಬಂತೆ ಈರ್ವರು ಮಕ್ಕಳನ್ನು ಪಡೆದು, 4ಜನ ಮೊಮ್ಮಕ್ಕಳೊಂದಿಗೆ ಸಂತೃಪ್ತಿಯ ಜೀವನವನ್ನು ನಡೆಸುತ್ತಿರುವುದು, ಮಾತ್ರವಲ್ಲದೆ ಆ ಮದುವೆಯ ಸುವರ್ಣ ಸಂಭ್ರಮ ದಿನಾಚರಣೆಯನ್ನು ಈ ದಿನ ಆಚರಿಸುತ್ತಿರುವ ನಮ್ಮ ತಾಲ್ಲೂಕಿನ ಸಮಾಜ ಬಾಂಧವರ ಕಣ್ಮಣಿ, ಮಹಾನ್ ಸಂಘಟಕ, ಸಹೃದಯಿ, ಸಾಮಾಜಿಕ ಧಾರ್ಮಿಕ ಮುಂದಾಳು ಅಣ್ಣೆ ಭಂಡಾರಿ ಯಾನೆ ಪೂವಪ್ಪ ಭಂಡಾರಿ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲು ನಾವೆಲ್ಲ ಅತೀವ ಸಂತೋಷ ಪಟ್ಟಿದ್ದೇವೆ. ತಾವು ಆರೋಗ್ಯಪೂರ್ಣವಾಗಿ ಲವಲವಿಕೆಯಿಂದ ತಮ್ಮ ಧರ್ಮಪತ್ನಿ ಮಕ್ಕಳು, ಮೊಮ್ಮಕ್ಕಳೊಂದಿಗೆ, ನೂರುಕಾಲ ಬಾಳುವಂತಾಗಲಿ ಆ ಮೂಲಕ ನಿಮ್ಮ ನಾಯಕತ್ವದಲ್ಲಿ ಭರವಸೆ ಇಟ್ಟಿರುವಂತಹ ಸಾವಿರಾರು ದೀನದಲಿತರಿಗೆ ತಾವು ನೆರಳಾಗಿರಿ ಎಂದು ಆಶಿಸುತ್ತಿದ್ದೇವೆ.

ಮುಂದೆಯೂ ನಿಮ್ಮ ಕಾರ್ಯ ಕೈಂಕರ್ಯ ಈ ರೀತಿ ಮುಂದುವರಿಯಲಿ, ನಾವು ನಂಬಿಕೊಂಡು ಬಂದಂತಹ ಕಚ್ಚೂರು ಶ್ರೀ ನಾಗೇಶ್ವರ ದೇವರು ನಿಮಗೆ ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಜೀವನ ನಡೆಸುವಂತಾಗಲಿ, ದಾಂಪತ್ಯ ಜೀವನದಲ್ಲಿ ಶತಮಾನೋತ್ಸವವನ್ನು ಆಚರಿಸುವಂತಾಗಲಿ, ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ದಂಪತಿಗಳಿಗೆ ಶುಭ ಹಾರೈಸುತ್ತದೆ.

ಭಂಡಾರಿ ವಾರ್ತೆ

Monday 24 May 2021

ತೊಕ್ಕೋಟು ಓವರ್ ಬ್ರಿಡ್ಜ್ , ಗಣೇಶ ನಗರದ ಶ್ರೀಮತಿ ಪೂರ್ಣಿಮಾ ರವಿ ಭಂಡಾರಿ ಮತ್ತು ಶ್ರೀ ರವಿ ಭಂಡಾರಿ ದಂಪತಿಗೆ 30 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ

 ತೊಕ್ಕೋಟು ಓವರ್ ಬ್ರಿಡ್ಜ್ , ಗಣೇಶ ನಗರದ ಶ್ರೀಮತಿ ಪೂರ್ಣಿಮಾ ರವಿ ಭಂಡಾರಿ ಮತ್ತು ಶ್ರೀ ರವಿ ಭಂಡಾರಿ ದಂಪತಿ ಮೇ 24 ರ ಸೋಮವಾರದಂದು ತಮ್ಮ 30 ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡರು.


ಈ ಸಂದರ್ಭದಲ್ಲಿ ಮಗಳು ರಮ್ಯಾ , ಅಳಿಯ ಶ್ರೀಪಾಲ್ , ಮಗ ಲಿಖಿತ್ ಮತ್ತು ಬಂಧು ಬಾಂಧವರು ಶುಭ ಹಾರೈಸಿದರು.


ಭಗವಂತ ದಂಪತಿಗೆ ಆಯುಷ್ಯ ಅರೋಗ್ಯ ಭಾಗ್ಯ ಸುಖ ಸಂಪತ್ತಿನ ಜೊತೆಗೆ ಸಂತೋಷ ಭರಿತ ನೆಮ್ಮದಿಯ ಜೀವನ ದಯಪಾಲಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡು ಶುಭ ಹಾರೈಸುತ್ತಿದೆ.

-ಭಂಡಾರಿ ವಾರ್ತೆ

Saturday 22 May 2021

ಹೊಸನಗರ ತಾಲೂಕು, ರಿಪ್ಪನ್ ಪೇಟೆ ಸಮೀಪದ ಹರತಾಳು ಗ್ರಾಮದ ಶ್ರೀನಿವಾಸ ಭಂಡಾರಿ ವಿಧಿವಶ

 ಹೊಸನಗರ ತಾಲೂಕು, ರಿಪ್ಪನ್ ಪೇಟೆ ಸಮೀಪದ ಹರತಾಳು ಗ್ರಾಮದ ದಿವಂಗತ ಕುಂದ ಭಂಡಾರಿ ಯವರ ಮಗ ಹರತಾಳು ಶ್ರೀನಿವಾಸ ಭಂಡಾರಿ ಇವರು ಅಲ್ಪ ಕಾಲದ ಅಸೌಖ್ಯದಿಂದ ಮೇ 21 ರಂದು ವಿಧಿವಶರಾದರು.

ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು.


ದಿವಂಗತರು ಎರಡು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ .

ದಿ.ಶ್ರೀನಿವಾಸ ಭಂಡಾರಿ,ಹರತಾಳು.ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೇ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು, ರಿಪ್ಪನ್ ಪೇಟೆ ಭಂಡಾರಿ ಜನಾಂಗದ ಸೊಸೈಟಿ, ರಿ, ಹಾಗೂ ಹೊಸನಗರ ತಾಲೂಕು ಸವಿತಾ ಸಮಾಜದಲ್ಲಿ ಸಕ್ರೀಯರು.

ಅಗಲಿದ ಆತ್ಮಕೆ ಚಿರಶಾಂತಿ ಸಿಗಲಿ , ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Tuesday 18 May 2021

ಹುಟ್ಟುಹಬ್ಬದ ಸಂಭ್ರಮದಲ್ಲಿ ಹೆಬ್ರಿ ಮುದ್ರಾಡಿಯ ಬೇಬಿ. ಅನ್ವಿ ಎ ಭಂಡಾರಿ

 ಹೆಬ್ರಿಯ ಮುದ್ರಾಡಿ ಶ್ರೀ ಅಶೋಕ್ ಭಂಡಾರಿ ಮತ್ತು ಶ್ರೀಮತಿ ಉಮಾ ಅಶೋಕ್ ಭಂಡಾರಿ ದಂಪತಿಗಳ ಮುದ್ದಿನ ಪುತ್ರಿ ಬೇಬಿ ಅನ್ವಿ ಎ ಭಂಡಾರಿ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ದಿನಾಂಕ 18/05/2021 ರಂದು ಸಂಭ್ರಮ ಸಡಗರದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ತಂದೆ ತಾಯಿ, ಅಜ್ಜಿಯಂದಿರಾದ ಶ್ರೀಮತಿ ವಸಂತಿ ಭಂಡಾರಿ ಮತ್ತು ಶ್ರೀಮತಿ ವಿಜಯಾ ಭಂಡಾರಿ. ಶ್ರೀಮತಿ ಆಶಾ ಮತ್ತು ಶ್ರೀ ಪ್ರಭಾಕರ ಭಂಡಾರಿ ಅಂಪಾರು , ಚಿಕ್ಕಪ್ಪ, ಆದರ್ಶ್ ಭಂಡಾರಿ ಮುದ್ರಾಡಿ, ಶ್ರೀಮತಿ ಉಷಾ ಮತ್ತು ಶ್ರೀ ಬಸವರಾಜ್ ಭಂಡಾರಿ ಶಂಕರನಾರಾಯಣ , ಶ್ರೀಮತಿ ಆಶಾ ಮತ್ತು ಶ್ರೀ ವಿಜಯ ಕುಮಾರ್ ಕಾಳಾವರ , ಚಿಕ್ಕಮ್ಮ ಕು. ಸುಮಾ ಹಾಗೂ ಬಂಧುಮಿತ್ರರು , ಹಿತೈಷಿಗಳು ಬೇಬಿ. ಅನ್ವಿ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಿದ್ದಾರೆ.

 

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಅನ್ವಿ ಎ ಭಂಡಾರಿಯವರಿಗೆ ಶುಭಾಶಯ ಕೋರುತ್ತಾ , ದೇವರು ಆಯುರಾರೋಗ್ಯ, ವಿದ್ಯೆ ಬುದ್ದಿ ಕರುಣಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.

ಭಂಡಾರಿ ವಾರ್ತೆ

Saturday 15 May 2021

ಪುತ್ತೂರು ತಾಲೂಕು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಗೊಂಡ ಶ್ರೀ ವಿಜಯೇಂದ್ರ ಬಿ . ಅಧಿಕಾರ ಸ್ವೀಕಾರ

 ಬೆಳ್ತಂಗಡಿ ತಾಲೂಕು ನಾವೂರ ಗ್ರಾಮದ ದಿವಂಗತ ಬಾಬು ಭಂಡಾರಿ ಮತ್ತು ಶ್ರೀಮತಿ ಲೀಲಾವತಿ ಬಾಬು ಭಂಡಾರಿ ದಂಪತಿಯ ಪುತ್ರ ಶ್ರೀ ವಿಜಯೇಂದ್ರ ಬಿ. ಅವರು ಮೇ 14 ನೇ ಶುಕ್ರವಾರದಂದು ಪುತ್ತೂರು ತಾಲೂಕು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಡ್ತಿ ಹೊಂದಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

1993 ರ ನವೆಂಬರ್ ತಿಂಗಳಿನಲ್ಲಿ ಪೊಲೀಸ್ ಇಲಾಖೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಸೇವೆಗೆ ನಿಯುಕ್ತಿಗೊಂಡರು . ಅಲ್ಲಿಂದ ಮಂಗಳೂರು ಪಶ್ಚಿಮ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ 6ವರ್ಷ ಕರ್ತವ್ಯ ನಿರ್ವಹಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 8 ವರ್ಷ ಕಾರ್ಯನಿರ್ವಹಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು ಅಲ್ಲಿ 4ವರ್ಷ ಸೇವೆ ಸಲ್ಲಿಸಿದಾಗ ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸರಕಾರ ಬಡ್ತಿ ನೀಡಿ ಬಂಟ್ವಾಳ ನಗರ ಠಾಣೆಗೆ ಹೆಡ್ ಕಾನ್ ಸ್ಟೇಬಲ್ ಆಗಿ ವರ್ಗಾವಣೆಗೊಳಿಸಲಾಗಿತ್ತು. ಅಲ್ಲಿ ಅಧಿಕಾರ ಸ್ವೀಕರಿಸಿ 6ವರ್ಷ ಕರ್ತವ್ಯ ನಿರ್ವಹಿಸಿದರು. ಅಲ್ಲಿಂದ ಕಳೆದ ಎರಡು ವರ್ಷದಿಂದ ವೇಣೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಇಲಾಖೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ನಿಷ್ಠೆಯಿಂದ ಪ್ರಾಮಾಣಿಕ ಸೇವೆಯನ್ನು ಗುರುತಿಸಿದ ಕರ್ನಾಟಕ ಸರಕಾರ ಪೊಲೀಸ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಬಡ್ತಿ ನೀಡಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಇದೀಗ ವರ್ಗಾವಣೆಗೊಳಿಸಿದೆ.

ಶುಕ್ರವಾರದಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಿಜಯೇಂದ್ರ ಬಿ ಅವರು ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾರ್ವಜನಿಕರ ದೂರು ದುಮ್ಮಾನಗಳಿಗೆ ಪ್ರಾಮಾಣಿಕತೆಯಿಂದ ಸ್ಪಂದಿಸುವ ಮನೋಭಾವ ಹೊಂದಿರುವ ವಿಜಯೇಂದ್ರ ಅವರು ಅತ್ಯುತ್ತಮ ಪೊಲೀಸ್ ಅಧಿಕಾರಿಯೇಂದೇ ಜನಮನ್ನಣೆ ಗಳಿಸಿದ್ದಾರೆ .


ವಿಜಯೇಂದ್ರ ಪತ್ನಿ ಶ್ರೀಮತಿ ಮಮತಾ ವಿಜಯೇಂದ್ರ ಮತ್ತು ಅಡ್ಯಾರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ BE ವ್ಯಾಸಂಗ ಮಾಡುತ್ತಿರುವ ಪುತ್ರ ಅಂಕಿತ್ ಹಾಗೂ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಥಮ ವರ್ಷದ BSc ವ್ಯಾಸಂಗ ಮಾಡುತ್ತಿರುವ ಪುತ್ರಿ ಅನನ್ಯ ಅವರೊಂದಿಗೆ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಹೆಸರು ಗಳಿಸಿ ಇನ್ನೂ ಉನ್ನತ ಹುದ್ದೆಯನ್ನು ಅಲಂಕರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯು ಶುಭ ಹಾರೈಸುತ್ತದೆ.

-ಭಂಡಾರಿ ವಾರ್ತೆ

Sunday 9 May 2021

ಮಣಿಪಾಲ ವಿಜಯನಗರದ ಶ್ರೀಮತಿ ಶಕುಂತಲಾ ಗೋವಿಂದ ಭಂಡಾರಿ ವಿಧಿವಶ

 ಉಡುಪಿ ತೋಟದ ಮನೆ ದಿವಂಗತ ರಾಜು ಗುಜರನ್ ಮತ್ತು ದಿವಂಗತ ಯಶೋದಾ ದಂಪತಿಯ ಪುತ್ರಿ ಹಾಗೂ ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಸಮೀಪದ ಶಾಶ್ವತ್ ಡೆಂಟಲ್ ಕ್ಲಿನಿಕ್ ಮಾಲೀಕ ಮಣಿಪಾಲ ವಿಜಯನಗರದ ನಿವಾಸಿ ಶ್ರೀ  ಗೋವಿಂದ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ಶಕುಂತಲಾ ಗೋವಿಂದ (61ವರ್ಷ)ಮೇ 8 ನೇ ಶನಿವಾರ ರಾತ್ರಿ 11 ಗಂಟೆಗೆ  ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

  ಬಂಧು ಮಿತ್ರರಲ್ಲಿ ಶಕು ಎಂದು ಚಿರಪರಿಚಿತರಾಗಿ ಎಲ್ಲರೊಂದಿಗೆ ಆತ್ಮೀಯರಾಗಿ ಪ್ರೀತಿ ವಿಶ್ವಾಸಗಳಿಸಿದ್ದರು.

 ಸಹೋದರ ಶ್ರೀ  ಪ್ರಶಾಂತ್ ಕುಮಾರ್ ಮುಂಬೈ , ಪತಿ ಶ್ರೀ ಗೋವಿಂದ ಭಂಡಾರಿ , ಪುತ್ರಿಯರಾದ ಶ್ರೀಮತಿ  ಶ್ರುತಿ ರೋಹಿತ್ ಬೆಹರಿನ್ , ಅಳಿಯ ಶ್ರೀ ರೋಹಿತ್ ಬೆಹರಿನ್ ಮತ್ತು ಡಾ॥ ಶ್ವೇತಾ , ಮೊಮ್ಮಗಳು ಬೇಬಿ ॥ ಆದ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

  ಇವರ ಅಕಾಲಿಕ ನಿಧನದ ಶೋಕತಪ್ತ  ಪತಿ ಮಕ್ಕಳು ಮೊಮ್ಮಗಳು ಹಾಗೂ ಕುಟುಂಬಸ್ಥರಿಗೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

"ಮನೆಯೇ ಮೊದಲ ಪಾಠ ಶಾಲೆ ಜನನಿಯೇ ಮೊದಲ ಗುರು"- ವಿಶ್ವ ಅಮ್ಮಂದಿರ ದಿನದ ವಿಶೇಷ.

 "ಮನೆಯೇ ಮೊದಲ ಪಾಠ ಶಾಲೆ ಜನನಿಯೇ ಮೊದಲ ಗುರು" ಈ ಕವಿ ವಾಣಿ ನನ್ನ ಜೀವನದಲ್ಲಂತೂ ನಿಜವಾಗಿದೆ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ನನಗಂತೂ ನನ್ನ ತಾಯಿಯೇ ಅಪ್ಪ ಅಮ್ಮ. ತಂದೆ ತನ್ನ ಜವಾಬ್ದಾರಿ ಮರೆತೂ ನಮ್ಮಿಂದ ದೂರವಾದನೂ? ಅಥವಾ ಬೇರೆ ಕಾರಣನೂ ತಿಳಿದಿಲ್ಲ. ಅಂದಿನಿಂದ ಎಲ್ಲ ಹೊಣೆಯನ್ನು ತಾನು ಹೊತ್ತುಕೊಂಡ ಆಕೆ ತನ್ನ ಖುಷಿಗಿಂತ ಮಕ್ಕಳ ಸಂತೋಷವೇ ದೊಡ್ಡದು ಎಂದು ತಿಳಿದು ಹಗಲು ಇರುಳೆನ್ನದೇ ನಮಗಾಗಿ ದುಡಿದಳು.

 
 
               ಯಾರಾದರೂ ನನ್ನ ಬಳಿ ನಿನಗೆ ಮಾದರಿ ಯಾರೆಂದು ಕೇಳಿದರೆ ನಾನು ಹೇಳುವ ಒಂದೇ ಹೆಸರು ಅಮ್ಮ.ಅವಳು ಬಯಸಿದ್ದರೇ ಅಂದೇ ಅವಳಿಗೆ ಬೇಕಾದ ಜೀವನ ಆರಿಸುವ ಆಯ್ಕೆ ಇತ್ತು. ತಂದೆ ಬಿಟ್ಟು ಹೋದರೂ ಈ ಪುರುಷ ಪ್ರಧಾನ ಸಮಾಜದಲ್ಲಿ ಒಬ್ಬಂಟಿಯಾಗಿ ಮೂವರು ಮಕ್ಕಳ ಜೊತೆ ಬಾಳಿನ ಚಕ್ರ ದೂಡಿದಳು.ನಮ್ಮ ಅ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬಂದವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆಯೇ ಕಷ್ಟದ ಸಮಯದಲ್ಲಿ ಇನ್ನಷ್ಟು ಅವಮಾನ ಮಾಡಿದವರಿಗೂ ಧನ್ಯವಾದ.
 
ದಾಸ ವಾಣಿ: ಅಮ್ಮ ನಿಮ್ಮ ಮನೆಗಳಲ್ಲಿ
 
                 ಜಗತ್ತಿನಲ್ಲಿರುವ ಇತರ ಸಂಬಂಧಗಳು ಮನಸ್ಸಿನಲ್ಲಿ ಕಲ್ಪಿಸಬಹುದು,ಮಾತಿನಲ್ಲಿ ಹೇಳಬಹುದು. ಆದರೆ ಮಾತೆಯ ಪ್ರೀತಿ ಎಂಬುದು ಕರುಳಬಳ್ಳಿಯ ಸಂಬಂಧ ಅದನ್ನು ವರ್ಣಿಸಲು ಅಸಾಧ್ಯ. ಮಗು ಜನನವಾದ ಕ್ಷಣದಿಂದ ಅದು ಸರ್ವಾಂಗೀಣವಾಗಿ ಬೆಳೆಯುವ ತನಕ ತಾಯಿಯ ಆರೈಕೆಯಲ್ಲಿರುತ್ತದೆ. ಆಕೆ ತನ್ನಲ್ಲಿರುವ ಒಳ್ಳೆಯ ವಿಚಾರಗಳನ್ನು ಧಾರೆಯೆರೆಯುತ್ತಾಳೆ. ಆದರೆ ದೊಡ್ಡವರಾದಂತೆ ತನ್ನ ಪ್ರಾಣವನ್ನೇ ಒತ್ತೆ ನೀಡಿ ಜನ್ಮ ನೀಡಿದ ತಾಯಿಯನ್ನು ಮರೆತು ಬಿಡುತ್ತೇವೆ.
 
                   ನನ್ನಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ನನ್ನ ತಾಯಿ ನಗು."ಹೇ ಪ್ರೀತಿಮೂರ್ತಿಯೇ ಎಲ್ಲ ಸುಖಗಳನ್ನು ಧಾರೆಯೆರೆದೆ ಎನಗೆ...ನಿನ್ನ ಮಮತೆಗೆ ಕೊನೆ ಎಂಬುದು ಎಲ್ಲಿದೆ...
   
 
 
 
 
 
 
 
ಗ್ರೀಷ್ಮಾ ಭಂಡಾರಿ,ಕಲ್ಲಡ್ಕ 
 

Saturday 8 May 2021

ಮಂಗಳೂರು ಶೇಡಿಗುರಿ ಚಂದ್ರಶೇಖರ ಬಿ .ಎಸ್ ಮಡಿಕೇರಿ ವಿಧಿವಶ

 ಮಡಿಕೇರಿ ದಿವಂಗತ ಶ್ರೀ ಟಿ. ಕೆ. ಸುಬ್ಬಯ್ಯ ಭಂಡಾರಿ ಮತ್ತು ದಿವಂಗತ ಶ್ರೀಮತಿ ದೇವಕಿ ದಂಪತಿಯ ಪುತ್ರ ಮಂಗಳೂರು ಶೇಡಿಗುರಿ ಚಂದ್ರಶೇಖರ ಬಿ.ಎಸ್

( 62 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ 8 ರ ಶನಿವಾರ ಮುಂಜಾನೆ ನಿಧನರಾದರು.

ಚಂದ್ರಶೇಖರ ಬಿ.ಎಸ್ ಬಾಟಾ ಸಂಸ್ಥೆಯಲ್ಲಿ ಮೇನೇಜರ್ ಆಗಿ ಮೂವತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ.

ದಿವಂಗತರು ಸಹೋದರರಾದ ಶ್ರೀ ಹರಿಶ್ಚಂದ್ರ ಮಡಿಕೇರಿ , ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಸತೀಶ್ ಬಿ ಎಸ್ ಪುತ್ತೂರು ಮತ್ತು ಸಹೋದರಿ ಶ್ರೀಮತಿ ಸುಜಾತ ಹರೀಶ್ ಕಾವೂರು , ಪತ್ನಿ ಶ್ರೀಮತಿ ಪೂರ್ಣಿಮಾ ಚಂದ್ರಶೇಖರ್ , ಪುತ್ರ ನಿಶ್ಚಲ್ ಕುಮಾರ್ , ಪುತ್ರಿ ಡಾ॥ ಶ್ರೀನಿಧಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ .
 ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಇವರ ಅಗಲುವಿಕೆಯ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

Friday 7 May 2021

ಸಮಾಜ ಸೇವಕ ತೋಕೂರು ಗೋಪಾಲ ಭಂಡಾರಿ (ಟಿ.ಜಿ.ಭಂಡಾರಿ) ವಿಧಿವಶ

 ನಿಸ್ವಾರ್ಥ ಸಮಾಜ ಸೇವಕ ಮಿತಭಾಷಿ ಜ್ಞಾನಭಂಡಾರದ ಅಘಾದ ವ್ಯಕ್ತಿತ್ವದ ತೋಕೂರು ಗೋಪಾಲ ಭಂಡಾರಿ (ಟಿ.ಜಿ.ಭಂಡಾರಿ) ತಾರೀಕು ಮೇ 6 ರಂದು ಮದ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಶ್ರೀಯುತರು ಪತ್ನಿ ಶ್ರಿಮತಿ ಪುಷ್ಪಾ, ಪುತ್ರ ಅರವಿಂದ, ಸೊಸೆ ವರ್ಷಾ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

ಸುರತ್ಕಲ್ ಎನ್‌ಐಟಿಕೆಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತಿ ಹೊಂದಿದ್ದ ಅವರು ತನ್ನ 67 ನೇ ವರ್ಷಕ್ಕೆ ಅಂತಿಮ ವಿದಾಯ ಹೇಳಿದ್ದಾರೆ. ತೋಕೂರಿನ ಗ್ರಾಮೀಣ ಭಾಗದಲ್ಲಿ ಸಮಾಜ ಸೇವೆಯ ಮೂಲ ಸಂಕಲ್ಪವನ್ನು ಹೊಂದಿದ್ದ ಗೋಪಾಲ ಭಂಡಾರಿ ಅವರು ತೋಕೂರು ಯುವಕ ಸಂಘದ ಮಾಜಿ ಅಧ್ಯಕ್ಷರಾಗಿ ಸಂಘವನ್ನು ಬಲಿಷ್ಠ ಸಂಘಟನಾ ಶಕ್ತಿಯಲ್ಲಿ ಬೆಳೆಸುವಲ್ಲಿ ಸಫಲರಾಗಿದ್ದರು, ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಸಂಘದ ಸುಸಜ್ಜಿತ ಸೇವಾ ಕಟ್ಟಡ ನಿರ್ಮಾಣಕ್ಕೆ ಪರೋಕ್ಷವಾಗಿ ದುಡಿದಿದ್ದರು. ಅದರ ಸುವರ್ಣ ಮಹೋತ್ಸವದಲ್ಲಿ ಗೌರವಾಧ್ಯಕ್ಷರಾಗಿ ತಮ್ಮ ಸೇವಾ ಮನೋಭಾವನೆಯನ್ನು ಇನ್ನಷ್ಟು ಅರಳಿಸಿದವರು. ತನ್ನ ಕೊನೆಯ ಉಸಿರು ಇರುವವರೆಗೂ ಸಂಸ್ಥೆಯ ಬೆನ್ನೆಲುಬಾಗಿದ್ದರು.

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಮಾಜಿ ಸದಸ್ಯರಾಗಿ ದೇವಳದ ಈ ಹಿಂದಿನ ಬ್ರಹ್ಮಕಲಶೋತ್ಸವ ಇತ್ಯಾದಿ ಉತ್ಸವಾದಿಯಲ್ಲಿ ಪ್ರಾಮಾಣಿಕವಾಗಿ ದುಡಿದವರು. ರಾಷ್ಟ್ರದಲ್ಲಿಯೇ ಮೆಚ್ಚುಗೆ ಗಳಿಸಿರುವ ತೋಕೂರು ವಿಶ್ವಬ್ಯಾಂಕ್‌ನ ನೀರು ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದುಕೊಂಡು ಸಮಿತಿಯ ಮೂಲಕ ತಮ್ಮ ತಂತ್ರಗಾರಿಕೆಯ ಮೂಲಕ ವಿಶ್ವಸಾರ್ಹ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಹೊರ ರಾಜ್ಯದಲ್ಲಿಯೂ ಅದರ ಬಗ್ಗೆ ಮಾಹಿತಿ ನೀಡುವಲ್ಲಿ ಯಶಸ್ದಾಗಿದ್ದರು.

ರಾಷ್ಟ್ರೀಯ ಸೇವಾ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲು ಪಾಲ್ಗೊಂಡು ರಾಷ್ಟ್ರಪ್ರೇಮವನ್ನು ಅರಳಿಸಿದವರು.

ಗ್ರಾಮದಿಂದ ಅಂತಾರಾಷ್ಟ್ರೀಯ ಸಂಸ್ಥೆಯೆಡೆಗೆ:

ತೋಕೂರು ಎನ್ನುವ ಸ್ವಚ್ಚಂದ ಗ್ರಾಮದಿಂದ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಕ್ಲಬ್‌ನ ಮೂಲ್ಕಿಯ ಸದಸ್ಯರಾಗಿ ಪದಾಧಿಕಾರಿಯಾಗಿ, ನಿರ್ದೇಶಕರಾಗಿ ರಜತ ಸಂಭ್ರಮದಲ್ಲಿರುವ ಮೂಲ್ಕಿ ರೋಟರಿ ಕ್ಲಬ್‌ನ ರಜತ ವರ್ಷದ ಅಧ್ಯಕ್ಷರಾಗಿ ನಿಯೋಜಿತರಾಗಿ ಆಯ್ಕೆಯಾಗಿದ್ದು, ಈಗಾಗಲೇ ಗೋವಾದಲ್ಲಿ ನಡೆದ ವಿಶೇಷ ರಾಷ್ಟ್ರೀಯ ತರಬೇತಿಯನ್ನು ಪಡೆದು ಬಂದಿದ್ದರು. ಅವರ ವಾಕ್‌ಚಾತುರ್ಯ ಹಾಗೂ ಮಾಹಿತಿ ಕಲೆಗಾರಿಕೆ ರೋಟರಿ ಸಂಸ್ಥೆಗೆ ಅಪಾರವಾಗಿ ಸಿಕ್ಕಿತ್ತು. ಅದಿನ್ನು ನೆನಪು ಮಾತ್ರ.

ಕುಟುಂಬಕ್ಕೆ ಈ ದುಖಃವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಭಗವಂತ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

ಓಂ ನಮಃ ಶಿವಾಯ- ರಾಜಶೇಖರ್ ಭಂಡಾರಿ ಬೆಂಗಳೂರು 

 ನಾಳೆ 'ಮೇ' 8 ಕಚ್ಚೂರಿನಲ್ಲಿ ಭಂಡಾರಿ ಕುಲೋದ್ಧಾರಕ  ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ. ಸ್ವಾಮಿಗೆ ವಿಶೇಷ  ಸೇವೆಗಳು  ಸಲ್ಲುವ, ಅವನ  ರೂಪಗಳನ್ನು  ಕಣ್ತುಂಬಿಕೊಳ್ಳುವ, ಅನವರತ ನಮ್ಮನ್ನು ಕಾಯೋ ಎಂದು ಬೇಡುವ, ಸಮಾಜ ಬಾಂಧವರು ನಾವುಗಳು ಒಂದೆಡೆ ಸೇರುವ , ನೆಂಟರಿಷ್ಟರನ್ನು ಕಂಡಾಗ ಹರ್ಷಿಸುವ, ಭಗವಂತನ ಸೇವೆಗಳಲ್ಲಿ  ಭಾಗವಹಿಸುವ, ಸಲ್ಲಿಸುವ, ಮನರಂಜನಾ  ಕಾರ್ಯಕ್ರಮಗಳಲ್ಲಿ ಭಾಗಿಯಾಗುವ, ಒಟ್ಟಾರೆ ಹೇಳಬೇಕೆಂದರೆ ಶ್ರೀ ನಾಗೇಶ್ವರ ಸ್ವಾಮಿಯ  ಕೃಪಾ ಕಟಾಕ್ಷಕ್ಕೆ ಪಾತ್ರರಾಗುವ  ದಿನ.🙏

  ಆದರೇನು ಮಾಡುವುದು...??? ಕೊರೋನ  ವ್ಯೆರಾಣು ಈ ಬಾರಿಯೂ ಉತ್ಸವಕ್ಕೆ ತನ್ನ ಅಡ್ಡಗಾಲು ಇಟ್ಟಿದೆ. ಇರಲಿ ಏನಾಗಬೇಕೆಂಬುದು ಇದೆಯೋ ಅದು ಆಗಲೇಬೇಕು. ಅದು ಅವನ ಸಂಕಲ್ಪ.

ಆದರೆ ನಾವು ಮಾತ್ರ ನಮ್ಮಸ್ವಾಮಿ ಯನ್ನುನಾವಿರುವಲ್ಲಿಂದಲೇ ನೆನೆಯೋಣ. ಸದಾ ಅವನ ಅನುಗ್ರಹವನ್ನು ಬೇಡೋಣ.  ಅವನಾಶೀರ್ವಾದದ ಶ್ರೀರಕ್ಷೆಯಲ್ಲಿ ಜೀವಿಸೋಣ.

'ಮೇ 8'  ರಂದು ನಮ್ಮೆಲ್ಲರ ಮೊಬೈಲ್ ನ ಸ್ಟೇಟಸ್ ನಲ್ಲಿ ನಮ್ಮಸ್ವಾಮಿ (Boss) ರಾರಾಜಿಸಲಿ. ಅವನ online ಆಶೀರ್ವಾದ  ನಮಗೆಲ್ಲರಿಗೂ ಲಭಿಸಲಿ.

ಸರ್ವೇಜನ: ಸುಖಿನೋ ಭವಂತು

 ಶ್ರೀ ನಾಗೇಶ್ವರಾಯ ನಮಃ

 

 ರಾಜಶೇಖರ್ ಭಂಡಾರಿ, ಬೆಂಗಳೂರು 

 

ಮೂಡಬಿದ್ರೆ ಅಲಂಗಾರಿನ ಶ್ರೀ ಮಾಧವ ಭಂಡಾರಿ ( MR Bhandary) ಮತ್ತು ಶ್ರೀಮತಿ ಶಾರದ ಮಾಧವ ಭಂಡಾರಿ ದಂಪತಿಗೆ ವೈವಾಹಿಕ ಜೀವನದ ಸುವರ್ಣ ವಾರ್ಷಿಕೋತ್ಸವದ ಸಂಭ್ರಮ

 ಮೂಡಬಿದ್ರೆ  ಅಲಂಗಾರಿನ ಶ್ರೀ  ಮಾಧವ ಭಂಡಾರಿ ( MR Bhandary) ಮತ್ತು ಶ್ರೀಮತಿ ಶಾರದ ಮಾಧವ ಭಂಡಾರಿ ದಂಪತಿ ತಮ್ಮ ವೈವಾಹಿಕ ಜೀವನದ  50ನೇ  ವರ್ಷದ ವಾರ್ಷಿಕೋತ್ಸವವನ್ನು ತಾ 06.05.2021ರ ಗುರುವಾರ ಕುಟುಂಬ ಸದಸ್ಯರೊಡಗೂಡಿ ಸಂತೋಷದ ಸಂಭ್ರಮದಿಂದ ಆಚರಿಸಿದರು.

ಶ್ರೀ  ಮಾಧವ ಭಂಡಾರಿ ( MR Bhandary) ಯವರು ಮುಂಬಯಿ‌ ಭಂಡಾರಿ ಸೇವಾ ಸಮಿತಿಯ ಮಾಜೀ ಅಧ್ಯಕ್ಷರಾಗಿ ,ಭಂಡಾರಿ ಸಮಾಜ ಸಂಘ ಮೂಡುಬಿದಿರೆಯ ಸ್ಥಾಪಕ ಅದ್ಯಕ್ಷ ರಾಗಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಒಂದು ಕಾಲದಲ್ಲಿ ನಿರ್ಜೀವವಾಗಿದ್ದ ಮುಂಬೈ ಭಂಡಾರಿ ಸೇವಾ ಸಮಿತಿಗೆ ಹೊಸ ಕಾಯಕಲ್ಪ ಕೊಟ್ಟ ಕೀರ್ತಿ ಶ್ರೀ  ಮಾಧವ ಭಂಡಾರಿ ( MR Bhandary) ಗೆ ಸಲ್ಲುತ್ತದೆ. ಅದನ್ನು  ಪುನರುತ್ಥಾನ ಮಾಡುವಲ್ಲಿ ಸಮಾಜದ ಎಲ್ಲಾ ಸದಸ್ಯರ ಜೊತೆಗೆ ಶ್ರೀ ಮಾಧವಣ್ಣನವರ ಕೊಡುಗೆ ಅಪಾರ.

ಇವರ ಐವತ್ತು ಸಂವತ್ಸರದ ದೀರ್ಘ ಕಾಲದ ವಿವಾಹ ಸಂಬಂಧ ನಮಗೆಲ್ಲರಿಗೂ ಒಂದು ಪ್ರೇರಣೆ. 

ಭಗವಂತ ಈ ಆದರ್ಶ ದಂಪತಿಗಳಿಗೆ ಆಯುಷ್ಯ ಅರೋಗ್ಯ ಭಾಗ್ಯ ಸುಖ ಸಂಪತ್ತಿನ ಜೊತೆಗೆ ಸಂತೋಷ ಭರಿತ ನೆಮ್ಮದಿಯ ಜೀವನ ದಯಪಾಲಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸಿಕೊಂಡು ಶುಭ ಹಾರೈಸುತ್ತಿದೆ.

-ಭಂಡಾರಿ ವಾರ್ತೆ

Sunday 2 May 2021

ಬೆಳ್ತಂಗಡಿ ತಾಲ್ಲೂಕು ಭಂಡಾರಿ ಸಮಾಜ ಸಂಘ (ರಿ) ಇದರ ಅಧ್ಯಕ್ಷರಾಗಿ ಶ್ರೀ ಉಮೇಶ್ ಭಂಡಾರಿ ಉಜಿರೆ, ಕಾರ್ಯದರ್ಶಿಯಾಗಿ ಶ್ರೀ ಗಂಗಾಧರ ಭಂಡಾರಿ ಕಾಯರ್ತಡ್ಕ, ಉಪಾಧ್ಯಕ್ಷರಾಗಿ ಶ್ರೀ ಜಿ. ಬಾಲಕೃಷ್ಣ ಭಂಡಾರಿ ಕೋಡ್ಯೇಲು ಮಡಂತ್ಯಾರು ಅವಿರೋಧವಾಗಿ ಆಯ್ಕೆ.

 ಭಂಡಾರಿ ಸಮಾಜ ಸಂಘ (ರಿ) ಬೆಳ್ತಂಗಡಿ ಇದರ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ 20/04/2021ನೇ ಮಂಗಳವಾರ ಪಣೆಜಾಲು ಭಂಡಾರಿ ಸಮಾಜ ಸಂಘದ ಆವರಣದಲ್ಲಿ ಜರಗಿತು.

ಬೆಳಿಗ್ಗೆ 10.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ನಡೆಸಲಾಯಿತು, ನಂತರ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮವು ಮಾ/ ಮನ್ವಿತ್ ಭಂಡಾರಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತ್ತು, ವೇದಿಕೆಯಲ್ಲಿದ್ದ ಅತಿಥಿಗಳನ್ನು ಸಂಘದ ಅಧ್ಯಕ್ಷರಾದ ಶ್ರೀ ಎ. ಪೂವಪ್ಪ ಭಂಡಾರಿ ಪಣೆಜಾಲು, ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ಶ್ರೀ ಅಶೋಕ್ ಭಂಡಾರಿ, ಗುಂಡಿಯಲ್ಕೆ ವಾರ್ಷಿಕ ವರದಿ ವಾಚಿಸಿದರು.

 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ತಾಲ್ಲೂಕು ಭಂಡಾರಿ ಸಮಾಜದ ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲ್ ಭಂಡಾರಿ ಪುಣ್ಕೆದಡಿ, ತಾಲ್ಲೂಕು ಸಮಾಜ ಸಂಘದ ಸಂಘಟನೆಯನ್ನು ಪ್ರಸಂಶಿಸಿದರು. ಸವಿತಾ ಸಮಾಜ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಶ್ರೀ ಗೋಪಾಲ್ ಭಂಡಾರಿ ಪರಾರಿ, ಇವರು ಮಾತನಾಡಿ ಸವಿತಾ ಸಮಾಜ ಮತ್ತು ಭಂಡಾರಿ ಸಮಾಜ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎರಡೂ ಒಟ್ಟೊಟ್ಟಿಗೆ ಬೆಳೆಯುತ್ತಿರುವ ಅದ್ಬುತ ಸಂಘಟನೆ ಎಂದು ಹೇಳಿದರು. ನಂತರ ಬೆಳ್ತಂಗಡಿ ತಾಲ್ಲೂಕಿನ ಭಂಡಾರಿ ಸಮಾಜದಿಂದ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಗೊಂಡ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸಲಾಯಿತು.

ನಂತರ ಮುಂದಿನ ಅವಧಿಗೆ ಬೆಳ್ತಂಗಡಿ ತಾಲ್ಲೂಕು ಭಂಡಾರಿ ಸಮಾಜ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀ ಉಮೇಶ್ ಭಂಡಾರಿ ಉಜಿರೆ, ಕಾರ್ಯದರ್ಶಿಯಾಗಿ ಶ್ರೀ ಗಂಗಾಧರ ಭಂಡಾರಿ ಕಾಯರ್ತಡ್ಕ, ಉಪಾಧ್ಯಕ್ಷರಾಗಿ ಶ್ರೀ ಜಿ. ಬಾಲಕೃಷ್ಣ ಕೋಡ್ಯೇಲು- ಮಡಂತ್ಯಾರು, ಕೋಶಾಧಿಕಾರಿಯಾಗಿ ಶ್ರೀ ಸದಾಶಿವ ಭಂಡಾರಿ ಪಡ್ತ್ರೆ - ವೇಣೂರು, ಜೊತೆ ಕಾರ್ಯದರ್ಶಿಯಾಗಿ, ಶ್ರೀ ನಾರಾಯಣ ಭಂಡಾರಿ, ಕುಂಡದಬೆಟ್ಟು ಇವರುಗಳು ಅವಿರೋಧವಾಗಿ ಆಯ್ಕೆಗೊಂಡರು. ನಂತರ ವಾರ್ಷಿಕ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಸಹಕರಿಸಿದ ಬಂಧುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಬೆಳ್ತಂಗಡಿ ತಾಲ್ಲೂಕು ಯುವ ವೇದಿಕೆ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಭಂಡಾರಿ ಉಜಿರೆ, ಇವರು ಧನ್ಯವಾದಗೈದರು, ಕಾರ್ಯಕ್ರಮವನ್ನು ಶ್ರೀ ನಾರಾಯಣ ಭಂಡಾರಿ ಕುಂಡದಬೆಟ್ಟು ಇವರು ನಿರೂಪಿಸಿದರು.