BhandaryVarthe Team

BhandaryVarthe Team
Bhandary Varthe Team

Thursday, 7 October 2021

"ಆದ್ಯಾ" - ಎ.ಆರ್.ಭಂಡಾರಿ.ವಿಟ್ಲ.

 

ಆತ್ಮೀಯ ಓದುಗ ಮಿತ್ರರೇ ,
ಇಂದಿನಿಂದ ಮುಂದಿನ 9 ದಿನಗಳವರೆಗೆ ನವರಾತ್ರಿ ವಿಶೇಷಾಂಕದಲ್ಲಿ  ಎ ಆರ್ ಭಂಡಾರಿ ವಿಟ್ಲ ರವರ ವಿಶೇಷ ಕಥಾ ಸರಣಿ ಪ್ರಕಟವಾಗಲಿದೆ.
ತಾವುಗಳು ಎಂದಿನಂತೆ ಓದಿ ಪ್ರೋತ್ಸಾಹಿಸುವಿರೆಂಬ ಆಶಯವಿದೆ.

 

ಕಥೆ-1

ಆದ್ಯಾ

 'ಬೆಳ್ಮುಗಿಲು' ಹೊನ್ನ ಬಣ್ಣದಲ್ಲಿ ಅದ್ದಿ ತೆಗೆದಂತೆ ಸೂರ್ಯನ ಬೆಳಕಿಗೆ ಪ್ರತಿಫಲಿಸುತ್ತಿತ್ತು. ಬೀಸಿ ಬರುವ ತಂಗಾಳಿ ಬೆರಗುಗೊಳಿಸುವ ಬೆಟ್ಟಸಾಲು ಬರಸೆಳೆದು ಬರಮಾಡಿಕೊಳ್ಳುವ ಕಾನನದ ಐಸಿರಿ.... ಮರವಂತೆಯ ಮರಳಲ್ಲಿ ಆಟವಾಡುತ್ತಾ ಪ್ರಕೃತಿಯ ಅದ್ಭುತಕ್ಕೆ ನವೀನ್ ಹಾಗೂ ರಮ್ಯಾ ಮನಸೋತಿದ್ದಾಯ್ತು. ಆನತಿ ದೂರದಲ್ಲಿ "ಆದ್ಯಾ" ಮರಳಿನ ಅರಮನೆ ಕಟ್ಟುವುದರಲ್ಲಿ ನಿರತಳಾಗಿದ್ದಳು. ಅವಳ ಪ್ರಯತ್ನ ಪದೇಪದೇ ಸೋತಾಗ , ಮೂತಿಯುಬ್ಬಿಸಿ ಅಪ್ಪನ ಬಳಿ ಓಡಿ ಬಂದಿದ್ದಳು. "ಅಪ್ಪನಿಗೆ ಅಮ್ಮನ ಕಂಡರೆ ಮಾತ್ರ ಪ್ರೀತಿ. ನಂಜೊತೆ ಆಟನೆ ಆಡ್ತಿಲ್ಲ" ಅಂದವಳ ಮಾತಿಗೆ ನಕ್ಕು ನವೀನ್ - ರಮ್ಯಾ ಅವಳ ಜೊತೆ ಮರಳು ಗೂಡು ಕಟ್ಟುವ ಸಾಹಸಕ್ಕೆ ಕೈ ಜೋಡಿಸಿದ್ದಾಯ್ತು. ಕಪ್ಪೆಚಿಪ್ಪುಗಳನ್ನು ಆಯುತ್ತಾ ಅಲೆಗಳ ಜೊತೆ ಕುಣಿದಾಡುತ್ತಾ "ಆದ್ಯಾ" ಮೈಮರೆತಿದ್ದಳು.. ಎಂಟರ ಪೋರಿಗೆ 'ಕೋರೊನ' ಬಂದಾಗಿನಿಂದ, ಮನೆಯೊಳಗಿನ ಆಟ, ಆನ್ಲೈನ್ ಕ್ಲಾಸ್ಗಳು ಖುಷಿಯನ್ನು ಕಿತ್ತುಕೊಂಡಂತಾಗಿತ್ತು.

ಸಂಕ್ರಾಂತಿ ಹಬ್ಬಕ್ಕೆ ಕುಂದಾಪುರದ ಅಜ್ಜಿಮನೆಗೆ ಬಂದವಳು ತಂದೆ ತಾಯಿ ಜೊತೆ ಮರವಂತೆಯಲ್ಲಿ ಮನಸೋ ಇಚ್ಛೆ ಆಡಿ ಕುಣಿದು ದಣಿದಿದ್ದಳು.
ಅಜ್ಜಿ- ತಾತ, ಮಾಮ -ಅತ್ತೆ ಯರ ಜತೆ ಪಕ್ಕದ ಮನೆಯ ರಾವ್ ದಂಪತಿಗಳು ಅವಳ ಜತೆ ಮಗುವಾಗಿದ್ದರು.ಇಂದು‌ ಹಠ ಹಿಡಿದು ಮರವಂತೆಗೆ ಬಂದಿದ್ದಾಯ್ತು.
"ಅಮ್ಮ ನಾನು ಆ ಮರದ ಬಳಿ ಹೋಗಿ ಕುಳಿತುಕೊಳ್ಳಲಾ? ಅಂದಾಗ ಎಚ್ಚೆತ್ತ ರಮ್ಯ, ಆ ಕಡೆ ನೋಡಿ ಮಕ್ಕಳಲ್ಲಿ ಆಡಿ ಕೊಂಡಿರುವುದನ್ನು‌ ಗಮನಿಸಿ 'ಆಯ್ತು' ಎಂದು ತಲೆಯಾಡಿಸಿದಳು. ನವೀನನ ಜೊತೆ ಸೇರಿ ತಾವು ಮದುವೆಗೆ ಮೊದಲು ಕಡಲತೀರದಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ, ಆಗಾಗ ಆದ್ಯಳ ಕಡೆ ಕಣ್ಣು ಹಾಯಿಸ ತೊಡಗಿದಳು.ಆದ್ಯ ಮಕ್ಕಳೊಂದಿಗೆ ಆಟ ಮಾಡುವುದರಲ್ಲಿ ಮಗ್ನ ವಾಗಿದ್ದು ಕಂಡು ಸುಮ್ಮನಾದಳು.

 

ಸ್ವಲ್ಪ ಹೊತ್ತಿನಲ್ಲಿ ಅಮ್ಮನ ಬಳಿ ಬಂದ ಆದ್ಯ 'ರಮ್ಯ'ನ ಮೊಬೈಲ್ ಕಿತ್ತುಕೊಂಡು ಓಟಕಿತ್ತಿದ್ದಳು. ಸೂರ್ಯ ಸಮುದ್ರದಾಳದ ಇಳಿಯುವ ಸೂಚನೆ ಸಿಕ್ಕ ಕೂಡಲೇ ರಮ್ಯಾ ನವೀನ ಆದ್ಯಳತ್ತ‌ ಗಮನ ಹರಿಸಿದರೆ ಆಕೆಯ‌ ಸುಳಿವೆ ಇಲ್ಲ. ಮೊಬೈಲ್ ಬೇರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಜತೆಯಲ್ಲಿದ್ದ ಮಕ್ಕಳು ಕಾಣುತ್ತಿಲ್ಲ.ಸಮುದ್ರದ ಅಲೆಗಳ ಜತೆ ಮೈ ಮರೆತಿದ್ದಕ್ಕೆ ತಮ್ಮನ್ನು ತಾವು ದೂಷಿಸುತ್ತಾ ಗಾಬರಿಯಿಂದ ಅಲ್ಲಿ ಇಲ್ಲಿ ಹುಡುಕಾಡಿದ ಬಳಿಕ ಆದ್ಯ ಐಸ್ ಕ್ರೀಮ್ ಮೆಲ್ಲುತ್ತ ಮನೆಯ ಸಮೀಪದ ರಾವ್ ದಂಪತಿಗಳು ಜತೆ ಬರುತ್ತಿದ್ದಳು. ರಮ್ಯ- ನವೀನರ ಉಸಿರು ಮತ್ತೆ ಬಂದಂತಾಯಿತು. ಆದ್ಯಾಳನ್ನು ಗದರಬೇಕೆನ್ನುವಷ್ಟರಲ್ಲಿ ರಾವ್ ದಂಪತಿ ತಡೆದಿದ್ದರು. ಅವರನ್ನು ಹೊರಡಿಸಿಕೊಂಡು ಮನೆಗೆ ಜೊತೆಯಲ್ಲೆ ನಡೆದಿದ್ದರು.

ಆದರೆ "ಆದ್ಯಾ" ಅನ್ಯಮನಸ್ಕಳಾಗಿಯೇ ಇದ್ದಳು. ರಮ್ಯಾ - ನವೀನ್ , ಆದ್ಯ ಆಟವಾಡಿ ಸುಸ್ತಾಗಿದ್ದಾಳೆ ಎಂದೇ ಭಾವಿಸಿದ್ದರು.
ಎಲ್ಲರೂ ರಾತ್ರಿಯೂಟ ಮುಗಿಸಿ ನಿದಿರೆಗೆ ಶರಣಾಗಿದ್ದರು.ನಿಶೆಯ ಮಡಿಲು ಸೇರಿದ ರವಿ ಉಷೆಯ ಸೆರಗು ಹಿಡಿದು ಭೂಮಿಗಿಳಿದಿದ್ದ.ಅಜ್ಜ-ಅಜ್ಜಿ ಮಾವನೊಂದಿಗೆ ತುಂಟಾಟ ಮಾಡುತ್ತಾ ಬೆಳಗಿನ ತಿಂಡಿ ತಿನ್ನುತ್ತಿದ್ದ ಆದ್ಯ ಕಾಲಿಂಗ್ ಬೆಲ್ಲಿನ ಸದ್ದಿಗೆ ಹೊರಗೋಡಿ ಬಂದಿದ್ದಳು.ಹಾಲ್ ನಲ್ಲಿ ಪೇಪರ್ ಓದುತ್ತ ಕುಳಿತಿದ್ದ ರಮ್ಯಾ ಹಾಗೂ ನವೀನ್ ಆಶ್ಚರ್ಯದಿಂದ ಎದ್ದುನಿಂತರು. ನವೀನನ ಗೆಳೆಯ ಪಕ್ಕದಮನೆಯಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ರಾವ್ ದಂಪತಿಗಳ ಮಗ "ಮನೋಜ್" ಜಿಲ್ಲಾಧಿಕಾರಿಗಳೊಂದಿಗೆ ಮನೆಯೊಳಗಡೆ ಅಡಿ ಇಟ್ಟ.ಮನೆಯವರೆಲ್ಲ ಆಶ್ಚರ್ಯಚಕಿತರಾದರು. ಇನ್ಸ್ಪೆಕ್ಟರ್ ಮನೋಜ್ 'ಆದ್ಯಾ'ಳನ್ನು ಹಿಡಿದೆತ್ತಿ ಮುತ್ತಿಕ್ಕಿದರು.ಜಿಲ್ಲಾಧಿಕಾರಿ ಬರಸೆಳೆದು ಅಪ್ಪಿಕೊಂಡರು. ಅಷ್ಟೊತ್ತಿಗೆ ಮನೆಯವರ ಕುತೂಹಲಕ್ಕೆ 'ಮನೋಜ'ನ ತಂದೆ ದನಿಯಾದರು.

ಹಿಂದಿನ ದಿನ ಸಮುದ್ರ ಕಿನಾರೆಯ ಮರದ ಬಳಿ ಆಟವಡುತ್ತಿದ್ದ ಆದ್ಯ ಅಲ್ಲಿದ್ದ ಮಕ್ಕಳೆಲ್ಲಾ ಹೋದ ಬಳಿಕ ಒಬ್ಬಂಟಿಯಾದಳು.ಕಪ್ಪೆ ಚಿಪ್ಪಿ ಆರಿಸುತ್ತಾ ನಡೆದ ಆಕೆ ಅಚಾನಕ್ಕಾಗಿ ದುಷ್ಕರ್ಮಿಗಳ ಮಾತಿಗೆ ಕಿವಿ ಯಾಗಿದ್ದಳು. ಭಾರತ ಸಂಶೋಧಿಸಿದ 'ಕೊರೋನ ವ್ಯಾಕ್ಸಿನ್' ಈಗಾಗಲೇ "ಕೋರೋನ ವಾರಿಯರ್ಸ್"ಗೆ ನೀಡಲೆಂದು ಮಂಗಳೂರು ಸಹಿತ ದೇಶದ ಇನ್ನಿತರ ನಗರಗಳನ್ನು ತಲುಪಿ ಆಗಿತ್ತು.ಈ ದುಷ್ಕರ್ಮಿಗಳ ತಂಡ ಅವುಗಳಿಂದ ಫಲಾನುಭವಿಗಳಿಗೆ ತೊಂದರೆ ಉಂಟು ಮಾಡುವುದಕ್ಕಾಗಿ ಪ್ರತಿಕೂಲಕಾರಿ ಔಷಧಿಯನ್ನು ಸಿದ್ಧಪಡಿಸಿ ಕೇಂದ್ರ ಸರಕಾರದ ಯೋಜನೆಯನ್ನು ಯಶಸ್ಸು ದೊರೆಯದಂತೆ ಮಾಡುವುದರೊಂದಿಗೆ ನಮ್ಮ ದೇಶ ಸಂಶೋಧಿಸಿದ ವ್ಯಾಕ್ಸೀನ್ ನ್ನು ಶತ್ರು ದೇಶಕ್ಕೆ ಸಾಗಿಸಲು ಸಿದ್ಧತೆ ನಡೆಸಿದ್ದರು..ಇದರ ಬಗ್ಗೆ ಪೂರ್ಣ ಅರಿವಿರದೆ ಇದ್ದರೂ, ದೇಶಕ್ಕೆ ಕಂಟಕಪ್ರಾಯರಾಗಿ ಇದ್ದಾರೆ ಎಂಬುದನ್ನು ಅರಿತು ಅವರ ಚಲನವಲನವನ್ನು ವಿಡಿಯೋ ಮಾಡಿದ್ದಳು. ಜತೆಗೆ ಅವರ ಬಳಿ, ತಾಯಿಯ ಮೊಬೈಲ್ ಕಳೆದು ಹೋಗಿದೆ ಎಂದು ಸುಳ್ಳು ಹೇಳಿ ಅವರ ಮೊಬೈಲ್ನಿಂದ ತನ್ನ ತಾಯಿಯ ಫೋನಿಗೆ ಕರೆಯಾಯಿಸಿದಳು. ಅವಳು ಸ್ವಲ್ಪ ದೂರದಲ್ಲಿದಲ್ಲಿ ಇಟ್ಟು ಬಂದಿದ್ದ ಮೊಬೈಲ್ ನ್ನು ಅವರಲ್ಲೊಬ್ಬ ಹುಡುಕಾಡಿ ತಂದುಕೊಟ್ಟಿದ್ದ. ಅಷ್ಟರಲ್ಲಿ ಪಕ್ಕದಮನೆಯ ದಂಪತಿಗಳನ್ನು ದೂರದಲ್ಲಿ ಕಂಡು ತಾನೂ ಅವರ ಜೊತೆ ಹೋಗುವುದಾಗಿ ಓಡಿ ಬಂದಿದ್ದಳು. ಜೊತೆಯಲ್ಲಿ ತನ್ನ ಪ್ರೀತಿಯ ಮಾವ ಪೊಲೀಸ್ ಅಧಿಕಾರಿ 'ಮನೋಜ್'ಗೆ ತನಗೆ ತಿಳಿದ ವಿಷಯ ಹೇಳಿ ವಿಡಿಯೋ ಹಾಗೂ ವ್ಯಕ್ತಿಯೊಬ್ಬರ ನಂಬರನ್ನು ರಾವ್ ತಾತನ ಸಹಾಯದಿಂದ ಕಳಿಸಿದಳು. ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ದುಷ್ಕರ್ಮಿಗಳ ಜಾಡನ್ನು ಅವರಿಗೆ ಅರಿವಿಲ್ಲದಂತೆ ಹಿಡಿದು ಬಂಧಿಸಿತ್ತು.

ಬಾಲೆಯೊಬ್ಬಳ ಸಮಯಪ್ರಜ್ಞೆಯಿಂದ ದೇಶಕ್ಕೆ ಒದಗಿದ ಆಪತ್ತು ಪರಿಹಾರವಾಗಿತ್ತು . ನನ್ನ ದೇಶ ಯಾವಾಗಲೂ "ಸೇಫ್" ಆಗಿರಬೇಕೆಂದು ಈ ರೀತಿ ಮಾಡಿದೆ ಎಂದವಳ ಮುಗ್ಧತೆಗೆ ಅವಳ ಜಿಲ್ಲಾಧಿಕಾರಿಗಳು ತಲೆದೂಗಿದರು.ಎಳೆಯ ಮಗುವಿನ ದೇಶಪ್ರೇಮ ಸಮಯಪ್ರಜ್ಞೆ ಹಾಗೂ ಸಾಹಸ ಕ್ಕೆ , ಹೆತ್ತವರು ಶಿಕ್ಷಕರು ಕಳಿಸಿದ ಸಂಸ್ಕಾರದ ಪಾಠ ಪ್ರೇರಣೆಯಾಗಿತ್ತು.

✍🏻ಎ.ಆರ್.ಭಂಡಾರಿ.ವಿಟ್ಲ.



Sunday, 3 October 2021

ಉತ್ತರಕ್ರಿಯೆ - ಕಾರ್ಕಳ ನಿಂಜೂರು ಕೊಪ್ಪಳ ಶ್ರೀಮತಿ ಶಾಂತ ಭಂಡಾರಿ

ಕಾರ್ಕಳ ನಿಂಜೂರು ಕೊಪ್ಪಳ ಮನೆ ದಿವಂಗತ ಹರಿಯಪ್ಪ ಭಂಡಾರಿಯವರ ಧರ್ಮ ಪತ್ನಿ ಶ್ರೀಮತಿ ಶಾಂತ ಭಂಡಾರಿ ಯವರು ಸೆಪ್ಟೆಂಬರ್ 23 ರಂದು ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.

ದಿವಂಗತರ ಉತ್ತರಕ್ರಿಯೆಯನ್ನು ಇದೇ ಬರುವ ಅಕ್ಟೋಬರ್ 7 ,2021 ರ ಗುರುವಾರ ಕಾರ್ಕಳ ಪಳ್ಳಿ ಯಲ್ಲಿರುವ ರಾಮಕೃಷ್ಣ ಸಭಾ ಭವನದಲ್ಲಿ ನೆರವೇರಿಸಲಾಗುವುದು.

ಬಂಧು ಮಿತ್ರರು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಕೇಳಿಕೊಳ್ಳುವ,

ಮಕ್ಕಳು ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು

ಜಿಡ್ಡು ಪ್ರವಚನ - ನಂಬಿಕೆಯಾಚೆಗೆ- ವೆಂಕಟೇಶ ಭಂಡಾರಿ ಕುಂದಾಪುರ

 ಧ್ಯಾನ - 10

ನಿಮ್ಮ ಧರ್ಮ, ದೇವರು ಎಲ್ಲವೂ ಸತ್ಯದಿಂದ ತಪ್ಪಿಸಿಕೊಳ್ಳಲೆಂದೇ ಇರುವ ಮಾರ್ಗಗಳು. ಧರ್ಮವೆಂಬುದು ಇಲ್ಲ. ಕ್ರೌರ್ಯದಿಂದ, ಅಪ್ರಾಮಾಣಿಕತೆಯಿಂದ, ತಂತ್ರಗಾರಿಕೆಯಿಂದ, ಶೋಷಣೆಯಿಂದ ಹಣವನ್ನು ಮಾಡಿಕೊಳ್ಳುವ ಶ್ರೀಮಂತ ದೇವರನ್ನು ನಂಬುತ್ತಾನೆ. ನೀವೂ ದೇವರನ್ನು ನಂಬುತ್ತೀರಿ. ನಿಮ್ಮಲ್ಲೂ ತಂತ್ರಗಾರಿಕೆ, ಕ್ರೌರ್ಯ, ಅಸೂಯೆಗಳಿವೆ.

 ಅಪ್ರಾಮಾಣಿಕತೆಯಿಂದ,ಮೋಸದಿಂದ, ಮನಸ್ಸಿನ ಕುತಂತ್ರಗಳಿಂದ ದೇವರನ್ನು ಕಾಣಲು ಸಾಧ್ಯವೇ ? ಎಲ್ಲಾ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ,ದೇವರ ಕುರುಹುಗಳನ್ನು ಕೂಡಿಟ್ಟುಕೊಳ್ಳುವುದರಿಂದ ನೀವು ಧಾರ್ಮಿಕ ವ್ಯಕ್ತಿಗಳಾಗುವುದು ಸಾಧ್ಯವೇ?  ಧರ್ಮವೆಂದರೆ ಸತ್ಯದಿಂದ ಮಾಡುವ ಪಲಾಯನವಲ್ಲ. ನಿಮ್ಮ  ದಿನನಿತ್ಯದ ಸಂಬಂಧಗಳಲ್ಲಿ ಹೇಗೆ ವರ್ತಿಸುತ್ತೀರಿ, ಹೇಗೆ ಮಾತನಾಡುತ್ತೀರಿ, ನಿಮ್ಮ ಸೇವಕರನ್ನು ಹೇಗೆ ಕಾಣುತ್ತೀರಿ, ದಿನನಿತ್ಯದ ನಿಮ್ಮ ಬದುಕಿನಲ್ಲಿ ನೀವು ಹೇಗೆ ಇರುತ್ತೀರಿ ಎಂಬ ಸತ್ಯವನ್ನು ಅರಿತುವುದೇ "ಧರ್ಮ". ನಿಮ್ಮ ನೆರೆಯವರೊಡನೆ, ಹೆಂಡತಿ ಮಕ್ಕಳೊಡನೆ ಹೇಗೆ ಇದ್ದೀರಿ ಎಂದು ನಿಮ್ಮ ಸಂಬಂಧಗಳ ಸ್ವರೂಪವನ್ನು ಅರಿಯದಿದ್ದರೆ ನಿಮ್ಮ ಮನಸ್ಸಿನಲ್ಲಿ ಗೊಂದಲ ಇರುತ್ತದೆ‌.



 ಗೊಂದಲ ತುಂಬಿದ ಮನಸ್ಸು ತನ್ನ ಎಲ್ಲ ಕೆಲಸಗಳಲ್ಲೂ ಮತ್ತೂ ಅಷ್ಟು ಗೊಂದಲ ,ಸಮಸ್ಯೆ, ಸಂಘರ್ಷಗಳನ್ನಷ್ಟೇ ಹುಟ್ಟಿಸಬಲ್ಲದು. ವಾಸ್ತವದಿಂದ ಪಲಾಯನ ಮಾಡುವ ಮನಸ್ಸು, ಸಂಬಂಧಗಳ ಸತ್ಯವನ್ನು ಕಾಣಲಾರದ ಮನಸ್ಸು, ದೇವರನ್ನು ಎಂದೂ ಕಾಣಲಾರದು‌ . ನಂಬಿಕೆಯ ತಳಮಳಕ್ಕೆ ಸಿಕ್ಕಿ ತೊಳಲುವ ಮನಸ್ಸು ಸತ್ಯವನ್ನು ಕಾಣಲಾರದು . ಆಸ್ತಿ, ಐಡಿಯಾ, ಜನ ಇವೆಲ್ಲವುಗಳೊಡನೆ ಇರುವ ಸಂಬಂಧವನ್ನು ಅರಿಯಬಲ್ಲ ಮನಸ್ಸು ಮಾತ್ರ ಸಂಬಂದಗಳಿಂದ ಹುಟ್ಟುವ ಸಮಸ್ಯೆಗಳಿಂದ ನರಳುವುದಿಲ್ಲ. ಸಮಸ್ಯೆಗಳಿಂದ ಹಿಂಜರಿಯುವುದು ಪರಿಹಾರ ದೊರೆಯುವುದಿಲ್ಲ.ಕೇವಲ ಪ್ರೀತಿ ಮತ್ತು ಅರಿವಿನಿಂದ ಮಾತ್ರ ಪರಿಹಾರ ದೊರೆಯುತ್ತದೆ ಎಂದು ಅಂಥ ಮನಸ್ಸಿಗೆ ಗೊತ್ತಿರುತ್ತದೆ. ಅಂಥ ಮನಸ್ಸು ಮಾತ್ರ ಸತ್ಯವನ್ನು ಕಾಣಬಲ್ಲದು‌.


ಬದುಕು ವಿಚಾರವಾಗಿದೆ, ನೋವಿನಿಂದ ತುಂಬಿದೆ,ದುಃಖಮಯವಾಗಿದೆ ಎಂದು ನಮಗೆ ಗೊತ್ತು . ಇದೆಲ್ಲ ಏಕೆ ಹೀಗೆ ಎಂದು ವಿವರಿಸಿಕೊಳ್ಳುವುದಕ್ಕೆ ಒಂದು ಸಿದ್ದಾಂತ ,ಊಹೆ,ತತ್ವ ಏನಾದರೂ ಒಂದು ಸಿಕ್ಕರೆ ನಮಗೆ ಸಮಾಧಾನ ಎನ್ನಿಸುತ್ತದೆ. ಹಾಗಾಗಿ ನಾವು ವಿವರಣೆಯ ಪದಗಳಲ್ಲಿ ,ಊಹೆ,ಸಿದ್ದಾಂತ, ತತ್ವಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಕ್ರಮೇಣ ನಂಬಿಕೆಗಳು ಆಳವಾಗಿ ಬೇರು ಬಿಟ್ಟುಕೊಳ್ಳುತ್ತವೆ. ಏಕೆಂದರೆ ನಂಬಿಕೆಗಳ ಹಿಂದೆ, ತತ್ವ,ಸಿದ್ದಾಂತಗಳ ಹಿಂದೆ, ಅಪರಿಚಿತವಾದದ್ದರ ಬಗೆಗಿನ ಭಯವಿದೆ.ನಾವು ಆ ಭಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದೆ ಮುಖ ತಿರುಗಿಸಿಕೊಳ್ಳತ್ತೇವೆ.ನಂಬಿಕೆಗಳು ಗಟ್ಟಿಯಾದಷ್ಟೂ ಸಿದ್ದಾಂತಗಳೂ ಗಟ್ಟಿಯಾಗುತ್ತವೆ. ಕ್ರಿಶ್ಚಿಯನ್, ಹಿಂದೂ,ಬೌದ್ಧ, ನಂಬಿಕೆಗಳನ್ನು ಪರಿಶೀಲಿಸಿದಾಗ ಅವು ಜನರನ್ನು ಬೇರೆ ಬೇರೆ ಮಾಡುತ್ತವೆ ಎಂದು ತಿಳಿಯುತ್ತದೆ.ಒಂದೊಂದು ಸಿದ್ಧಾಂತದ ಹಿಂದೆಯೂ,ಒಂದೊಂದು ನಂಬಿಕೆಯ ಹಿಂದೆಯೂ ಆಚರಣೆಗಳ ಒಂದು ಸರಣಿಯೇ ಇರುತ್ತದೆ. ಮನುಷ್ಯರನ್ನು ಒಗ್ಗೂಡಿಸುವ ಮತ್ತು ಬೇರ್ಪಡಿಸುವ ಒತ್ತಾಯಗಳಿರುತ್ತವೆ. ಸತ್ಯವಾದದ್ದು ಏನು ಎಂದು ಹುಡುಕಲು ಹೊರಟು, ನೋವು,ನರಳಾಟ, ಹೋರಾಟಗಳು ಅರ್ಥವೇನು ಎಂದು ತಿಳಿಯಲು ಹೊರಟು ನಂಬಿಕೆ, ಆಚರಣೆ, ಸಿದ್ಧಾಂತಗಳಲ್ಲಿ ಸಿಕ್ಕಿಬೀಳುತ್ತೇವೆ.


ನಂಬಿಕೆ ಭ್ರಷ್ಟವಾದದ್ದು. ಏಕೆಂದರೆ ನಂಬಿಕೆ ಮತ್ತು ನೀತಿಯ ಹಿನ್ನೆಲೆಯಲ್ಲಿ ನಾನು ಎಂಬುದು ಸದಾ ಬೆಳೆಯುತ್ತಲೇ ಇರುವ,ಪ್ರಬಲವಾಗುತ್ತಿರುವ ನಾನು ಇರುತ್ತದೆ‌ ‌. ದೇವರನ್ನು ನಂಬುವುದು,ಮತ್ತೇನನ್ನೋ ನಂಬುವುದು ಎಂದರೆ ಧರ್ಮ ಎಂದು ಪರಿಗಣಿಸುತ್ತೇವೆ.ನಂಬಿಕೆ ಇಲ್ಲದವರನ್ನು ನಾಸ್ತಿಕರೆಂದು ಕರೆದು ಸಮಾಜ ತಿರಸ್ಕಾರ ತೋರುತ್ತದೆ.ಒಂದು ಸಮಾಜ ದೇವರನ್ನು ನಂಬುವವರನ್ನು ತಿರಸ್ಕರಿಸಿದರೆ,ಇನ್ನೊಂದು ಸಮಾಜ ದೇವರನ್ನು ನಂಬದೆ ಇರುವವರನ್ನು ತಿರಸ್ಕರಿಸುತ್ತದೆ. ನಿಜವಾಗಿ ಎರಡೂ ಸಮಾಜಗಳು ಒಂದೇ. ಧರ್ಮ ನಂಬಿಕೆಯ ವಿಚಾರವಾಗುತ್ತದೆ.ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಯ ಪ್ರಭಾವಕ್ಕೆ ಸಿಕ್ಕ ಮನಸ್ಸು ಸ್ವತಂತ್ರವಾಗಿರಲು ಸಾಧ್ಯವಿಲ್ಲ. ನಂಬಿಕೆಯ ಮೂಲಕವಾಗಿ ಅಲ್ಲ, ಸ್ವಾತಂತ್ರ್ಯವಿದ್ದಾಗ ಮಾತ್ರ ಸತ್ಯವೆಂದರೇನು,ದೇವರು ಯಾರು ಎಂದು ಕಾಣಲು ಸಾಧ್ಯ. ಏಕೆಂದರೆ ನೀವು ಏನನ್ನೂ ನಂಬಿದ್ದೀರೋ ಅದನ್ನೇ, ಏನನ್ನೂ ಆಲೋಚಿಸುತ್ತೀರೋ ಅದನ್ನೇ ದೇವರೆಂದು, ಸತ್ಯವೆಂದು ಬಿಂಬಿಸುತ್ತಿರುತ್ತದೆ. ಅದನ್ನೇ ನೀವು ಸತ್ಯವೆಂದಕೊಳ್ಳುತ್ತೀರಿ. ಸತ್ಯ ನಂಬಿಕೆಗಳಾಚೆಗೆ.....

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ವೆಂಕಟೇಶ ಭಂಡಾರಿ ಕುಂದಾಪುರ

Saturday, 2 October 2021

ಪುರಾಣದಲ್ಲಿ ಪ್ರಾಮುಖ್ಯತೆ ಪಡೆದ ಈ ಮರದ ಬಗ್ಗೆ ನಿಮಗೆಷ್ಟು ಗೊತ್ತು!??-ಸುಪ್ರೀತ ಪ್ರಶಾಂತ್ ಭಂಡಾರಿ ಸೂರಿಂಜೆ

 

ಸಸ್ಯ ಲೋಕ -14

 ಸಂಸ್ಕೃತ ದಲ್ಲಿ ಔದುಂಬರ ಎಂದು ಕರೆಯಲ್ಪಡುವ ಈ ಮರ ಯಾವುದು ಅಂತೀರಾ‌...!?  ಅದು ಬೇರಾವುದೂ ಅಲ್ಲ ತುಳುವಿನಲ್ಲಿ ಕರೆಯುವ ಅರ್ತಿಮರ . ಪುರಾಣ ಕಾವ್ಯದಲ್ಲಿ ಉಲ್ಲೇಖವಿರುವ ಮರಗಿಡಗಳ ಬಗ್ಗೆ ಭಾರತೀಯರಿಗೆ ಬಹಳ ನಂಬಿಕೆ ಹಾಗೂ ಪ್ರಾಮುಖ್ಯತೆ ಇದೆ. ಹಾಗಾಗಿ ಅಂತಹ ಮರಗಳ ಉಳಿವಿಗೆ ಮತ್ತು ಬೆಳವಣಿಗೆಗೆ ಜನರು ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹ ಮರಗಳಲ್ಲಿ ಅರ್ತಿಮರ ಕೂಡ ಒಂದು. ಅಂಜೂರ, ಅಶ್ವತ್ಥಮರ, ಹಾಗೂ ಆಲದಮರದ ಜಾತಿಗೆ ಸೇರಿದ ಈ ಅರ್ತಿಮರ ಕ್ಕೆ ಹೆಚ್ಚಾಗಿ ಯಾವುದೇ ಆರೈಕೆ ಇಲ್ಲದೆ ಬೆಳೆಯುತ್ತದೆ. ಇದರಲ್ಲಿ ಕಾಯಿ ಬಿಟ್ಟಾಗ ತಿಳಿ ಹಸಿರು ಬಣ್ಣದಿಂದ ಕೂಡಿರುತ್ತದೆ ಮತ್ತು ಹಣ್ಣಾದಾಗ ಕೆಂಪಾಗಿ ಮೃದುವಾಗಿರುತ್ತದೆ. ಇದನ್ನು ಹೋಳು ಮಾಡಿದಾಗ ಒಳಗಡೆ ಇರುವೆಗಳಿರುವವು. ಈ ಇರುವೆಗಳು ಪರಾಗಸ್ಪರ್ಶಕ್ಕೆ ನೆರವಾಗುತ್ತದೆ. ಕಾಂಡದಲ್ಲಿ ಗೊಂಚಲು ಗೊಂಚಲಾಗಳಾಗಿ ಕಾಯಿ ಬಿಡುವ ಅತ್ತಿಮರವೂ ಪಶು ಪಕ್ಷಿ ಗಳಿಗೆ ಪ್ರಿಯವಾಗಿದೆ ಅಲ್ಲದೆ ಇದರ ಹಣ್ಣು ಪುಷ್ಠಿದಾಯಕವೂ ಕೂಡ ಹೌದು.

ಉಪಯೋಗ:-
ಅತ್ತಿ ಮರದ ಬೇರನ್ನು ತುಂಡರಿಸಿ ಅದಕ್ಕೆ ಚಿಕ್ಕ ಬಾಟಲಿ ಕಟ್ಟಿ ಮುಚ್ಚಳವನ್ನು ಬಿಗಿದು ಬಟ್ಟೆಯಲ್ಲಿ ಮುಚ್ಚಿ ಇಟ್ಟರೆ ಮರುದಿನ ಬೆಳಗ್ಗೆ ಬಾಟಲಿಯೊಳಗೆ ಮಂದವಾದ ಅಂಟುದ್ರವ ಸಂಗ್ರಹವಾಗುತ್ತದೆ. ಮೂತ್ರ ವಿಸರ್ಜನೆ ಸಲೀಸಾಗುವುದು. ಅತ್ತಿಮರದ ತೊಗಟೆಯ ಕಷಾಯ ಗರ್ಭಕೋಶದ ತೊಂದರೆ, ಮುಟ್ಟು ದೋಷ ತೊಂದರೆ, ಮೂತ್ರಕೋಶದ ತೊಂದರೆಯಲ್ಲಿ ಶಮನಕಾರಿ. ಅತ್ತಿಯ ಹಸಿ ಕಾಯಿಗಳನ್ನು ಉಪ್ಪು ನೀರಲ್ಲಿ ಹಾಕಿಟ್ಟು ಬೇಕಾದಾಗ ತೆಗೆದು ಪಲ್ಯ ಮಾಡಿ ತಿನ್ನಬಹುದು. ಇದರ ಕಾಯಿಯಿಂದ ಚಟ್ನಿ , ಪಲ್ಯ ತಯಾರಿಸುತ್ತಾರೆ. ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ. ಇದರ ಹಣ್ಣನ್ನು ತಿನ್ನುವುದರಿಂದ ಕಫದ ಬಾದೆ , ರಕ್ತನಾಳದ ದೋಷ ಉಪಶಮನವಾಗುತ್ತದೆ.



ಮಳೆಯ ನೀರನ್ನು ಇಂಗಿಸಿ ಅಂತರ್ಜಲ ಅಭಿವೃದ್ಧಿ ಪಡಿಸುವ ಮರಗಳಲ್ಲಿ ಅತ್ತಿ ಮರವೂ ಒಂದು. ನವಗ್ರಹಗಳಲ್ಲಿ ಶುಕ್ರನಿಗೆ ಪೂಜನೀಯ ಮರ ಅತ್ತಿ. ನಕ್ಷತ್ರ ವನದಲ್ಲಿ 'ಕೃತಿಕಾ' ನಕ್ಷತ್ರಕ್ಕೆ ಪೂಜನೀಯ ಮರ. ರಾಶಿವನದಲ್ಲಿ ವೃಷಭ ರಾಶಿಗೆ ಗರಿಕೆಯ ಜೊತೆಗೆ ಅತ್ತಿಮರವೂ ಒಂದಾಗಿದೆ.ಇದರ ಹಣ್ಣುಗಳನ್ನು  ಹಕ್ಕಿಗಳು ತಿನ್ನುವ ಮೂಲಕ ಬೀಜ ಪ್ರಸಾರವಾಗಿ ಗಿಡಗಳು ಹುಟ್ಟಿಕೊಳ್ಳುತ್ತವೆ. ಆಂಗ್ಲ ಭಾಷೆಯಲ್ಲಿ cluster Fig ಎಂದು ಕರೆಯಲ್ಪಡುವ ಅರ್ತಿ Moraceae ಕುಟುಂಬಕ್ಕೆ ಸೇರಿದೆ. ಸಸ್ಯಶಾಸ್ತ್ರದಲ್ಲಿ ಇದರ ಹೆಸರು Ficus Racemosa ಎಂಬುದಾಗಿದೆ.
 
✍️ಸುಪ್ರೀತ ಪ್ರಶಾಂತ್ ಭಂಡಾರಿ ಸೂರಿಂಜೆ

Friday, 1 October 2021

ಅಂತರಾಳ -ಭಾಗ 1

 ಆತ್ಮೀಯ ಓದುಗ ಮಿತ್ರರೇ....

ಇಂದಿನಿಂದ ಭಂಡಾರಿ ವಾರ್ತೆಯಲ್ಲಿ ಕೌಟುಂಬಿಕ ಕಥಾಹಂದರ ಹೊಂದಿರುವ "ಅಂತರಾಳ" ಧಾರಾವಾಹಿಯು ‌ ಪ್ರಕಟಣೆ ಗೊಳ್ಳಲಿದೆ.

ತಾವೆಲ್ಲರೂ ಎಂದಿನಂತೆ ಓದಿ ಪ್ರೋತ್ಸಾಹಿಸುವಿರಾಗಿ ಆಶಿಸುತ್ತೇವೆ...



 

ಅಂತರಾಳ -ಭಾಗ 1

ಶಮಿಕಾ ಕೆಲಸ ಮುಗಿಸಿ ಬಸ್ಸಲ್ಲಿ ಕುಳಿತಾಗ ಆಲೋಚನೆಗಳು ನುಗ್ಗಿ ಬರುತಿತ್ತು. ನನಗೆ ಮಂಗಳೂರಿನ  ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಸಿಕ್ಕಿ 2 ವರ್ಷವಾಯಿತು. ಕೈ ತುಂಬಾ ಸಂಬಳ ಸಿಗುತ್ತದೆ ಒಳ್ಳೆಯ ಮನೆಯನ್ನು ಬಾಡಿಗೆಗೆ ಪಡೆದು ತಾಯಿ ಭವಾನಿ ಮತ್ತು ನಾನು ಇಬ್ಬರೇ ಸಂತೋಷ, ಆತ್ಮೀಯತೆ, ಪರಸ್ಪರ  ಪ್ರೀತಿ ವಿಶ್ವಾಸದಿಂದ ಇದ್ದೇವೆ. ಆದರೆ ಇತ್ತೀಚಿಗೆ ನನಗೆ ತುಂಬಾ ಕೋಪ ಬರುತ್ತದೆ. ಕೋಪ ,ಸಂಶಯ ಬೇರೆ ಯಾರಲ್ಲೂ ಅಲ್ಲ ನನ್ನ ತಾಯಿಯ ಮೇಲೆಯೇ.

ಈಗ ನನಗೆ 23 ವರ್ಷ, ಇಲ್ಲಿಯವರೆಗೆ ಲೆಕ್ಕವಿಲ್ಲದಷ್ಟು ಸಲ ಅಪ್ಪ ಎಲ್ಲಿ? ಯಾರು? ಸಂಬಂಧಿಕರು ನಮಗೆ ಯಾರೂ ಇಲ್ಲವೇ ? ಎಂದು ಕೇಳಿ ಕೇಳಿ ಸಾಕಾಗಿದೆ. ನಾನು ಚಿಕ್ಕವಳಿರುವಾಗ ಬೇರೆ ಏನೋ ಹೇಳಿ ನನ್ನ ಪ್ರಶ್ನೆ ಮರೆಸುವುದು ಇಲ್ಲ ಆಟದ ಸಾಮಾನು ನೀಡಿ ಮರೆಯುವ ಹಾಗೆ ಮಾಡುತ್ತಿದ್ದರು. ಈಗ ಪ್ರಾಯಕ್ಕೆ ಬಂದ ಮೇಲೂ ಕೈ ತುಂಬಾ ಸಂಬಳ, ಮನೆಯ ಎಲ್ಲಾ ಖರ್ಚು ಎಲ್ಲಾ ನಾನೆ ನೋಡಿಕೊಳ್ಳುತ್ತಿದ್ದರೂ ಹೇಳುವುದಿಲ್ಲ ಎಂದರೆ ನನಗೇಕೋ ಸಂಶಯ ಬರುತ್ತದೆ. ಕಾಲೇಜು ಓದುತ್ತಿದ್ದಾಗ ಮನೆಯಲ್ಲಿ ಹೇಳದೆ ಯಾರ ಜೊತೆಗೋ ಓಡಿ ಹೋಗಿ ನನ್ನನ್ನು ಹೆತ್ತಿರಬಹುದು ಅದಕ್ಕೆ ಹೇಳುವುದಿಲ್ಲ. ಇಲ್ಲ..... ಇಲ್ಲ...ಅಮ್ಮ ಹಾಗೆ ಮಾಡಿರಲಾರರು. ಅಪ್ಪ ಅಮ್ಮ ಮದುವೆ ಮಾಡಿರಬಹುದು.ಗಂಡನನ್ನು ಬಿಟ್ಟು ಬೇರೆ ಪುರುಷನ ಜೊತೆ ಓಡಿ ಹೋಗಿರಬಹುದು. ಹಾಗಾಗಿ ಯಾರೂ ಸಂಬಂಧಿಕರು ಇಲ್ಲ....... ಛೇ ಏನೇನೋ ಯೋಚನೆಗಳು..... ಪಾಪ ಅಮ್ಮ ಎಷ್ಟು ಕಷ್ಟದಲ್ಲಿ ಬೆಳೆಸಿದ್ದರೊ ಏನೋ...... ಇಲ್ಲ ಇಂದು ಎನೇ ಆಗಲಿ ಈ ಬಗ್ಗೆ ತೀರ್ಮಾನ ಆಗಲೇಬೇಕು. ಬೇಕಿದ್ದರೆ ಯಾರ ಜೊತೆನೂ ಬದುಕಲಿ ನಾನು ಒಬ್ಬಳೇ ಇರುತ್ತೇನೆ. ನನಗೆ ದೈರ್ಯ, ಕೆಲಸ, ಮನೆ ಎಲ್ಲವು ಇದೆ. ಯಾಕೆ ಹೆದರಬೇಕು.ಇಂತಹ ಅಮ್ಮ ಇದ್ದಾರೆ ಎನೂ ಇಲ್ಲದಿದ್ದರೆ ಎನೂ...... ಎರಡು ಒಂದೇ...... "ಜ್ಯೋತಿ... ಜ್ಯೋತಿ.. ಯಾರು ಇಳಿಯಿರಿ" ನಿರ್ವಾಹಕನ ಧ್ವನಿ ಕೇಳಿ ಒಮ್ಮೆಲೇ ಯೋಚನೆಯಿಂದ ಎಚ್ಚೆತ್ತಾ ಶಮಿಕಾ ದಡಬಡನೆ ಎದ್ದು ಬಸ್ಸಿನಿಂದ ಇಳಿದು ಮನೆಯತ್ತ ಹೆಜ್ಜೆ ಹಾಕಿದಳು.

ಮನೆಗೆ ಹತ್ತಿರ ಹತ್ತಿರ ಆಗುವಾಗ ರಸ್ತೆಯಲ್ಲಿ ಅಮ್ಮ ನಡೆದು ಬರುತ್ತಿದ್ದರು."ನಾನು ಗ್ರಂಥಾಲಯಕ್ಕೆ ಹೋಗುತ್ತೇನೆ. ಬೀಗದ ಕೀ ದಿನಾ ಇಡುವಲ್ಲೇ ಇಟ್ಟಿದ್ದೇನೆ" ಎಂದು ಹೇಳಿ ಹೋಗಿಯೇ ಬಿಟ್ಟರು. ಶಮಿಕಾ ಒಮ್ಮೆ ಅವರನ್ನೇ ನೋಡಿ ಪುನಃ ಮನೆಯತ್ತ ಹೆಜ್ಜೆ ಹಾಕಿದಳು. ಮನೆಗೆ ಬಂದು ಬೀಗ ತೆಗೆದು ಒಳ ಹೋಗಿ ಸೀರೆ ಬದಲಿಸಿ ಕೈ ಕಾಲು ಮುಖ ತೊಳೆದು ಅಡುಗೆ ಕೊಣೆಗೆ ಬಂದಾಗ ನಾಲ್ಕು ನೀರು ದೋಸೆ,ಚಾ ಮಾಡಿಟ್ಟು ಹೋಗಿದ್ದರು. ಶಮಿಕಾ ದೋಸೆ ತಿಂದು ಚಾ ಕುಡಿದು ಓದಲು ಕುಳಿತಳು. ಆದರೆ ಮನಸ್ಸು ಓದಿನಲ್ಲಿ ಇರಲಿಲ್ಲ.

ಬೇರೆ ಎಲ್ಲೂ ಹೋಗುತ್ತಿತ್ತು.ತಕ್ಷಣ ಅಮ್ಮ ಯಾವಾಗಲೂ ಡೈರಿಯಲ್ಲಿ ಬರೆಯುವುದು ಆಗಾಗ ಅದನ್ನು ತೆಗೆದು ಓದುವುದು ಮಾಡುತ್ತಿದ್ದರು. ನನಗೆ ಮಾತ್ರ ಒಮ್ಮೆಯೂ ಡೈರಿ ಓದುವ ಅವಕಾಶ ಸಿಕ್ಕಿರಲಿಲ್ಲ. ಈ ದಿನ ಒಳ್ಳೆಯ ಅವಕಾಶ ಯಾಕೆ ಓದಬಾರದು ಎಂದೆನಿಸಿ ದಡಕ್ಕನೆ ಎದ್ದು ಅಮ್ಮ ಮಲಗುವ ಕೋಣೆಯಲ್ಲಿ ಹುಡುಕಿದಳು. ಸೀರೆಯ ಅಡಿಯಲ್ಲಿ ದಪ್ಪನಾದ ಡೈರಿ ಸಿಕ್ಕಿತು.ಮನೆಯ ಚಿಲಕ ಭದ್ರಪಡಿಸಿದಳು.ಡೈರಿ ಓದಿ ಅಮ್ಮನ ಪೂರ್ವಾಪರ ತಿಳಿದು ಗ್ರಹಚಾರ ಬಿಡಿಸಬೇಕು ಎಂದೆನಿಸಿದಳು.ಈ ರೀತಿ ಮನೆಯವರಿಗೆ, ಗಂಡನಿಗೆ, ಸ್ವಂತ ಮಗಳಿಗೆ ವಂಚಿಸಬಾರದು ಎಂದೆನಿಸಿತು ಶಮಿಕಾಳಿಗೆ. ಕೋಣೆಗೆ ಹೋಗಿ ಡೈರಿ ಬಿಡಿಸಿ ಓದಲಾರಂಭಿಸಿದಳು.

(ಮುಂದುವರಿಯುವುದು....)

✍️ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ