BhandaryVarthe Team

BhandaryVarthe Team
Bhandary Varthe Team

Friday 12 November 2021

ಬೆಳ್ತಂಗಡಿ ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ವಂದನಾ ಭಂಡಾರಿ ಆಯ್ಕೆ

 ಬೆಳ್ತಂಗಡಿ ತಾಲ್ಲೂಕಿನ ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ರೀಮತಿ ವಂದನಾ ಭಂಡಾರಿ ನೆಲ್ಲಿಂಗೇರಿ ಅಂಡಿಂಜೆ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕ ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಇವರ ಸಾಮಾಜಿಕ ಕಳಕಳಿಯನ್ನು ಗುರುತಿಸಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ ಮತ್ತು ಮಾಜಿ ಸಚಿವ ಕೆ ಗಂಗಾಧರ ಗೌಡ ಇವರ ಶಿಫಾರಸಿನ ಮೇರೆಗೆ ನೇಮಕ ಮಾಡಲಾಗಿದೆ.

ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಇರುವ ಇವರು ಪ್ರಸ್ತುತ ಅಂಡಿಂಜೆ ಗ್ರಾಮ ಪಂಚಾಯತ್ ನ ಸದಸ್ಯೆಯಾಗಿರುತ್ತಾರೆ . ಡಿ.ಎಡ್. ಶಿಕ್ಷಣವನ್ನು ಪೂರೈಸಿ ಬೆಂಗಳೂರಿನ ನಾಗವಾರ ಆಂಗ್ಲ ಮಾಧ್ಯಮ ಹೈಸ್ಕೂಲ್ ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಯೋಗ ಶಿಕ್ಷಣವನ್ನು ಪಡೆದಿರುತ್ತಾರೆ.

ಅಂಡಿಂಜೆ ಗ್ರಾಮದ ನೆಲ್ಲಿಂಗೇರಿ ದಿವಂಗತ ಅಪ್ಪು ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ಭಂಡಾರಿ ದಂಪತಿಯ ಪುತ್ರಿಯಾಗಿರುತ್ತಾರೆ. ವಂದನಾ ಭಂಡಾರಿಯವರು ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಉನ್ನತ ಸ್ಥಾನ ಮಾನ ಪಡೆಯಲು ಭಗವಂತನ ಅನುಗ್ರಹ ಸದಾ ಇರಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ

Wednesday 10 November 2021

ಕುಲ ವೃತ್ತಿಯಲ್ಲಿ ಕೀಳರಿಮೆ ಬೇಡ ಮಾನ್ಯ ಗೃಹ ಸಚಿವರು

 ನವೆಂಬರ್ 9ರಂದು ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ ಹಾಗೂ ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಸವಿತಾ ಸಮಾಜದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಹಾಗೂ ಕಾರ್ಮಿಕರ ನೊಂದಾವಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು , ಬೆಳ್ತಂಗಡಿ ತಾಲೂಕು ಶಾಸಕರಾದ ಮಾನ್ಯ ಹರೀಶ್ ಪೂಂಜರವರು, ಕಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಡಂದಲೆ ಸುರೇಶ್ ಭಂಡಾರಿ, ಭಂಡಾರಿ ಮಹಾಮಂಡಲದ ಅಧ್ಯಕ್ಷರಾದ ಸದಾಶಿವ ಭಂಡಾರಿ ಸಕಲೇಶಪುರ, ಬೆಳ್ತಂಗಡಿ ಭಂಡಾರಿ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ, ಭಂಡಾರಿ ಸಮಾಜ ಸಂಘದ ಗೌರವಾಧ್ಯಕ್ಷ ಎ.ಪೂವಪ್ಪ ಭಂಡಾರಿ, ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಭಂಡಾರಿ, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಬಿಎಂಎಸ್ ಬೆಳ್ತಂಗಡಿ ಅಧ್ಯಕ್ಷ ಉದಯ ಕುಮಾರ್ ಬಿ.ಕೆ. ಮಡಂತ್ಯಾರು ಅಶೋಕ್ ಭಂಡಾರಿ ಇವರುಗಳು ಉಪಸ್ಥಿತರಿದ್ದರು.

 

ಮಾನ್ಯ ಸಚಿವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸವಿತಾ ಸಮಾಜ ತಮ್ಮ ವೃತ್ತಿ ಜೀವನದೊಂದಿಗೆ ರಾಷ್ಟ್ರೀಯತೆಗೆ ಒತ್ತು ಕೊಟ್ಟವರು. ನೀವು ವೃತ್ತಿಯ ಜೊತೆಗೆ ತಂತ್ರಜ್ಞಾನವನ್ನು ಅಧ್ಯಯನ ಮಾಡಿ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಿಕೊಳ್ಳಬೇಕು, ದುಡಿದು ತಿನ್ನುವವರಿಗೆ ಕೀಳರಿಮೆ ಬೇಡ ಹಿರಿಯರ ವೃತ್ತಿಯನ್ನು ಇಂದಿನ ಯುವಕರು ಮುಂದುವರಿಸಲು ಹಿಂಜರಿಯಬಾರದು ಎಂಬ ಸಲಹೆ ನೀಡಿದರು.

ಮಾನ್ಯ ಶಾಸಕರು ಭಂಡಾರಿ ಸಮಾಜದ ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿ ಮಂಜೂರಾಗಿದೆ, ಈ ಭವನ ನಿರ್ಮಿಸಿ ಅದರಿಂದ ಬಂದ ಆದಾಯದಲ್ಲಿ ಶಿಕ್ಷಣಕ್ಕೆ ಮತ್ತು ನಿರುದ್ಯೋಗಿಗಳಿಗೆ ನೆರವು ನೀಡುವಂತಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಬಿಎಂಎಸ್ ಅಧ್ಯಕ್ಷರಾದ ಉದಯ ಕುಮಾರ್ ಇವರು ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಸಾಧಕರಾದ ಎ ಪೂವಪ್ಪ ಭಂಡಾರಿ ದಂಪತಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ಶಿವಾನಂದ ಭಂಡಾರಿ, ಪೋಲೀಸ್ ಸೇವೆಯಲ್ಲಿ ಪದೋನ್ನತಿ ಪಡೆದ ವಿಜಯೇಂದ್ರ ಭಂಡಾರಿ , ಕೆಎಸ್ಸಾರ್ಟಿಸಿ ನಿವೃತ್ತ ನಿರ್ವಾಹಕ ಯುವರಾಜ ಭಂಡಾರಿ ಇವರೆಲ್ಲರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸತೀಶ್ ಇವರ ಪ್ರಾರ್ಥನೆ ಮತ್ತು ಸಂಘದ ಗೌರವಾಧ್ಯಕ್ಷರಾದ ಎ ಪೂವಪ್ಪ ಭಂಡಾರಿ ಇವರ ಸ್ವಾಗತದೊಂದಿಗೆ ಪ್ರಾರಂಭಿಸಿ, ಕಳೆಂಜ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಭಂಡಾರಿ ಮತ್ತು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿ ನಾರಾಯಣ ಭಂಡಾರಿ ಇವರ ನಿರೂಪಣೆಯೊಂದಿಗೆ ವಿಶ್ವನಾಥ ಭಂಡಾರಿಯವರ ಧನ್ಯವಾದಗಳೊಂದಿಗೆ ಮುಕ್ತಾಯ ಗೊಂಡಿತ್ತು.

ವರದಿ : ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ

ಕಾರ್ಕಳ ಬೆಟ್ಟದ ಮನೆ ಗೋಪಾಲ ಭಂಡಾರಿ ನಿಧನ

 ಕಾರ್ಕಳ ಬೆಟ್ಟದ ಮನೆ ಗೋಪಾಲ ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದ ನವಂಬರ್ 10ರಂದು ಬುಧವಾರ ಬೆಳಿಗ್ಗೆ 1.38ಕ್ಕೆ ಕೊನೆಯುಸಿರೆಳೆದರು. ಅವರಿಗೆ ಸುಮಾರು 77 ವಯಸ್ಸಾಗಿತ್ತು.

 

ದಿವಂಗತರು ಪತ್ನಿ ಶ್ರೀಮತಿ ಗುಲಾಬಿ, ಮಕ್ಕಳಾದ ಶರತ್ ಭಂಡಾರಿ,ಸರಿತಾ ಅಶೋಕ್, ಶಶಿಧರ್ ಭಂಡಾರಿ ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Monday 8 November 2021

ಮಂಗಳೂರು ಗುರುಪುರದ ಆದಿತ್ಯ ಕಿರಣ್ ಗೆ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ

 ಮೈಸೂರಿನಲ್ಲಿ ನಡೆದಿರುವ ಮೊದಲ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ 2021 ರಲ್ಲಿ ಮಂಗಳೂರಿನ ವಾಮಂಜೂರಿನ  ಆದಿತ್ಯ  ಕಿರಣ್  ರವರು ಎರಡು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದ 74 ಕೆ ಜಿ ವಿಭಾಗದ ಸ್ಪರ್ಧಿಗಳ ಪೈಕಿ  ಆದಿತ್ಯ ಕಿರಣ್ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದು ಈಗಾಗಲೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕೂಡಾ ಭಾಗವಹಿಸಿದ್ದಾರೆ.ಕಳೆದ ಒಂಭತ್ತು ವರ್ಷಗಳಿಂದ ಕರಾಟೆ ಸೇರಿ ವಿವಿಧ ವಿದ್ಯೆಗಳನ್ನೂ ತನ್ನಾದಾಗಿಸಿಕೊಳ್ಳುತ್ತಿದ್ದಾರೆ. ಆದಿತ್ಯ ಕಿರಣ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಬೇಕೆಂದು ಆದಿತ್ಯ ಕಿರಣ್ ರವರ ಮಹಾದಾಸೆಯಾಗಿದೆ. ಆದಿತ್ಯ ಕಿರಣ್ ರವರು ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು.



ಮಂಗಳೂರಿನ ನೀರುಮಾರ್ಗ ದ ಪಾಲ್ದನೆ ಕ್ಯಾಂಬ್ರಿಡ್ಜ್ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಆದಿತ್ಯ ಕಿರಣ್ ಮಂಗಳೂರಿನ ಇನ್ಸ್ಟಿಟ್ಯೂಟ್ ಒಫ್ ಐ ಕೆ ಎಂ ಎ (ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ )ಸಂಸ್ಥೆಯಲ್ಲಿ ನಿತಿನ್ ಎನ್ ಸುವರ್ಣ ಮತ್ತು ಸಂಪತ್ ಕುಮಾರ್ ಅವರಿಂದ ತರಭೇತಿ ಪಡೆಯುತ್ತಿದ್ದಾರೆ. ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್ ಡಬ್ಲ್ಯೂ ಯು ಎಸ್ ಎಚ್ ಯು ನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು ಇನ್ನಷ್ಟು ಪ್ರಶಸ್ತಿಗಳನ್ನು ಗಳಿಸುವ ಉತ್ಸಾಹದಲ್ಲಿದ್ದಾರೆ. ಆದಿತ್ಯ ಕಿರಣ್ ರವರು ಮಂಗಳೂರಿನ ಗುರುಪುರದ ಶ್ರೀ ಕಿರಣ್ ಕುಮಾರ್ ಮತ್ತು  ಶ್ರೀಮತಿ ಸಿ ಎಸ್ ಲೀಲಾವತಿ ದಂಪತಿಯ  ಪುತ್ರ.


ಆದಿತ್ಯ ಕಿರಣ್ ಕರಾಟೆ ಮತ್ತು ಬಾಕ್ಸಿಂಗ್ ನಲ್ಲಿ ಇನ್ನಷ್ಟು ಸಾಧನೆ ಮಾಡಲಿ ಆ ಮೂಲಕ ಸಮಾಜ ಮತ್ತು ಕುಟುಂಬಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿಕೊಂಡು ಶುಭ ಹಾರೈಸುತ್ತದೆ.

ಮಾಹಿತಿ : ಶ್ರೀಪಾಲ್ ಭಂಡಾರಿ ನೆಲ್ಯಾಡಿ
ವರದಿ: ವನಿತಾ ಅರುಣ್ ಭಂಡಾರಿ ಬಜ್ಪೆ

Saturday 6 November 2021

ಅಂತರಾಳ - ಭಾಗ 6

 

ಇಲ್ಲಿಯವರೆಗೆ.....
ಶಮಿಕಳಿಗೆ ತನ್ನ ತಂದೆ ಯಾರೆಂದು ತಿಳಿಯಲು ತಾಯಿ ಭವಾನಿಯ ಡೈರಿ ಓದುತ್ತಾಳೆ. ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಕೊಂಡಿರುತ್ತಾರೆ.ಮಾವನ ಮನೆಯಲ್ಲಿ ಭವಾನಿ ಮತ್ತು ಅವಳ ತಾಯಿ ಇದ್ದು ಅಲ್ಲೇ ಹೈಸ್ಕೂಲ್ ವಿದ್ಯಾಬ್ಯಾಸ ಮುಗಿಸಿ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಕೆಲಸದಿಂದ ಬರುವಾಗ ಅವಳ ಮೇಲೆ ಅತ್ಯಾಚಾರ ನಡೆಯುತ್ತದೆ.ಇದರಿಂದ ಅವಳಿಗೆ ದಿಕ್ಕೇ ತೋಚದಂತಾಗುತ್ತದೆ... ಅವಳು ಸಾಯುವ ನಿರ್ಧಾರ ಮಾಡುತ್ತಾಳೆ..... ಸಾಯುವ ತೀರ್ಮಾನಕ್ಕೆ ಬಂದವಳು ಮನಸ್ಸು ಬದಲಿಸಿ ಕೆಲಸಕ್ಕೆ ಹೋಗುತ್ತಾಳೆ ಆದರೆ ಮಾಸಿಕ ಸ್ರಾವ ಆಗದೆ ಇರುವುದನ್ನು ನೋಡಿ ದುರುಳರ ಕಾಮದ ಕುರುಹು ಉಳಿದಿರುವುದು ಖಚಿತವಾಗುತ್ತದೆ. ಮತ್ತೆ ಗ್ರಂಥಾಲಯದ ಒಳಗಡೆ ಆತ್ಮಹತ್ಯೆಗೆ ಯತ್ನಿಸುತ್ತಿರುವಾಗ ಶಂಕರಮೂರ್ತಿ ಎನ್ನುವ ವ್ಯಕ್ತಿ ತಡೆಯುತ್ತಾರೆ.ಭವಾನಿಯಿಂದ ವಿಷಯವೆನ್ನೆಲ್ಲ ತಿಳಿದುಕೊಂಡ ಶಂಕರಮೂರ್ತಿ ಅವಳನ್ನು ಮದುವೆಯಾಗುತ್ತಾರೆ. ಇತ್ತ ಭವಾನಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಮ್ಮನನ್ನು ಊರಿನಿಂದ ಕರೆದುಕೊಂಡು ಬರುವುದೆಂದು ತೀರ್ಮಾನಿಸುತ್ತಾಳೆ. ಮಾವನಿಗೆ ಮದುವೆ ಆಗಿರುವ ಬಗ್ಗೆ ಪತ್ರ ಬರೆಯುತ್ತಾಳೆ. 
ತನ್ನ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದ ಭವಾನಿಗೆ ನೆರೆಮನೆಯ ಹೆಂಗಸೊಬ್ಬರಿಂದ ತನ್ನ ತಾಯಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಸುದ್ದಿ ತಿಳಿಯುತ್ತದೆ. ಮತ್ತೆ ಊರಿಗೆ ಹೋಗದಿರುವ ನಿರ್ಧಾರ ಮಾಡುತ್ತಾಳೆ.ಈ ನಡುವೆ ಶಂಕರ್ ಭವಾನಿಯನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಾರೆ . ಆದರೆ ಭವಾನಿತಪ್ಪಿಯೂ ಶಂಕರ್ ಜೊತೆಗೆ ಮದುವೆ ಆಗಿರುವ ಬಗ್ಗೆ ಪ್ರಸ್ತಾಪಿಸುವುದಿಲ್ಲ . ಈ ನಡುವೆ ಭವಾನಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿಗೆ ಶಮಿಕಾ ಎಂದು ಹೆಸರು ಇಡುತ್ತಾರೆ.ಮನೆಯಲ್ಲಿ ಅಕ್ಕಂದಿರು ಬಂದಿದ್ದಾರೆ ಸ್ವಲ್ಪ ದಿನ ಬರುವುದಿಲ್ಲ ಎಂದು ಹೋದ ಶಂಕರ್ ಒಂದು ತಿಂಗಳಾದರೂ ಬರುವುದಿಲ್ಲ. ಮಗುವಿನ ಜೊತೆಗೆ ಭವಾನಿ ಒಬ್ಬಳೇ ಇದ್ದಳು. ಇತ್ತ ಶಂಕರ್ ತಾಯಿಯಿಂದ ಪತ್ರ ಬರುತ್ತದೆ. ಪತ್ರದಲ್ಲಿ ಶಂಕರ್ ಗೆ ಮದುವೆ ನಿಶ್ಚಯವಾಗಿರುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.ಶಂಕರ್ ಕೂಡ ಮದುವೆಯ ಆಮಂತ್ರಣ ಪತ್ರಿಕೆ ಕೊಡುತ್ತಾರೆ. ಭವಾನಿಗೆ ತನ್ನ ಮತ್ತು ಮಗುವಿನ ಭವಿಷ್ಯದ ಬಗ್ಗೆ ನೆನೆದು ಚಿಂತೆಯಾಗುತ್ತದೆ. ಶಂಕರ್ ಮದುವೆಗೆ ಭವಾನಿ ಹೋಗಲಿಲ್ಲ. ಮದುವೆ ಆಗಿ ಒಂದು ತಿಂಗಳ ನಂತರ ಬಂದ ಶಂಕರ್ ಮುಂಚಿನ ರೀತಿ ಇರಲಿಲ್ಲ. ಮಾತು ಕಡಿಮೆಯಾಗಿತ್ತು. ಎರಡು ದಿನದ ನಂತರ ಮನೆಯ ಮಾಲಿಕ ಬಂದು ಶಂಕರ್ ಮನೆ ಖಾಲಿ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿ ಹೋಗುತ್ತಾರೆ . ಇದನ್ನು ತಿಳಿದು ಭವಾನಿಗೆ ದಿಕ್ಕೇ ತೋಚುವುದಿಲ್ಲ.

 

ಅಂತರಾಳ - ಭಾಗ 6

ಶಂಕರ್ ಅವರ ಅಮ್ಮನಿಗೆ ಪತ್ರ ಬರೆದು ನೀವು ಹೇಗಿದ್ದೀರಿ? ......ನಿಮ್ಮ ಮಗ ಸೊಸೆ ಹೇಗಿದ್ದಾರೆ ಎಂದು ಕೇಳಿದೆ.......ಅವರ ಪತ್ರಕ್ಕಾಗಿ ಕಾದೆ........ಕಾದೆ... ತುಂಬಾ ದಿನದ ನಂತರ ಅವರಿಂದ ಪತ್ರ ಬಂತು. ಅದರಲ್ಲಿ ಶಂಕರ್ ಕೆಲಸ ಬಿಟ್ಟಿದ್ದಾನೆ. ಅವನೂ ಹೆಂಡತಿ ಮುಂಬೈಗೆ ತಿರುಗಾಡಲು ಹೋಗಿದ್ದಾರೆ. ನಾವೂ ಸಾಧ್ಯವಾದರೆ ಇಲ್ಲಿಯ ಜಾಗ ಮಾರಿ ಮುಂಬೈಗೆ ನನ್ನ ದೊಡ್ಡ ಮಗನ ಮನೆಗೆ ಹೋಗುವ ಯೋಚನೆ ಇದೆ ಎಂದು ಬರೆದಿದ್ದರು. ಈಗ ನನಗೆ ಪೂರ್ತಿಯಾಗಿ ವಿಷಯ ತಿಳಿಯಿತು ಇನ್ನೂ ಶಂಕರ್ ಬರುವುದಿಲ್ಲ ಎಂದು......... ಆದರೆ ನಾನು ಸಮುದ್ರದ ಮಧ್ಯದಲ್ಲಿ ಇದ್ದ ಹಾಗೆ ಅನ್ನಿಸಿತು.........



ಆ ದಿನ ನಾನು ತಪ್ಪು ಮಾಡಿದೆ ಸಾಯದೆ ಬದುಕಿ..... ಇಂದು ನಾನು ಮಗು ಏನು ಮಾಡಲಿ!. ........ಅಂದು ನಾನೊಬ್ಬಳೇ ಸಾಯಬಹುದಿತ್ತು!....... ಆದರೆ ಈಗ ಮಗುವನ್ನೂ ಸಾಯಿಸಲು ಮನಸ್ಸು ಬರುತ್ತಿಲ್ಲ ..... ಅವಳನ್ನು ಬಿಟ್ಟು ನಾನೊಬ್ಬಳೇ ಸಾಯಲೇ!......... ಮಗುವನ್ನು ಬಿಟ್ಟು ನಾನು ಒಬ್ಬಳೇ ಸತ್ತರೆ ಈ ಹೆಣ್ಣು ಮಗುವಿನ ಸ್ಥಿತಿ ಎನಿಸಿ ಒಮ್ಮೆ ಮೈಯೆಲ್ಲಾ ನಡುಕ ಬಂದ ಹಾಗೆ ಅನಿಸಿತು...ನಾನು ಹೆಣ್ಣಾಗಿ ತಾನೇ ಆ ಕಾಮುಕ ಪುರುಷರಿಂದ ಇಷ್ಟೆಲ್ಲಾ ಕಷ್ಟ ಅನುಭವಿಸುತಿರುವುದು .ಆ ದಿನ ಅವರ ನಾಲ್ಕು ನಿಮಿಷದ ಮೋಜಿನ ಆಟದಿಂದ ನನ್ನ ಜೀವನದ ಪಥವೇ ತಿರುಗಿತು.... ನನ್ನ ಜೀವನದ ಜೊತೆ ಆಟವಾಡಿದ ಆ ಕಾಮುಕರು ಆ ಕ್ಷಣವನ್ನು ಮರೆತು ಅವರಿಗೆ ಬೇಕಾದ ಜೀವನ ಸಂಗಾತಿಯೊಂದಿಗೆ ಆನಂದವಾಗಿರಬಹುದು..‌ ಇಲ್ಲ ಬೇರೊಬ್ಬ ನನ್ನಂತಹ ಒಂಟಿ ಹೆಣ್ಣು ಎಲ್ಲಿ ಸಿಗುತ್ತಾಳೆ ಎಂದು ಹೊಂಚು ಹಾಕುತ್ತಿರಬಹುದು...ಆದರೆ ಈ ಸಮಾಜ ಮಾತ್ರ ಅವರಿಗೆ ಬೇಕಾದ ಹಾಗೆ ಬೇಕಾದ ರೀತಿಯಲ್ಲಿ ಬದುಕುತ್ತಾರೆ....ಈ ಸಮಾಜದಲ್ಲಿ ಯಾವುದೇ ಅನ್ಯಾಯ, ದೌರ್ಜನ್ಯ, ಶೋಷಣೆ ನಡೆದದ್ದು ತಿಳಿದಾಗ ಒಮ್ಮೆ ಎಲ್ಲಾರೂ ಬಂದು ಮಾದ್ಯಮ ಗಳಲ್ಲಿ ಖಂಡಿಸುತ್ತಾರೆ ಅಂಗಡಿ ಮುಂಗಟ್ಟುಗಳಲಿ, ಆಫೀಸ್ , ಮಾರುಕಟ್ಟೆ , ಬೀದಿಯಲ್ಲಿ ಚರ್ಚೆ ಮಾಡುತ್ತಾರೆ.ಬರೇ ಮೂರು ದಿನ ಮಾತ್ರ ನಂತರ ಎಲ್ಲರೂ ಬೇರೆ ವಿಷಯಗಳಲ್ಲಿ ತಲ್ಲೀನ ಆಗುತ್ತಾರೆ......ನಾನು ಮಗು ಸತ್ತರೆ ಎಲ್ಲರೂ ಹೇಳುತ್ತಾರೆ.....ಯಾಕೆ ಸಾಯಬೇಕಿತ್ತು ಬದುಕಿ ತೋರಿಸಬೇಕು.ಇವಳು ಇಷ್ಟು ಸಣ್ಣ ಪ್ರಾಯದ ಹೆಣ್ಣು ಎಲ್ಲಿಯಾದರೂ ಕೆಲಸಕ್ಕೆ ಹೋಗಿ ಮಗುವನ್ನು ಸಾಕಬಹುದಿತ್ತು..‌‌......ಎಂದು ಎಲ್ಲರೂ ಹೇಳುತ್ತಾರೆ....ಆದರೆ ಒಂಟಿ ಹೆಣ್ಣು ಮಕ್ಕಳಿಗೆ ಯಾರು ಸಹಾಯ ಮಾಡುತ್ತಾರೆ. ಸಹಾಯ ಕೇಳಲು ಹೋದರೆ ಹೆಚ್ಚಿನ ಗಂಡಸರು ಉಪಯೋಗಿಸಲು ಹಾತೊರೆಯುತ್ತಾರೆ.... ಹೆಚ್ಚಿನ ಮಹಿಳೆಯರು ಇವಳಿಗೆ ಸಹಾಯ ಮಾಡಿದರೆ ತಮ್ಮ ಸಂಸಾರ ಹಾಳಾಗಬಹುದು ಎಂದು ಅಲ್ಲಿಂದ ಸಾಗ ಹಾಕುತ್ತಾರೆ.. ಎಲ್ಲಾರೂ ಯೋಚಿಸುವುದು ಬೇರೆಯವರು ಸಹಾಯ ಮಾಡಲಿ ಎಂದು......ಬೇರೆಯವರು ಎಂದರೆ ಯಾರು,? ಎಲ್ಲರೂ ಸಲಹೆ ನೀಡಲು ತಯಾರು ಇದ್ದಾರೆ..... ಸಹಾಯ ಮಾಡಲು ಯಾರೂ ತಯಾರಿಲ್ಲ.... ಸಹಾಯ ಮಾಡಲು ನಿಜವಾದ ಕಾಳಜಿ ತೊರಿಸುವವರಿಗೆ ಎನಾದರೂ ಕಾನೂನು, ಕಾಯಿದೆ, ಜಾತಿ ,ಧರ್ಮ ಎಂದು ಹೇಳಿ ಅವರನ್ನು ನಿಷ್ಕ್ರಿಯ ಮಾಡುತ್ತಾರೆ..........
ಈಗ ನಾನು ಎಲ್ಲಿಗೆ ಹೋಗಲಿ ಎನೂ ಮಾಡಲಿ ಯೋಚಿಸಿ ಯೋಚಿಸಿ ರಾತ್ರಿ ಕಳೆದೆ!...... ಅಮ್ಮನ ಸಂಕಟ ಅರ್ಥವಾಯಿತೊ ಎಂಬಂತೆ ಶಮಿಕಾ ಕೂಡ ರಾತ್ರಿ ಸರಿ ನಿದ್ದೆ ಮಾಡಿಲ್ಲ .......ಎಲ್ಲಿಗೆ ಹೋಗಲಿ? ......
ನನಗೆ ಬೇರೆ ಯಾರೂ ಇಲ್ಲ!.......... ಮಾವನ ಮನೆಗೆ ಹೋಗಲೇ....... ಅವರಲ್ಲಿ ಹೋಗಿ ನೀಚ ಮಾತು ಕೇಳುವುದಕ್ಕಿಂತ ಇಲ್ಲೆ ಎಲ್ಲಿಯಾದರೂ ಸಾಯುವುದೇ ಮೇಲು...‌.‌...‌.....
ತುಂಬಾ ಯೋಚಿಸಿದಾಗ ನಾನು ಮೊದಲು ಗ್ರಂಥಾಲಯದಲ್ಲಿರುವಾಗ ಕ್ರೈಸ್ತ ಸನ್ಯಾಸಿಯೊಬ್ಬರು ಓದಲು ಬರುತ್ತಿದ್ದರು.ಅವರು ನನ್ನಲಿ ವಿಶ್ವಾಸ ಆತ್ಮೀಯತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರು ವಿಳಾಸ ನನಗೆ ಕೊಟ್ಟಿದ್ದರು. ಆದರೆ ಈಗ ಅದು ನನ್ನಲಿ ಇದೆಯಾ ಗೊತ್ತಿಲ್ಲ....... ಅವರನ್ನು ಅವರ ವಿಳಾಸವನ್ನು ಮರೆತೇ ಹೋಗಿತ್ತು..... ಈಗ ಈ ಆಪತ್ಕಾಲದಲ್ಲಿ ಅವರ ನೆನಪು ಬಂತು....ಅವರ ವಿಳಾಸವನ್ನು ಅವಸರ ಅವಸರವಾಗಿ ಹುಡುಕಿದೆ ಆದರೆ ವಿಳಾಸ ಸಿಗಲಿಲ್ಲ..... ಮತ್ತೇ ತುಂಬಾ ದುಃಖವಾಯಿತು. ಪುನಃ ನಿಧಾನವಾಗಿ ಹುಡುಕಿದರೆ ಸಿಗಬಹುದು ಎಂಬ ದೂರದ ಆಸೆಯಿಂದ ಎಲ್ಲ ಪುಸ್ತಕಗಳನ್ನು ತೆಗೆದು ಹುಡುಕಿದೆ.... ಈಗ ವಿಳಾಸ ಸಿಕ್ಕಿತು....ಆಸರೆಯೇ ಸಿಕ್ಕಷ್ಟು ಸಂತೋಷವಾಯಿತು...... ತಕ್ಷಣ ಆ ವಿಳಾಸಕ್ಕೆ ದೀರ್ಘವಾದ ಪತ್ರ ಬರೆದೆ. ನನ್ನ ಗಂಡ ನನ್ನನ್ನು ನನ್ನ ಮಗುವನ್ನು ಬಿಟ್ಟು ಹೋಗಿದ್ದಾರೆ........... ನನಗಾರು ಇಲ್ಲ. ನನಗೆ ನಿಲ್ಲಲು ವ್ಯವಸ್ಥೆ ಮತ್ತು ಬದುಕಲು ಕೆಲಸ ಬೇಕು ಎಂದು ವಿನಂತಿಸಿಕೊಂಡೆ..... ಇದಕ್ಕೆ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದು ಅಂಚೆಗೆ ಹಾಕಿದೆ.....‌‌. ಇದಕ್ಕೆ ಉತ್ತರ ಬರಬಹುದೇ? ಬರದಿದ್ದರೆ ಎನೂ ಮಾಡುವುದು ಎಂಬುದು ಭಯವಾಗುತ್ತಿತ್ತು. ಮನಸ್ಸು ಕೆಟ್ಟದೆ ಆಲೋಚಿಸುತ್ತಿತ್ತು ......ಕಾರಣ ನಾನು ಎಲ್ಲಿ ಹೋದರೂ ಸಂತೋಷ ಹೆಚ್ಚು ದಿನ ಇರುತ್ತಿರಲಿಲ್ಲ......ಪ್ರತೀ ಕ್ಷಣ ಪತ್ರಕ್ಕಾಗಿ ಕಾದೆ.... ದಿನಗಳು ವರುಷದಂತೆ ಭಾಸವಾಗುತ್ತಿತ್ತು...... ಕಾಣದ ದೇವರಿಗೆ ಕೈ ಮುಗಿದು ಬೇಡಿಕೊಂಡೆ....... ನನ್ನ ಜೀವನದ ಹಾಗೆ ಶಮಿಕಾಳ ಜೀವನ ಆಗಬಾರದು ಎಂದು ಅಂದುಕೊಳ್ಳುತ್ತಿದ್ದೆ ...............‌ ಶಮಿಕಾಳ ಭಾಗ್ಯವೋ ಎಂಬಂತೆ ಕ್ರೈಸ್ತ ಸನ್ಯಾಸಿ ಅವರಿಂದ ಪತ್ರ ಬಂತು.......ಅದರಲ್ಲಿ ನೀನು ನೇರ ಹೊನ್ನಾವರಕ್ಕೆ ಬಾ. ಅಲ್ಲಿ ಕಾನ್ವೆಂಟ್ ನಲ್ಲಿ ಕೆಲಸ ಇದೆ. ನೀನು ಮಗು ಅಲ್ಲೇ ಇರಬಹುದು ..ತಕ್ಷಣ ಬಾ ಎಂದು ವಿಳಾಸ ನೀಡಿ ಪತ್ರ ಬರೆದಿದ್ದರು.......ಆ ಕ್ಷಣ ನನ್ನ ಸಂತೋಷಕ್ಕೆ ಪದವೇ ಇರಲಿಲ್ಲ. ......... ಸ್ವರ್ಗ-ನರಕ ಎಲ್ಲವೂ ಈ ಭೂಮಿಯ ಮೇಲೆಯೇ ಇರುವುದು.....ಅದು ಬೇರೆ ಲೋಕದಲ್ಲಿ ಇಲ್ಲ ಎಂದು ಆ ಕ್ಷಣ ಅರಿವು ಆಯಿತು.... ಅವರು ಹೇಳಿದಂತೆ ಬೇಕಾದ ಎಲ್ಲ ವಸ್ತುಗಳನ್ನು ಹಿಡಿದು ಮಗುವಿನ ಜೊತೆ ನೇರ ಹೊನ್ನಾವರಕ್ಕೆ ಹೋದೆ........ ಅಲ್ಲಿ ಹುಡುಕಲು ಕಷ್ಟ ಆಗಲಿಲ್ಲ ...... ಅಲ್ಲಿ ನಾನು ನನ್ನ ಶಮಿಕಾಳ ಜೀವನವೇ ಅವರಿಂದ ಬದಲಾಯಿತು. ಮೊದಲು ಮೊದಲು ಅಲ್ಲಿಯ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಯಿತು...... ಅಲ್ಲಿ ಎಲ್ಲಾನೂ ಸಮಯಕ್ಕೆ ಸರಿಯಾಗಿ ನಡೆಯಬೇಕು.‌ ಊಟ,ತಿಂಡಿ,ನಿದ್ದೆ, ಪ್ರಾರ್ಥನೆ, ಮನೋರಂಜನೆ, ಶಿಕ್ಷಣ ಎಲ್ಲಾ ವಿಷಯಕ್ಕೂ ಇಂತಿಷ್ಟು ಸಮಯ ನಿಗದಿ ಇರುತಿತ್ತು.... ಕ್ರಮೇಣ ಅಲ್ಲಿನ ಜೀವನ ನಮ್ಮಿಬ್ಬರಿಗೆ ಒಗ್ಗಿ ಹೋಯಿತು....‌. ಅಲ್ಲಿಗೆ ಹೋಗಿ 1 ವರ್ಷ ಕಳೆದ ಮೇಲೆ ಶಂಕರ್ ರವರ ವಿಳಾಸಕ್ಕೆ ಪತ್ರ ಬರೆದೆ .....ಅವರ ಅಮ್ಮ ನನಗೆ ಪತ್ರ ಹಿಂದೆ ಬರೆದಿದ್ದರು.......
ಅದರಲ್ಲಿ ಶಂಕರ್ ಗೆ ಗಂಡು ಮಗು ಆಗಿದೆ. ಹೆಸರು ಶರತ್ ಈಗ ಶಂಕರ್ ಮನೆಯಲ್ಲೇ ಕೃಷಿ ಮಾಡುತ್ತಾನೆ ಸೊಸೆ ಹೈಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ಬರೆದಿದ್ದರು..
ಶಂಕರ್ ನ ನೆನಪು ತುಂಬಾ ಬರುತಿತ್ತು.ಅವರು ನೀಡಿದ ಪ್ರೀತಿ, ಆತ್ಮೀಯತೆ, ಸಹಾಯ ಎಲ್ಲವೂ ನೆನಪು ಆಗುತಿತ್ತು......

(ಮುಂದುವರಿಯುವುದು......)

 

ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

 

Friday 5 November 2021

ಪ್ರಥಮ ವಿವಾಹ ವಾರ್ಷಿಕೋತ್ಸವ - ಶ್ರೀ ಲೋಕೇಶ್ ಭಂಡಾರಿ ಮತ್ತು ಶ್ರೀಮತಿ ತೃಪ್ತಿ ಭಂಡಾರಿ , ಇರುವೈಲು

 ಮಂಗಳೂರಿನ ಇರುವೈಲು ದೇವರಗುಡ್ಡೆ ಶ್ರೀಮತಿ ಲಲಿತಾ ಭಂಡಾರಿ ಮತ್ತು ದಿವಂಗತ ಮೋನಪ್ಪ ಭಂಡಾರಿ ದಂಪತಿಯ ಪುತ್ರ ಶ್ರೀ ಲೋಕೇಶ್ ಭಂಡಾರಿ ಮತ್ತು ವೇಣೂರು ನೆಲ್ಲಿಂಗೇರಿಯ ಶ್ರೀ ಆನಂದ ಭಂಡಾರಿಯವರ ಪುತ್ರಿ ಶ್ರೀಮತಿ ತೃಪ್ತಿ ಭಂಡಾರಿಯವರು ನವೆಂಬರ್ 5 ರ ಶುಕ್ರವಾರದಂದು ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.



-ಭಂಡಾರಿ ವಾರ್ತೆ

Thursday 4 November 2021

ದೀಪಾವಳಿ ಹಬ್ಬದ ವಿಶೇಷತೆಗಳು - ಲೋಕೇಶ್ ಭಂಡಾರಿ ದೊಂಬಿವಿಲಿ, ಮುಂಬೈ

 ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ..

ಬೆಳಕಿನ ಹಬ್ಬ ದೀಪಾವಳಿ ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ.
ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ - ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತದ್ದು ಎಂಬ ಅರ್ಥ ಕೂಡಾ ಇದೆ.

ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಾವಳಿ ಹಬ್ಬದ ಮೊದಲ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ಇದೆ. ಇದಕ್ಕೆ ಕಾರಣ ಸಮುದ್ರ ಮಥನ ಸಮಯದಲ್ಲಿ ಶ್ರೀ ವಿಷ್ಣು ಅಮೃತ ಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ನೀರು ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮಿಯೂ ಇರುತ್ತಾಳೆಂಬ ನಂಬಿಕೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಆಯುರಾರೋಗ್ಯ, ಆಯಸ್ಸು ವೃದ್ಧಿಸುವುದೆಂಬ ನಂಬಿಕೆ.

ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ, ಮೂಲತಃ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೆಯ ದಿನ ದೀಪಾವಳಿ ಅಮಾವಾಸ್ಯೆ, ನಾಲ್ಕನೆಯ ದಿನ ಬಳಿ ಪಾಡ್ಯಮಿ ಹಾಗೂ ಐದನೆಯ ದಿನ ಯಮ ದ್ವಿತೀಯ ಆಚರಣೆಯಿರುತ್ತದೆ.

ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು, ಸಿಖ್ಖರು, ಹಿಂದೂಗಳು ಕಾಡಿನಿಂದ ಹಿಡಿದು ನಾಡಿನ ವರೆಗೂ ಆಚರಿಸುವ ಪುರಾತನ ಹಬ್ಬ ದೀಪಾವಳಿ.

ದೀಪಾವಳಿ ಹಬ್ಬವು ಕಾರ್ತಿಕ ಮಾಸದಲ್ಲಿ ಬರುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ.ಹಾಗಾಗಿ ದೀಪಗಳ ಆವಳಿ ಎಂದರೆ ಸಾಲು ಸಾಲು ದೀಪಗಳನ್ನು ಬೆಳಗಿ ಕತ್ತಲೆಯನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ.

ದೀಪಗಳ ತುದಿ ಸರ್ವತೋಮುಖವಾಗಿದೆ. ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ. ದೀಪದ ಗಮನ ಊರ್ಧ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸುಕೂಡಾ ಸದಾ ಊರ್ಧ್ವಗಾಮಿಯಾಗಿರಬೇಕು. ಮನುಷ್ಯ ಸದಾ ಇತಿ ಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿಸಿಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡಾ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಇಲ್ಲಿದೆ.

ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ, ಆಕಾಶದಲ್ಲಿ ಚಿಮ್ಮುವ ಬಾಣ ಬಿರುಸು , ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಇದಷ್ಟೇ ಮೇಲ್ನೋಟಕ್ಕೆ ಕಾಣುತ್ತದೆ. ಸಿಹಿ ತಿಂದು ಉಡುಗೊರೆ ನೀಡಿ ಸಂತೋಷ ಪಡುವುದು ಕಾಣ ಬರುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ.

ಲೋಕೇಶ್ ಭಂಡಾರಿ ದೊಂಬಿವಿಲಿ, ಮುಂಬೈ


ದೀಪಾವಳಿ ಅಂದು ಇಂದು - ಸುಮಾ ಭಂಡಾರಿ, ಸುರತ್ಕಲ್

 ದೀಪಾವಳಿ ಎಂದರೆ ಏನೋ ಸಂಭ್ರಮ. ಸುತ್ತಮುತ್ತಲೂ ಪಟಾಕಿಗಳ ಸದ್ದು ಗದ್ದಲ. ಎಲ್ಲೆಲ್ಲೂ ದೀಪಗಳ ಬೆಳಕು. ಕತ್ತಲೆಯ ಅಂಧಕಾರವು ತೊಲಗಿ, ಬೆಳಕು ಪ್ರಜ್ವಲಿಸುತ್ತಾ ಇರುವಾಗ ಮನದಲ್ಲಿರುವ ಜಡತ್ವ ಹೋಗಿ ಉಲ್ಲಾಸ ಮೂಡುತ್ತದೆ. ಮನಸ್ಸು ನವಿಲಿನಂತೆ ಗರಿಗೆದರಿ ನರ್ತಿಸುತ್ತದೆ. ಬಗೆ ಬಗೆಯ ಪಟಾಕಿಗಳು ಆಕಾಶದೆತ್ತರಕ್ಕೆ ಸಿಡಿದು, ಬಣ್ಣದ ಬೆಳಕನ್ನು ಸುತ್ತಲೂ ಚೆಲ್ಲಿ, ಬೆಳಕಿನ ಕಿಡಿಗಳು ಅಂಬರದಿಂದ ಪ್ರಥ್ವಿಯ ಕಡೆಯ ಬರುವ ಸುಂದರ ನೋಟ ಕಣ್ಣಿಗೆ ಹಬ್ಬವೋ ಹಬ್ಬ. ಈ ಸುಂದರ ನೋಟವನ್ನು ನೋಡಿ ಸಂತಸ ಪಡದ ಹಿರಿಯರಿಲ್ಲ, ಮಕ್ಕಳಿಲ್ಲ. ಎಲ್ಲರಿಗೂ ಖುಷಿ ಕೊಡುತ್ತದೆ. ಆಜಾಗರೂಕತೆಯಿಂದ ಪಟಾಕಿ ಸಿಡಿದು ಎಷ್ಟೋ ಬಾರಿ ಅವಾಂತರವನ್ನೆ ಮಾಡುತ್ತದೆ.


ಸುಮಾರು ನಲವತ್ತು ವರ್ಷಗಳ ಹಿಂದೆ ಹಿಂತಿರುಗಿ ನೋಡಿದಾಗ, ಮನಃಪಟಲದಲ್ಲಿ ಕೆಲವೊಂದು ಘಟನೆಗಳು ಮೂಡಿ ಮರೆಯಾಗುತ್ತದೆ. ಮನೆಯಲ್ಲಿ ತಾಂಡವವಾಡುತ್ತಿರುವ ಬಡತನ.... ಹೊಸ ಬಟ್ಟೆ, ಸಿಹಿ ತರಲು ಕೂಡ ಹಣವಿಲ್ಲ ಅಪ್ಪ ಅಮ್ಮನ ಕೈಯಲ್ಲಿ.... ನೆರೆಹೊರೆಯ ಮನೆಯ ಮಕ್ಕಳು ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮ ಪಡುವಾಗ ನಮ್ಮ ಮನೆ ಮಕ್ಕಳಿಗೆ ಕೊಡಿಸಲು ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತಾ, ಮಕ್ಕಳಿಗೆ ನೋವಾಗಬಾರದು ಅಂತ ತಮ್ಮ ಹಳೆ ಸೀರೆಯಿಂದ ಲಂಗ ದಾವಣಿ ಹೊಲಿಸಿ ಕೊಟ್ಟಿದ್ದರು ಅಮ್ಮ. ಆ ಬಟ್ಟೆಯಲ್ಲೂ ಅತ್ಯಂತ ಆನಂದದಿಂದ ದೀಪಾವಳಿ ಆಚರಿಸುತ್ತಿದ್ದೆವು. ಬದಿಯ ಮನೆಯವರು ಹಾರಿಸುವ ದೊಡ್ಡ ದೊಡ್ಡ ಮಾಲೆ ಪಟಾಕಿ, ಮಳೆ, ಅಟಮ್ ಬಾಮ್ ಗಳನ್ನು ಭಯದಿಂದ ನೋಡಿ ಸಂಭ್ರಮ ಪಡುತ್ತಿದ್ದೆವು.

ನರಕಚತುರ್ದಶಿಗೆ ಇನ್ನೇನು ಒಂದು ವಾರ ಇದೆ ಎನ್ನುವಾಗಲೇ ಅಮ್ಮ ಬಿಸಿ ನೀರಿಗೆ ಬೇಕಾದ ತರೆಗೆಲೆ,ತೆಂಗಿನ ಚಿಪ್ಪು ಒಟ್ಟು ಮಾಡುವ ಕೆಲಸ ನನಗೆ ನೀಡುತ್ತಿದ್ದರು. ತಮ್ಮ ತಂಗಿಯರನ್ನು ಕೂಡಿಕೊಂಡು ಸುತ್ತ ಮುತ್ತಲಿನ ಮರದ ಎಲೆಗಳನ್ನು ಗುಡಿಸಿ ತೆಂಗಿನ ಗರಿಯ ತೊಟ್ಟೆಯಲ್ಲಿ (ಬುಟ್ಟಿಯಲ್ಲಿ) ತುಂಬಿಸಿ ಇಡುತ್ತಿದ್ದೆವು. ಚತುರ್ದಶಿಯ ಹಿಂದಿನ ದಿನ, ತಿಕ್ಕಿ ತೊಳೆದ ಬಚ್ಚಲು ಮಡಕೆಗೆ ಶೇಡಿಯಲ್ಲಿ ಚಿತ್ರ ಬರೆದು , ಕಾಟ್ ತೊಂಡೆ ಗಿಡದ ಬಳ್ಳಿಯನ್ನು ಮಡಕೆಯ ಕುತ್ತಿಗೆಗೆ ಕಟ್ಟಿದ ಕೂಡಲೇ, ಅಮ್ಮ ನೀರು ತುಂಬಿಸಲು ಅಣಿ ಮಾಡುವರು. ನೆರೆಮನೆಯ ಭಟ್ಟರ ಮನೆಯವರು ಜಾಗಟೆ ಸದ್ದಿನೊಂದಿಗೆ ನೀರು ತುಂಬಿಸುವ ಕಾರ್ಯಕ್ರಮ ಮಾಡಿದರೆ, ನಮ್ಮ ಮನೆಯಲ್ಲಿ ತಮ್ಮ ಬಡಿಯುವ ಬಟ್ಟಲ ಸದ್ದಿನೊಂದಿಗೆ ನೀರು ತುಂಬಿಸುತ್ತಿದ್ದರು ಅಮ್ಮ....
ಮರುದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಬಿಸಿ ನೀರು ಕಾಯಿಸುವ ಕಾಯಕ ನನಗೆ ಮತ್ತು ತಮ್ಮನಿಗೆ...😊 ಸ್ನಾನ ಮಾಡಿ ಮುಗಿದ ಕೂಡಲೇ 1ಅಥವಾ 2ರೂಪಾಯಿಯ ನಾಣ್ಯ ಬಿಸಿ ನೀರಿನ ಮಡಕೆಯ ಒಳಗೆ ಹಾಕಬೇಕು. ಕೊನೆಗೆ ಸ್ನಾನ ಮಾಡಿದವರಿಗೆ ಆ ನಾಣ್ಯಗಳು ಅಂತ ಅಮ್ಮ ಹೇಳುತ್ತಿದ್ದರು. ಎಲ್ಲಾ ಕೆಲಸ ಮುಗಿದು ಕೊನೆಯ ಸ್ನಾನ ಅಮ್ಮ ಮಾಡುತ್ತಿದ್ದರು. ಆದರೆ ನಾಣ್ಯಗಳನ್ನು ತಂದು ಒಂದು ಡಬ್ಬಕ್ಕೆ ಹಾಕುತ್ತಿದ್ದರು. ಅರ್ಜೆಂಟಾಗಿ ಬೇಕಾಗಬಹುದು ಎಂಬ ದೂರದೃಷ್ಟಿಯಿಂದ.... ಈಗ ಆ ಎಲ್ಲಾ ಸಂಭ್ರಮ ಸೋಲಾರ್ ನ ಬಿಸಿ ನೀರು ಸ್ನಾನ ಮಾಡುವವರಿಗೆ ಎಲ್ಲಿಂದ ಬರಬೇಕು ಹೇಳಿ?
ತೆಂಗಿನಕಾಯಿ, ಬೆಲ್ಲ ಹಾಕಿದ ಅವಲಕ್ಕಿ ಹೊಟ್ಟೆ ತುಂಬಾ ತಿನ್ನುತ್ತಾ, ಕೊನೆಗೆ ಕೈ ನೆಕ್ಕುತ್ತಿದ್ದ ನೆನಪು ಈಗ ನೆನಪು ಮಾತ್ರ. ಯಾಕೆಂದರೆ ಈಗಿನ ಮಕ್ಕಳಿಗೆ ಅವಲಕ್ಕಿ ಅಂದರೆ ಆಗದು. ಮೂಗು ಮುರಿಯುತ್ತಾರೆ. ಆಗ ಬಡತನ ಇದ್ದರೂ ಹಬ್ಬದ ಸಂಭ್ರಮ ಎಲ್ಲರಲ್ಲೂ ಇತ್ತು. ಆದರೆ ಈಗ ಹಬ್ಬ ಅಂದರೆ ಮುಂಚಿನ ಸಂಭ್ರಮವು ಇಲ್ಲ. ತಿಂಡಿಯ ಆಸೆಯೂ ಇಲ್ಲ. ಆಗ ಹಬ್ಬಕ್ಕೆ ಮಾತ್ರ ತಿಂಡಿಗಳನ್ನು ಮಾಡುತ್ತಿದ್ದರು. ಮಕ್ಕಳೆಲ್ಲ ಹಬ್ಬ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ.

ಮೂರು ದಿನದ ಹಬ್ಬದ ಕೊನೆಯ ದಿನ ಬಲಿಪಾಡ್ಯಮಿ. ಬೆಳ್ಳಗ್ಗಿನಿಂದಲೇ ತಯಾರಿ ನಡೆಯುತ್ತದೆ. ನಮ್ಮ ದನದ ಕೊಟ್ಟಿಗೆಯಲ್ಲಿ 4,5 ದನಗಳು. ಅವುಗಳ ಕುತ್ತಿಗೆಗೆ ಮಾಲೆ ಮಾಡಲು, ನೆರೆಯ ಮಕ್ಕಳ ಜೊತೆಗೆ ನಸುಕಿನಲ್ಲೇ ಎದ್ದು ಬೇಲಿ ಬೇಲಿಗೆ ನುಗ್ಗಿ , ಹಳದಿ ಬಣ್ಣದ ಮಿಠಾಯಿ ಹೂ, ಬೆಕ್ಕಿನ ಹಣ್ಣಿನ (ಪುಚ್ಚೆ ಪರ್ದ್ )ಹೂ , ಗೊಂಡೆ ಹೂ ಕೊಯ್ದು ತರುವ ಆ ಸಂಭ್ರಮ. ಎಲ್ಲಾ ದನಗಳನ್ನು ಸ್ನಾನ ಮಾಡಿಸಿ, ಲೋಟದಲ್ಲಿ ಶೇಡಿ ಕಲಸಿ , ಅವುಗಳ ಮೈ ತುಂಬಾ ಚಿತ್ತಾರವನ್ನು ಬಿಡಿಸಿ, ಹಣೆಗೆ ಕುಂಕುಮ ಹಚ್ಚಿ ಹೊರಗೆ ಕಟ್ಟಿದಾಗ ಮನಕ್ಕೆ ಏನೋ ಸಂತಸ. ಅವುಗಳಿಗೂ ಸಂತಸ. ಪುಟ್ಟ ಕರುಗಳು ಹರಸಾಹಸ ಪಟ್ಟು , ಕುತ್ತಿಗೆಯ ಮಾಲೆಯನ್ನು ಎಳೆದು ತಿಂದು ಬಿಟ್ಟರೆ, ಅವುಗಳ ಮುಖದಲ್ಲಿ ವಿಜಯದ ಭಾವ. ಮಣ್ಣಿನ ನೆಲಕ್ಕೆ ಸೆಗಣಿ ಸಾರಿಸಿ, ರಂಗೋಲಿ ಪುಡಿಯಲ್ಲಿ ಚಿತ್ತಾರ ಬಿಡಿಸಿ ದೀಪಗಳನ್ನು ಹಚ್ಚಿ, ಎಷ್ಟು ಹೊತ್ತಿನವರೆಗೆ ಉರಿಯುತ್ತದೆ ಎಂದು ಹೊರಗೆ ನಿಂತು ಕಾಯುತ್ತಿದ್ದ ದಿನ ಇಂದಿಗೂ ಅಚ್ಚಳಿಯದೆ ಮನದಲ್ಲಿ ಉಳಿದಿದೆ. ಬಡತನ ಇದ್ದರೂ ಅಮ್ಮ, ಅವಲಕ್ಕಿ, ಬೆಲ್ಲದ ಗಟ್ಟಿ ಮಾಡಿ ನಮಗೂ, ದನಗಳಿಗೂ ಕೊಡುತ್ತಿದ್ದರು. ದನಗಳಿಗೆ, ಗೊಬ್ಬರ ಮೂಟೆಗೆ (ತುಡರ್)ದೀಪ ತೋರಿಸಿ, ದನ ಕರುಗಳ ಕಾಲಿಗೆ ನಮಸ್ಕರಿಸಿದ ಬಳಿಕ ನಮಗೆ ತಿನ್ನಲು ಕೊಡುತ್ತಿದ್ದರು. ಸುತ್ತುಮುತ್ತಲಿನ ಗದ್ದೆ ಇರುವ ಮನೆಯವರು ಗದ್ದೆಗಳಿಗೆ ತುಡರ್(ಬೆಳಕಿನ ದೊಂದಿ) ತೋರಿಸಿ ವಿಳ್ಯದೆಲೆ, ಅಡಿಕೆ, ಅವಲಕ್ಕಿ, ಹರಳು ಹಾಕಿ ಬಲೀಂದ್ರ ಕರೆದು ಕೂ ಎಂದು ಕೂಗುತ್ತಿದ್ದರು. ಒಂದೆಡೆ ದೀಪಗಳ ಸಾಲುಗಳು, ಪಟಾಕಿಗಳ ಸದ್ದಿನೊಂದಿಗೆ ಬಲಿಪಾಡ್ಯಮಿ ಕಳೆ ಕಟ್ಟುತ್ತಿತ್ತು. ಮರುದಿನ ಬೇಗ ಎದ್ದು ಎಲ್ಲಾ ಗದ್ದೆ ಬದುಗಳಿಗೆ ಹೋಗಿ ವಿಳ್ಯದೆಲೆ, ಅಡಕೆ ಹೆಕ್ಕಿ ತಂದು ಅಮ್ಮನಿಗೆ ಕೊಡುತ್ತಿದ್ದ ದಿನಗಳು ಇನ್ನು ಬರಲು ಸಾಧ್ಯವೇ?.... ಸಂಭ್ರಮದ ಮೂರು ದಿನಗಳ ದೀಪಾವಳಿಯ ಸಂಭ್ರಮ ಮುಗಿದರೆ ಮುಂದೆ ಯಾವ ಹಬ್ಬ ಬರುತ್ತದೆ ಎಂದು ಕಾಯುತ್ತಾ ಕೂರುತ್ತಿದ್ದರು ಮಕ್ಕಳು.
ಅಂದಿನ ದೀಪಾವಳಿಗೂ ಇಂದಿನ ದೀಪಾವಳಿಗೂ ಅಜಗಜಾಂತರ ವ್ಯತ್ಯಾಸ. ಇಂದು ಕೊರೋನ ಮಹಾ ಮಾರಿಯಿಂದ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಕೆಲವರಂತೂ ಕೆಲಸ ಕಳೆದುಕೊಂಡು ಕಷ್ಟ ಪಡುತ್ತಿದ್ದಾರೆ. ಹಬ್ಬ ಆಚರಿಸಲು ಹಣ ಇಲ್ಲದ ಪರಿಸ್ಥಿತಿ ಒದಗಿದೆ. ಉಳ್ಳವರಿಗೂ ಕೋವಿಡ್ ನಿಂದಾಗಿ ಸಂಭ್ರಮ ನೋಡಲು ಆಗುತ್ತಾ ಇಲ್ಲ. ಮುಂದಿನ ದೀಪಾವಳಿ ಎಲ್ಲರಿಗೂ ಸಂಭ್ರಮದ ದೀಪಾವಳಿ ಆಗಲಿ... ಕೊರೋನ ನಮ್ಮ ದೇಶ ಮಾತ್ರವಲ್ಲದೆ ವಿಶ್ವದಿಂದಲೇ ತೊಲಗಲಿ. ದೇಶ ಸುಭೀಕ್ಷವಾಗಲಿ. ಸರ್ವ ಜನರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾ ನನ್ನ ಪುಟ್ಟ ಲೇಖನಕ್ಕೆ ಚುಕ್ಕಿ ಇಡುವೆ 🙏🏽

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

✍️ ಸುಮಾ ಭಂಡಾರಿ, ಸುರತ್ಕಲ್

ಹರುಷ ಹೊತ್ತ ದೀಪಾವಳಿ - ಪ್ರಕೃತಿ ಭಂಡಾರಿ ಆಲಂಕಾರು.

 ಹರುಷ ಹೊತ್ತ ದೀಪಾವಳಿ

ಎಲ್ಲೆಲ್ಲೂ ಹಣತೆಗಳದ್ದೇ ಹಾವಳಿ,
ಹೊತ್ತು ತರುತ್ತಿದೆ ಬೆಳಕಿನ ಪ್ರಭಾವಳಿ.

ರಾರಾಜಿಸುತಿದೆ ಹಚ್ಚ ಹಸುರಿನ ತೋರಣ,
ಮಾಡುತ ನಮ್ಮೊಳಗಿನ ಪಾಪಹರಣ.

ಮೂಡಿದೆ ರಂಗು ರಂಗಿನ ಈ ರಂಗವಲ್ಲಿ,
ಮನೆ -ಮನಗಳಲ್ಲಿ ಖುಷಿಯ ಚೆಲ್ಲಿ.


ಅಂಧಕಾರ ಕಳೆಯುವ ಜ್ಯೋತಿ ಬೆಳಗೋಣ,
ಲಕ್ಷ್ಮೀ ದೇವಿಯ ಸ್ವಾಗತ ಮಾಡೋಣ.

ಕತ್ತಲ ಬದುಕಿಗೆ ಬೆಳಕಿನೋಕುಳಿ,
ಹರುಷ ಹೊತ್ತು ತರಲಿ ಈ ದೀಪಾವಳಿ.






✍️ಪ್ರಕೃತಿ ಭಂಡಾರಿ ಆಲಂಕಾರು.

Wednesday 3 November 2021

ಬಲಿಪಾಡ್ಯಮಿ ನಂಬಿಕೆಗಳು - ಸುಷ್ಮಾ ಭಂಡಾರಿ, ಇರುವೈಲ್, ಮೂಡಬಿದ್ರಿ

 ನಮ್ಮ ಸನಾತನ ಧರ್ಮದಲ್ಲಿರುವ ಎಲ್ಲಾ ಹಬ್ಬಗಳನ್ನು ಋತುಗಳನ್ನುಪ್ರಕೃತಿಯಲ್ಲಿನ ಬದಲಾವಣೆ, ಮಾಸಗಳು , ತಿಥಿಗಳ ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆಚರಿಸುತ್ತೇವೆ.ದೀಪಾ ವಳಿ ಹಬ್ಬ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಮನೆಯ ಮುಂದೆ ಉರಿಯುವ ಹಣತೆಯ ಬೆಳಕು . ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು .


ಬಲಿಪಾಡ್ಯಮಿ :

ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣು ಭಕ್ತ ,ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು , ಬಲಿಯಿಂದ ಮೂರು ಹೆಜ್ಜೆಊರುವಷ್ಟು ಭೂಮಿಯನ್ನು ದಾನವಾ ಗಿ ಪಡೆದು ಎರಡು ಹೆಜ್ಜೆಗಳಲ್ಲಿಆಕಾಶ-ಭೂಮಿಗಳನ್ನು ಅಳೆದು ಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದು ಬಿಡುತ್ತಾನೆ.

 

ಆಗ ಬಲಿಯ ಭಕ್ತಿಯನ್ನು ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರ ವರ್ತಿ ಭೂಲೋಕ ಸಂಚಾರಕ್ಕೆಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.ರೈತರ ಮನೆಯಲ್ಲಿ ಹಣತೆ ಹಚ್ಚಿ ಬಲಿಚಕ್ರವರ್ತಿಯನ್ನು ಕರೆಯುವ ಪದ್ದತಿಯು ಇದೆ.

"ಅಸತೋಮಾ ಸದ್ಗಮಯಾ , ತಮಸೋಮಾ ಜ್ಯೋತಿರ್ಗಮಯ"





 ಸುಷ್ಮಾ ಭಂಡಾರಿ, ಇರುವೈಲ್, ಮೂಡಬಿದ್ರಿ

 

ದೀಪಾವಳಿ ಹಬ್ಬ ಅಂದು-ಇಂದು - ನಾರಾಯಣ. ಬಿ, ಕುಂಡದಬೆಟ್ಟು

 ಭಕ್ತಿಯೇ ಪ್ರಧಾನವಾಗಿದ್ದ ನಮ್ಮ ಪೂರ್ವಜರ ಕಾಲದಲ್ಲಿ ಹಬ್ಬಗಳು ಕೇವಲ ಮನರಂಜನೆಯ ಆಚರಣೆಯಾಗಿರಲಿಲ್ಲ. ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳಾಗಿದ್ದ ಹಬ್ಬಗಳು ನೀರಸ ಬದುಕಿಗೊಂದು ಹೊಸಹುರುಪು ತುಂಬಿಕೊಡುವ ದಿನಗಳಾಗಿದ್ದವು. ನಿತ್ಯ ಬಿಡುವಿಲ್ಲದ ಜಂಜಾಟದ ಬದುಕಿನಲ್ಲಿ ಹಬ್ಬ-ಹರಿದಿನಗಳೆ ಅಂದಿನ ಜನರಿಗೆ ಮುಕ್ತಿ ನೀಡುತ್ತಿದ್ದವು. ಪ್ರಕೃತಿ, ಪಶು-ಪಕ್ಷಿ ಬಹುಮುಖ್ಯವಾಗಿ ಮಾನವ ಸಂಬಂಧಗಳ ರಕ್ಷಣೆಯ ಉದಾತ್ತ ಆಶಯಗಳು ಈ ಆಚರಣೆಗಳ ಹಿಂದಿನ ಉದ್ದೇಶವಾಗಿತ್ತು.

ಇಂತಹ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಸ್ಥಾನವಿದೆ. ತಾನೊಬ್ಬನೇ ಸಂತೋಷಪಡದೇ ತಮ್ಮಲ್ಲಿರುವ ಗೋವು, ತಾನು ಉಪಯೋಗಿಸುವ ಕೃಷಿ ಮತ್ತಿತರ ಸಾಧನಗಳನ್ನು ಭಕ್ತಿಯಿಂದ ಪೂಜಿಸುವ ದೀಪಾವಳಿ ಕೇವಲ ಹಬ್ಬವಲ್ಲ; ಅದೊಂದು ಸಂಭ್ರಮಾಚರಣೆ.
ಹಬ್ಬಗಳೆಂದರೆ ಕೇವಲ ಬಗೆ-ಬಗೆಯ ತಿಂಡಿ-ತಿನಸು, ಹೊಸ ಬಟ್ಟೆಗಳಿಗೆ ಮಾತ್ರ ಸೀಮಿತವಲ್ಲ. ಹಬ್ಬದ ಆಚರಣೆಯಲ್ಲಿ ಆಡಂಬರ, ಢಂಬಾಚಾರಗಳಿಗೂ ಮೀರಿದ ಸದಾಶಯಗಳಿವೆ. ಬಹು ಮುಖ್ಯವಾಗಿ ಬಂಧು-ಬಳಗ ದ್ವೇಷ ಮರೆತು, ಬೆರೆತು ಸಂಭ್ರಮಿಸುವ ವಾತಾವರಣವಿದೆ. ಮನೆ ಮಂದಿಯಲ್ಲಿ ಸಡಗರ ತುಂಬುವ ಹಬ್ಬಗಳು ಇಂದಿನ ದಿನಗಳಲ್ಲಿ ನೀರಸವಾಗುತ್ತಿದೆ. ಆಚರಣೆಯೊಂದಿಗೆ ಸಂಸ್ಕೃತಿಯೂ ಮರೆಯಾಗಿ ಕೇವಲ ಹೊಸ ಬಟ್ಟೆ, ಬಂಗಾರ, ಹೊಸ ಕಾರು, ಬೇಕರಿ ತಿಂಡಿಗಳ ಖರೀದಿಗಳಿಗೆ ಇಂದಿನ ಹಬ್ಬಗಳು ಸೀಮಿತವಾಗುತ್ತಿವೆ.
ಬದುಕನ್ನು ಆಸಕ್ತಿದಾಯಕವಾಗಿರಿಸಲು ನಮ್ಮ ಪೂರ್ವಜರು ಹಬ್ಬ-ಹರಿದಿನಗಳನ್ನು ಆಚರಣೆಗೆ ತಂದರು. ಆದರೆ ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ಆಚರಣೆಗಳು ಹಳ್ಳಹಿಡಿದು ವಿದೇಶಿ ಸಂಸ್ಕೃತಿಯ ಮೋಹ ಯುವ ಪೀಳಿಗೆಯನ್ನು ಕೇವಲ ಎಂಜಾಯ್‌ಮೆಂಟ್ ಸಂಸ್ಕೃತಿಗೆ ದೂಡುತ್ತಿದೆ. ಆದ್ದರಿಂದಲೇ ನಮ್ಮ ಸಂಸ್ಕೃತಿಯ ಹಬ್ಬದಾಚರಣೆಗಿಂತ ಪಬ್-ಕ್ಲಬ್‌ಗಳೇ ಬೆಟರ್ ಅನಿಸತೊಡಗಿತು. ಹಬ್ಬದ ಮುಖ್ಯ ಆಶಯಗಳು ಮಾಯವಾಗಿ ಹಬ್ಬವೆಂದರೆ ಡಿಸ್ಕೌಂಟ್ ಸೇಲ್ ಇರುವಲ್ಲಿ ಶಾಪಿಂಗ್ ಮಾಡುವುದು, ಹಬ್ಬದ ರಜೆಯನ್ನು ಟೂರ್ ಮಾಡಿ ಎಂಜಾಯ್ ಮಾಡುವುದೇ ಹಬ್ಬ ಎನ್ನುವಂತಾಗಿದೆ.

ನರಕ ಚತುರ್ಥಿಯ ಮುಂಚಿನ ದಿನದಿಂದಲೇ ಹಬ್ಬದ ತಯಾರಿ ನಡೆಯುತ್ತದೆ. ಬಿಸಿ ನೀರಿನ ಹಂಡೆ ತೊಳೆದು, ಅದಕ್ಕೆ ಶುದ್ಧ ನೀರು ತುಂಬಿಸಿ ತಮ್ಮ-ತಮ್ಮ ಸಂಪ್ರದಾಯದಂತೆ ಹಬ್ಬವನ್ನು ಬಿಡುವಿಲ್ಲದೆ ಆಚರಿಸುವಾಗ ಸಿಗುವ ಆನಂದ ಇಂದಿನ ವಾಟರ್ ಹೀಟರ್, ಬಾಯ್ಲರ್, ಗೀಝರ್‌ಗಳಿಗೆ ಸ್ಚಿಚ್ ಹಾಕಿ ಶವರ್‌ಬಾತ್ ಮಾಡುವಾಗ ಸಿಗಲಾರದು.

ದೀಪಗಳ ಹಬ್ಬವೆಂದೆ ಕರೆಯಲ್ಪಡುವ ದೀಪಾವಳಿ ಅನೇಕ ಉದಾತ್ತ ತತ್ವಗಳನ್ನು ಸಾರುತ್ತದೆ. ಕತ್ತಲೆಯಲ್ಲಿದ್ದಾಗ ಮಾತ್ರ ನಮಗೆ ದೀಪದ ಮಹತ್ವ ತಿಳಿಯುವುದು. ಭಕ್ತಿ ಎಂದರೆ ಕೃತಕವಾಗಿ ನಾವು ಹಚ್ಚುವ ದೀಪಗಳಿಂದಲ್ಲ. ನಮ್ಮ ಅಂತರಂಗದ ಬೆಳಕು ಪ್ರಕಾಶಿಸದಿದ್ದರೆ ಪ್ರಪಂಚದಲ್ಲಿ ಎಷ್ಟೇ ಬೆಳಕಿದ್ದರೂ ಏನು ಪ್ರಯೋಜನ. ‘ಪ್ರಪಂಚದ ಬೆಳಕೆಲ್ಲವನ್ನೂ ಒಟ್ಟು ಸೇರಿಸಿದರೂ ಒಬ್ಬ ವ್ಯಕ್ತಿಯ ಅಂತರಂಗದ ಬೆಳಕಿಗೆ ಸರಿಸಮಾನವಾಗಲಾರದು’ ಎಂದು ಜ್ಞಾನಿಗಳು ಹೇಳುತ್ತಾರೆ.
ಬೆಳಕಿನ ಹಬ್ಬ ದೀಪಾವಳಿ ನಮ್ಮ ಅಂತರಂಗದ ಕತ್ತಲೆ ಕಳೆದು ಸುಜ್ಞಾನದ ಬೆಳಕು ತರಲಿ, ಮನುಷ್ಯರಲ್ಲಿ ಮಾನವೀಯತೆಯ ದಿವ್ಯ ಜ್ಯೋತಿ ಬೆಳಗಲಿ ಎಂದು ಆಶಿಸೋಣ.





 



 ನಾರಾಯಣ. ಬಿ, ಕುಂಡದಬೆಟ್ಟು

ಎಸ್.ಡಿ.ಎಂ ಆಸ್ಪತ್ರೆ, ಉಜಿರೆ
ಫೋ: 9481391527