BhandaryVarthe Team

BhandaryVarthe Team
Bhandary Varthe Team

Friday, 12 November 2021

ಬೆಳ್ತಂಗಡಿ ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ವಂದನಾ ಭಂಡಾರಿ ಆಯ್ಕೆ

 ಬೆಳ್ತಂಗಡಿ ತಾಲ್ಲೂಕಿನ ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ರೀಮತಿ ವಂದನಾ ಭಂಡಾರಿ ನೆಲ್ಲಿಂಗೇರಿ ಅಂಡಿಂಜೆ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕ ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಇವರ ಸಾಮಾಜಿಕ ಕಳಕಳಿಯನ್ನು ಗುರುತಿಸಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ ಮತ್ತು ಮಾಜಿ ಸಚಿವ ಕೆ ಗಂಗಾಧರ ಗೌಡ ಇವರ ಶಿಫಾರಸಿನ ಮೇರೆಗೆ ನೇಮಕ ಮಾಡಲಾಗಿದೆ.

ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಇರುವ ಇವರು ಪ್ರಸ್ತುತ ಅಂಡಿಂಜೆ ಗ್ರಾಮ ಪಂಚಾಯತ್ ನ ಸದಸ್ಯೆಯಾಗಿರುತ್ತಾರೆ . ಡಿ.ಎಡ್. ಶಿಕ್ಷಣವನ್ನು ಪೂರೈಸಿ ಬೆಂಗಳೂರಿನ ನಾಗವಾರ ಆಂಗ್ಲ ಮಾಧ್ಯಮ ಹೈಸ್ಕೂಲ್ ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಯೋಗ ಶಿಕ್ಷಣವನ್ನು ಪಡೆದಿರುತ್ತಾರೆ.

ಅಂಡಿಂಜೆ ಗ್ರಾಮದ ನೆಲ್ಲಿಂಗೇರಿ ದಿವಂಗತ ಅಪ್ಪು ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ಭಂಡಾರಿ ದಂಪತಿಯ ಪುತ್ರಿಯಾಗಿರುತ್ತಾರೆ. ವಂದನಾ ಭಂಡಾರಿಯವರು ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಉನ್ನತ ಸ್ಥಾನ ಮಾನ ಪಡೆಯಲು ಭಗವಂತನ ಅನುಗ್ರಹ ಸದಾ ಇರಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ

Wednesday, 10 November 2021

ಕುಲ ವೃತ್ತಿಯಲ್ಲಿ ಕೀಳರಿಮೆ ಬೇಡ ಮಾನ್ಯ ಗೃಹ ಸಚಿವರು

 ನವೆಂಬರ್ 9ರಂದು ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ ಹಾಗೂ ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಸವಿತಾ ಸಮಾಜದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಹಾಗೂ ಕಾರ್ಮಿಕರ ನೊಂದಾವಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು , ಬೆಳ್ತಂಗಡಿ ತಾಲೂಕು ಶಾಸಕರಾದ ಮಾನ್ಯ ಹರೀಶ್ ಪೂಂಜರವರು, ಕಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಡಂದಲೆ ಸುರೇಶ್ ಭಂಡಾರಿ, ಭಂಡಾರಿ ಮಹಾಮಂಡಲದ ಅಧ್ಯಕ್ಷರಾದ ಸದಾಶಿವ ಭಂಡಾರಿ ಸಕಲೇಶಪುರ, ಬೆಳ್ತಂಗಡಿ ಭಂಡಾರಿ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ, ಭಂಡಾರಿ ಸಮಾಜ ಸಂಘದ ಗೌರವಾಧ್ಯಕ್ಷ ಎ.ಪೂವಪ್ಪ ಭಂಡಾರಿ, ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಭಂಡಾರಿ, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಬಿಎಂಎಸ್ ಬೆಳ್ತಂಗಡಿ ಅಧ್ಯಕ್ಷ ಉದಯ ಕುಮಾರ್ ಬಿ.ಕೆ. ಮಡಂತ್ಯಾರು ಅಶೋಕ್ ಭಂಡಾರಿ ಇವರುಗಳು ಉಪಸ್ಥಿತರಿದ್ದರು.

 

ಮಾನ್ಯ ಸಚಿವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸವಿತಾ ಸಮಾಜ ತಮ್ಮ ವೃತ್ತಿ ಜೀವನದೊಂದಿಗೆ ರಾಷ್ಟ್ರೀಯತೆಗೆ ಒತ್ತು ಕೊಟ್ಟವರು. ನೀವು ವೃತ್ತಿಯ ಜೊತೆಗೆ ತಂತ್ರಜ್ಞಾನವನ್ನು ಅಧ್ಯಯನ ಮಾಡಿ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಿಕೊಳ್ಳಬೇಕು, ದುಡಿದು ತಿನ್ನುವವರಿಗೆ ಕೀಳರಿಮೆ ಬೇಡ ಹಿರಿಯರ ವೃತ್ತಿಯನ್ನು ಇಂದಿನ ಯುವಕರು ಮುಂದುವರಿಸಲು ಹಿಂಜರಿಯಬಾರದು ಎಂಬ ಸಲಹೆ ನೀಡಿದರು.

ಮಾನ್ಯ ಶಾಸಕರು ಭಂಡಾರಿ ಸಮಾಜದ ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿ ಮಂಜೂರಾಗಿದೆ, ಈ ಭವನ ನಿರ್ಮಿಸಿ ಅದರಿಂದ ಬಂದ ಆದಾಯದಲ್ಲಿ ಶಿಕ್ಷಣಕ್ಕೆ ಮತ್ತು ನಿರುದ್ಯೋಗಿಗಳಿಗೆ ನೆರವು ನೀಡುವಂತಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಬಿಎಂಎಸ್ ಅಧ್ಯಕ್ಷರಾದ ಉದಯ ಕುಮಾರ್ ಇವರು ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಸಾಧಕರಾದ ಎ ಪೂವಪ್ಪ ಭಂಡಾರಿ ದಂಪತಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ಶಿವಾನಂದ ಭಂಡಾರಿ, ಪೋಲೀಸ್ ಸೇವೆಯಲ್ಲಿ ಪದೋನ್ನತಿ ಪಡೆದ ವಿಜಯೇಂದ್ರ ಭಂಡಾರಿ , ಕೆಎಸ್ಸಾರ್ಟಿಸಿ ನಿವೃತ್ತ ನಿರ್ವಾಹಕ ಯುವರಾಜ ಭಂಡಾರಿ ಇವರೆಲ್ಲರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸತೀಶ್ ಇವರ ಪ್ರಾರ್ಥನೆ ಮತ್ತು ಸಂಘದ ಗೌರವಾಧ್ಯಕ್ಷರಾದ ಎ ಪೂವಪ್ಪ ಭಂಡಾರಿ ಇವರ ಸ್ವಾಗತದೊಂದಿಗೆ ಪ್ರಾರಂಭಿಸಿ, ಕಳೆಂಜ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಭಂಡಾರಿ ಮತ್ತು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿ ನಾರಾಯಣ ಭಂಡಾರಿ ಇವರ ನಿರೂಪಣೆಯೊಂದಿಗೆ ವಿಶ್ವನಾಥ ಭಂಡಾರಿಯವರ ಧನ್ಯವಾದಗಳೊಂದಿಗೆ ಮುಕ್ತಾಯ ಗೊಂಡಿತ್ತು.

ವರದಿ : ಶ್ರೀಮತಿ ವನಿತಾ ಅರುಣ್ ಭಂಡಾರಿ, ಬಜ್ಪೆ

ಕಾರ್ಕಳ ಬೆಟ್ಟದ ಮನೆ ಗೋಪಾಲ ಭಂಡಾರಿ ನಿಧನ

 ಕಾರ್ಕಳ ಬೆಟ್ಟದ ಮನೆ ಗೋಪಾಲ ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದ ನವಂಬರ್ 10ರಂದು ಬುಧವಾರ ಬೆಳಿಗ್ಗೆ 1.38ಕ್ಕೆ ಕೊನೆಯುಸಿರೆಳೆದರು. ಅವರಿಗೆ ಸುಮಾರು 77 ವಯಸ್ಸಾಗಿತ್ತು.

 

ದಿವಂಗತರು ಪತ್ನಿ ಶ್ರೀಮತಿ ಗುಲಾಬಿ, ಮಕ್ಕಳಾದ ಶರತ್ ಭಂಡಾರಿ,ಸರಿತಾ ಅಶೋಕ್, ಶಶಿಧರ್ ಭಂಡಾರಿ ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Monday, 8 November 2021

ಮಂಗಳೂರು ಗುರುಪುರದ ಆದಿತ್ಯ ಕಿರಣ್ ಗೆ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ

 ಮೈಸೂರಿನಲ್ಲಿ ನಡೆದಿರುವ ಮೊದಲ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ 2021 ರಲ್ಲಿ ಮಂಗಳೂರಿನ ವಾಮಂಜೂರಿನ  ಆದಿತ್ಯ  ಕಿರಣ್  ರವರು ಎರಡು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದ 74 ಕೆ ಜಿ ವಿಭಾಗದ ಸ್ಪರ್ಧಿಗಳ ಪೈಕಿ  ಆದಿತ್ಯ ಕಿರಣ್ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದು ಈಗಾಗಲೇ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕೂಡಾ ಭಾಗವಹಿಸಿದ್ದಾರೆ.ಕಳೆದ ಒಂಭತ್ತು ವರ್ಷಗಳಿಂದ ಕರಾಟೆ ಸೇರಿ ವಿವಿಧ ವಿದ್ಯೆಗಳನ್ನೂ ತನ್ನಾದಾಗಿಸಿಕೊಳ್ಳುತ್ತಿದ್ದಾರೆ. ಆದಿತ್ಯ ಕಿರಣ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಬೇಕೆಂದು ಆದಿತ್ಯ ಕಿರಣ್ ರವರ ಮಹಾದಾಸೆಯಾಗಿದೆ. ಆದಿತ್ಯ ಕಿರಣ್ ರವರು ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು.



ಮಂಗಳೂರಿನ ನೀರುಮಾರ್ಗ ದ ಪಾಲ್ದನೆ ಕ್ಯಾಂಬ್ರಿಡ್ಜ್ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ಆದಿತ್ಯ ಕಿರಣ್ ಮಂಗಳೂರಿನ ಇನ್ಸ್ಟಿಟ್ಯೂಟ್ ಒಫ್ ಐ ಕೆ ಎಂ ಎ (ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ )ಸಂಸ್ಥೆಯಲ್ಲಿ ನಿತಿನ್ ಎನ್ ಸುವರ್ಣ ಮತ್ತು ಸಂಪತ್ ಕುಮಾರ್ ಅವರಿಂದ ತರಭೇತಿ ಪಡೆಯುತ್ತಿದ್ದಾರೆ. ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್ ಡಬ್ಲ್ಯೂ ಯು ಎಸ್ ಎಚ್ ಯು ನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು ಇನ್ನಷ್ಟು ಪ್ರಶಸ್ತಿಗಳನ್ನು ಗಳಿಸುವ ಉತ್ಸಾಹದಲ್ಲಿದ್ದಾರೆ. ಆದಿತ್ಯ ಕಿರಣ್ ರವರು ಮಂಗಳೂರಿನ ಗುರುಪುರದ ಶ್ರೀ ಕಿರಣ್ ಕುಮಾರ್ ಮತ್ತು  ಶ್ರೀಮತಿ ಸಿ ಎಸ್ ಲೀಲಾವತಿ ದಂಪತಿಯ  ಪುತ್ರ.


ಆದಿತ್ಯ ಕಿರಣ್ ಕರಾಟೆ ಮತ್ತು ಬಾಕ್ಸಿಂಗ್ ನಲ್ಲಿ ಇನ್ನಷ್ಟು ಸಾಧನೆ ಮಾಡಲಿ ಆ ಮೂಲಕ ಸಮಾಜ ಮತ್ತು ಕುಟುಂಬಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿಕೊಂಡು ಶುಭ ಹಾರೈಸುತ್ತದೆ.

ಮಾಹಿತಿ : ಶ್ರೀಪಾಲ್ ಭಂಡಾರಿ ನೆಲ್ಯಾಡಿ
ವರದಿ: ವನಿತಾ ಅರುಣ್ ಭಂಡಾರಿ ಬಜ್ಪೆ

Saturday, 6 November 2021

ಅಂತರಾಳ - ಭಾಗ 6

 

ಇಲ್ಲಿಯವರೆಗೆ.....
ಶಮಿಕಳಿಗೆ ತನ್ನ ತಂದೆ ಯಾರೆಂದು ತಿಳಿಯಲು ತಾಯಿ ಭವಾನಿಯ ಡೈರಿ ಓದುತ್ತಾಳೆ. ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಕೊಂಡಿರುತ್ತಾರೆ.ಮಾವನ ಮನೆಯಲ್ಲಿ ಭವಾನಿ ಮತ್ತು ಅವಳ ತಾಯಿ ಇದ್ದು ಅಲ್ಲೇ ಹೈಸ್ಕೂಲ್ ವಿದ್ಯಾಬ್ಯಾಸ ಮುಗಿಸಿ ಉಡುಪಿಗೆ ಬಂದು ಕಾಲೇಜು ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗಿರುವಾಗ ಒಂದು ದಿನ ಕೆಲಸದಿಂದ ಬರುವಾಗ ಅವಳ ಮೇಲೆ ಅತ್ಯಾಚಾರ ನಡೆಯುತ್ತದೆ.ಇದರಿಂದ ಅವಳಿಗೆ ದಿಕ್ಕೇ ತೋಚದಂತಾಗುತ್ತದೆ... ಅವಳು ಸಾಯುವ ನಿರ್ಧಾರ ಮಾಡುತ್ತಾಳೆ..... ಸಾಯುವ ತೀರ್ಮಾನಕ್ಕೆ ಬಂದವಳು ಮನಸ್ಸು ಬದಲಿಸಿ ಕೆಲಸಕ್ಕೆ ಹೋಗುತ್ತಾಳೆ ಆದರೆ ಮಾಸಿಕ ಸ್ರಾವ ಆಗದೆ ಇರುವುದನ್ನು ನೋಡಿ ದುರುಳರ ಕಾಮದ ಕುರುಹು ಉಳಿದಿರುವುದು ಖಚಿತವಾಗುತ್ತದೆ. ಮತ್ತೆ ಗ್ರಂಥಾಲಯದ ಒಳಗಡೆ ಆತ್ಮಹತ್ಯೆಗೆ ಯತ್ನಿಸುತ್ತಿರುವಾಗ ಶಂಕರಮೂರ್ತಿ ಎನ್ನುವ ವ್ಯಕ್ತಿ ತಡೆಯುತ್ತಾರೆ.ಭವಾನಿಯಿಂದ ವಿಷಯವೆನ್ನೆಲ್ಲ ತಿಳಿದುಕೊಂಡ ಶಂಕರಮೂರ್ತಿ ಅವಳನ್ನು ಮದುವೆಯಾಗುತ್ತಾರೆ. ಇತ್ತ ಭವಾನಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಮ್ಮನನ್ನು ಊರಿನಿಂದ ಕರೆದುಕೊಂಡು ಬರುವುದೆಂದು ತೀರ್ಮಾನಿಸುತ್ತಾಳೆ. ಮಾವನಿಗೆ ಮದುವೆ ಆಗಿರುವ ಬಗ್ಗೆ ಪತ್ರ ಬರೆಯುತ್ತಾಳೆ. 
ತನ್ನ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದ ಭವಾನಿಗೆ ನೆರೆಮನೆಯ ಹೆಂಗಸೊಬ್ಬರಿಂದ ತನ್ನ ತಾಯಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಸುದ್ದಿ ತಿಳಿಯುತ್ತದೆ. ಮತ್ತೆ ಊರಿಗೆ ಹೋಗದಿರುವ ನಿರ್ಧಾರ ಮಾಡುತ್ತಾಳೆ.ಈ ನಡುವೆ ಶಂಕರ್ ಭವಾನಿಯನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಾರೆ . ಆದರೆ ಭವಾನಿತಪ್ಪಿಯೂ ಶಂಕರ್ ಜೊತೆಗೆ ಮದುವೆ ಆಗಿರುವ ಬಗ್ಗೆ ಪ್ರಸ್ತಾಪಿಸುವುದಿಲ್ಲ . ಈ ನಡುವೆ ಭವಾನಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿಗೆ ಶಮಿಕಾ ಎಂದು ಹೆಸರು ಇಡುತ್ತಾರೆ.ಮನೆಯಲ್ಲಿ ಅಕ್ಕಂದಿರು ಬಂದಿದ್ದಾರೆ ಸ್ವಲ್ಪ ದಿನ ಬರುವುದಿಲ್ಲ ಎಂದು ಹೋದ ಶಂಕರ್ ಒಂದು ತಿಂಗಳಾದರೂ ಬರುವುದಿಲ್ಲ. ಮಗುವಿನ ಜೊತೆಗೆ ಭವಾನಿ ಒಬ್ಬಳೇ ಇದ್ದಳು. ಇತ್ತ ಶಂಕರ್ ತಾಯಿಯಿಂದ ಪತ್ರ ಬರುತ್ತದೆ. ಪತ್ರದಲ್ಲಿ ಶಂಕರ್ ಗೆ ಮದುವೆ ನಿಶ್ಚಯವಾಗಿರುವ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.ಶಂಕರ್ ಕೂಡ ಮದುವೆಯ ಆಮಂತ್ರಣ ಪತ್ರಿಕೆ ಕೊಡುತ್ತಾರೆ. ಭವಾನಿಗೆ ತನ್ನ ಮತ್ತು ಮಗುವಿನ ಭವಿಷ್ಯದ ಬಗ್ಗೆ ನೆನೆದು ಚಿಂತೆಯಾಗುತ್ತದೆ. ಶಂಕರ್ ಮದುವೆಗೆ ಭವಾನಿ ಹೋಗಲಿಲ್ಲ. ಮದುವೆ ಆಗಿ ಒಂದು ತಿಂಗಳ ನಂತರ ಬಂದ ಶಂಕರ್ ಮುಂಚಿನ ರೀತಿ ಇರಲಿಲ್ಲ. ಮಾತು ಕಡಿಮೆಯಾಗಿತ್ತು. ಎರಡು ದಿನದ ನಂತರ ಮನೆಯ ಮಾಲಿಕ ಬಂದು ಶಂಕರ್ ಮನೆ ಖಾಲಿ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿ ಹೋಗುತ್ತಾರೆ . ಇದನ್ನು ತಿಳಿದು ಭವಾನಿಗೆ ದಿಕ್ಕೇ ತೋಚುವುದಿಲ್ಲ.

 

ಅಂತರಾಳ - ಭಾಗ 6

ಶಂಕರ್ ಅವರ ಅಮ್ಮನಿಗೆ ಪತ್ರ ಬರೆದು ನೀವು ಹೇಗಿದ್ದೀರಿ? ......ನಿಮ್ಮ ಮಗ ಸೊಸೆ ಹೇಗಿದ್ದಾರೆ ಎಂದು ಕೇಳಿದೆ.......ಅವರ ಪತ್ರಕ್ಕಾಗಿ ಕಾದೆ........ಕಾದೆ... ತುಂಬಾ ದಿನದ ನಂತರ ಅವರಿಂದ ಪತ್ರ ಬಂತು. ಅದರಲ್ಲಿ ಶಂಕರ್ ಕೆಲಸ ಬಿಟ್ಟಿದ್ದಾನೆ. ಅವನೂ ಹೆಂಡತಿ ಮುಂಬೈಗೆ ತಿರುಗಾಡಲು ಹೋಗಿದ್ದಾರೆ. ನಾವೂ ಸಾಧ್ಯವಾದರೆ ಇಲ್ಲಿಯ ಜಾಗ ಮಾರಿ ಮುಂಬೈಗೆ ನನ್ನ ದೊಡ್ಡ ಮಗನ ಮನೆಗೆ ಹೋಗುವ ಯೋಚನೆ ಇದೆ ಎಂದು ಬರೆದಿದ್ದರು. ಈಗ ನನಗೆ ಪೂರ್ತಿಯಾಗಿ ವಿಷಯ ತಿಳಿಯಿತು ಇನ್ನೂ ಶಂಕರ್ ಬರುವುದಿಲ್ಲ ಎಂದು......... ಆದರೆ ನಾನು ಸಮುದ್ರದ ಮಧ್ಯದಲ್ಲಿ ಇದ್ದ ಹಾಗೆ ಅನ್ನಿಸಿತು.........



ಆ ದಿನ ನಾನು ತಪ್ಪು ಮಾಡಿದೆ ಸಾಯದೆ ಬದುಕಿ..... ಇಂದು ನಾನು ಮಗು ಏನು ಮಾಡಲಿ!. ........ಅಂದು ನಾನೊಬ್ಬಳೇ ಸಾಯಬಹುದಿತ್ತು!....... ಆದರೆ ಈಗ ಮಗುವನ್ನೂ ಸಾಯಿಸಲು ಮನಸ್ಸು ಬರುತ್ತಿಲ್ಲ ..... ಅವಳನ್ನು ಬಿಟ್ಟು ನಾನೊಬ್ಬಳೇ ಸಾಯಲೇ!......... ಮಗುವನ್ನು ಬಿಟ್ಟು ನಾನು ಒಬ್ಬಳೇ ಸತ್ತರೆ ಈ ಹೆಣ್ಣು ಮಗುವಿನ ಸ್ಥಿತಿ ಎನಿಸಿ ಒಮ್ಮೆ ಮೈಯೆಲ್ಲಾ ನಡುಕ ಬಂದ ಹಾಗೆ ಅನಿಸಿತು...ನಾನು ಹೆಣ್ಣಾಗಿ ತಾನೇ ಆ ಕಾಮುಕ ಪುರುಷರಿಂದ ಇಷ್ಟೆಲ್ಲಾ ಕಷ್ಟ ಅನುಭವಿಸುತಿರುವುದು .ಆ ದಿನ ಅವರ ನಾಲ್ಕು ನಿಮಿಷದ ಮೋಜಿನ ಆಟದಿಂದ ನನ್ನ ಜೀವನದ ಪಥವೇ ತಿರುಗಿತು.... ನನ್ನ ಜೀವನದ ಜೊತೆ ಆಟವಾಡಿದ ಆ ಕಾಮುಕರು ಆ ಕ್ಷಣವನ್ನು ಮರೆತು ಅವರಿಗೆ ಬೇಕಾದ ಜೀವನ ಸಂಗಾತಿಯೊಂದಿಗೆ ಆನಂದವಾಗಿರಬಹುದು..‌ ಇಲ್ಲ ಬೇರೊಬ್ಬ ನನ್ನಂತಹ ಒಂಟಿ ಹೆಣ್ಣು ಎಲ್ಲಿ ಸಿಗುತ್ತಾಳೆ ಎಂದು ಹೊಂಚು ಹಾಕುತ್ತಿರಬಹುದು...ಆದರೆ ಈ ಸಮಾಜ ಮಾತ್ರ ಅವರಿಗೆ ಬೇಕಾದ ಹಾಗೆ ಬೇಕಾದ ರೀತಿಯಲ್ಲಿ ಬದುಕುತ್ತಾರೆ....ಈ ಸಮಾಜದಲ್ಲಿ ಯಾವುದೇ ಅನ್ಯಾಯ, ದೌರ್ಜನ್ಯ, ಶೋಷಣೆ ನಡೆದದ್ದು ತಿಳಿದಾಗ ಒಮ್ಮೆ ಎಲ್ಲಾರೂ ಬಂದು ಮಾದ್ಯಮ ಗಳಲ್ಲಿ ಖಂಡಿಸುತ್ತಾರೆ ಅಂಗಡಿ ಮುಂಗಟ್ಟುಗಳಲಿ, ಆಫೀಸ್ , ಮಾರುಕಟ್ಟೆ , ಬೀದಿಯಲ್ಲಿ ಚರ್ಚೆ ಮಾಡುತ್ತಾರೆ.ಬರೇ ಮೂರು ದಿನ ಮಾತ್ರ ನಂತರ ಎಲ್ಲರೂ ಬೇರೆ ವಿಷಯಗಳಲ್ಲಿ ತಲ್ಲೀನ ಆಗುತ್ತಾರೆ......ನಾನು ಮಗು ಸತ್ತರೆ ಎಲ್ಲರೂ ಹೇಳುತ್ತಾರೆ.....ಯಾಕೆ ಸಾಯಬೇಕಿತ್ತು ಬದುಕಿ ತೋರಿಸಬೇಕು.ಇವಳು ಇಷ್ಟು ಸಣ್ಣ ಪ್ರಾಯದ ಹೆಣ್ಣು ಎಲ್ಲಿಯಾದರೂ ಕೆಲಸಕ್ಕೆ ಹೋಗಿ ಮಗುವನ್ನು ಸಾಕಬಹುದಿತ್ತು..‌‌......ಎಂದು ಎಲ್ಲರೂ ಹೇಳುತ್ತಾರೆ....ಆದರೆ ಒಂಟಿ ಹೆಣ್ಣು ಮಕ್ಕಳಿಗೆ ಯಾರು ಸಹಾಯ ಮಾಡುತ್ತಾರೆ. ಸಹಾಯ ಕೇಳಲು ಹೋದರೆ ಹೆಚ್ಚಿನ ಗಂಡಸರು ಉಪಯೋಗಿಸಲು ಹಾತೊರೆಯುತ್ತಾರೆ.... ಹೆಚ್ಚಿನ ಮಹಿಳೆಯರು ಇವಳಿಗೆ ಸಹಾಯ ಮಾಡಿದರೆ ತಮ್ಮ ಸಂಸಾರ ಹಾಳಾಗಬಹುದು ಎಂದು ಅಲ್ಲಿಂದ ಸಾಗ ಹಾಕುತ್ತಾರೆ.. ಎಲ್ಲಾರೂ ಯೋಚಿಸುವುದು ಬೇರೆಯವರು ಸಹಾಯ ಮಾಡಲಿ ಎಂದು......ಬೇರೆಯವರು ಎಂದರೆ ಯಾರು,? ಎಲ್ಲರೂ ಸಲಹೆ ನೀಡಲು ತಯಾರು ಇದ್ದಾರೆ..... ಸಹಾಯ ಮಾಡಲು ಯಾರೂ ತಯಾರಿಲ್ಲ.... ಸಹಾಯ ಮಾಡಲು ನಿಜವಾದ ಕಾಳಜಿ ತೊರಿಸುವವರಿಗೆ ಎನಾದರೂ ಕಾನೂನು, ಕಾಯಿದೆ, ಜಾತಿ ,ಧರ್ಮ ಎಂದು ಹೇಳಿ ಅವರನ್ನು ನಿಷ್ಕ್ರಿಯ ಮಾಡುತ್ತಾರೆ..........
ಈಗ ನಾನು ಎಲ್ಲಿಗೆ ಹೋಗಲಿ ಎನೂ ಮಾಡಲಿ ಯೋಚಿಸಿ ಯೋಚಿಸಿ ರಾತ್ರಿ ಕಳೆದೆ!...... ಅಮ್ಮನ ಸಂಕಟ ಅರ್ಥವಾಯಿತೊ ಎಂಬಂತೆ ಶಮಿಕಾ ಕೂಡ ರಾತ್ರಿ ಸರಿ ನಿದ್ದೆ ಮಾಡಿಲ್ಲ .......ಎಲ್ಲಿಗೆ ಹೋಗಲಿ? ......
ನನಗೆ ಬೇರೆ ಯಾರೂ ಇಲ್ಲ!.......... ಮಾವನ ಮನೆಗೆ ಹೋಗಲೇ....... ಅವರಲ್ಲಿ ಹೋಗಿ ನೀಚ ಮಾತು ಕೇಳುವುದಕ್ಕಿಂತ ಇಲ್ಲೆ ಎಲ್ಲಿಯಾದರೂ ಸಾಯುವುದೇ ಮೇಲು...‌.‌...‌.....
ತುಂಬಾ ಯೋಚಿಸಿದಾಗ ನಾನು ಮೊದಲು ಗ್ರಂಥಾಲಯದಲ್ಲಿರುವಾಗ ಕ್ರೈಸ್ತ ಸನ್ಯಾಸಿಯೊಬ್ಬರು ಓದಲು ಬರುತ್ತಿದ್ದರು.ಅವರು ನನ್ನಲಿ ವಿಶ್ವಾಸ ಆತ್ಮೀಯತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರು ವಿಳಾಸ ನನಗೆ ಕೊಟ್ಟಿದ್ದರು. ಆದರೆ ಈಗ ಅದು ನನ್ನಲಿ ಇದೆಯಾ ಗೊತ್ತಿಲ್ಲ....... ಅವರನ್ನು ಅವರ ವಿಳಾಸವನ್ನು ಮರೆತೇ ಹೋಗಿತ್ತು..... ಈಗ ಈ ಆಪತ್ಕಾಲದಲ್ಲಿ ಅವರ ನೆನಪು ಬಂತು....ಅವರ ವಿಳಾಸವನ್ನು ಅವಸರ ಅವಸರವಾಗಿ ಹುಡುಕಿದೆ ಆದರೆ ವಿಳಾಸ ಸಿಗಲಿಲ್ಲ..... ಮತ್ತೇ ತುಂಬಾ ದುಃಖವಾಯಿತು. ಪುನಃ ನಿಧಾನವಾಗಿ ಹುಡುಕಿದರೆ ಸಿಗಬಹುದು ಎಂಬ ದೂರದ ಆಸೆಯಿಂದ ಎಲ್ಲ ಪುಸ್ತಕಗಳನ್ನು ತೆಗೆದು ಹುಡುಕಿದೆ.... ಈಗ ವಿಳಾಸ ಸಿಕ್ಕಿತು....ಆಸರೆಯೇ ಸಿಕ್ಕಷ್ಟು ಸಂತೋಷವಾಯಿತು...... ತಕ್ಷಣ ಆ ವಿಳಾಸಕ್ಕೆ ದೀರ್ಘವಾದ ಪತ್ರ ಬರೆದೆ. ನನ್ನ ಗಂಡ ನನ್ನನ್ನು ನನ್ನ ಮಗುವನ್ನು ಬಿಟ್ಟು ಹೋಗಿದ್ದಾರೆ........... ನನಗಾರು ಇಲ್ಲ. ನನಗೆ ನಿಲ್ಲಲು ವ್ಯವಸ್ಥೆ ಮತ್ತು ಬದುಕಲು ಕೆಲಸ ಬೇಕು ಎಂದು ವಿನಂತಿಸಿಕೊಂಡೆ..... ಇದಕ್ಕೆ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದು ಅಂಚೆಗೆ ಹಾಕಿದೆ.....‌‌. ಇದಕ್ಕೆ ಉತ್ತರ ಬರಬಹುದೇ? ಬರದಿದ್ದರೆ ಎನೂ ಮಾಡುವುದು ಎಂಬುದು ಭಯವಾಗುತ್ತಿತ್ತು. ಮನಸ್ಸು ಕೆಟ್ಟದೆ ಆಲೋಚಿಸುತ್ತಿತ್ತು ......ಕಾರಣ ನಾನು ಎಲ್ಲಿ ಹೋದರೂ ಸಂತೋಷ ಹೆಚ್ಚು ದಿನ ಇರುತ್ತಿರಲಿಲ್ಲ......ಪ್ರತೀ ಕ್ಷಣ ಪತ್ರಕ್ಕಾಗಿ ಕಾದೆ.... ದಿನಗಳು ವರುಷದಂತೆ ಭಾಸವಾಗುತ್ತಿತ್ತು...... ಕಾಣದ ದೇವರಿಗೆ ಕೈ ಮುಗಿದು ಬೇಡಿಕೊಂಡೆ....... ನನ್ನ ಜೀವನದ ಹಾಗೆ ಶಮಿಕಾಳ ಜೀವನ ಆಗಬಾರದು ಎಂದು ಅಂದುಕೊಳ್ಳುತ್ತಿದ್ದೆ ...............‌ ಶಮಿಕಾಳ ಭಾಗ್ಯವೋ ಎಂಬಂತೆ ಕ್ರೈಸ್ತ ಸನ್ಯಾಸಿ ಅವರಿಂದ ಪತ್ರ ಬಂತು.......ಅದರಲ್ಲಿ ನೀನು ನೇರ ಹೊನ್ನಾವರಕ್ಕೆ ಬಾ. ಅಲ್ಲಿ ಕಾನ್ವೆಂಟ್ ನಲ್ಲಿ ಕೆಲಸ ಇದೆ. ನೀನು ಮಗು ಅಲ್ಲೇ ಇರಬಹುದು ..ತಕ್ಷಣ ಬಾ ಎಂದು ವಿಳಾಸ ನೀಡಿ ಪತ್ರ ಬರೆದಿದ್ದರು.......ಆ ಕ್ಷಣ ನನ್ನ ಸಂತೋಷಕ್ಕೆ ಪದವೇ ಇರಲಿಲ್ಲ. ......... ಸ್ವರ್ಗ-ನರಕ ಎಲ್ಲವೂ ಈ ಭೂಮಿಯ ಮೇಲೆಯೇ ಇರುವುದು.....ಅದು ಬೇರೆ ಲೋಕದಲ್ಲಿ ಇಲ್ಲ ಎಂದು ಆ ಕ್ಷಣ ಅರಿವು ಆಯಿತು.... ಅವರು ಹೇಳಿದಂತೆ ಬೇಕಾದ ಎಲ್ಲ ವಸ್ತುಗಳನ್ನು ಹಿಡಿದು ಮಗುವಿನ ಜೊತೆ ನೇರ ಹೊನ್ನಾವರಕ್ಕೆ ಹೋದೆ........ ಅಲ್ಲಿ ಹುಡುಕಲು ಕಷ್ಟ ಆಗಲಿಲ್ಲ ...... ಅಲ್ಲಿ ನಾನು ನನ್ನ ಶಮಿಕಾಳ ಜೀವನವೇ ಅವರಿಂದ ಬದಲಾಯಿತು. ಮೊದಲು ಮೊದಲು ಅಲ್ಲಿಯ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಯಿತು...... ಅಲ್ಲಿ ಎಲ್ಲಾನೂ ಸಮಯಕ್ಕೆ ಸರಿಯಾಗಿ ನಡೆಯಬೇಕು.‌ ಊಟ,ತಿಂಡಿ,ನಿದ್ದೆ, ಪ್ರಾರ್ಥನೆ, ಮನೋರಂಜನೆ, ಶಿಕ್ಷಣ ಎಲ್ಲಾ ವಿಷಯಕ್ಕೂ ಇಂತಿಷ್ಟು ಸಮಯ ನಿಗದಿ ಇರುತಿತ್ತು.... ಕ್ರಮೇಣ ಅಲ್ಲಿನ ಜೀವನ ನಮ್ಮಿಬ್ಬರಿಗೆ ಒಗ್ಗಿ ಹೋಯಿತು....‌. ಅಲ್ಲಿಗೆ ಹೋಗಿ 1 ವರ್ಷ ಕಳೆದ ಮೇಲೆ ಶಂಕರ್ ರವರ ವಿಳಾಸಕ್ಕೆ ಪತ್ರ ಬರೆದೆ .....ಅವರ ಅಮ್ಮ ನನಗೆ ಪತ್ರ ಹಿಂದೆ ಬರೆದಿದ್ದರು.......
ಅದರಲ್ಲಿ ಶಂಕರ್ ಗೆ ಗಂಡು ಮಗು ಆಗಿದೆ. ಹೆಸರು ಶರತ್ ಈಗ ಶಂಕರ್ ಮನೆಯಲ್ಲೇ ಕೃಷಿ ಮಾಡುತ್ತಾನೆ ಸೊಸೆ ಹೈಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ಬರೆದಿದ್ದರು..
ಶಂಕರ್ ನ ನೆನಪು ತುಂಬಾ ಬರುತಿತ್ತು.ಅವರು ನೀಡಿದ ಪ್ರೀತಿ, ಆತ್ಮೀಯತೆ, ಸಹಾಯ ಎಲ್ಲವೂ ನೆನಪು ಆಗುತಿತ್ತು......

(ಮುಂದುವರಿಯುವುದು......)

 

ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ