BhandaryVarthe Team

BhandaryVarthe Team
Bhandary Varthe Team

Sunday 3 September 2017

ಮದುವೆ

ಮದುವೆಯ ಈ  ಬಂಧ ಅನುರಾಗದ ಸಂಬಂಧ ಎನ್ನುವ ಹಾಡಿನ ಮೂಲಕ "ಮದುವೆ” ಯ ಬಗ್ಗೆ ಲೇಖನ  ಆರಂಭಿಸುತ್ತಿದ್ದೇನೆ .          ಮದುವೆ ಎಂದರೆ ಜನ್ಮ ಜನ್ಮಗಳ ಅನುಬಂಧ ಅಲ್ಲವೇ ಮಾನವ ಜೀವನದಲ್ಲಿ ವಿವಾಹ ಎಂಬುದು ಒಂದು ಪ್ರಮುಖ ಘಟ್ಟ . ಎರಡು ಜೀವಗಳನ್ನು ಹತ್ತಿರ ತಂದು ಜೀವನವಿಡೀ ಜೊತೆಯಾಗಿ  ಬದುಕಿ ಬಾಳುವಂತೆ ಹರಸುವ ಒಂದು ಸಾಮಾಜಿಕ ವಿಧಿ . ಹಾಗಾಗಿ ಮದುವೆ ಎಂಬ ಈ  ಬಂಧ ಪ್ರಮುಖ  ಸ್ಥಾನ ಪಡೆದಿದೆ.

         ಯವ್ವನಕ್ಕೆ ಬಂದ ಪ್ರತಿಯೊಬ್ಬರು ತನಗೆ ತಕ್ಕ ಸಂಗಾತಿಗಾಗಿ ಕಾತರದಿಂದ ಕಾಯುವುದು ಸಹಜ ಅಲ್ಲವೇ ..?? ಅಂದವಾದ ಯುವತಿಯರ ಕುರಿತು ಯುವಕರು , ಮನ್ಮಥರನ್ನು ಬಯಸುವ ಕನ್ಯೆಯರು ಹೀಗೆ ನೂರಾರು ಕನಸು ಕಾಣುತ್ತ ತೇಲಾಡುವುದು ಸಾಮಾನ್ಯ ಬಿಡಿ!! ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಕೆಲವೇ ಗಂಟೆಗಳಲ್ಲಿ ಬಂಧದೊಂದಿಗೆ ವಧುವರರಾಗುತ್ತಾರೆ .ಮದುವೆ ಪರಿಪೂರ್ಣವಾಗಬೇಕಾದರೆ  ಇಲ್ಲಿ ಅನೇಕ ವಿಧಿ-ವಿಧಾನಗಳಿವೆ ಅದನ್ನು ಮಾಡಲೇಬೇಕು. ನಾನು ಅನೇಕ ಮದುವೆ ಕಾರ್ಯಕ್ರಮದಲ್ಲಿ ಈ ರೀತಿಯ ವಿಧಾನಗಳನ್ನು ಗಮನಿಸಿದ್ದೇನೆ.. ಆದರೆ ಅದರ ವಿಶಾಲಾರ್ಥ ತಿಳಿದಿರಲಿಲ್ಲ..ಯಾಕೆ ಈ ಕ್ರಮ ಅನುಸರಿಸುತ್ತಾರೆ ಎಂದು   ನಿಮಗೂ ತಿಳಿಸಿಕೊಡುತ್ತೇನೆ...
          ನಮ್ಮ ಹತ್ತಿರದ ಸಂಬಂಧಿಕರ ಮದುವೆಗಳಿದ್ದಾಗ ನಮಗೆ ಅದೆಷ್ಟು ಸಂಭ್ರಮ ಅಲ್ವೇ ?  ನಮ್ಮದು ಅದೇನು ಓಡಾಟ ...ಆದರೆ ನಮಗಿಂತ  ಮದುವೆಮನೆಯವರಿಗೆ  ಜವಾಬ್ದಾರಿಗಳು ಹೆಚ್ಚು  ಅಬ್ಬಾ!  ಅದೆಲ್ಲ ಮದುವೆ ಮನೆಯವರಿಗೆ ಗೊತ್ತು. ಆದರೂ ಅದೆಷ್ಟೇ ಜವಾಬ್ದಾರಿ ಚಿಂತೆ  ಇದ್ದರೂ ನಮ್ಮನ್ನು ನಗು ಮೊಗದಿಂದ  ಮಾತ್ರ  ಸ್ವಾಗತಿಸಲು ಮರೆಯೋದಿಲ್ಲ .
      ಮದುವೆಯ ದಿನ ವಧುವರರಿಗೆ ಕಾತರ ,ಖುಷಿ ಹಾಗೂ ಆತಂಕ  ಇನ್ನೇನು ಸ್ವಲ್ವ ಸಮಯದಲ್ಲಿ ಮದುವೆಯಾಗುತ್ತದೆ ಎಂದು.  ಮದುವೆ ಸಂತೋಷದ  ವಿಚಾರ ಅಲ್ಲವೇ ಇಲ್ಲಿ ಆತಂಕ  ಯಾಕೆ? ಅಂತ ಮಾತ್ರ ಕೇಳಬೇಡಿ! ಯಾಕಂದ್ರೆ ನನಗೂ ಗೊತ್ತಿಲ್ಲ ಬಹುಶಃ ಇದು ಕೆಲವರ  ಭಾವನೆಗೆ ಸಂಬಂಧಪಟ್ಟಿದ್ದು ... ಆದರು ನಿರ್ದಿಷ್ಟ ಅಲ್ಲದೆ ಅಂದಾಜು ಪ್ರಕಾರ ಹೇಳುದಾದರೆ ವರನಿಗೆ .. ಪತ್ನಿಯಾಗಿ ಬರುವ ಹೆಣ್ಣು ತನ್ನೊಂದಿಗೆ ತನ್ನ  ಮನೆಯವರೊಂದಿಗೆ ಹೊಂದಿಕೊಳ್ಳುವಳೇ ಎಂಬ ಆತಂಕ ಇದ್ದರೆ .. ವಧುವಿಗೆ ಹೊಸಮನೆಯನ್ನು ಬೆಳಗಿಸಬೇಕಾದವಳು ನಾನು ನನ್ನಿಂದ ತಪ್ಪಾದರೆ ಅಮ್ಮನ ತರ ತಿಳಿ ಹೇಳುವ ಅತ್ತೆ  ಆಗಿರದಿದ್ದರೆ?  ಹಾಗೂ ಆ ಮನೆಯಲ್ಲಿ ನ ಇತರ ಸದಸ್ಯರು ಹೇಗೋ ಎನೋ? ಎಂಬ  ಯೋಚನೆ ಇದ್ದೇ ಇರುತ್ತದೆ .
      ಈಗ ಅವರ ವಿಚಾರ ಬಿಟ್ಟು,  ಮದುವೆಯ ಸಂಭ್ರಮ ಕ್ಕೆ ಬರೋಣ. ಮದುವೆ ಸಮಾರಂಭ ದಲ್ಲಿ ವಧು-ವರರನ್ನು ಬಿಟ್ಟರೆ ಹೈಲೈಟ್ ಯಾರು ಹೇಳಿ?.  ಹಾ! ಮತ್ತೆ ಇನ್ಯಾರು ನಾವೇ ಅಲ್ಲವೇ?. ವಸ್ತ್ರಭರಣ   ಧರಿಸಿಕ್ಕೊಂಡು ಒಡಾಡುವ ಹೆಂಗಳೆಯರು, ಯುವತಿಯರು ಹಾಗೂ ಮಕ್ಕಳು ಇವರಿಗೆ ಕಡಿಮೆಯೇ ನೋಡಲೇಬೇಕು . ಯಾಕೆಂದರೆ ಮಾರುಕಟ್ಟೆಯಲ್ಲಿ ಯಾವ ಯಾವ ತರಹದ ಡಿಸೈನರ್ ಸೀರೆ ದುಪ್ಪಟ್ಟ ಇತ್ಯಾದಿ ಬಂದಿದೆ ಎಂಬುದನ್ನು ಇವರಿಂದಲೇ ತಿಳಿದುಕೊಳ್ಳಬಹುದು ಆ ರೀತಿ ಅಲಂಕೃತರಾಗಿ ಇರುತ್ತಾರೆ ಅವರಿದ್ದರೇನೇ ಮದುವೆಗೊಂದು ಕಲೆ ಅಲ್ವ. ಅವರನ್ನು ಯಾರಿಗೂ ಮೀರಿಸೋಕೆ ಆಗದು ಅನ್ನೋದು ಅಷ್ಟೇ ಸತ್ಯ.  ಹುಡುಗಿಯರು ಹಿಂದೂ ಸಂಪ್ರದಾಯ ಪ್ರಕಾರ ಭಾರತೀಯ ನಾರಿಯಾಗಿ ಸೀರೆ ಉಟ್ಟು ಕೊಂಡರೆ ಅದೇ ನೋಡೋಕೆ ಚಂದ ಮಾರಾರ್ರೆ. ಇದನ್ನು ಯಾವುದೇ ಇಥರೇ ಬಟ್ಟೆಗಳಿಗೆ ಹೋಲಿಸಿಕೊಂಡರು ಅಷ್ಟೇ. ಸೀರೆ ಉಟ್ಟ ನಾರಿಯರಂತೂ ಹುಡುಗರ ಮನ ಗೆಲ್ಲದಿರೊಲ್ಲ.
                 ಒಂದೆಡೆ ಜೋಡಿ ಒಂದಾಗಲು ಕಾತರದಿಂದ ಕಾಯುತ್ತಿದ್ದರೇ ಇನ್ನೊಂದೆಡೆ ಮದುವೆಗೆ ಬಂದಿರುವ  ಮಗ/ಮಗಳ ಹೆತ್ತವರು ವಧು ವರರ ಅನ್ವೇಷಣೆಯಲ್ಲಿ ಇರುತ್ತಾರೆ ..ಅದರಲ್ಲೂ ಇನ್ನು ಕೆಲವರು (ಹುಡುಗ/ಹುಡುಗಿಯರು ) ತನಗೆ ಇಷ್ಟ ಆದವರ ಮುಂದೆ ಕೆಲಸವಿಲ್ಲದಿದ್ದರು ಹತ್ತಾರು ಬಾರಿ ಓಡಾಡುತ್ತಾರೆ. ಹೀಗೆ ಅನೇಕ ತರಹದ ಚಿಕ್ಕ ಪುಟ್ಟ ಸನ್ನಿವೇಶಗಳು ಬರುವುದು ಸಹಜ ಅಲ್ಲವೇ.
ಈಗ ಮದುವೆಯ ವಿಧಾನಗಳತ್ತ ಬರೋಣ.
ಅನುಬಂಧ ಮಾಲಾ
         ಮೊದಲು  ಅನುಬಂಧ ಮಾಲಾ ಎಂಬ ಕ್ರಮ ಇದೆ. ವಧು-ವರರು ತಮ್ಮ ಕೈಯ್ಯಲ್ಲಿ ಒಂದೊಂದು ಹೂವಿನ ಹಾರ ಹಿಡಿದುಕೊಳ್ಳುವುದು ಒಂದು ಕಡೆಯಿಂದ ವಧು ಮತ್ತೊಂದು  ಕಡೆಯಿಂದ ವರನು ಬಂದು ಪರಸ್ಪರ ನೀರಿಕ್ಷಿಸುವುದು ( ಮಂತ್ರೋಚ್ಚಾರಣೆ  ಮಾಡುತ್ತ ) ನೀರಿಕ್ಷಿಸಿದ ಕುರುಹಾಗಿ ವಧು ತನ್ನ ಕೈಯಲ್ಲಿರುವ ಪುಷ್ಪಹಾರವನ್ನು ವರನ ಕೊರಳಿಗೂ , ವರನು ತನ್ನ ಕೈಯ್ಯಲ್ಲಿರುವ ಪುಷ್ಪಹಾರವನ್ನು ವಧುವಿನ ಕೊರಳಿಗೆ ಹಾಕುವುದು . ನಂತರ...
 ಕನ್ಯದಾನ 
          ಏನಿದು ಕನ್ಯಾದಾನ? ವಧುವಿನ ಮಾತಾ ಪಿತೃಗಳು ವಧುವಿನ ಪ್ರವರವನ್ನು ಹೇಳಿ ವಧುವನ್ನು ವರನಿಗೆ ಪ್ರತಿಪಾದನೆ ಮಡುತ್ತಾರೆ.ಆಮೇಲೆ ವಧುವಿನ ಪಿತೃವು ವರನಿಗೆ ಈ ವಧುವು ಧರ್ಮದಲ್ಲಾಗಲಿ, ಅರ್ಥದಲ್ಲಾಗಲಿ,  ಕಾಮದಲ್ಲಾಗಲಿ ಅತಿಕ್ರಮಿಸಲ್ಪಡಬಾರದು ಎಂದು ಹೇಳುತ್ತಾರೆ  ವರನು ಅದಕ್ಕನುಸಾರವಾಗಿ ನಾನು ಅವಳನ್ನು  ಧರ್ಮದಲ್ಲಾಗಲಿ ಅರ್ಥದಲ್ಲಾಗಲಿ ಕಾಮದಲ್ಲಾಗಲಿ   ಆತಿಕ್ರಮಿಸುದಿಲ್ಲ ಎಂದು ಮೂರು ಬಾರಿ ಹೇಳುತ್ತಾನೆ.ಈ ಮೂರು ಬಾರಿ ಹೇಳಿಕೆಗೆ ಮಹತ್ತರ ಸ್ಥಾನವಿದೆ. ಇದು ಪ್ರತಿಜ್ಞೆ ನೀಡಿದ ಹಾಗೆ...
ಮಾಂಗಲ್ಯಧಾರಣೆ
            ವಿವಾಹ ಬಂಧನಕ್ಕೆ ಪ್ರಬಲವಾದ ನಿದರ್ಶನವೆಂದೇ ಭಾವಿಸುವ  ಮಾಂಗಲ್ಯಧಾರಣೆ ಎಂಬ ಸಂಪ್ರದಾಯ ಇಂದು ನಿನ್ನೆಯದಲ್ಲ.. ವಧು ಮಂಗಳಸೂತ್ರ ಧರಿಸುವುದು ಹಿಂದೂ ಮದುವೆಯ ಸಂಪ್ರದಾಯ . ಮಂಗಳಸೂತ್ರ ಅಥವಾ ತಾಳಿ ಎನ್ನುವ ಪದಗಳು ಸಂಸೃತದಿಂದ ಬಂದಿದೆ .ಸಂಸೃತದಲ್ಲಿ ಮಂಗಳ ಎಂದರೆ ಆಶೀರ್ವಾದ/ ಸಂತೋಷ ಎಂದು ಸೂತ್ರವೆಂದರೆ ದಾರ ಎಂದು ಅರ್ಥ.
             ಮಾಂಗಲ್ಯವು ವಧುವಿನ ದಾಸ್ಯದ ಸಂಕೇತವಲ್ಲ ಬದಲಾಗಿ ವರನ ಭಾದ್ಯತೆಯ ಸಂಕೇತ ಈ ಮಾಂಗಲ್ಯ ತಂತುವನ್ನು ಸಕಲ ಸೌಭಾಗ್ಯ ನಿಧಿಯು ಮಂಗಳಗಳ ವಿಧಿಯು ಆದ  ವಧುವಿನ ಕೊರಳಿನಲ್ಲಿ ಕಟ್ಟಿ ವರನು ತನ್ಮೂಲಕ ತನ್ನ ಬಾಳಿಗೆ ದೃಢತೆಯನ್ನು ಅವಲ ಜೀವನಕ್ಕೆ ಶಾಶ್ವತೆಯನ್ನು ತುಂಬಿಕೊಡುತ್ತಾನೆ ನೂರು ಶರತ್ಕಾಲ ಆಕೆಗೆ ಸುಂದರ ಜೀವನ ನೀಡುವ ಭರವಸೆ ಮೂಡಿಸುತ್ತಾನೆ.
"ಮಾಂಗಲ್ಯಮ್ ತಂತು ನಾನೇನಾ
ಮಾಮ ಜೀವನ ಹೇತುನಾ
ಕಂಠೇ ಭಾದ್ನಾಮಿ ಸುಭಗೇ
ತ್ವಂ ಜೀವ ಶರದಾಂ ಶತಂ''  
              ಈ ಶ್ಲೋಕವನ್ನು ವಿವರಿಸಿ ನೋಡಿದರೆ "ನನ್ನ ಜೀವನಕ್ಕೆ  ಆಧಾರವಾದ ಮಾಂಗಲ್ಯವನ್ನು ಧರಿಸಿ ನನ್ನ  ಆಯುಸ್ಸುನ್ನು ತಡೆಯುತ್ತಿರುವ ನೀನು ಮುತ್ತೈದೆಯಾಗಿ ನೂರು ವರ್ಷ ಬಾಳು"...ಎಂದು
ಸಪ್ತಪದಿ
           ಇವೆಲ್ಲ ಶಾಸ್ತ್ರವಾದ   ಬಳಿಕ ಸಪ್ತಪದಿಗಳಲ್ಲಿ ವಧು ನಡೆಯುವಳು . ಹೀಗೆ ಪ್ರತಿಯೊಂದು  ಹಿಂದು ಸಮುದಾಯದ  ಮದುವೆಯಲ್ಲಿ ಮದುವೆ ಹೆಣ್ಣು ಗಂಡು ಸಪ್ತಪದಿ ತುಳಿಯಲೇಬೇಕು .  ಈ ಏಳು ಹೆಜ್ಜೆಗಳಲ್ಲೂ ತಮ್ಮ ಮುಂದಿನ ಜೀವನಕ್ಕುಸಾರವಾಗಿ ವಚನಗಳನ್ನು ನೀಡುವ ಮಂತ್ರಗಳನ್ನು ಇಬ್ಬರು ಪ್ರಮಾಣ ಪೂರ್ವಕವಾಗಿ ನುಡಿಯುವ ಸಂಪ್ರದಾಯ.
          ಪತಿ ಪತ್ನಿ ತಮ್ಮ ಮುಂದಿನ ಜೀವನ ಸುಖಮಯಕರವಾಗಿ ಕಳೆದು ಸಾರ್ಥಕತೆಯನ್ನು ಪಡೆದು ಸಂತಾನಾಭಿವೃದ್ಧಿ ಮಾಡಿ ವಂಶವನ್ನು ಉದ್ಧರಿಸಿ ಕೊನೆಗೆ ಮೋಕ್ಷದತ್ತ ಸಾಗುವ ಮಂತ್ರವೇ ಸಪ್ತಪದಿ ಮಂತ್ರಗಳು . ಸಪ್ತಪದಿಗಳಿಗಿರುವ ಮಹತ್ವ ಹಿಂದು ಸಂಪ್ರಾಯದಲ್ಲಿ ಅಲ್ಲದೇ ಬೇರೆ ಯಾವ ಸಂಪ್ರದಾಯದಲ್ಲೂ ಇಲ್ಲ.
ಸಪ್ತಪದಿ ಅಂದರೆ ಏಳು ಹೆಜ್ಜೆ. ಪ್ರತಿಯೊಂದು ಹೆಜ್ಜೆಗೂ ಒಂದೊಂದು ಅರ್ಥವಿದೆ.

1 .ಒಂದನೆಯ ಹೆಜ್ಜೆ:- ಈ ಹೆಜ್ಜೆ ಮದುಮಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೇ ಇದಕ್ಕೆ ಆ ದೇವರೇ ಸಾಕ್ಷಿ .
2.ಎರಡನೇಯ ಹೆಜ್ಜೆ :- ಸ್ವರ್ಗ ಸಮಾನ ಸುಖವ ನೀಡೆಂದು ಕೈಗಳನ್ನು ಮುಗಿವೆ ಎಂದು ದಂಪತಿಗಳು ಇಡುವ ಹೆಜ್ಜೆ
3 .ಮೂರನೆಯ ಹೆಜ್ಜೆ :- ಮೂರು ಕಾಲದಲ್ಲೂ ಏಕ ರೀತಿ ನಾ ಸಹಚರನಾಗಿರುವೆ.ಅಂದರೆ ಜೀವನದ ಏಳಿಗೆ ಸುಖ ಹಾಗೂ ಸಂಪತ್ತು ರಕ್ಷಿಸುದರ ಜೊತೆಗೆ ತೃಪ್ತಿಯ ಜೀವನ ನೀಡುವಂತೆ ಮೂರನೇ ಹೆಜ್ಜೆ ಇಡಲಾಗುತ್ತದೆ.
4.ನಾಲ್ಕನೇಯ ಹೆಜ್ಜೆ :- ಮಮತೆ ಮೋಹ ಸುಖದುಃಖದಲ್ಲಿ ಜೊತೆಯಲ್ಲೇ ಇರುವೆ
5.ಐದನೆಯ ಹೆಜ್ಜೆ:- ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಅಂದರೆ ನಾವಿಬ್ಬರು ಒಬ್ಬರೊನ್ನೊಬ್ಬರು ದೂಷಿಷಬಾರದು
6.ಆರನೆಯ ಹೆಜ್ಜೆ :- ಋತುಗಳಲ್ಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎಂದು ಹಾರೈಸು ನಮ್ಮನು ದೇವಾ ಎಂದು
7 .ಏಳನೆಯ ಹೆಜ್ಜೆ :- ಋಷಿಗಳ ಸ್ಮರಣೆ ಮಾಡುತ ಹರಸಿ ನಮ್ಮನು ಎಂದು ಬೇಡುವೆ .ಈ ಮೂಲಕ ನೀನು ಸಂಪೂರ್ಣ ನನ್ನವಳಾಗಿರುವೆ.ಈ ವಿವಾಹ ಸದಾಕಾಲ ಅರಳುತ್ತಿರಲಿ ಎಂದು ಹೆಳುತ್ತಾನೆ ಅದೇ ರೀತಿ ಪತ್ನಿ ಪತಿಗೆ ಈಗ ವೇದಾನುಸಾರವಾಗಿ ನಾನು ನಿನ್ನ ಪತ್ನಿಯಾಗಿರುವೆ ನಾವಿಬ್ಬರು ನಿಷ್ಠೆಯಿಂದ ಬಾಳೋಣ ಎಂದು .
             ಹೀಗೆ ಇಂತಹ ಸಾಂಪ್ರದಾಯಿಕ ಮದುವೆಗಳು ನಮ್ಮ ಆಧುನಿಕ ಜಗತ್ತಿನಲ್ಲಿ ಮರೆಯಾಗಿ ಉಳಿಯದಿದ್ದರೆ ಸಾಕು. ಹಿಂದೂಗಳು ಮದುವೆ ಸಂಬಂಧಕ್ಕೆ ಬಹಳಷ್ಟು ಮಹತ್ತ್ವ ನೀಡುತ್ತಾರೆ. ಈ ಮದುವೆಗೆ ಪ್ರಮುಖ ಸಾಕ್ಷಿ "ಅಗ್ನಿ ದೇವ " ಯಾವ ಸಂಪ್ರದಾಯವನ್ನು ಅನುಸರಿಸಿದರೂ ಈ ಪವಿತ್ರ "ಅಗ್ನಿಸಾಕ್ಷಿ " ಯ  ಸುತ್ತಲೂ  ಏಳು ಬಾರಿ ಪ್ರದಕ್ಷಿಣೆ ಬರದೆ  ಪವಿತ್ರ ಸಂಬಂಧಕ್ಕೆ  ಕಾರಣರಾಗದೇ  ಮದುವೆ ಪರಿಪೂರ್ಣವಾಗದು ಎಂಬುದು ಅಕ್ಷರಃ ನಿಜ.
           ಸಂತೃಪ್ತಿಯ ವೈವಾಹಿಕ ಜೀವನವೆಂದರೆ ಭಾವನಾತ್ಮಕ ಒಂದುಗೂಡುವಿಕೆ, ಅನ್ಯೋನ್ಯತೆ ಮತ್ತು ನಡುವಿನ ಪ್ರೀತಿ ಸಂಬಂಧದೊಂದಿಗೆ ಜೀವನದುದ್ದಕ್ಕೂ ಆತ್ಮ ಸಂಗತಿಗಳಾಗಿರುವುದು.
ಸುಪ್ರೀತ ಭಂಡಾರಿ,
ಸೂರಿಂಜೆ



3 comments: