BhandaryVarthe Team

BhandaryVarthe Team
Bhandary Varthe Team

Tuesday, 27 April 2021

ಕಾಪು ತಾಲೂಕಿನ ಎಲ್ಲೂರು ಬಂಡೋಜಿಯ ಶ್ರೀಮತಿ ಇಂದಿರಾ ಆರ್ ಭಂಡಾರಿಯವರ ನೂತನ ಮನೆ " ಅಮ್ಮ" ದ ಗೃಹ ಪ್ರವೇಶ

 ಕಾಪು ತಾಲೂಕಿನ ಎಲ್ಲೂರು ಬಂಡೋಜಿಯ ಶ್ರೀಮತಿ ಇಂದಿರಾ ಆರ್ ಭಂಡಾರಿ ಕುಟುಂಬವು ನಿರ್ಮಿಸಿರುವ ನೂತನ ಮನೆ "ಅಮ್ಮ" ದ ಗೃಹ ಪ್ರವೇಶವು ಏಪ್ರಿಲ್ 27, 2021 ರ ಮಂಗಳವಾರದಂದು ಗಣಹೋಮ ಹಾಗೂ ಸತ್ಯನಾರಾಯಣ ಪೂಜೆಯೊಂದಿಗೆ ನೆರವೇರಿತು.

ನೂತನ ಗೃಹ ಪ್ರವೇಶದ ಸಂಭ್ರಮದಲ್ಲಿರುವ ಶ್ರೀಮತಿ ಇಂದಿರಾ ಆರ್ ಭಂಡಾರಿ ಕುಟುಂಬಕ್ಕೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು "ಭಂಡಾರಿವಾರ್ತೆ" ಹಾರ್ದಿಕವಾಗಿ ಶುಭ ಕೋರುತ್ತದೆ.

-ಭಂಡಾರಿವಾರ್ತೆ

Sunday, 25 April 2021

ಹೆಣ್ಣು ಶಿಶು ಮತ್ತು ಲೈಂಗಿಕ ದುರ್ಬಳಕೆ

  

   "ಹೆಣ್ಣು ಸಮಾಜದ ಕಣ್ಣು"  ಎಷ್ಟು ಚೆನ್ನಾಗಿದೆ ಈ ಮಾತು,ಇದು ಕೇವಲ ಬಾಯಿಮಾತಾಗಿದೆಯೇ ಹೊರತು ಕೃತಿಗಿಳಿದಿಲ್ಲ ಎನ್ನುವುದು ವಿಪರ್ಯಾಸ. ಹೆಣ್ಣೆಂದರೆ ಕೇವಲ ನಾಲ್ಕು ಗೋಡೆಯ ಮಧ್ಯೆ ಜೀವಿಸುವವಳು ಎಂದು ಅಂದುಕೊಂಡಿದ್ದಾರೆ ಇಂದಿನವರು..ನಮ್ಮ ಪೂರ್ವಜರು ಕೂಡಾ ಹಾಗೇ ಮಾಡಿದ್ದರು.ಮನುಸ್ಮೃತಿಯಲ್ಲಿ ಮನು ಹೀಗಂದಿದ್ದಾನೆ "ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೆ ತತ್ರಾ ದೇವತಾ" ಎಂಬುದಾಗಿ,ಅದೇ ಮನು ಹೀಗೂ ಹೇಳಿದ್ದಾನೆ "ಪಿತಾ ರಕ್ಷಂತಿ ಕೌಮಾರೆ,ಭ್ರಾತ ರಕ್ಷಂತಿ ಯೌವನೆ,ರಕ್ಷಂತಿ ಪುತ್ರ ಸ್ತವಿರೆ" ಎಂಬುದಾಗಿ. ಅಂದರೆ ಬಾಲ್ಯದಲ್ಲಿ ತಂದೆಯಿಂದ,ಯೌವ್ವನದಲ್ಲಿ ಪತಿಯಿಂದ ಮತ್ತು ಮುಪ್ಪಿನಲ್ಲಿ ಮಗನಿಂದ ರಕ್ಷಿಸಲ್ಪಡುವವಳು ಎಂದರ್ಥ.ಅಂದಿನ ಮನು ಕೂಡಾ ಹೆಣ್ಣಿಗೆ ಚೌಕಟ್ಟನ್ನು ನಿರ್ಮಿಸಿದ್ದ ಎಂಬುದು ವಿಪರ್ಯಾಸ ಅಲ್ಲವೇ?!
 
       ಇಂದಿನ ಆಧುನಿಕ ಯುಗದಲ್ಲಿ ಕೂಡಾ ಹೆಣ್ಣು ಶೋಷಿತಳೇ ಯಾಕೆಂದರೆ ಈಗಲೂ ರಾಜಸ್ತಾನ, ಹರಿಯಾಣಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣುತ್ತಿದ್ದಾರೆ.ಹೆಣ್ಣು ಶಿಶುವಿನ ಹತ್ಯೆ ಆಧುನಿಕ ಯುಗದಲ್ಲೂ ಮಾಡುತ್ತಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ.ಮಗು ಹೆಣ್ಣೆ, ಗಂಡಾ ಎಂದು ಮೊದಲೇ ತಿಳಿದುಕೊಂಡು ಅಬಾರ್ಷನ್, ಹಸಿರು ಮದ್ದುಗಳಿಂದ ಹುಟ್ಟಬೇಕಾದ ಪುಟ್ಟ ಕಂದಮ್ಮನನ್ನು ಕೊಲ್ಲುವರು..ಹೆಣ್ಣೆಂದರೆ ತಾತ್ಸಾರವೇ ಇವರಿಗೆ ಹೆಣ್ಣನ್ನು ತೀರಾ ಕೆಳಮಟ್ಟಕ್ಕೆ ತಳ್ಳಿ ಬಿಟ್ಟಿದ್ದಾರೆ..
      ಬಾಲ್ಯದಲ್ಲೇ ಸಾವನ್ನು ಜಯಿಸಿ ಬಂದರೆ ಬೆಳೆದಂತೆ ಅದಕ್ಕಿಂತ ಹೆಚ್ಚಿನ ತೊಂದರೆಯನ್ನು ಹೆಣ್ಣು ಅನುಭವಿಸುತ್ತಾಳೆ..ಮನೆಯವರಿಂದಲೇ ನೋವನ್ನು ಅನುಭವಿಸುತ್ತಾಳೆ. ವಿದ್ಯೆ ನೀಡುವುದರಲ್ಲಿಯೂ ಕಟ್ಟುಪಾಡು..ಬಾಲ್ಯದಲ್ಲೇ ವಿವಾಹ..ಆಟವಾಡೋ ವಯಸ್ಸಿಗೆ ಮಗುವನ್ನು ಹೆರಬೇಕಾದ ಅನಿವಾರ್ಯತೆ... ಮದುವೆಯಾಗದಿದ್ದಲ್ಲಿ ದೇವಸ್ಥಾನಕ್ಕೆ ಬಸವಿ ಬಿಡುವಂಥ ನೀಚ ನಂಬಿಕೆಗಳು, ಕೆಲಸಕ್ಕೆ ಸೇರಿದಳೆಂದರೆ ಮೂರು ಬಿಟ್ಟವಳೆಂಬ ಹಣೆಪಟ್ಟಿ  ಅಲ್ಲೂ ಮೇಲಿನ ಅಧಿಕಾರಿಗಳಿಂದ ಲೈಂಗಿಕ ಕಿರುಕುಳ, ಬೀದಿ ಕಾಮಣ್ಣರುಗಳಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳುವಷ್ಟರಲಿ ಜೀವನವೇ ಸಾಕೆನಿಸಿಬಿಡುತ್ತದೆ. ಪುಟ್ಟ ಮಕ್ಕಳನ್ನು ಬಿಡದ ರಾಕ್ಷಸ ಮನದ ಕಾಮುಕರನ್ನು ನೆನೆಸಿಕೊಂಡಾಗ ನಡುಬೀದಿಯಲ್ಲಿ ನಿಲ್ಲಿಸಿ, ಕಲ್ಲು ಹೊಡೆಯಬೇಕೆನಿಸುತ್ತದೆ.
ಉಪಸಂಹಾರ
      ಹೆಣ್ಣಿಂದಲೇ ಜನಿಸಲ್ಪಡುವ ನಾವು ಯಾಕೆ ಆಕೆಯನ್ನು ಗೌರವಿಸಲು ಹಿಂಜರಿಯಬೇಕು, ಹುಟ್ಟುವಾಗಲೇ ಕಂದಮ್ಮನನ್ನು ಸಾಯಿಸದಿರಿ ನನ್ನ ಹುಟ್ಟು ಕೂಡಾ ಹೆಣ್ಣಿಂದಲೇ ಆಗಿರುವುದು ಎಂಬುದನ್ನು ನೆನಪಿಡಿ...ಕ್ಷಣಿಕ ಸುಖದ ಆಸೆಗೆ ಹೆಣ್ಣಿನ ಮೇಲೆ ದೌರ್ಜನ್ಯ ಎಸಗದಿರಿ..ಹೆತ್ತ ತಾಯಿ ಕೂಡಾ ಹೆಣ್ಣು ಎಂದು ಮರೆಯದಿರಿ ಸಹನಾಮಯಿ, ವಾತ್ಸಲ್ಯಮೂರ್ತಿ, ಕರುಣಾಮಯಿ ಹೆಣ್ಣು..."ಒಲಿದರೆ ನಾರಿ, ಮುನಿದರೆ ಮಾರಿ" ಆಗುವಂತೆ ಮಾಡದಿರಿ. ಹೆಣ್ಣು ಮಾತೆಯೂ ಆಗಬಲ್ಲಳು ದಮನ ಮಾಡೋ ದುರ್ಗೆಯು ಆಗುತ್ತಾಳೆ. ಹಾಗಾಗಿ ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿದರೆ ಸಮಾಜದ ಸ್ವಾಸ್ಥವು ಚೆನ್ನಾಗಿರುತ್ತದೆ.
ನಾಗಶ್ರೀ ಭಂಡಾರಿ, ಮೂಡುಬಿದಿರೆ

Friday, 23 April 2021

25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶ್ರೀಮತಿ ಶಾರದ ಮತ್ತು ಶ್ರೀ ಗೋಪಾಲ ಭಂಡಾರಿ ಹಾಗೂ  ಶ್ರೀಮತಿ ಶಶಿಕಲಾ ಮತ್ತು ಶ್ರೀ ಬಾಬು ಭಂಡಾರಿ ದಂಪತಿಗಳು  

 ಭಂಡಾರಿ ಸಮಾಜ ಸಂಘ ಸೊರಬ - ಶಿರಾಳಕೊಪ್ಪ ಘಟಕದ ಮಾಜಿ ಅಧ್ಯಕ್ಷರುಗಳಾದ ಶ್ರೀಯುತ ಗೋಪಾಲ ಭಂಡಾರಿ ಶಿರಾಳಕೊಪ್ಪ ಮತ್ತು ಶ್ರೀಯುತ ಬಾಬು ಭಂಡಾರಿ ಸೊರಬ ಇವರು ದಿನಾಂಕ 22-04-2021 ರಂದು ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

ಹಿಲಿಯಾಣ ಜಡ್ಡುವಿನ ದಿವಂಗತ ನಾರಾಯಣ ಭಂಡಾರಿ ದಂಪತಿಯ ಎರಡನೇ ಪುತ್ರ ಶ್ರೀ ಗೋಪಾಲ ಭಂಡಾರಿ ಇವರು ಅಸೋಡಿನ ದುಗ್ಗ ಭಂಡಾರಿ ಯವರ ದ್ವಿತೀಯ ಪುತ್ರಿ ಶಾರದ (ಬೇಬಿ) ಹಾಗೂ ಅಸೋಡಿನ ದಿವಂಗತ ದುಗ್ಗ ಭಂಡಾರಿಯವರ ದ್ವಿತೀಯ ಪುತ್ರ ಶ್ರೀ ಬಾಬು ಭಂಡಾರಿ ಇವರು ಹಿಲಿಯಾಣ ಜಡ್ಡುವಿನ ದಿವಂಗತ ನಾರಾಯಣ ಭಂಡಾರಿಯವರ ತೃತೀಯ ಪುತ್ರಿ ಶಶಿಕಲಾ ಇವರ ವಿವಾಹವು ದಿನಾಂಕ: 22-04-1996 ರಂದು ನಾರಾಯಣ ಭಂಡಾರಿ ಯವರ ಸ್ಚಗೃಹ "ಮಾತೃಕೃಪ" ದಲ್ಲಿ ನೆರವೇರಿತ್ತು.

25 ವರ್ಷ ಸುಖ ಸಂಸಾರ ಮಾಡಿದ ಜೋಡಿಗಳ ವಿವಾಹ ವಾರ್ಷಿಕೋತ್ಸವವನ್ನು ಭಂಡಾರಿ ಸಮಾಜ ಸಂಘ ಬೆಂಗಳೂರು‌ ವಲಯದ ಪ್ರಧಾನ ಕಾರ್ಯದರ್ಶಿ ಶಿರಾಳಕೊಪ್ಪದ ಸುಧಾಕರ ಆರ್ ಭಂಡಾರಿಯವರ ಮನೆಯಲ್ಲಿ ಆಚರಿಸಲಾಯಿತು.

ಈ ಶುಭ ಸಂದರ್ಭ ದಲ್ಲಿ ಸುಧಾಕರ ಭಂಡಾರಿಯವರ ಪತ್ನಿ ಗೀತಾ, ಮಕ್ಕಳಾದ ವೈಷ್ಣವಿ ಮತ್ತು ಅಧಿತಿ ಜೊತೆಗಿದ್ದು ದಂಪತಿಗಳನ್ನು ಸತ್ಕರಿಸಿ ಸಂತೋಷ ಪಟ್ಟರು.

ದಂಪತಿಗಳ ಮಕ್ಕಳಾದ ತನುಶ್ರೀ, ತೇಜಸ್ವಿನಿ, ಚಿರಂಜೀವಿ ಮತ್ತು ಚೈತ್ರ ಇವರು ಹಾಜರಿದ್ದು ದಂಪತಿಗಳಿಗೆ ಶುಭ ಹಾರೈಸಿದರು.

ದಾಂಪತ್ಯ ಜೀವನದ ಇಪ್ಪತ್ತೈದನೇ ವಸಂತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯಗಳನ್ನಿತ್ತು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು "ಭಂಡಾರಿವಾರ್ತೆ"  ಮತ್ತು ತಂಡದಿಂದ ಹಾರ್ದಿಕ ಶುಭ ಹಾರೈಕೆಗಳು.
-ಭಂಡಾರಿವಾರ್ತೆ
 

Wednesday, 21 April 2021

ಅಡುಗೆ ಮನೆಯ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ವಿಧಾನ ಹೇಗೆ?-ವನಿತಾ ಅರುಣ್ ಭಂಡಾರಿ, ಬಜ್ಪೆ

 ಪ್ರತಿಯೊಬ್ಬರಿಗೂ ಮನೆಗೆ ಬೇಕಾದ ತರಕಾರಿ ,ಸೊಪ್ಪುಗಳನ್ನು ತಾವೇ ಬೆಳೆಸಬೇಕೆಂಬ  ಹಂಬಲ ಇರುತ್ತದೆ.ಆದರೆ ವಿವಿಧ ಕಾರಣಗಳಿಂದ ಬೆಳೆಸಲು ಸಾಧ್ಯವಾಗುವುದಿಲ್ಲ.




ಕೆಲವರಿಗೆ ಸಮಯ ಇರುವುದಿಲ್ಲ, ಇನ್ನೂ ಕೆಲವರಿಗೆ ಹೇಗೆ ಬೆಳೆಸುವುದು   ಎಂದು ತಿಳಿದಿರುವುದಿಲ್ಲ. ತುಂಬಾ ಜನರಿಗೆ ಅದಕ್ಕೆ ಬೇಕಾದ ಜಾಗ, ಮಣ್ಣು ಇರುವುದಿಲ್ಲ.

 ಸ್ವಲ್ಪವೇ ಜಾಗದಲ್ಲಿ ಅಥವಾ ಮನೆಯ ತಾರಸಿ (ಟೆರೇಸ್ )ಮೇಲೆ ಕುಂಡದಲ್ಲಿ, ಗೋಣಿ ಚೀಲದಲ್ಲಿ, ಬಕೆಟ್ ನಲ್ಲಿ ಸಣ್ಣ ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿ ಸೊಪ್ಪುಗಳನ್ನು ಬೆಳೆಸಬಹುದು.ಇದನ್ನು ಬೆಳೆಸುವುದರಿಂದ ನಮಗೆ ವಿವಿಧ ರೀತಿಯ ಪ್ರಯೋಜನಗಳಿವೆ.

  • ಮನೆಗೆ ಬೇಕಾದ ತರಕಾರಿ ಸೊಪ್ಪು ಸಿಗುತ್ತದೆ.
  • ದೈಹಿಕವಾಗಿ ವ್ಯಾಯಾಮ ದೊರಕುತ್ತದೆ, ವಾಕಿಂಗ್ ಹೋಗಬೇಕಾಗಿಲ್ಲ.
  • ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ.

ದಿನಾ  ಹೊರಗೆ ಹೋಗಿ ದುಡಿಯುವವರು ಕೂಡ ತಮ್ಮ ಮನೆಯಲ್ಲಿಯೇ  ತರಕಾರಿ ಬೆಳೆಸಬಹುದು.

ವಾರದ ರಜೆಯಲ್ಲಿ ಇದರ ಕೆಲಸ ಮಾಡಬಹುದು. ಮನೆಯಲ್ಲಿ ಮಾಡಬಹುದಾದ ನಾನು ಮಾಡಿದ ತರಕಾರಿ, ಸೊಪ್ಪುಗಳು ಯಾವುದೆಂದರೆ ಬಸಳೆ, ಪುದಿನಾ ,ಬೆಂಡೆಕಾಯಿ, ಟೊಮೆಟೊ, ಬದನೆ,ಕಾಯಿ ಮೆಣಸು ,ಸಿಹಿಗೆಣಸು, ಸೌತೆಕಾಯಿ ಇಷ್ಟೆಲ್ಲ ತರಕಾರಿಗಳನ್ನು ತಾರಸಿ (ಟೆರೇಸ್ ) ಮೇಲೆ ಬೆಳೆಸಬಹುದು.ಈ ಎಲ್ಲ ತರಕಾರಿಗಳನ್ನು ಹೇಗೆ ಬೆಳೆಸಬಹುದು ಎಂದು ಮುಂದೆ ತಿಳಿಯೋಣ.

ಈಗ ನಮ್ಮಲ್ಲಿ  ಸ್ವಲ್ಪ ಮಣ್ಣಿದ್ದರೆ ಅದನ್ನು ಜಾಸ್ತಿ  ಮಾಡುವುದು ಹೇಗೆ ಅಥವಾ ಸಾವಯವ ಗೊಬ್ಬರ ಹೇಗೆ ಮಾಡುವುದು ಎಂದು ತಿಳಿಯೋಣ.

ಮೊದಲಿಗೆ ಒಂದು ಕೆ.ಜಿ ಯಷ್ಟು ಮಣ್ಣನ್ನು ತಂದು ಇಟ್ಟುಕೊಳ್ಳಿ ಆಮೇಲೆ ಮನೆಯಲ್ಲಿ ಯಾವುದಾದರೂ ಹಳೆಯ ಅಥವಾ ಪೈಂಟ್ ಬಕೆಟ್, ಅಥವಾ ದೊಡ್ಡದಾದ  ಪ್ಲಾಸ್ಟಿಕ್ ಬಾಟಲನ್ನು ತೆಗೆದುಕೊಂಡು ಅದರ ಅಡಿಭಾಗದಲ್ಲಿ 4 ಅಥವಾ 5 ಸಾಧಾರಣ ತೂತುಗಳನ್ನು ಕೊರೆಯಬೇಕು. (ತೂತು ಕೊರೆಯಲು ಕಬ್ಬಿಣದ ತುಂಡು ಅಥವಾ ತೆಳುವಾದ ಚೂರಿ ಅಥವಾ ಚಿತ್ರದಲ್ಲಿ ತೋರಿಸಿದಂತಹ ಚಮಚ ಬೆಂಕಿಗೆ ಇಟ್ಟು ಬಿಸಿ ಮಾಡಿ ತಕ್ಷಣ ಬಕೆಟ್ ಗೆ ತೂತು ಕೊರೆಯ ಬೇಕು)

ತೂತು ಕೊರೆದಿರುವ ಬಕೆಟ್ಟನ್ನು ನಿಮ್ಮಲ್ಲಿ ಜಾಗ ಇದ್ದರೆ ನೇರವಾಗಿ  ಮಣ್ಣಲ್ಲೇ ಇಡಬಹುದು. ಟೆರೆಸ್ ಮೇಲೆ ಇಡುವವರು ಬಕೆಟ್ ನ ಅಡಿಭಾಗದಲ್ಲಿ ಬೇರೆ ಬಕೇಟ್ ‌ನ ಅಥವಾ ಯಾವುದಾದರೂ ಮುಚ್ಚಳವನ್ನು ಇಟ್ಟು ಅದರ ಮೇಲೆ ತುತೂ ಕೊರೆದಿರುವ ಬಕೆಟ್ಟನ್ನು ಇಡಬೇಕು ಅಡಿಯಲ್ಲಿ ಮುಚ್ಚಳವನ್ನು ಇಟ್ಟುಕೊಳ್ಳುವ ಉದ್ದೇಶ ನಾವು ಮಾಡುವ ಗೊಬ್ಬರದಿಂದ ಬಕೇಟ್ ನ ತೂತಿನ ಮೂಲಕ ಅದರ ರಸ ಬೀಳಬಹುದು  ಅದಕ್ಕಾಗಿ.

 ಈ ರಸವನ್ನು ಯಾವುದೇ ಗಿಡಕ್ಕೆ ಹಾಕಬಹುದು ಇದು ತುಂಬಾ ರಸಭರಿತ ದ್ರವ ವಾಗಿರುತ್ತದೆ.

ಈಗ ಬಕೆಟ್ ಗೆ ಸ್ವಲ್ಪ ಮಣ್ಣನ್ನು ಹಾಕಬೇಕು. ನಂತರ ಅದರ ಮೇಲೆ ಮನೆಯಲ್ಲಿ ಅಡುಗೆ ಮಾಡಿದಾಗ ಉಳಿದ ತರಕಾರಿಯ ಸಿಪ್ಪೆ, ದೇವರಿಗೆ ಇಟ್ಟ ಒಣಗಿರುವ ಹೂವು, ಪೆನ್ಸಿಲ್ ಕಸ, ಮೊಟ್ಟೆಯ ಸಿಪ್ಪೆ, ಈರುಳ್ಳಿ, ಬೀನ್ಸ್ ,ಕುಂಬಳಕಾಯಿ, ಸೌತೆ, ಅನನಾಸು, ಕಿತ್ತಳೆ, ಮೂಸಂಬಿ  ಹೀಗೆ ಚಿತ್ರದಲ್ಲಿ ತೋರಿಸಿದಂತೆ ಮನೆಗೆ ಏನು ತಂದರೂ  ಅದರ ಸಿಪ್ಪೆ, ಬೀಜ, ಎಲೆ ,ದಂಟು ಎಲ್ಲವನ್ನು ಈ ಬಕೆಟ್ ಗೆ ಹಾಕಿ ಅದರ ಮೇಲೆ ಅದು ಕಾಣದಷ್ಟು ಸ್ವಲ್ಪಸ್ವಲ್ಪವೇ ಮಣ್ಣು ಹಾಕಿ ಮುಚ್ಚಳ ಮುಚ್ಚಿ ಬಿಡಿ.

ಮುಚ್ಚಳ ಗಟ್ಟಿಯಾಗಿ ಮುಚ್ಚಬೇಕು ಎಂದೇನು ಇಲ್ಲ, ಅದಕ್ಕೆ ನೀರು ಬೀಳದ ಹಾಗೆ ಇಡಬೇಕು ಅಷ್ಟೇ. ಸಿಪ್ಪೆಗಳನ್ನು ಹಾಕುವಾಗ ಯಾವುದೇ ಕಾರಣಕ್ಕೂ ನೀರು,ಅನ್ನ,ಸಾರು, ಪಲ್ಯ ಸಾಂಬಾರು, ಮೀನಿನ ಮುಳ್ಳು, ಮಾಂಸದ ಎಲುಬುಗಳನ್ನು ಇದಕ್ಕೆ ಹಾಕಬಾರದು.ಮುಚ್ಚಳ ಮುಚ್ಚಿದ ಬಕೆಟ್ಟನ್ನು ಹಾಗೆ ಬಿಡಿ ದಿನ ನಿಮ್ಮಲ್ಲಿ ತುಂಬಾ ತರಕಾರಿಗಳ ,ಹಣ್ಣುಗಳ ಸಿಪ್ಪೆ ಇದ್ದರೆ ಅದಕ್ಕೆ ಹಾಕಿ ಹಾಗೆಯೇ ಮಣ್ಣು ಹಾಕಿ ಮುಚ್ಚಿಬಿಡಿ. ತುಂಬಾ ಸಿಪ್ಪೆ ಇಲ್ಲದಿದ್ದಾಗ ಎರಡು ಮೂರು ದಿನಗಳ ಸಿಪ್ಪೆಗಳನ್ನು ಸಂಗ್ರಹಿಸಿ ನಂತರ ಹಾಕಿ , ಮೊದಲು ಹಾಕಿದ ಹಾಗೆ ಮಣ್ಣನ್ನು ಹಾಕಬೇಕು,

ಬಕೆಟ್ ಗೆ ಮಣ್ಣು ಸಿಪ್ಪೆ ಹಾಕುವಾಗ ಒತ್ತಿ ಒತ್ತಿ ಹಾಕಬೇಕು. ಸಿಪ್ಪೆಯ ಜೊತೆಗೆ  ಮನೆಯ ಸುತ್ತ ಮುತ್ತ ಒಣಗಿದ ಎಲೆಗಳು ಹಸಿ ಎಲೆಗಳನ್ನು ಇದ್ದರೆ ಹಾಕಬಹುದು. ಬಕೆಟ್  ಪೂರ್ತಿಯಾದ ಮೇಲೆ ಅದನ್ನು ಮುಚ್ಚಿ 2ತಿಂಗಳು ಬಿಡಬೇಕು.

2 ತಿಂಗಳ ಬಳಿಕ ತೆಗೆದಾಗ ಎಲ್ಲ ತರಕಾರಿ ಹಣ್ಣುಗಳ ಸಿಪ್ಪೆ ಪೂರ್ತಿಯಾಗಿ ಕರಗಿ ನಿಮಗೆ ಸಾವಯವ ಗೊಬ್ಬರ ಸಿಗುತ್ತದೆ.ಚಿತ್ರದಲ್ಲಿ ಕರಗಿದ ಮಣ್ಣನ್ನು ನೋಡಬಹುದು.

ಇದನ್ನು ನೀವು ಬಕೆಟ್, ಗೋಣಿ ಚೀಲ, ಕುಂಡದಲ್ಲಿ ತುಂಬಿಸಿ ಗಿಡ ನೆಡಬಹುದು ಅಥವಾ ಈ ಸಾವಯವ ಗೊಬ್ಬರವನ್ನು ಗೋಣಿ ಚೀಲದಲ್ಲಿ ತುಂಬಿಸಿ ಪುನಃ ಇದೇ ಬಕೆಟ್ಟಿನಲ್ಲಿ ನಾವು ಮಾಡಿದ ಹಾಗೆ ಇದೇ ಮಣ್ಣನ್ನು ಉಪಯೋಗಿಸಿ ತರಕಾರಿ ಸಿಪ್ಪೆ ಬಳಸಿ ಇನ್ನೊಂದು ಬಕೆಟ್ ಸಾವಯವ ಗೊಬ್ಬರ ತಯಾರಿಸಬಹುದು . ಒಮ್ಮೆನೀವು ಈ ಗೊಬ್ಬರ ತಯಾರಿಸುವ ಕೆಲಸ ಶುರು ಮಾಡಿದರೆ ಮಾಡುತ್ತಲೇ ಇರುತ್ತೀರಿ. ಅಷ್ಟು ಖುಷಿ  ಕೊಡುವ  ಕೆಲಸ ಇದು. ಅಲ್ಲದೆ ಈ ಮಣ್ಣಿನಲ್ಲಿ ತರಕಾರಿ ಗಿಡಗಳನ್ನು ನೆಟ್ಟರೆ ತುಂಬಾ ಸುಲಭವಾಗಿ ತರಕಾರಿಗಳನ್ನು ಪಡೆಯಬಹುದು.

ನಿಮಗೆ ಇದರಲ್ಲಿ ಏನಾದರೂ ಸಂದೇಹ ಗಳಿದ್ದರೆ  ನನ್ನನ್ನು ಮೊಬೈಲ್ ಮೂಲಕ ಸಂಪರ್ಕಿಸಬಹುದು.

 ವನಿತಾ ಅರುಣ್ ಭಂಡಾರಿ

8660450845

Monday, 19 April 2021

ಮಕ್ಕಳ ಭವಿಷ್ಯಕ್ಕಾಗಿ ಆಸ್ತಿಕೂಡಿಡುವ ನಾವು ಜೀವಜಲವನ್ನೇಕೆ ಬರಿದು ಮಾಡುತ್ತಿದ್ದೇವೆ?-ಪ್ರಶಾಂತ್ ಭಂಡಾರಿ ಕಾರ್ಕಳ

 ಜೀವಜಲ ಜೀವನದಿಗಳ ಬರಿದಾಗಿಸಿ ದೇಶದ ಅಥವಾ ನಮ್ಮ ಮಕ್ಕಳ ಭವಿಷ್ಯತ್ತಿನ ಕನಸು ಕಾಣಲು ಸಾಧ್ಯವಿಲ್ಲ. ಜೀವ ಜಲವಿಲ್ಲದೆ ಜಗತ್ತು ಇಲ್ಲ. “ಮುಂದೊಂದು ದಿನ ಮಹಾಯುದ್ಧವಾದರೆ ಅದು ನೀರಿಗಾಗಿ”ಎಂಬ ಮಾತಿದೆ. ಈ ವಿಚಾರದಲ್ಲಿ ನಾವು ಗಂಭೀರವಾಗಿ ಅಲೋಚಿಸಬೇಕಾದ ಅನಿವಾರ್ಯತೆ ಇದೆ.

   ನಮ್ಮ ಪೂರ್ವಜರು ಜೀವಜಲವನ್ನು ದೇವರೆಂದು ಪೂಜಿಸಿದರು. ಏಕೆಂದರೆ ಅವರಿಗೆ ನೀರಿನ ಮಹತ್ವದ ಅರಿವು ಇತ್ತು. ಸುಜಲಾಂ ಸುಫಲಂ ಎಂದು ಹೇಳುವ ದೇಶದಲ್ಲಿ ನಾವಿದ್ದೇವೆ. ಜೀವಜಲದ ಮಹತ್ವದ ಬಗ್ಗೆ ಮಳೆಯ ಮಹತ್ವದ ಬಗ್ಗೆ ಪುರಾಣ ಕತೆಗಳು ನಮ್ಮಲ್ಲಿವೆ. ಗಂಗಾ, ಯಮುನಾ,ಬ್ರಹ್ಮಪುತ್ರ,ತುಂಗಾ,ಭದ್ರಾ, ಕಾವೇರಿ, ಗೋದಾವರಿ ಕೃಷ್ಣಾ ಮುಂತಾದ ಜೀವನದಿಗಳು ದೇಶವನ್ನು ಪೋಷಿಸುತ್ತಿವೆ. ಈ ಪುಣ್ಯನದಿಗಳನ್ನು ಮಾತೆಯರೆಂದೆ ಪೂಜಿಸುತ್ತೇವೆ. ಕತೆ , ಹಾಡು, ಸಿನಿಮಾಗಳಲ್ಲಿ ನದಿ , ಮಳೆ, ಸರೋವರ, ಜಲಪಾತ ಮುಂತಾದುವುಗಳ ವರ್ಣಿಸುತ್ತೇವೆ. ನೀರಿನ ಸೌಂದರ್ಯಕ್ಕೆ ಮೈಮರೆಯುತ್ತೇವೆ. ಆದರೆ ಇಂದು ಪ್ರಕೃತಿಯ ಆರಾಧನೆ ನಡೆಯುವ ಬದಲಾಗಿ ನಗರೀಕರಣ ಕೈಗಾರಿಕರಣದ ಹೆಸರಲ್ಲಿ ಕಾಡಿನ ನಾಶ ನಡೆಯುತ್ತಿದೆ, ಮಳೆ ಕಡಿಮೆಯಾಗಿದೆ. ಮಳೆ ಬಂದರೂ ಭೂಮಿ ಅದನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ.

ದೇಶದಲ್ಲಿ ಈಗಾಗಲೇ ನೀರಿನ ಕೊರತೆ ಉಂಟಾಗಿದೆ. ಇದೇ ಕಾರಣಕ್ಕೆ ಕೊಳವೆ ಬಾವಿ , ಅಣೆಕಟ್ಟುಗಳ ನಿರ್ಮಾಣವಾಗಿದೆ. ಆದರೆ ಅಂತರ್ಜಲವಿಲ್ಲದಿದ್ದರೆ ಅಣೆಕಟ್ಟು, ಕೊಳವೆ ಬಾವಿಯಿದ್ದು ಏನು ಪ್ರಯೋಜನವಾದೀತು?

ಈಗ ಇರುವ ನೀರು ಕೇವಲ 20 ವರ್ಷದಲ್ಲೆ 50% ಮುಗಿದು ಹೋಗಲಿದೆ. ಮತ್ತೆ 10 ವರ್ಷದಲ್ಲಿ ಜೀವಜಲವೇ ಇಲ್ಲವಾಗಬಹುದು.ನಮ್ಮ ಜೀವಿತಾವಧಿಯಲ್ಲೆ ಹೀಗಾದರೆ ಇನ್ನು ಭವಿಷ್ಯದ ನಮ್ಮ ಮಕ್ಕಳ ಕತೆಯೇನು? ಅವರಿಗಾಗಿ ಸುಂದರ ಭೂಮಿ ಉಳಿಯುವುದು ಬೇಡವೇ?  ಈ ಪ್ರಶ್ನೆಗಳು ನಿಜವಾಗಿಯೂ ಮುಂದೆ ಆಗಬಹುದಾದ ಅಪಾಯವನ್ನು ತಿಳಿಸುತ್ತದೆ. ದೇಶದ ಭವಿಷ್ಯದ ಜನತೆಗೆ ನಾವು ಬರಡುಭೂಮಿಯನ್ನು ಕೊಟ್ಟು ಹೋಗಲು ಯಾರಿಗೂ ಇಚ್ಚೆಯಿಲ್ಲ‌, ಆದರೆ ಯಾರಿಗೂ ಸರಿಯಾದ ದೃಷ್ಟಿಕೋನ ಮತ್ತು ನೀರಿನ ಮಹತ್ವದ ಅರಿವು ಇಲ್ಲ.

ನೀರಿಗಾಗಿ, ನದಿ ಉಳಿಸಲು ಅಭಿಯಾನವೊಂದರ ಅಗತ್ಯವಿದೆ. ನದಿಗಳು ನಾಗರಿಕತೆಯ ಸೃಷ್ಡಿಗೆ ಕಾರಣವಾದ ದೇವತೆಯೆಂದು ನಮ್ಮ ಪೂರ್ವಜರ ನಂಬಿಕೆ. ನಮ್ಮ ಪೂರ್ವಜರು ಆರಾಧಿಸಿ ಕೊಂಡು ಬರುತ್ತಿರುವ ದೇವತೆಗಳನ್ನು ರಕ್ಷಿಸಿ , ಪೂಜಿಸುವ ಕೆಲಸವಾಗಬೇಕಿದೆ.

ಪ್ರಸ್ತುತ್ತ ಈ ಶಾ ಪೌಂಡೇಶನ್ ಮತ್ತು ಇತರ ಸಂಘ ಸಂಸ್ಥೆಗಳು Rally for River ಎಂಬ ಬೃಹತ್ ಅಭಿಯಾನ ಕೈಗೊಂಡಿದೆ. ನೀರಿನ ಮಹತ್ವವನ್ನು ದೇಶದೆಲ್ಲೆಡೆ ಸಾರುವ ಕೆಲಸ ಮಾಡುತ್ತಿವೆ. ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ದೇಶದ ಪ್ರಜೆಗಳನ್ನು ಬಡಿದೆಬ್ಬಿಸಿ ನೀರಿನ ಮೂಲವಾದ ನದಿಗಳ ಉಳಿವಿಗೆ ಸರ್ಕಾರಕ್ಕೆ ಹೊಸ ನೀತಿಯೊಂದನ್ನು ರಚಿಸಬೇಕೆಂದು ಆಗ್ರಹಿಸುವುದಾಗಿದೆ. ಇಷ್ಟೇ ಅಲ್ಲದೆ ನದಿಯ ಎರಡು ದಂಡೆಗಳಲ್ಲಿ ಮರಗಳನ್ನು ಬೆಳೆಸಿ, ಹೆಚ್ಚಿನ ನೀರು ಇಂಗಿಸಲು ಕೊಳವೆ ಬಾವಿ ಮಾದರಿಯಲ್ಲಿ ಇಂಗುಗುಂಡಿಗಳನ್ನು ನದಿಯ ಪಕ್ಕದಲ್ಲಿ ನಿರ್ಮಿಸಬೇಕು ಎಂಬ ಎರಡು ಸಲಹೆಗಳನ್ನು ನೀಡಲಾಗಿದೆ. ಈ ಆಗ್ರಹಕ್ಕೆ ನೀರು ಕುಡಿಯುವವರೆಲ್ಲ ಬೆಂಬಲಿಸಬೇಕಾದುದು ನಮ್ಮ ಕರ್ತವ್ಯ.

ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಚ ಭಾರತ ಯೋಜನೆ, ಸ್ಮಾರ್ಟ್ ಸಿಟಿ ಮತ್ತು ಗಂಗಾ ನದಿ ಶುದ್ಧೀಕರಣ ಯೋಜನೆ ನೀರಿನ ಸಂರಕ್ಷಣೆಯಲ್ಲಿ ಹೊಸ ಆಶಾಕಿರಣವಾಗಿ ಗೋಚರಿಸುತ್ತಿದೆ. ಸರ್ಕಾರ ಜಲಜೀವನ್ ಮಿಷನ್ ಎಂಬ ಯೋಜನೆಯಡಿ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆ ಹಮ್ಮಿಕೊಂಡಿದೆ . ಸ್ವಚ್ಚ ಭಾರತ ಯೋಜನೆ ಮುಖೇನ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕದೇ ಇರುವುದರಿಂದ ನೀರು ಕಲುಷಿತಗೊಳ್ಳುವುದನ್ನು ಕಡಿಮೆ ಮಾಡುವುದೂ ಈ ಯೋಜನೆಯ ಹೈಲೈಟ್. ಆದರೆ ಎಲ್ಲಾ ಜವಾಬ್ದಾರಿ ಸರಕಾರದ ಮೇಲೆ ಹಾಕುವಂತಿಲ್ಲ. ಬರೀ ಸರಕಾರದಿಂದ ಮಾತ್ರ ಇದು ಸಾಧ್ಯವಾಗುವ ಮಾತಲ್ಲ. . ನೀರಿನ ಬಗ್ಗೆ ಬರೆಯುವುದು, ಮಾತಾಡುವುದು ನೀರು ಕುಡಿದಷ್ಟೇ ಸುಲಭ. ಆದರೆ ಸಾರ್ವಜನಿಕ ಸಹಭಾಗಿತ್ವವವಿಲ್ಲದಿದ್ದರೆ ಮುಂದೊಂದು ದಿನ ಪ್ರಕೃತಿಯೇ ನಮಗೆ ನೀರು ಕುಡಿಸುವುದರಲ್ಲಿ ಅನುಮಾನವಿಲ್ಲ.

ಸುಜಲಾಂ ಸುಫಲಾಂ ಎಂದು ಭಕ್ತಿಯಿಂದ ಹಾಡುವವರು ನಾವು. ಜಲವಿದ್ದರೆ ಫಲವೂ ಇದೆ. ಅದಿಲ್ಲದಿದ್ದರೆ ಏನೇನೂ ಇಲ್ಲ ಎಂಬುದು ನಮಗೆಲ್ಲರಿಗೂ ಇನ್ನಾದರೂ ಅರ್ಥವಾಗಲಿ. ಭಗೀರಥನಂತೆ ತಪಸ್ಸು ಮಾಡಿ ಗಂಗೆಯನ್ನು ಉಕ್ಕಿಸಲೂ ಹೇಗೂ ನಮ್ಮಿಂದ ಸಾಧ್ಯವಿಲ್ಲ. ಆದರೆ ಇರುವ ಗಂಗೆ(ನೀರು)ಯನ್ನು ಉಳಿಸಿಕೊಳ್ಳಲಂತೂ ಖಂಡಿತಾ ಸಾಧ್ಯವಿದೆ ಅಲ್ಲವೇ?

 

✍:ಪ್ರಶಾಂತ್ ಭಂಡಾರಿ ಕಾರ್ಕಳ, ಭಂಡಾರಿ ವಾರ್ತೆ